ಧರಣಿ ಕೂತ ಪ್ರಜಾಪ್ರಭುತ್ವ: ಮಾಜಿ ಶಾಸಕರೇ ಬೀದಿಗೆ ಬಿದ್ದ ದುಃಸ್ಥಿತಿ!
ಮಾಜಿ ಶಾಸಕರೊಬ್ಬರು ಅಧಿಕಾರಿಯ ಒಂದು ಸಹಿಗಾಗಿ ಬೀದಿಯಲ್ಲಿ ಪ್ರತಿಭಟನೆಗೆ ಕುಳಿತುಕೊಳ್ಳಬೇಕೆಂದರೆ, ಸಾಮಾನ್ಯ ನಾಗರಿಕರು ಕೆಂಪು ಪಟ್ಟಿಯ ಸಂಕೋಲೆಯಲ್ಲಿ ಜೀವಂತ ಸಮಾಧಿಯಾದಂತೆಯೇ ಸರಿ.
................
ಇರೋ ವಿಚಾರ * ಬಿವಿಸೀ
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ (ಯುಡಿಎ) ಕಚೇರಿ ಮುಂದೆ ಇತ್ತೀಚೆಗೆ ನಡೆದ ಘಟನೆ ಕೇವಲ ಒಂದು ಸ್ಥಳೀಯ ಸುದ್ದಿಯಲ್ಲ; ಇದು ರಾಜ್ಯದ ಆಡಳಿತ ವ್ಯವಸ್ಥೆಯ ನೈತಿಕ ಪತನಕ್ಕೆ ಹಿಡಿದ ಕನ್ನಡಿ. ಉಡುಪಿಯ ಬೆಳವಣಿಗೆಯ ರೂವಾರಿ ಎನಿಸಿಕೊಂಡಿದ್ದ ಎರಡು ಬಾರಿಯ ಶಾಸಕ ಕೆ ರಘುಪತಿ ಭಟ್ ಅವರೇ ತಮ್ಮ ಸ್ವಂತ ಜಮೀನಿನ ಏಕವಿನ್ಯಾಸ ಭೂಪರಿವರ್ತನೆಗಾಗಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಬೇಕಾದ ಪರಿಸ್ಥಿತಿ ಬಂದೊದಗಿತು ಎಂದರೆ, ವ್ಯವಸ್ಥೆಯು ಎಷ್ಟರಮಟ್ಟಿಗೆ ಹದಗೆಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ. ಮೂರು ವರ್ಷಗಳಿಂದ ಧೂಳು ಹಿಡಿಯುತ್ತಿದ್ದ ಭಟ್ ಅವರ ಅರ್ಜಿಯು ಪ್ರತಿಭಟನೆ ಆರಂಭವಾದ ಕೆಲವೇ ಗಂಟೆಗಳಲ್ಲಿ ವಿಲೇವಾರಿಯಾಗಿ, ಅಧಿಕಾರಿಗಳೇ ಖುದ್ದಾಗಿ ಸ್ಥಳಕ್ಕೆ ಬಂದು ಕ್ಲಿಯರೆನ್ಸ್ ಪತ್ರ ಹಸ್ತಾಂತರಿಸಿದರು. ಈ ಹಠಾತ್ ದಕ್ಷತೆಯು ಆಡಳಿತದ ವಿಜಯವಲ್ಲ, ಬದಲಿಗೆ ಅವರ ವೈಫಲ್ಯದ ಒಪ್ಪಿಗೆ. ಮೂರು ವರ್ಷಗಳ ವಿಳಂಬವು ತಾಂತ್ರಿಕ ಕಾರಣಗಳಿಗಾಗಿ ಇರಲಿಲ್ಲ, ಬದಲಿಗೆ ಅದು ರಾಜಕೀಯ ದ್ವೇಷ ಅಥವಾ ಆರ್ಥಿಕ ಲಾಭಕ್ಕಾಗಿ ಮಾಡಿದ ಉದ್ದೇಶಪೂರ್ವಕ ತಂತ್ರವಾಗಿತ್ತು ಎಂಬುದು ಇದರಿಂದ ಸಾಬೀತಾಗಿದೆ.
ಇಂದಿನ ಸರ್ಕಾರವು ಭ್ರಷ್ಟಾಚಾರ ಮುಕ್ತ ಆಡಳಿತದ ಭರವಸೆ ನೀಡಿ ಅಧಿಕಾರಕ್ಕೆ ಬಂದಿತ್ತು. ಆದರೆ 2026ರ ವಾಸ್ತವದ ನೆಲೆಗಟ್ಟಿನಲ್ಲಿ ನೋಡಿದರೆ, ಆಡಳಿತದಲ್ಲಿ ಕೇವಲ ಮುಖಗಳು ಬದಲಾಗಿವೆಯೇ ಹೊರತು ಲೂಟಿ ಮಾಡುವ ಪ್ರವೃತ್ತಿ ಬದಲಾಗಿಲ್ಲ. ಇಂದು ಭೂಮಿ ಬಳಕೆಗಾಗಿ ಕನ್ವರ್ಷನ್ ಕೆಲಸದಿಂದ ಹಿಡಿದು, ಆಕ್ಯುಪೆನ್ಸಿ ಸರ್ಟಿಫಿಕೇಟ್ ಹಿಡಿದು ಕಟ್ಟಡ ನಂಬರ್ ಪಡೆಯುವವರೆಗೆ ಪ್ರತಿಯೊಂದು ಕೆಲಸಕ್ಕೂ ಲಂಚ ನೀಡಲೇಬೇಕಾದ ಅಲಿಖಿತ ನಿಯಮ ಜಾರಿಯಲ್ಲಿದೆ. ಸರಕಾರದಿಂದ ಬರಬೇಕಾದ ಬಿಲ್ ಮೊತ್ತಕ್ಕೆ ಕೂಡ ವಿವಿಧ ಸ್ತರಗಳಲ್ಲಿ ಲಿಬರಲ್ ಆಗಿ ಅಧಿಕಾರಿಗಳ ಕೈ ಬೆಚ್ಚಗೆ ಮಾಡಬೇಕಾಗಿದೆ. ಉನ್ನತ ಮಟ್ಟದ ಆಶೀರ್ವಾದ ಇರುವುದರಿಂದಲೇ ಕೆಳಮಟ್ಟದ ಅಧಿಕಾರಿಗಳು ಯಾವುದೇ ಮುಜುಗರವಿಲ್ಲದೆ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಇ-ಖಾತಾದಂತಹ ತಂತ್ರಜ್ಞಾನಗಳು ಬಂದರೂ, ಅದರ ಸುತ್ತಲೂ ಒಂದು ಮಾಫಿಯಾ ಸೃಷ್ಟಿಯಾಗಿದ್ದು, ಹಣ ನೀಡದೆ `ಅಪ್ರೂವ್' ಬಟನ್ ಒತ್ತದಂತಹ ಸ್ಥಿತಿ ನಿರ್ಮಾಣವಾಗಿದೆ.
ಭಟ್ ಅವರ ಈ ಪ್ರಕರಣವು ಒಂದು ಭಯಾನಕ ತಾರತಮ್ಯವನ್ನು ಎತ್ತಿ ತೋರಿಸುತ್ತದೆ. ಒಬ್ಬ ಮಾಜಿ ಶಾಸಕನಿಗೇ ಧರಣಿ ಕೂತರೆ ಮಾತ್ರ ನ್ಯಾಯ ಸಿಗುತ್ತದೆ ಎಂದಾದರೆ, ಹಳ್ಳಿಯ ರೈತ ಅಥವಾ ಮಂಗಳೂರಿನ ಸಣ್ಣ ಉದ್ಯಮಿಯ ಗತಿಯೇನು? ಸಾಮಾನ್ಯ ನಾಗರಿಕನಿಗೆ ಧರಣಿ ಕೂರುವ ಶಕ್ತಿಯಾಗಲಿ ಅಥವಾ ಮಾಧ್ಯಮಗಳ ಗಮನ ಸೆಳೆಯುವ ಅವಕಾಶವಾಗಲಿ ಇರುವುದಿಲ್ಲ. ಈ ವ್ಯವಸ್ಥೆಯು ಈಗ ಜನಸೇವೆಯ ಬದಲು ಸ್ವಯಂ ಸೇವೆಯಲ್ಲಿ ನಿರತವಾಗಿದೆ. ಹೊಣೆಗಾರಿಕೆಯನ್ನು ಡಿಜಿಟಲ್ ರೂಪದಲ್ಲಿ ಕಡ್ಡಾಯಗೊಳಿಸದ ಹೊರತು ಮತ್ತು ವಿಳಂಬ ಮಾಡುವ ಅಧಿಕಾರಿಗಳಿಗೆ ಶಿಕ್ಷೆಯಾಗದ ಹೊರತು, ನಮ್ಮ ಸ್ಥಳೀಯ ಸಂಸ್ಥೆಗಳು ಸುಲಿಗೆಯ ಕೇಂದ್ರಗಳಾಗಿಯೇ ಉಳಿಯುತ್ತವೆ.
..................ಬಾಕ್ಸ್...................
ವಿಳಂಬದ ವಿರುದ್ಧ
ಕಾನೂನು ಅಸ್ತ್ರ
ಸಕಾಲ ಕಾಯ್ದೆಯು ಭೂಪರಿವರ್ತನೆ ಸೇರಿದಂತೆ ಸುಮಾರು 1,100ಕ್ಕೂ ಹೆಚ್ಚು ಸೇವೆಗಳನ್ನು ಕಾಲಮಿತಿಯಲ್ಲಿ ಒದಗಿಸುವುದನ್ನು ಕಡ್ಡಾಯಗೊಳಿಸಿದೆ. ಒಂದು ವೇಳೆ ಅಧಿಕಾರಿಗಳು ನಿಗದಿತ 30ರಿಂದ 45 ದಿನಗಳ ಮಿತಿಯನ್ನು ಮೀರಿದರೆ, ನಾಗರಿಕರು ಪ್ರತಿದಿನಕ್ಕೆ 20 ರೂಪಾಯಿ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಈ ಹಣವನ್ನು ಸಂಬಂಧಪಟ್ಟ ಅಧಿಕಾರಿಯ ಸಂಬಳದಿಂದಲೇ ಕಡಿತಗೊಳಿಸಲಾಗುತ್ತದೆ. 2026ರ ಹೈಕೋರ್ಟ್ ಆದೇಶದಂತೆ ಈಗ ಈ ಪ್ರಕ್ರಿಯೆಯನ್ನು ಡಿಜಿಟಲ್ ಮೂಲಕ ಕಟ್ಟುನಿಟ್ಟಾಗಿ ಟ್ರ್ಯಾಕ್ ಮಾಡಲಾಗುತ್ತಿದೆ.
Comments
Post a Comment