ಸಮವಸ್ತ್ರದ ಮರೆಯಲ್ಲಿ ಕಾಮಪಿಶಾಚಿ: ವ್ಯವಸ್ಥೆಯ ನೈತಿಕ ಪತನ ಮತ್ತು ರಕ್ಷಣೆ ನೀಡಿದವರ ಹೊಣೆ
ಬಿವಿಸೀ
ಮೂಡುಬಿದಿರೆ ವೃತ್ತ ನಿರೀಕ್ಷಕ ಸಂದೇಶ್ ಅವರ ಲೈಂಗಿಕ ದೌರ್ಜನ್ಯದ ಹಗರಣವು ಕೇವಲ ಒಬ್ಬ ಪೆÇಲೀಸ್ ಅಧಿಕಾರಿಯ ವೈಯಕ್ತಿಕ ನೈತಿಕ ಪತನವಲ್ಲ; ಇದು ಇಡೀ ಪೆÇಲೀಸ್ ಇಲಾಖೆಯ ಆಡಳಿತಾತ್ಮಕ ವಿಶ್ವಾಸಾರ್ಹತೆಯನ್ನೇ ಅಲುಗಾಡಿಸಿರುವ ಗಂಭೀರ ಪ್ರಕರಣ. ನ್ಯಾಯ ಕೇಳಲು ಬಂದ ಸಂತ್ರಸ್ತೆಯರನ್ನೇ ಲೈಂಗಿಕವಾಗಿ ಬಳಸಿಕೊಳ್ಳಲು ಬಲಾತ್ಕರಿಸಿದ ಆರೋಪ ಹೊತ್ತಿರುವ ಅಧಿಕಾರಿಯ ವರ್ತನೆ ಅಕ್ಷಮ್ಯ. ಆದರೆ, ಈ ಪ್ರಕರಣದಲ್ಲಿ ಅದಕ್ಕಿಂತಲೂ ಭೀಕರವಾಗಿ ಕಾಣಿಸುತ್ತಿರುವುದು ಆತನನ್ನು ರಕ್ಷಿಸಲು ಮುಂದಾದ ಉನ್ನತ ಅಧಿಕಾರಿಗಳ ಸಂಶಯಾಸ್ಪದ ನಡೆ.
ಬಂಧನ ಅನಿವಾರ್ಯ: ಕಾನೂನಿನ
ಮುಂದೆ ಎಲ್ಲರೂ ಸಮಾನರು
ಸಂತ್ರಸ್ತ ಮಹಿಳೆಯರು ನೀಡಿದ ದೂರಿನಲ್ಲಿ ಲೈಂಗಿಕ ದೌರ್ಜನ್ಯ, ಅತಿಕ್ರಮ ಪ್ರವೇಶ ಮತ್ತು ಅಧಿಕಾರ ದುರುಪಯೋಗದಂತಹ ಗಂಭೀರ ಅಂಶಗಳಿವೆ. ಅಷ್ಟೇ ಅಲ್ಲದೆ, ಈ ಆರೋಪಗಳಿಗೆ ಪೂರಕವಾಗಿ ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳು ಲಭ್ಯವಿವೆ. ಸಾಮಾನ್ಯ ವ್ಯಕ್ತಿಯೊಬ್ಬನ ಮೇಲೆ ಇಂತಹ ಸಾಕ್ಷ್ಯಗಳಿದ್ದರೆ ಪೆÇಲೀಸರು ಕ್ಷಣಾರ್ಧದಲ್ಲಿ ಬಂಧಿಸುತ್ತಿದ್ದರು. ಹಾಗಿರುವಾಗ, ಸಂದೇಶ್ ಕೈಯಲ್ಲಿ ಅಧಿಕಾರವಿದೆ ಮತ್ತು ಮೈಮೇಲೆ ಸಮವಸ್ತ್ರವಿದೆ ಎಂಬ ಕಾರಣಕ್ಕೆ ಆತನ ಬಂಧನ ವಿಳಂಬವಾಗುತ್ತಿರುವುದು ಯಾಕೆ? "ನಾನು ಮೇಲಧಿಕಾರಿಗಳಿಗೆ ಹಣ ನೀಡಿಯೇ ಇಲ್ಲಿಗೆ ಬಂದಿದ್ದೇನೆ, ನನ್ನನ್ನು ಯಾರೂ ಏನೂ ಮಾಡಲಾಗದು" ಎಂದು ಸಂದೇಶ್ ಸಂತ್ರಸ್ತೆಯರ ಮುಂದೆಯೇ ಅಹಂಕಾರ ಪ್ರದರ್ಶಿಸಿರುವುದು ಇಲಾಖೆಯೊಳಗಿನ ಭ್ರಷ್ಟಾಚಾರದ ಜಾಲದ ಕಡೆಗೆ ಬೆರಳು ಮಾಡಿ ತೋರಿಸುತ್ತಿದೆ.
ರಕ್ಷಣೆ ನೀಡಿದವರೇ
ಅಪರಾಧದ ಪಾಲುದಾರರು
ಈ ಇಡೀ ಹಗರಣದಲ್ಲಿ ಮಂಗಳೂರು ಪೆÇಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮತ್ತು ಮೂಡುಬಿದಿರೆ ಎಸಿಪಿ ಅವರ ಪಾತ್ರ ಅತ್ಯಂತ ಕಳವಳಕಾರಿಯಾಗಿದೆ. ಸಂತ್ರಸ್ತೆಯರು ಸಾಕ್ಷ್ಯ ಸಮೇತ ದೂರು ನೀಡಿದಾಗಲೂ, ಎಸಿಪಿ ಅವರು ನಡೆಸಿದ `ಕಣ್ಣೊರೆಸುವ ತಂತ್ರ'ದ ತನಿಖೆಯಲ್ಲಿ ಅಧಿಕಾರಿಗೆ `ಕ್ಲೀನ್ ಚಿಟ್' ನೀಡಲಾಗಿತ್ತು. ಅಷ್ಟೇ ಅಲ್ಲದೆ, ಕಮಿಷನರ್ ಅವರು ಪದೇ ಪದೇ ಆರೋಪಿ ಅಧಿಕಾರಿಯ ಪರವಾಗಿ ನಿಂತು ಸಮರ್ಥನೆ ಮಾಡಿಕೊಂಡಿರುವುದು ಅವರ ವೈಯಕ್ತಿಕ ಹಿತಾಸಕ್ತಿಯನ್ನು ಎತ್ತಿ ತೋರಿಸುತ್ತದೆ. ಒಬ್ಬ ಲೈಂಗಿಕ ದೌರ್ಜನ್ಯದ ಆರೋಪಿಯನ್ನು ರಕ್ಷಿಸಲು ಇಷ್ಟೊಂದು ಉತ್ಸಾಹ ತೋರಿದ ಕಮಿಷನರ್ ಮತ್ತು ಎಸಿಪಿ ಅವರನ್ನು `ಅಪರಾಧಕ್ಕೆ ಪ್ರಚೋದನೆ ಮತ್ತು ಸಹಕಾರ' ನೀಡಿದ ಆರೋಪದಡಿ ಪ್ರಕರಣಕ್ಕೆ ಸೇರಿಸಬೇಕಿದೆ.
ಪಾರದರ್ಶಕ ತನಿಖೆಗಾಗಿ
ವರ್ಗಾವಣೆ ಮತ್ತು ಕ್ರಮ
ಗೃಹ ಸಚಿವರು ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿರುವುದು ಸ್ವಾಗತಾರ್ಹ. ಆದರೆ, ಕಮಿಷನರ್ ಸುಧೀರ್ ರೆಡ್ಡಿ ಮತ್ತು ಸ್ಥಳೀಯ ಎಸಿಪಿ ಅದೇ ಜಿಲ್ಲೆಯಲ್ಲಿ ಅಧಿಕಾರದಲ್ಲಿದ್ದರೆ ನಿಷ್ಪಕ್ಷಪಾತ ತನಿಖೆ ಸಾಧ್ಯವೇ ಇಲ್ಲ. ಅವರು ತನಿಖೆಯ ದಾರಿ ತಪ್ಪಿಸುವ ಅಥವಾ ಸಾಕ್ಷ್ಯಗಳನ್ನು ನಾಶಪಡಿಸುವ ಅಧಿಕಾರ ಹೊಂದಿದ್ದಾರೆ. ಆದ್ದರಿಂದ, ಈ ಕೂಡಲೇ ಇವರಿಬ್ಬರನ್ನು ಜಿಲ್ಲೆಯಿಂದ ಹೊರಕ್ಕೆ ವರ್ಗಾವಣೆ ಮಾಡುವುದು ಮತ್ತು ತನಿಖಾ ವ್ಯಾಪ್ತಿಗೆ ತರುವುದು ಅತ್ಯಗತ್ಯ.
ನಾಗರಿಕ ಸಮಾಜದ ನಿರೀಕ್ಷೆ
ಕೇವಲ ಅಮಾನತು ಶಿಕ್ಷೆಯಲ್ಲ; ಅದು ಕೇವಲ ಒಂದು ತಾತ್ಕಾಲಿಕ ಕ್ರಮವಷ್ಟೇ. ಆರೋಪಿ ಸಂದೇಶ್‍ನ ತಕ್ಷಣದ ಬಂಧನ ಮತ್ತು ಆತನಿಗೆ ರಕ್ಷಣೆ ನೀಡಿದ ಹಿರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು ನ್ಯಾಯದ ದೃಷ್ಟಿಯಿಂದ ಅನಿವಾರ್ಯ. ಈ ಪಾರದರ್ಶಕ ಕ್ರಮಗಳನ್ನು ಕೈಗೊಳ್ಳದಿದ್ದರೆ, ದಕ್ಷಿಣ ಕನ್ನಡದಂತಹ ಸುಶಿಕ್ಷಿತ ಜಿಲ್ಲೆಯ ನಾಗರಿಕ ಸಮಾಜವು ಪೆÇಲೀಸ್ ಇಲಾಖೆಯ ಮೇಲೆ ಇಟ್ಟಿರುವ ಅಲ್ಪಸ್ವಲ್ಪ ನಂಬಿಕೆಯೂ ಮಣ್ಣು ಪಾಲಾಗಲಿದೆ.
Comments
Post a Comment