ಮುಖ್ಯಮಂತ್ರಿ ಕುರ್ಚಿಗಾಗಿ ದೆಹಲಿಯಲ್ಲಿ ಫೈನಲ್ ಕುಸ್ತಿ
ಕಂಡರೂ ಕಾಣದಂಗೆ * ಬಿವಿಸೀ
ಬೆಂಗಳೂರು ಮತ್ತು ದೆಹಲಿಯ ರಾಜಕೀಯ ಪಡಸಾಲೆಗಳಲ್ಲಿ ಈಗ ಒಂದು ರೀತಿಯ ನಿಗೂಢ ಮೌನ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರಾವಧಿ ಅಂತ್ಯಗೊಳ್ಳುತ್ತಿದೆ ಎಂಬ ವರದಿಗಳು ಹರಿದಾಡುತ್ತಿದ್ದು, ಕೆಲವರ ಪ್ರಕಾರ ಅವರಿಗೆ ಇನ್ನು ಕೇವಲ 15 ದಿನಗಳ ಕಾಲಾವಕಾಶವಷ್ಟೇ ಬಾಕಿ ಇದೆ. ಈ ಬೆಳವಣಿಗೆಯು ಕಾಂಗ್ರೆಸ್ ಪಕ್ಷವನ್ನು ಇಂದು ಒಂದು ನಿರ್ಣಾಯಕ ಘಟ್ಟಕ್ಕೆ ತಂದು ನಿಲ್ಲಿಸಿದೆ. ಎರಡು ಪ್ರಬಲ ಶಕ್ತಿಗಳ ನಡುವಿನ ಈ ಪೈಪೆÇೀಟಿ ಈಗ ಕೇವಲ ವ್ಯಕ್ತಿಗಳ ಹೋರಾಟವಾಗಿ ಉಳಿದಿಲ್ಲ; ಬದಲಿಗೆ ಅದು ಪಕ್ಷದ ಅಸ್ಮಿತೆ ಮತ್ತು ಸಿದ್ಧಾಂತದ ಪ್ರಶ್ನೆಯಾಗಿ ರೂಪಾಂತರಗೊಂಡಿದೆ.
ಈ ಸಂಘರ್ಷದ ಕೇಂದ್ರಬಿಂದುವಿರುವುದು ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ವರ್ಗ ಮತ್ತು ದಲಿತ) ಮತಬ್ಯಾಂಕ್ ಮತ್ತು ಪಕ್ಷದ ಸಂಘಟನಾ ಶಕ್ತಿಯ ನಡುವಿನ ಸಮತೋಲನದ ಮೇಲೆ. ಸಿದ್ದರಾಮಯ್ಯ ಅವರು ಅಹಿಂದ ವರ್ಗದ ಅಪ್ರತಿಮ ನಾಯಕರಾಗಿ ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮುಖ್ಯ ಕಾರಣಕರ್ತರಾಗಿದ್ದಾರೆ. ಇವರ ಬದಲಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಪ್ರತಿಷ್ಠಾಪಿಸಿದರೆ, ಹಿಂದುಳಿದ ವರ್ಗಗಳ ಮತದಾರರಲ್ಲಿ ಅಸಮಾಧಾನ ಮೂಡಬಹುದು ಎಂಬ ಆತಂಕ ಪಕ್ಷದ ಒಳಗಿದೆ. ಶಿವಕುಮಾರ್ ಅವರು ಪ್ರಬಲ ಸಮುದಾಯದ ಪ್ರತಿನಿಧಿಯಾಗಿ ಮತ್ತು ಮಠ-ಮಾನ್ಯಗಳೊಂದಿಗೆ ಗುರುತಿಸಿಕೊಂಡಿರುವುದರಿಂದ, ಇದು ಪಕ್ಷದ ಸಾಂಪ್ರದಾಯಿಕ ಅಹಿಂದ ನೆಲೆಗೆ ಧಕ್ಕೆ ತರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ.
ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಪದತ್ಯಾಗ ಮಾಡಲಿದ್ದಾರೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ಅವರ ಬೆಂಬಲಿತ ಶಾಸಕರು ಎಚ್ಚೆತ್ತುಕೊಂಡಿದ್ದಾರೆ. ದೆಹಲಿಯಲ್ಲಿ ಬೀಡುಬಿಟ್ಟಿರುವ ಇವರು, ಹೈಕಮಾಂಡ್ ಮೇಲೆ ಸತತ ಒತ್ತಡ ಹೇರುತ್ತಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಿದರೆ ದೊಡ್ಡ ಮಟ್ಟದ ಬಂಡಾಯ ಏಳಬಹುದು ಎಂಬ ಎಚ್ಚರಿಕೆಯನ್ನು ಇವರು ನೀಡುತ್ತಿದ್ದಾರೆ. ಈ ಆಂತರಿಕ ಕಚ್ಚಾಟದಿಂದಾಗಿ ರಾಜ್ಯದ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂಚೂಣಿಗೆ ಬಂದಿದೆ. ರಾಷ್ಟ್ರೀಯ ಅಧ್ಯಕ್ಷರಾಗಿರುವ ಖರ್ಗೆ ಅವರು ದಲಿತ ಸಮುದಾಯದ ಹಿರಿಯ ನಾಯಕರಾಗಿದ್ದು, ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದರೆ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಎರಡೂ ಬಣಗಳು ವಿರೋಧಿಸುವ ಧೈರ್ಯ ಮಾಡಲಾರವು. ಖರ್ಗೆ ಅವರು ಅಹಿಂದ ವರ್ಗಕ್ಕೆ ಆತ್ಮವಿಶ್ವಾಸ ನೀಡುವ ಜೊತೆಗೆ, ಸಿದ್ದರಾಮಯ್ಯ ಅವರಿಗೆ ಗೌರವಯುತ ನಿರ್ಗಮನ ಮತ್ತು ಶಿವಕುಮಾರ್ ಅವರ ಆಕಾಂಕ್ಷೆಗಳಿಗೆ ಸದ್ಯಕ್ಕೆ ತಾತ್ಕಾಲಿಕ ತಡೆ ನೀಡುವ `ಮಧ್ಯಮ ಮಾರ್ಗ'ವಾಗಿ ಕಾಣುತ್ತಿದ್ದಾರೆ.
ಆದರೆ, ರಾಹುಲ್ ಗಾಂಧಿ ನೇತೃತ್ವದ ಹೈಕಮಾಂಡ್‍ನ ಮೌನವೇ ಈಗ ದೊಡ್ಡ ರಹಸ್ಯವಾಗಿದೆ. ಇದು ಕಾರ್ಯತಂತ್ರದ ಭಾಗವೇ ಅಥವಾ ಗೊಂದಲದ ಸೂಚನೆಯೇ ಎಂಬುದು ಯಾರಿಗೂ ತಿಳಿಯುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷರನ್ನು ರಾಜ್ಯ ರಾಜಕಾರಣಕ್ಕೆ ಕಳುಹಿಸುವುದು ಪಕ್ಷದ ರಾಷ್ಟ್ರೀಯ ವರ್ಚಸ್ಸಿಗೆ ಹೊಡೆತ ನೀಡಬಹುದು. ಆದರೆ ದಕ್ಷಿಣದ ಪ್ರಮುಖ ಕೋಟೆಯಾದ ಕರ್ನಾಟಕವನ್ನು ಉಳಿಸಿಕೊಳ್ಳಲು ಕಾಂಗ್ರೆಸ್‍ಗೆ ಬೇರೆ ದಾರಿಯೂ ಇಲ್ಲದಂತಾಗಿದೆ. ಮೇ 4ರ ಫಲಿತಾಂಶದ ನಂತರ ಈ ಎಲ್ಲ ಕುತೂಹಲಗಳಿಗೆ ತೆರೆ ಬೀಳಲಿದೆಯೇ? ಹೈಕಮಾಂಡ್ ಯಾವ ದಾಳ ಉರುಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈ ರಾಜಕೀಯ ಹಗ್ಗಜಗ್ಗಾಟದಲ್ಲಿ ಗೆಲ್ಲುವುದು ಯಾರು ಎಂಬುದು ಇಡೀ ರಾಜ್ಯದ ಕುತೂಹಲಕ್ಕೆ ಕಾರಣವಾಗಿದೆ.
--------------
'ಸೋನಿಯಾ ನಿರ್ಧರಿಸಲಿದ್ದಾರೆ':
ತಾವು ಮುಖ್ಯಮಂತ್ರಿಯಾಗುವ
ಕುರಿತು ಮ ಖರ್ಗೆ ಚತುರೋಕ್ತಿ
ಕರ್ನಾಟಕದ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳ ನಡುವೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಾವು ಆ ಹುದ್ದೆಗೇರುವ ಸಾಧ್ಯತೆಯ ಕುರಿತು ಕುತೂಹಲಕಾರಿ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಮುಖ್ಯಮಂತ್ರಿಯಾಗಬೇಕೇ ಅಥವಾ ಬೇಡವೇ ಎಂಬುದನ್ನು ಸೋನಿಯಾ ಗಾಂಧಿ ಅವರು ನಿರ್ಧರಿಸಲಿದ್ದಾರೆ" ಎಂದು ಅವರು ಚಮತ್ಕಾರಿಕವಾಗಿ ಉತ್ತರಿಸುವ ಮೂಲಕ ಚೆಂಡನ್ನು ಹೈಕಮಾಂಡ್ ಅಂಗಳಕ್ಕೆ ತಳ್ಳಿದ್ದಾರೆ.
Comments
Post a Comment