ಜನಪ್ರತಿನಿಧಿಗಳ ಉಚಿತ ಟಿಕೆಟ್ ಹಪಾಹಪಿ , ವಿಐಪಿ ಸಂಸ್ಕøತಿಯ ಪರಮಾವಧಿ
ಅಧಿಕಾರ ದುರ್ಬಳಕೆ * ಬಿವಿಸೀ
ಕರ್ನಾಟಕ ವಿಧಾನಸಭೆಯ ಇತ್ತೀಚಿನ ಕಲಾಪಗಳು ರಾಜ್ಯದ ರಾಜಕೀಯ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆಯಾಗಿ ದಾಖಲಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸಾರ್ವಜನಿಕರು ಬೆಲೆ ಏರಿಕೆ ಮತ್ತು ಮೂಲಸೌಕರ್ಯಗಳ ಕೊರತೆಯಿಂದ ಹೈರಾಣಾಗಿದ್ದರೆ, ರಾಜ್ಯದ ಉನ್ನತ ಸಾಂವಿಧಾನಿಕ ಹುದ್ದೆಗಳಲ್ಲಿರುವವರು ಐಪಿಎಲ್ ಕ್ರಿಕೆಟ್ ಪಂದ್ಯದ ಉಚಿತ ಟಿಕೆಟ್‍ಗಳಿಗಾಗಿ ಗಂಟೆಗಟ್ಟಲೆ ಚರ್ಚೆಯಲ್ಲಿ ತೊಡಗಿರುವುದು ವಿಷಾದನೀಯ. ಸ್ಪೀಕರ್ ಅವರು ಪ್ರತಿ ಶಾಸಕರಿಗೆ 5 ಉಚಿತ ಟಿಕೆಟ್ ಕೇಳಿದರೆ, ಮುಖ್ಯಮಂತ್ರಿಗಳು ಅದನ್ನು ಎರಡಕ್ಕೆ ಸೀಮಿತಗೊಳಿಸಲು ಮುಂದಾಗಿದ್ದಾರೆ. ಆದರೆ, ಇದು ಕೇವಲ ಟಿಕೆಟ್ ಪಡೆಯುವ ಸರಳ ಪ್ರಕ್ರಿಯೆಯಲ್ಲ, ಬದಲಾಗಿ ಇದೊಂದು ಹಕ್ಕೊತ್ತಾಯ ಎನ್ನುವಂತೆ ಉಪಮುಖ್ಯಮಂತ್ರಿಗಳು ವಾದಿಸುತ್ತಿರುವುದು ಜನತಂತ್ರ ವ್ಯವಸ್ಥೆಗೆ ಮಾಡಿದ ಅಪಮಾನವಾಗಿದೆ.
ಶಾಸಕರು ನೀಡುತ್ತಿರುವ ಸಮರ್ಥನೆಗಳಂತೂ ಅತೀ ಹೆಚ್ಚು ಆತಂಕಕಾರಿಯಾಗಿವೆ. ಕೆಎಸ್‍ಸಿಎ ಸಂಸ್ಥೆಗೆ ಅತ್ಯಂತ ಕಡಿಮೆ ಬಾಡಿಗೆಗೆ ಸರ್ಕಾರಿ ಜಾಗ ನೀಡಲಾಗಿದೆ ಮತ್ತು ಸರ್ಕಾರವೇ ಭದ್ರತೆ ಒದಗಿಸುತ್ತಿದೆ ಎಂಬ ಕಾರಣ ನೀಡಿ, ಉಚಿತ ಟಿಕೆಟ್ ಪಡೆಯುವುದು ತಮ್ಮ ಹಕ್ಕು ಎಂದು ಶಾಸಕರು ಬಿಂಬಿಸುತ್ತಿದ್ದಾರೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಅಬಕಾರಿ ಪರವಾನಗಿ ಅಥವಾ ಇತರೆ ತಾಂತ್ರಿಕ ಕಾರಣಗಳನ್ನು ಒಡ್ಡಿ ಸಂಸ್ಥೆಯ ಮೇಲೆ ಒತ್ತಡ ಹೇರುವ ಬೆದರಿಕೆಯೂ ಕೇಳಿಬರುತ್ತಿದೆ. ಸಾರ್ವಜನಿಕ ಆಸ್ತಿಯನ್ನು ಖಾಸಗಿ ಮನರಂಜನೆಯ ಲಾಭಕ್ಕಾಗಿ ಬಳಕೆ ಮಾಡಿಕೊಳ್ಳುವುದು ಅಧಿಕಾರದ ದುರ್ಬಳಕೆಯಲ್ಲದೆ ಮತ್ತೇನು? ರಾಷ್ಟ್ರೀಯ ಮಟ್ಟದಲ್ಲಿ ವಿಐಪಿ ಸಂಸ್ಕೃತಿಯನ್ನು ವಿರೋಧಿಸುವ ಕಾಂಗ್ರೆಸ್ ಪಕ್ಷದ ನಾಯಕರು, ರಾಜ್ಯದಲ್ಲಿ ಮಾತ್ರ ಅದೇ ಸಂಸ್ಕೃತಿಗೆ ಅಂಟಿಕೊಂಡಿರುವುದು ಅವರ ದ್ವಂದ್ವ ನೀತಿಯನ್ನು ಎತ್ತಿ ತೋರಿಸುತ್ತದೆ.
ಸಮಾಜಕ್ಕೆ ಅಪಾರ ಕೊಡುಗೆ ನೀಡಿದ ವಿಜ್ಞಾನಿಗಳು, ಶಿಕ್ಷಕರು ಅಥವಾ ಸಾಧಕರಿಗೆ ಇಂತಹ ಸೌಲಭ್ಯಗಳನ್ನು ನೀಡುವ ಬಗ್ಗೆ ಎಂದೂ ಮಾತನಾಡದ ಸರ್ಕಾರ, ಕೇವಲ ತನ್ನ ಶಾಸಕರ ಐಷಾರಾಮಿ ಜೀವನಕ್ಕಾಗಿ ಇಷ್ಟೊಂದು ಶ್ರಮ ವಹಿಸುತ್ತಿರುವುದು ಆಶ್ಚರ್ಯಕರ. ಶಾಸಕರು ಕೇವಲ ಜನಸೇವಕರೇ ಹೊರತು ಆಡಳಿತಗಾರರಲ್ಲ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲಿ ಮರೆಯಾದಂತಿದೆ. ಸಾಮಾನ್ಯ ನಾಗರಿಕರು ಹಣ ನೀಡಿ ಟಿಕೆಟ್ ಖರೀದಿಸಲು ಸಾಲಿನಲ್ಲಿ ನಿಲ್ಲುವಾಗ, ಜನಪ್ರತಿನಿಧಿಗಳು ಉಚಿತವಾಗಿ ವಿಐಪಿ ಸೀಟುಗಳನ್ನು ಬಯಸುವುದು ಅವರು ಮತದಾರರಿಂದ ಎಷ್ಟು ದೂರ ಸರಿದಿದ್ದಾರೆ ಎಂಬುದಕ್ಕೆ ಸಾಕ್ಷಿ. ಈ ರೀತಿಯ ನಡವಳಿಕೆಗಳು ಸಾರ್ವಜನಿಕರಲ್ಲಿ ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡುತ್ತವೆ.
Comments
Post a Comment