ಜಿರಳೆ ರೂಪದಲ್ಲಿಯೂ ಬದಲಾವಣೆಗೆ ಜಾಗ ಇದೆ

 ಕೇವಿಯಟ್ * ಬಿವಿಸೀ

ಭಾರತೀಯ ರಾಜಕಾರಣವನ್ನು ವರ್ಷಗಟ್ಟಲೆ ನೋಡಿದ ನಂತರ, ಹೊಸದೊಂದು ನಾಟಕಕ್ಕೆ ನಿರೀಕ್ಷೆ ಇಟ್ಟುಕೊಳ್ಳುವುದು ಮೂರ್ಖತನ ಎಂದು ಅನಿಸುತ್ತದೆ. ಅದೇ ಮುಖಗಳು, ಅದೇ ಭಾಷಣಗಳು, ಅದೇ ಆರೋಪ-ಪ್ರತ್ಯಾರೋಪಗಳು. ಅಧಿಕಾರದಲ್ಲಿರುವವರು ಅಧಿಕಾರದ ಮದದಲ್ಲಿ, ವಿರೋಧದಲ್ಲಿರುವವರು ಅಸಹಾಯಕತೆಯ ನಾಟಕದಲ್ಲಿ. ಜನರಿಗೆ ಬೇಸರ ಆಗಿದೆ, ಆದರೆ ಆಯ್ಕೆ ಇಲ್ಲ ಎಂಬ ಭಾವನೆಯೂ ಇದೆ.  

ಆದರೆ ಪ್ರಜಾಪ್ರಭುತ್ವದ ಒಂದು ವಿಶೇಷತೆ ಇದೆ. ಅದು ಎಂದಿಗೂ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚುವುದಿಲ್ಲ. ಅದು ಯಾವಾಗಲೂ ಒಂದು ಸಣ್ಣ ಕಿಟಕಿಯನ್ನು ತೆರೆದಿಡುತ್ತದೆ. ಆ ಕಿಟಕಿಯಿಂದ ಯಾವ ರೂಪದಲ್ಲಿಯಾದರೂ ಹೊಸದು ನುಗ್ಗಬಹುದು. ಅದು ಎಷ್ಟು ಅಸಹ್ಯಕರವಾಗಿ ಕಂಡರೂ ಸರಿ.  

ಇಂದಿನ ಸ್ಥಿತಿ ನೋಡಿ. ವಿರೋಧ ಪಕ್ಷ ಎನ್ನುವ ಸಂಸ್ಥೆಯೇ ತನ್ನ ನಂಬಿಕೆ ಕಳೆದುಕೊಂಡಿದೆ. ಅವರು ಕೂಗುತ್ತಾರೆ, ಆದರೆ ಯಾರೂ ಕೇಳುವುದಿಲ್ಲ. ಅವರು ಆರೋಪ ಮಾಡುತ್ತಾರೆ, ಆದರೆ ಜನರು ತಲೆ ಅಲ್ಲಾಡಿಸುತ್ತಾರೆ. ಏಕೆಂದರೆ ಜನರಿಗೆ ಬೇಕಿರುವುದು ನೈತಿಕ ಉಪನ್ಯಾಸ ಅಲ್ಲ, ಬದುಕಿನ ಪರಿಹಾರ. ಮನೆಗೆ ಅಕ್ಕಿ ತರುವ ದಾರಿ, ಮಕ್ಕಳಿಗೆ ಕೆಲಸ ಕೊಡುವ ಭರವಸೆ, ಆಸ್ಪತ್ರೆಯಲ್ಲಿ ಹಾಸಿಗೆ ಸಿಗುವ ಖಾತ್ರಿ. ಇದನ್ನು ಯಾರೂ ಕೊಡುತ್ತಿಲ್ಲ.  

ಈ ಶೂನ್ಯತೆಯಲ್ಲಿಯೇ ಹೊಸ ಪ್ರಯೋಗಕ್ಕೆ ಅವಕಾಶ ಇದೆ. ಹೌದು, ಅದು ಜಿರಳೆ ರೂಪದಲ್ಲಿಯೂ ಬರಬಹುದು. ಜಿರಳೆ ಅಂದರೆ ನಮಗೆಲ್ಲ ಅಸಹ್ಯ. ಅದು ಕೊಳೆ ಜಾಗದಲ್ಲಿ ಓಡಾಡುತ್ತದೆ, ಎಲ್ಲಿಯೂ ತೂರುತ್ತದೆ, ಸುಲಭವಾಗಿ ಸಾಯುವುದಿಲ್ಲ. ಆದರೆ ಅದೇ ಜಿರಳೆಗೆ ಇರುವ ಒಂದು ಗುಣವಿದೆ - ಅದು ಬದುಕುಳಿಯುತ್ತದೆ. ಎಷ್ಟೇ ವಿಷ ಹಾಕಿದರೂ, ಎಷ್ಟೇ ಒತ್ತಿದರೂ, ಅದು ಮತ್ತೆ ಎದ್ದು ನಿಲ್ಲುತ್ತದೆ.  

ರಾಜಕಾರಣಕ್ಕೆ ಈಗ ಬೇಕಾಗಿರುವುದು ಇದೇ ಬದುಕುಳಿಯುವ ಹಠ. ಸ್ವಚ್ಛವಾದ ಬಿಳಿ ಅಂಗಿ, ಇಂಗ್ಲಿಷಿನಲ್ಲಿ ಮಾತನಾಡುವ ಗೈರತ್ತು, ಪರಿಪೂರ್ಣವಾದ ಪ್ರಣಾಳಿಕೆ - ಇವೆಲ್ಲ ಬೇಡ. ಬೇಕಾಗಿರುವುದು ಜನರ ಮನೆ ಬಾಗಿಲಿಗೆ ತಲುಪುವ ರೇಷನ್. ಕೊಳೆಗೇರಿಯಲ್ಲಿಯೂ ಕೂರುವ ತಾಳ್ಮೆ. ಜನರು ಏನು ಹೇಳುತ್ತಾರೆ ಎಂಬುದನ್ನು ಕೇಳುವ ಕಿವಿ.  

ನಾವು ಯಾವಾಗಲೂ ಹೊಸ ಪಕ್ಷವೆಂದರೆ ಕ್ರಾಂತಿಕಾರಿ ಬದಲಾವಣೆಯನ್ನು ಕಲ್ಪಿಸಿಕೊಳ್ಳುತ್ತೇವೆ. ಆದರೆ ಕ್ರಾಂತಿಗಳು ಅಷ್ಟೇನೂ ಸುಂದರವಾಗಿರುವುದಿಲ್ಲ. ಅವು ಕೊಳೆಯೊಂದಿಗೆ, ರಕ್ತದೊಂದಿಗೆ, ಅಸ್ತವ್ಯಸ್ತತೆಯೊಂದಿಗೆ ಬರುತ್ತವೆ. ಆದರೆ ಜನರು ಈಗ ಪರಿಪೂರ್ಣತೆಯನ್ನು ಕೇಳುತ್ತಿಲ್ಲ. ಅವರು ಪ್ರಾಮಾಣಿಕತೆಯನ್ನು ಕೇಳುತ್ತಿದ್ದಾರೆ. ನೀವು ಏನಾಗಿದ್ದೀರಿ ಎಂಬುದಕ್ಕಿಂತ, ನೀವು ಏನು ಮಾಡುತ್ತೀರಿ ಎಂಬುದು ಮುಖ್ಯವಾಗುತ್ತಿದೆ. ನಿಮ್ಮ ಧ್ವಜಕ್ಕೆ ಎಷ್ಟು ಬಣ್ಣ ಇದೆ ಎಂಬುದಕ್ಕಿಂತ, ನಿಮ್ಮ ಕೆಲಸಕ್ಕೆ ಎಷ್ಟು ತೂಕ ಇದೆ ಎಂಬುದು ಲೆಕ್ಕಕ್ಕೆ ಬರುತ್ತಿದೆ.  

ಇಂದಿನ ಪ್ರಮುಖ ಪಕ್ಷಗಳು ತಮ್ಮ ತೂಕವನ್ನು ಕಳೆದುಕೊಂಡಿವೆ. ಒಂದು ಅಧಿಕಾರದ ಅಮಲಿನಲ್ಲಿದೆ. ಅದು ಟೀಕೆಯನ್ನು ಸಹಿಸುವುದಿಲ್ಲ, ಪ್ರಶ್ನೆಯನ್ನು ನೋಡಿ ಕಿರಿಕಿರಿ ಪಡುತ್ತದೆ. ಇನ್ನೊಂದು ತನ್ನ ಹಳೆಯ ವೈಭವದ ನೆನಪಿನಲ್ಲಿದೆ. ಅದು ನೆಲದ ವಾಸ್ತವದಿಂದ ಕಳಚಿಕೊಂಡಿದೆ. ಈ ನಡುವೆ ಜನರು ನಿಂತಿದ್ದಾರೆ, ಏನು ಮಾಡಬೇಕು ಎಂದು ತಿಳಿಯದೆ.  

ಹಾಗಾಗಿ, ಹೌದು,  ಜರಳೆಯ ರೂಪದಲ್ಲಿಯೇ ಆಗಲಿ, ಹೊಸ ಪಕ್ಷಕ್ಕೆ ಜಾಗ ಇದೆ. ಅದು ಗಲೀಜಾಗಿರಬಹುದು, ಅದು ಅಸ್ತವ್ಯಸ್ತವಾಗಿರಬಹುದು. ಆದರೆ ಅದು ನಡೆಯುತ್ತದೆ, ಅದು ಮಾತಾಡುತ್ತದೆ, ಅದು ಕೇಳುತ್ತದೆ. ಅದು ಜನರಿಗೆ ಅವರು ಕೇಳಿಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಕೊಡುತ್ತದೆ. ಇಂದಿನ ರಾಜಕಾರಣಕ್ಕೆ ಬೇಕಾಗಿರುವುದು ಪರಿಪೂರ್ಣತೆಯ ಮುಖವಾಡವಲ್ಲ. ಬೇಕಾಗಿರುವುದು ಅಸಂಪೂರ್ಣವಾದರೂ ನೈಜವಾದ ದನಿ. ಜಿರಳೆಯಂಥ ದನಿ - ಅಸಹ್ಯಕರವಾಗಿರಬಹುದು, ಆದರೆ ನಿರ್ಲಕ್ಷಿಸಲು ಆಗದಷ್ಟು ಗಟ್ಟಿಯಾದ ದನಿ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again