ಪರ್ಯಾಯದ ಸೌಹಾರ್ದ ಸಂಪ್ರದಾಯವನ್ನು ಹಾಳು ಮಾಡುತ್ತಿರುವ ಶಾಸಕ ಯಶಪಾಲರ ಕೋಮು ರಾಜಕೀಯದ ಠಕ್ಕುತನ
ನೇರಾನೇರ * ಬಿವಿಸೀ
ಉಡುಪಿಯ ಸೌಹಾರ್ದ ಸಂಪ್ರದಾಯ ಇಂದು ತೊಂದರೆಗೀಡಾದ ಕವಲು ಹಾದಿಯಲ್ಲಿ ನಿಂತಿದೆ. ಆಧ್ಯಾತ್ಮಿಕ ಪರಂಪರೆಗಾಗಿ ಗೌರವಿಸಲ್ಪಡುವ ಹಾಗೂ ಸಾಮಾಜಿಕ ಸೌಹಾರ್ದತೆಗಾಗಿ ಪ್ರಶಂಸಿಸಲ್ಪಡುವ ಉಡುಪಿ ಈಗ ಅಲ್ಲಿನ ಸ್ಥಳೀಯ ಶಾಸಕರ ಬೇಜವಾಬ್ದಾರಿಯುತ ರಾಜಕೀಯದ ಫಲವಾಗಿ ಕೋಮು ದ್ವೇಷದ ವಿವಾದದಲ್ಲಿ ಸಿಲುಕುವಂತಾಗಿದೆ. ಇದನ್ನು ತಪ್ಪಿಸಬಹುದಿತ್ತು. ಬಿಜೆಪಿ ಶಾಸಕ ಯಶ್‍ಪಾಲ್ ಸುವರ್ಣ ಇತ್ತೀಚೆಗೆ ಉಡುಪಿ ಪರ್ಯಾಯ ಸಮಾರಂಭದ ಪೂರ್ವತಯಾರಿಯಲ್ಲಿ ಮೂಗುತೂರಿಸಿ ಶಾಂತ ವಾರವಾರಣದಲ್ಲಿ ಕೋಮು ಬೀಜ ಬಿತ್ತಲು ಯತ್ನಿಸಿರುವುದು ಈಗಾಗಲೇ ಕಂಡಿರುವ ಮಾದರಿಯಲ್ಲೇ ಇದೆ. ಕೋಮು ಧೃವೀಕರಣವನ್ನು ಆಧರಿಸಿ ಕಲ್ಪಿತ ಕುಂದುಕೊರತೆಗಳನ್ನು ಸೃಷ್ಟಿಸಿ ರಾಜಕೀಯ ನಡೆಸುವ ಶಾಸಕರ ತಂತ್ರ ಹಿಂದೆಯೂ ಕಂಡಿದೆ.
ಉಡುಪಿ ಕೃಷ್ಣ ಮಠದ ಪರ್ಯಾಯ ಕೇವಲ ಇಲ್ಲಿನ ಸ್ವಾಮಿಗಳ ಧಾರ್ಮಿಕ ಪೀಠಗ್ರಹಣ ಅಲ್ಲ. ಶತಮಾನಗಳಿಂದ ಇದು ಒಂದು ನಾಗರಿಕ-ಸಾಂಸ್ಕøತಿಕ ಚಟುವಟಿಕೆಯಾಗಿ ರೂಪುಗೊಂಡಿದ್ದು, ಮೈಸೂರು ದಸರಾದ ಹಾಗೆ ಇಡೀ ಪಟ್ಟಣವನ್ನು ಒಂದುಗೂಡಿಸುತ್ತದೆ. ಇದರ ಯಶಸ್ಸು ಸದಾ ಕಾಲವು ಸಾರ್ವಜನಿಕರ ಸಹಕಾರ ಮತ್ತು ಎಲ್ಲ ಸಮುದಾಯಗಳ ಭಾಗವಹಿಸುವಿಕೆಯನ್ನು ಅವಲಂಬಿಸಿದೆ. ನೇರವಾಗಿ ಕಾಣುವ ಮತ್ತು ಈ ಸಂಪ್ರದಾಯದ ಸಂಕೇತವಾಗಿ ಕಾಣುವ ಅಂಶವೆಂದರೆ, ಸ್ಥಳೀಯ ಮುಸ್ಲಿಮರು ಇದರಲ್ಲಿ ಪಾಲ್ಗೊಂಡು, ಹೊರೆಕಾಣಿಕೆಯಾಗಿ ತರಕಾರಿ, ಹಣ್ಣು ಮತ್ತು ದವಸ ಧಾನ್ಯಗಳನ್ನು ಸಮಾರಂಭಕ್ಕೆ ನೀಡುವುದು ಮತ್ತು ಪರ್ಯಾಯಕ್ಕೆ ಸರ್ವ ವಿಧದ ಸಹಕಾರ ನೀಡುವುದು. ಇದರಲ್ಲಿ ರಾಜಕೀಯ ಉದ್ದೇಶವೇನೂ ಇರುವುದಿಲ.್ಲ ಬದಲಾಗಿ, ಎಲ್ಲರೂ ಕೂಡಿ ಬಾಳುವ ಇಂಗಿತ ಇರುತ್ತದೆ. ಈ ಅಭ್ಯಾಸವು ಹಲವು ಆಳ್ವಿಕೆಗಳನ್ನು, ಸರ್ಕಾರಗಳನ್ನು, ಸಿದ್ಧಾಂತಗಳನ್ನು ದಾಟಿ ಉಳಿದುಕೊಂಡಿದೆ.
ಈ ಹಿನ್ನೆಲೆಯಲ್ಲಿ ಸುವರ್ಣ ಅವರ, ಮುಸ್ಲಿಮರು ಈ ಬಾರಿ ಪರ್ಯಾಯದಲ್ಲಿ ಭಾಗವಹಿಸುವುದನ್ನು ನಿರಾಕರಿಸಲಾಗಿದೆ ಎಂಬರ್ಥದ ಹೇಳಿಕೆ ಸಮಸ್ಯಾತ್ಮಕವಾಗುತ್ತದೆ. ಬೇಕಾಬಿಟ್ಟಿಯಾಗಿ ಹೇಳಿದ್ದಾರೋ ಅಥವಾ ಉದ್ದೇಶಪೂರ್ವಕವೋ, ಇಂತಹ ಹೇಳಿಕೆಗಳು ಚಾರಿತ್ರಿಕವಾಗಿ ವಿಶ್ವಾಸವನ್ನು ಆಧರಿಸಿ ನಡೆಯುತ್ತಿರುವ ಸಂಭ್ರಮದಲ್ಲಿ ಅನುಮಾನಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ. ಇದು ಪ್ರತ್ಯೇಕಿಸುವ ಒಂದು ಭಾವನೆಯನ್ನು ಸೃಷ್ಟಿಸುವುದೇ ಅಲ್ಲದೆ ಸಾಮಾನ್ಯ ನಾಗರಿಕರಲ್ಲಿ ಆಕ್ರೋಶವನ್ನೂ ಸೃಷ್ಟಿಸುತ್ತದೆ. ಹಾಗಾಗಿ ಇಲ್ಲಿನ ಕೋಮು ಸೌಹಾರ್ದತೆ ಹಾಳಾಗುವುದಷ್ಟೇ ಅಲ್ಲದೆ, ಪರ್ಯಾಯಕ್ಕೆ ಸಂಬಂಧಿಸಿದ ಸಾರ್ವಜನಿಕ ಸಂಸ್ಥೆಗಳ ವಿಶ್ವಾಸಾರ್ಹತೆಗೂ ಧಕ್ಕೆ ಉಂಟುಮಾಡುತ್ತದೆ.
ಜನಪ್ರತಿನಿಧಿಯಾಗಿ, ಸುವರ್ಣ ಅವರ ಕರ್ತವ್ಯ ಇರುವುದು ಶಾಂತಿ ಮತ್ತು ಸಾಮಾಜಿಕ ಐಕ್ಯತೆಯನ್ನು ಕಾಪಾಡುವುದೇ ಹೊರತು, ಸೈದ್ದಾಂತಿಕವಾಗಿ ಗೆಲುವು ಸಾಧಿಸುವುದಲ್ಲ. ಪದೇಪದೇ ಕೋಮುಪ್ರಚೋದಕ ಕೃತ್ಯ ಮತ್ತು ಭಾಷಣಗಳಿಗೆ ಮೊರೆ ಹೋಗುವ ಮೂಲಕ ಸುವರ್ಣ ಅವರು ನಾಗರಿಕ ಸಮಾಜದಿಂದ ಮೊದಲಿನಿಂದಲೂ ಖಂಡನೆಗೊಳಗಾಗಿದ್ದಾರೆ. ಈಗಲೂ ಅದೇ ಆಗುತ್ತಿದೆ. ದುರಂತ ಎಂದರೆ ಇಂತಹ ರಾಜಕೀಯ ನಡೆ ಎಲ್ಲರಿಗೂ ತೊಂದರೆ ಉಂಟುಮಾಡುತ್ತದೆ. ಹಿಂದೂಗಳಿಗೆ ಅವರ ಉತ್ಸವಗಳು ಕದನ ಕಣವಾಗುವ ಭೀತಿ. ವಿನಾಕಾರಣ ಮುಸ್ಲಿಮರ ಬಗ್ಗೆ ಇರುವ ಸದ್ಬಾವನೆ ಪ್ರಶ್ನೆಗೊಳಗಾಗುತ್ತದೆ ಹಾಗೂ ಸೌಹಾರ್ದತೆಗೆ ಹೆಸರಾದ ಪಟ್ಟಣದಲ್ಲಿ ಸೌಹಾರ್ದತೆ ಮರೆಯಾಗುತ್ತದೆ.
ಅಷ್ಟೇ ಕಳಕಳಿಯ ವಿಷಯ ಎಂದರೆ, ಮಾತನಾಡಬೇಕಾದವರು ಮೌನವಾಗಿರುವುದು. ಉಡುಪಿ ಕೃಷ್ಣ ದೇವಸ್ಥಾನ ಮತ್ತು ಅಷ್ಟ ಮಠಗಳು, ವಿಶೇಷವಾಗಿ ಪುತ್ತಿಗೆ ಮಠದ ಪರ್ಯಾಯ ಸ್ವಾಮಿ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕಿದೆ. ಇವರ ಒಪ್ಪಿಗೆ ಪಡೆದು ಶಾಸಕರು ಮಾತನಾಡಿದ್ದಾರೆಯೇ? ದೇವಸ್ಥಾನ ಮಂಡಲಿ ಈ ರೀತಿ ಮುಸ್ಲಿಮರನ್ನು ಉತ್ಸವದಿಂದ ಹೊರಗಿಡುವ ನಡೆಯನ್ನು ಅನುಮೋದಿಸಿದೆಯೆ? ಸಾರ್ವಜನಿಕರ ಜೀವನದೊಡನೆ ಶ್ರದ್ಧೆ ನಂಬಿಕೆಗಳು ಸಮ್ಮಿಳಿತಗೊಳ್ಳುವ ಇಂತಹ ಸಂದರ್ಭಗಳಲ್ಲಿ ಮೌನವಾಗಿರುವುದು ತಟಸ್ಥ ನೀತಿ ಎನಿಸಿಕೊಳ್ಳುವುದಿಲ್ಲ. ಅದು ವ್ಯಾಖ್ಯಾನವಾಗುತ್ತದೆ. ಪ್ರಕ್ಷುಬ್ಧ ವಾತಾವರಣದಲ್ಲಿ ಈ ವ್ಯಾಖ್ಯಾನವೇ ಅಂತಿಮ ನಿರ್ಧಾರವಾಗುತ್ತದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ, ಸೆಕ್ಯುಲರ್ ನೀತಿಯನ್ನು ಪಾಲಿಸುತ್ತಿದ್ದು, ಮೌನ ಪ್ರೇಕ್ಷಕನಂತೆ ಇರಲು ಸಾಧ್ಯವಿಲ್ಲ. ಪ್ರಜಾಸತ್ತಾತ್ಮಕ ಆಳ್ವಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳು ಕೋಮು ಸಂಘರ್ಷವನ್ನು ಪ್ರಚೋದಿಸುವಾಗ ಸರ್ಕಾರ ಮಧ್ಯ ಪ್ರವೇಶಿಸಬೇಕಾಗುತ್ತದೆ.
ನಾಗರಿಕ ಸಮಾಜವೂ ಇದನ್ನು ಗಮನಿಸಬೇಕು. ಇಲ್ಲಿ ಒಬ್ಬ ಶಾಸಕರ ಅಭಿಪ್ರಾಯ ಮಾತ್ರವಲ್ಲ ಬದಲಾಗಿ ವಿಭಜಕ ರಾಜಕಾರಣ, ಎಲ್ಲರಿಗೂ ಸಲ್ಲುತ್ತಿದ್ದಂತಹ ಜಾಗಗಳಲ್ಲೂ ಪ್ರವೇಶಿಸುತ್ತಿರುವುದನ್ನು ಗಮನಿಸಬೇಕಾಗುತ್ತದೆ. ಪವಿತ್ರ ಸಂಪ್ರದಾಯಗಳನ್ನು ರಾಜಕೀಯ ಅಸ್ತ್ರಗಳನ್ನಾಗಿ ಪರಿಗಣಿಸುವುದಕ್ಕಿಂತಲೂ ಉತ್ತಮವಾದ ನಡೆಯನ್ನು ಉಡುಪಿ ನಿರೀಕ್ಷಿಸುತ್ತದೆ. ಸೌಹಾರ್ದತೆ ಉಳಿಯಬೇಕಾದರೆ, ಪ್ರಚೋದನೆಯನ್ನು ಬಯಲಿಗೆಳೆದು ಖಚಿತವಾಗಿ ತಿರಸ್ಕರಿಸಬೇಕು.
Comments
Post a Comment