ಪಶ್ಚಿಮ ಏಷ್ಯಾ ಬಿಕ್ಕಟ್ಟು: ಕರ್ನಾಟಕದ ಆರ್ಥಿಕತೆಗೆ ಭಾರಿ ಹೊಡೆತದ ಭೀತಿ
ಬೆಂಗಳೂರು: ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧ ಸದೃಶ್ಯ ಬಿಕ್ಕಟ್ಟು ಕರ್ನಾಟಕದ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ. ವಿಶೇಷವಾಗಿ ಸಾರಿಗೆ, ಕೃಷಿ ರಫ್ತು ಮತ್ತು ಕೈಗಾರಿಕಾ ಕ್ಷೇತ್ರಗಳು ಈ ಬಿಕ್ಕಟ್ಟಿನಿಂದಾಗಿ ಸಂಕಷ್ಟಕ್ಕೆ ಸಿಲುಕುವ ಮುನ್ಸೂಚನೆ ಲಭಿಸಿದೆ. ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಇದು ರಾಜ್ಯದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಬಹುದು. ಕರ್ನಾಟಕದ ಶೇಕಡಾ 80ರಷ್ಟು ಸರಕು ಸಾಗಣೆ ರಸ್ತೆ ಸಾರಿಗೆಯನ್ನು ಅವಲಂಬಿಸಿರುವುದರಿಂದ, ಇಂಧನ ಬೆಲೆ ಏರಿಕೆಯು ತರಕಾರಿ, ಧಾನ್ಯಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನೇರ ಕಾರಣವಾಗಲಿದೆ. ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿ ಮೂಲಗಳ ಪ್ರಕಾರ, ಸಾಗಣೆ ವೆಚ್ಚ ಹೆಚ್ಚಾದಲ್ಲಿ ರೈತರು ಮತ್ತು ಗ್ರಾಹಕರು ಇಬ್ಬರೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಕರ್ನಾಟಕದಿಂದ ಪಶ್ಚಿಮ ಏಷ್ಯಾ ಮತ್ತು ಯುರೋಪ್ ದೇಶಗಳಿಗೆ ರಫ್ತಾಗುವ ಅಕ್ಕಿ, ಬೇಳೆಕಾಳು ಮತ್ತು ಸಾಂಬಾರ ಪದಾರ್ಥಗಳ ವ್ಯಾಪಾರಕ್ಕೆ ದುಬೈ ಪ್ರಮುಖ ಸಂವಹನ ಕೇಂದ್ರವಾಗಿದೆ. ಈಗಿನ ಉದ್ವಿಗ್ನತೆಯಿಂದಾಗಿ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದ್ದು, ಸರಕುಗಳು ಬಂದರುಗಳಲ್ಲೇ ಉಳಿಯುವಂತಾಗಿದೆ. ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಈಗಾಗಲೇ ತೈಲ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ತನ್ನ ರಫ್ತು ಪ್ರಕ್ರಿಯೆಯಲ್ಲಿ 'ಫೆÇೀರ್ಸ್ ಮೆಜರ್' ಘೋಷಿಸಿದೆ, ಇದು ರಾಜ್ಯದ ರಫ್ತು ಆದಾಯಕ್ಕೆ ದೊಡ್ಡ ಹಿನ್ನಡೆಯಾಗಿದೆ. ಕೆಂಪೇಗೌಡ ಅಂತರಾಷ್ಟಯ ವಿಮಾನ ನಿಲ್ದಾಣದಿಂದ ಪಶ್ಚಿಮ ಏಷ್ಯಾದ ದೇಶಗಳಿಗೆ ಹೊರಡುವ ಸುಮಾರು 42ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಇದು ಕೇವಲ ಪ್ರಯಾಣಿಕರಿಗಷ್ಟೇ ಅಲ್ಲದೆ, ವಾಯು ಮಾರ್ಗದ ಮೂಲಕ ನಡೆಯುವ ತುರ್ತು ರಫ್ತು ವಹಿವಾಟಿನ ಮೇಲೂ ಪರಿಣಾಮ ಬೀರಿದೆ.
ಗಲ್ಫ್ ರಾಷ್ಟ್ರಗಳಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಕನ್ನಡಿಗರ ಉದ್ಯೋಗದ ಭವಿಷ್ಯವೂ ಈಗ ಆತಂಕದಲ್ಲಿದೆ, ಇದು ರಾಜ್ಯಕ್ಕೆ ಬರುತ್ತಿದ್ದ ವಿದೇಶಿ ಹಣದ ಹರಿವನ್ನು ಕುಂಠಿತಗೊಳಿಸಬಹುದು. ಕರ್ನಾಟಕದ ಐಟಿ ಕಂಪನಿಗಳು ಮತ್ತು ಇಂಜಿನಿಯರಿಂಗ್ ಸೇವಾ ವಲಯಗಳು ಕೂಡ ಮಧ್ಯಪ್ರಾಚ್ಯದ ಯೋಜನೆಗಳಿಂದ ದೊಡ್ಡ ಮಟ್ಟದ ಲಾಭವನ್ನು ಗಳಿಸುತ್ತಿದ್ದವು. ಈಗಿನ ಅನಿಶ್ಚಿತತೆಯು ಹೊಸ ಒಪ್ಪಂದಗಳ ಮೇಲೆ ಕರಿನೆರಳು ಬೀರಿದೆ. ತೈಲ ಬೆಲೆಯ ಪ್ರತಿ ಡಾಲರ್ ಏರಿಕೆಯು ರಾಜ್ಯದ ಸಾರಿಗೆ ನಿಗಮಗಳಾದ ಕೆಎಸ್ಸಾರ್ಟಿಸಿದಸಷ ಮತ್ತು ಬಿಎಂಟಿಸಿ ಮೇಲೆ ಕೋಟ್ಯಂತರ ರೂಪಾಯಿಗಳ ಹೊರೆ ಹೇರಲಿದೆ. ಇದರಿಂದಾಗಿ ಸಾರ್ವಜನಿಕ ಸಾರಿಗೆ ದರಗಳು ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಇದಲ್ಲದೆ, ಪಶ್ಚಿಮ ಏಷ್ಯಾದಿಂದ ಆಮದಾಗುವ ರಸಗೊಬ್ಬರಗಳ ಕೊರತೆಯು ಮುಂಬರುವ ಬಿತ್ತನೆ ಹಂಗಾಮಿನ ಮೇಲೆ ಪರಿಣಾಮ ಬೀರಬಹುದು. ಕರ್ನಾಟಕದ ಒಟ್ಟಾರೆ ಆರ್ಥಿಕ ಪ್ರಗತಿಯು ಜಾಗತಿಕ ಪೂರೈಕೆ ಸರಪಳಿಯ ಮೇಲೆ ಅವಲಂಬಿತವಾಗಿದ್ದು, ಈ ಯುದ್ಧದ ಕಾರ್ಮೋಡಗಳು ತಕ್ಷಣ ತಿಳಿಯಾಗದಿದ್ದರೆ ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಹಣಕಾಸಿನ ಮುಗ್ಗಟ್ಟು ಎದುರಾಗಬಹುದು. ಹೂಡಿಕೆದಾರರು ಕೂಡ ಇಂತಹ ಅಸ್ಥಿರ ಪರಿಸ್ಥಿತಿಯಲ್ಲಿ ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಹಿಂಜರಿಯುತ್ತಿದ್ದಾರೆ. ಒಟ್ಟಾರೆಯಾಗಿ, ದೂರದ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಕರ್ನಾಟಕದ ಸಾಮಾನ್ಯ ನಾಗರಿಕನ ಜೇಬಿಗೆ ಕತ್ತರಿ ಹಾಕುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ರಾಜ್ಯ ಸರ್ಕಾರವು ಈ ಆರ್ಥಿಕ ಸವಾಲನ್ನು ಎದುರಿಸಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.
Comments
Post a Comment