ಕರಾವಳಿಯ ದೈವ ನಿಂದನೆಗೆ ಚಾಮುಂಡಿ ಸನ್ನಿಧಿಯಲ್ಲಿ ಪ್ರಾಯಶ್ಚಿತ್ತವೇ?

 ನೇರಾನೇರ * ಬಿವಿಸೀ

ಹಿಂದಿ ಚಿತ್ರರಂಗದ ಖ್ಯಾತ ನಟ ರಣವೀರ್ ಸಿಂಗ್ ಕರಾವಳಿಯ ಪರಮ ಪವಿತ್ರ ದೈವಗಳನ್ನು ಲೇವಡಿ ಮಾಡಿದ ಹಿನ್ನೆಲೆಯಲ್ಲಿ ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪ್ರಾಯಶ್ಚಿತ್ತ ಪೂಜೆ ಸಲ್ಲಿಸಿರುವುದು ಕರಾವಳಿ ಭಾಗದ ಜನರಲ್ಲಿ ತೀವ್ರ ಅಸಮಾಧಾನ ಮತ್ತು ಗೊಂದಲವನ್ನು ಮೂಡಿಸಿದೆ. ಕರಾವಳಿಯ ಧಾರ್ಮಿಕ ನಂಬಿಕೆಗಳು ಮತ್ತು ದೈವಾರಾಧನೆಯ ಸೂಕ್ಷ್ಮತೆಯನ್ನು ಅರಿಯದ ಇಂತಹ ನಡೆಗಳು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ.

ಈ ಇಡೀ ಪ್ರಕ್ರಿಯೆಯಲ್ಲಿ ಕರಾವಳಿ ಜನರನ್ನು ಕಾಡುತ್ತಿರುವ ಮುಖ್ಯ ಪ್ರಶ್ನೆಯೆಂದರೆ, ಅಪರಾಧ ನಡೆದದ್ದು ಎಲ್ಲಿ ಮತ್ತು ಅದಕ್ಕೆ ಕ್ಷಮೆಯಾಚನೆ ಹಾಗೂ ಪ್ರಾಯಶ್ಚಿತ್ತ ನಡೆಯುತ್ತಿರುವುದು ಎಲ್ಲಿ? 'ಕಾಂತಾರ' ಚಿತ್ರದ ಮೂಲಕ ಜಗತ್ಪ್ರಸಿದ್ಧವಾದ ಕರಾವಳಿಯ ದೈವಗಳು ಮತ್ತು ಇಡೀ ದೈವಾರಾಧನಾ ಪದ್ಧತಿಯು ತನ್ನದೇ ಆದ ವಿಶಿಷ್ಟ ಆಚರಣೆ, ನಿಯಮ ಹಾಗೂ ಗಡಿಗಳನ್ನು ಹೊಂದಿದೆ. ನಟ ರಣವೀರ್ ಸಿಂಗ್ ಅವರು ಅಪಹಾಸ್ಯ ಮಾಡಿದ್ದು ಕರಾವಳಿಯ ನಂಬಿಕೆಯ ಬೆನ್ನೆಲುಬಾದ ದೈವಗಳನ್ನು. ಹಾಗಿರುವಾಗ, ಅದಕ್ಕೆ ಸಂಬಂಧಿಸಿದಂತೆ ಅವರು ಕ್ಷಮೆ ಕೋರಬೇಕಿರುವುದು ಅಥವಾ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಿರುವುದು ಕರಾವಳಿಯ ಅದೇ ಕಾರಣಿಕದ ದೈವಸ್ಥಾನಗಳ ಸನ್ನಿಧಿಯಲ್ಲೇ ಹೊರತು ಮೈಸೂರಿನ ಚಾಮುಂಡೇಶ್ವರಿ ಸನ್ನಿಧಿಯಲ್ಲಲ್ಲ ಎಂಬುದು ಸ್ಥಳೀಯರ ಖಡಕ್ ವಾದವಾಗಿದೆ. ಚಾಮುಂಡಿ ತಾಯಿಯು ಇಡೀ ಕರ್ನಾಟಕದ ಶಕ್ತಿ ದೇವತೆಯಾಗಿದ್ದರೂ, ಕರಾವಳಿಯ ದೈವಾರಾಧನೆಯ ಸ್ವರೂಪ ಮತ್ತು ನಂಬಿಕೆಗಳೇ ಬೇರೆಯಾಗಿವೆ.

ಅಷ್ಟೇ ಅಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಹೊರಬಿದ್ದಿದೆ ಎನ್ನಲಾದ ಉಚ್ಚ ನ್ಯಾಯಾಲಯದ ಆದೇಶದ ತಾರ್ಕಿಕತೆಯೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಯಾಲಯದ ಆದೇಶದಲ್ಲಿ ತಪ್ಪಿತಸ್ಥರಿಗೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವಂತೆ ಸೂಚಿಸಿರುವುದು ಕರಾವಳಿಯ ಜನಪದೀಯ ಮತ್ತು ಸಾಂಸ್ಕøತಿಕ ಹಿನ್ನೆಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದಂತೆ ಭಾಸವಾಗುತ್ತಿದೆ. ದೈವ ನಿಂದನೆಯಂತಹ ಸೂಕ್ಷ್ಮ ವಿಷಯಗಳಲ್ಲಿ ಸ್ಥಳೀಯ ನಂಬಿಕೆಗಳು ಮತ್ತು ಭೌಗೋಳಿಕ ಧಾರ್ಮಿಕ ಕೇಂದ್ರಗಳಿಗೆ ಆದ್ಯತೆ ನೀಡಬೇಕಾದದ್ದು ನ್ಯಾಯಾಂಗದ ಕರ್ತವ್ಯವಾಗಿತ್ತು.

ಕರಾವಳಿಯ ದೈವಗಳು ಕೇವಲ ಕಲ್ಲಿನ ಮೂರ್ತಿಗಳಲ್ಲ, ಅವು ಇಲ್ಲಿನ ಜನರ ಜೀವಂತ ನಂಬಿಕೆಗಳು. ಅಂತಹ ಶಕ್ತಿಗಳನ್ನು ನಿಂದಿಸಿ, ಬೇರೆಲ್ಲೋ ಹೋಗಿ ಕೈಮುಗಿದರೆ ಪಾಪ ಪರಿಹಾರವಾಗುತ್ತದೆ ಎಂದು ಭಾವಿಸುವುದು ಜನರ ವಿವೇಕಕ್ಕೆ ನಿಲುಕದ ಸಂಗತಿಯಾಗಿದೆ. ಈ ಅರೆಬರೆ ಪ್ರಾಯಶ್ಚಿತ್ತದ ನಡೆ ಕರಾವಳಿಯ ಧಾರ್ಮಿಕ ಭಾವನೆಗಳಿಗೆ ಮಾಡಿದ ಮತ್ತೊಂದು ಅಪಚಾರವೇ ಸರಿ. ಈ ಗೊಂದಲಗಳಿಗೆ ಮತ್ತು ಕರಾವಳಿ ಜನರ ನ್ಯಾಯಸಮ್ಮತ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರಿಸಬೇಕಾಗಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

ಧರ್ಮಸ್ಥಳದ ಪ್ರಕರಣಗಳಲ್ಲಿ ಸತ್ಯ ಸಾಯುವುದಿಲ್ಲ

WHEN COMMUNAL POLITICS POISONS TRADITION: A WARNING FROM UDUPI