ಹರಿಪ್ರಸಾದಗೆ 2028 ಚುನಾವಣೆ ಮುನ್ನ ಸರ್ಕಾರ ಮತ್ತು ಕಾಂಗ್ರೆಸ್ ನಡುವೆ ಸಮತೋಲನ ಕಾಯುವ ಸವಾಲು
ಕೇವಿಯಟ್ * ಬಿವಿಸೀ
ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಹಿರಿಯ ನಾಯಕ ಮತ್ತು ನಾಲ್ಕು ಬಾರಿ ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್ ಅವರ ನೇಮಕಾತಿ ಮಹತ್ವ ಪಡೆದುಕೊಂಡಿದೆ. ಪಕ್ಷ ಸಂಘಟನೆಯನ್ನು ಬಲಪಡಿಸುವ ಮತ್ತು ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಗುಂಪುಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ತಂತ್ರಗಾರಿಕೆಯ ಕ್ರಮವಾಗಿ ಇದನ್ನು ನೋಡಲಾಗುತ್ತಿದೆ.
3 ಹಂತದ ನಾಯಕತ್ವ
ಕಾಂಗ್ರೆಸ್ ಸಂಸ್ಕøತಿಯಲ್ಲಿ ಆಳವಾಗಿ ಬೇರೂರಿರುವ ಹರಿಪ್ರಸಾದ್ ಅವರನ್ನು ಹಿಂದುಳಿದ ವರ್ಗದ ನಾಯಕರಾಗಿ ಗುರುತಿಸಲಾಗುತ್ತದೆ. ರಾಜ್ಯದಲ್ಲಿ ಮೂರು ಹಂತದ ನಾಯಕತ್ವ ರಚನೆಗೆ ಹೈಕಮಾಂಡ್ ಯತ್ನಿಸುತ್ತಿದೆ ಎಂಬುದು ರಾಜಕೀಯ ವೀಕ್ಷಕರ ಅಭಿಪ್ರಾಯ. ಈ ವ್ಯವಸ್ಥೆಯಡಿ ಶಿವಕುಮಾರ್ ಆಡಳಿತದ ಮೇಲೆ ಗಮನ ಕೇಂದ್ರೀಕರಿಸಲಿದ್ದರೆ, ಹರಿಪ್ರಸಾದ್ ಪಕ್ಷ ಸಂಘಟನೆ ನೋಡಿಕೊಳ್ಳಲಿದ್ದಾರೆ.
ಸಂಘಟನಾತ್ಮಕ ಅನುಭವಕ್ಕೆ ಆದ್ಯತೆ ನೀಡಿರುವ ಹೈಕಮಾಂಡ್ ಗುಂಪು ಲೆಕ್ಕಾಚಾರಗಳಿಗಿಂತ ಹೆಚ್ಚು ಪ್ರಾಧಾನ್ಯ ನೀಡಿದೆ. ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಈಶ್ವರ್ ಖಂಡ್ರೆ ಸೇರಿದಂತೆ ಹಲವು ಹಿರಿಯ ನಾಯಕರು ಈ ಹುದ್ದೆಗೆ ಆಕಾಂಕ್ಷಿಗಳಾಗಿದ್ದರು ಎನ್ನಲಾಗಿದ್ದರೂ, ಹರಿಪ್ರಸಾದ್ ಅವರ ಆಯ್ಕೆ ಆಡಳಿತ ಮತ್ತು ಸಂಘಟನಾ ಸಾಮಥ್ರ್ಯಕ್ಕೆ ಪಕ್ಷದ ನಾಯಕತ್ವ ನೀಡುವ ಮಹತ್ವವನ್ನು ಎತ್ತಿ ತೋರಿಸುತ್ತದೆ
ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿ ಕುಟುಂಬದ ನಿಷ್ಠಾವಂತ ಅನುಯಾಯಿಯಾದ ಹರಿಪ್ರಸಾದ್ ಹಿಂದುತ್ವ ರಾಜಕಾರಣದ ತೀವ್ರ ಟೀಕಾಕಾರರಾಗಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಹಲವು ರಾಜ್ಯಗಳಲ್ಲಿ ಸಂಘಟನಾ ಜವಾಬ್ದಾರಿ ನಿರ್ವಹಿಸಿರುವ ಅನುಭವ ಹೊಂದಿರುವ ಅವರು, ಕರ್ನಾಟಕದಲ್ಲಿ ಕೇಂದ್ರ ನಾಯಕತ್ವದ ಪ್ರಭಾವ ಬಲಪಡಿಸುವ ಜತೆಗೆ ಸಂಘಟನಾತ್ಮಕ ನಿರ್ಧಾರಗಳು ರಾಷ್ಟ್ರೀಯ ಆದ್ಯತೆಗಳಿಗೆ ಅನುಗುಣವಾಗಿ ಇರುವಂತೆ ನೋಡಿಕೊಳ್ಳುವ ನಿರೀಕ್ಷೆಯಿದೆ.
ಹರಿಪ್ರಸಾದ್ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಮತ್ತು ಮಾಜಿ ಕೇಂದ್ರ ಸಚಿವ ಬಿ ಜನಾರ್ಧನ ಪೂಜಾರಿ ಅವರ ನಂತರ ಕೆಪಿಸಿಸಿ ಮುನ್ನಡೆಸುವ ಮೂರನೇ ಬಿಲ್ಲವ ಸಮುದಾಯದ ನಾಯಕರಾಗಿದ್ದಾರೆ. 1980ರ ದಶಕದಲ್ಲಿ "ಲೋನ್ ಮೇಳ"ಕ್ಕೆ ಹೆಸರಾಗಿದ್ದ ಪೂಜಾರಿ ನಂತರ ಇದೊಂದು ಸಾಮಾಜಿಕ ಆಯಾಮವನ್ನೂ ಹೊಂದಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಈ ಸಮುದಾಯಕ್ಕೆ ಗಮನಾರ್ಹ ಉಪಸ್ಥಿತಿ ಇದೆ.
ಸಮತೋಲನದ ಕಾರ್ಯ
ಸಿದ್ದರಾಮಯ್ಯ ಅಥವಾ ಶಿವಕುಮಾರ್ ಬಣಕ್ಕೆ ಮಾತ್ರ ಸೀಮಿತವಾಗಿಲ್ಲದ ಹರಿಪ್ರಸಾದ್ ತಟಸ್ಥ ಸಂಘಟನಾ ವ್ಯಕ್ತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಯಾವುದೇ ಒಂದು ಬಣದಲ್ಲಿ ಅಧಿಕಾರ ಕೇಂದ್ರೀಕರಣ ತಡೆಯುವಲ್ಲಿ ಮತ್ತು ಆಂತರಿಕ ಒಗ್ಗಟ್ಟು ಕಾಪಾಡುವಲ್ಲಿ ಅವರ ಪಾತ್ರ ನಿರ್ಣಾಯಕವಾಗಬಹುದು. ಹೀಗಿದ್ದರೂ, ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ``ಪಕ್ಷ ಬೇಕಾದರೆ ನನ್ನ ಬಳಿ ಬನ್ನಿ, ಅಧಿಕಾರ ಬೇಕಾದರೆ ಡಿಕೆಶಿ ಬಳಿ ಹೋಗಿ'' ಎಂದು ಅವರು ಹೇಳಿರುವುದು ಪಕ್ಷದ ಐಕ್ಯತೆ ಸಾಧಿಸಲು ಅನುವಾಗುವ ಹೇಳಿಕೆಯಲ್ಲ.. ಹರಿಪ್ರಸಾದ್ ಯಾವಾಗಲೂ ಅವಸರದಲ್ಲಿ ಏನಾದರೂ ಮಾತಾಡುವ ಖ್ಯಾತಿಯವರಷ್ಟೇ?
ಸಂಘಟನಾ ಕಾರ್ಯ
1970ರ ದಶಕದ ಆರಂಭದಲ್ಲಿ ವಿದ್ಯಾರ್ಥಿ ರಾಜಕಾರಣಕ್ಕೆ ಕಾಲಿಟ್ಟ ಹರಿಪ್ರಸಾದ್ ಅನುಭವಿ ಸಂಘಟನಾ ತಂತ್ರಜ್ಞರೆಂದು ಪರಿಗಣಿತರಾಗಿದ್ದಾರೆ. ಯುವ ಸಂಘಟನೆ ಮತ್ತು ಕಾರ್ಯಕರ್ತರ ನಿರ್ವಹಣೆಯಲ್ಲಿನ ಅವರ ಅನುಭವ ಪಕ್ಷದ ತಳಮಟ್ಟದ ಜಾಲ ಬಲಪಡಿಸಲು ಬಳಸಲಾಗುವುದು.
ಸಂಘಟನಾ ದಾಖಲೆಗಳ ಹೊರತಾಗಿಯೂ ಹರಿಪ್ರಸಾದ್ ಹಲವು ಸವಾಲುಗಳನ್ನು ಎದುರಿಸಬೇಕಿದೆ. ಭದ್ರ ರಾಜಕೀಯ ಮತ್ತು ಆರ್ಥಿಕ ಜಾಲ ಕಟ್ಟಿಕೊಂಡಿರುವ ಶಿವಕುಮಾರ್‍ಗಿಂತ ಭಿನ್ನವಾಗಿ ಹರಿಪ್ರಸಾದ್ ದೊಡ್ಡ ಪ್ರಮಾಣದ ಜನ ಸಂಪರ್ಕ ಅಥವಾ ಸಂಪನ್ಮೂಲ ಸಂಗ್ರಹಣೆಗೆ ಹೆಸರಾಗಿಲ್ಲ. ಹಿಂದುಳಿದ ವರ್ಗಕ್ಕೆ ಸೇರಿದರೂ ಸಿದ್ದರಾಮಯ್ಯ ಅವರಷ್ಟು ಚುನಾವಣಾ ಆಕರ್ಷಣೆ ಹೊಂದಿಲ್ಲ.
ಸರ್ಕಾರ ಮತ್ತು ಪಕ್ಷ ಸಂಘಟನೆ ನಡುವೆ ಸುಗಮ ಸಮನ್ವಯ ಕಾಯ್ದುಕೊಳ್ಳುವುದು ಮತ್ತೊಂದು ಸವಾಲು. ಈ ಎರಡು ಅಧಿಕಾರ ಕೇಂದ್ರಗಳ ನಡುವೆ ಯಾವುದೇ ಭಿನ್ನಾಭಿಪ್ರಾಯ ರಾಜ್ಯ ಘಟಕದೊಳಗಿನ ಗುಂಪು ಸಂಘರ್ಷಕ್ಕೆ ಮತ್ತೆ ಎಡೆ ಮಾಡಿಕೊಡಬಹುದು.
Comments
Post a Comment