ಫೈರ್ ಬ್ರ್ಯಾಂಡ್‍ನಿಂದ ಮುಖ್ಯಮಂತ್ರಿಯವರೆಗೆ ಸಿದ್ದರಾಮಯ್ಯ ಪಯಣ
ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ವಿರುದ್ದ ಪ್ರಖರ ಹೋರಾಟಗಾರರಾಗಿದ್ದ ಸಿದ್ದರಾಮಯ್ಯ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಾರಥ್ಯ ವಹಿಸಿದ್ದಾರೆ
............
ಅಲವಾದರಲ್ಲವೆನ್ನಿ * ಬಿವಿಸೀ
ಭಾರತದ ರಾಜಕಾರಣದಲ್ಲಿ ತಿರುವುಗಳು ಹೆಚ್ಚು, ಆದರೆ ಸಿದ್ದರಾಮಯ್ಯನವರ ರಾಜಕೀಯ ಪಯಣವನ್ನು ಗಮನಿಸಿದರೆ, ಸೈದ್ಧಾಂತಿಕ ಪಲ್ಲಟವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಒಂದು ಕಾಲದಲ್ಲಿ ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯ ವಿರುದ್ದ ಪ್ರಖರ ಹೋರಾಟಗಾರರಾಗಿದ್ದ ಸಿದ್ದರಾಮಯ್ಯ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಸಾರಥ್ಯ ವಹಿಸಿದ್ದಾರೆ. ಒಂದು ಕಾಲದಲ್ಲಿ ಬದ್ಧತೆಯಿಂದ ತಾವೇ ವಿರೋಧಿಸಿದ್ದ ಪಕ್ಷವನ್ನೇ ಇಂದು ಪ್ರತಿನಿಧಿಸುತ್ತಿದ್ದಾರೆ.
1970ರಲ್ಲಿ ಸಿದ್ದರಾಮಯ್ಯ ರಾಮ ಮನೋಹರ್ ಲೋಹಿಯಾ ಮತ್ತು ಜಯಪ್ರಕಾಶ ನಾರಾಯಣ್ ಅವರಿಂದ ಪ್ರೇರಣೆ ಪಡೆದು ಸಮಾಜವಾದಿ ರಾಜಕೀಯವನ್ನು ಪ್ರವೇಶಿಸಿದರು. 1975ರಲ್ಲಿ ಇಂದಿರಾಗಾಂಧಿ ಹೇರಿದ ತುರ್ತುಪರಿಸ್ಥಿತಿ ಈ ಪೀಳಿಗೆಯ ನಾಯಕರಿಗೆ ನಿರ್ಣಾಯಕ ಘಟ್ಟವಾಗಿತ್ತು. ಆಗ ಮೈಸೂರು ವಲಯದ ವಿದ್ಯಾರ್ಥಿ ಹೋರಾಟ ಮತ್ತು ಸಮಾಜವಾದಿ ಚಳುವಳಿಗಳಲ್ಲಿ ಸಕ್ರಿಯರಾಗಿದ್ದ ಸಿದ್ದರಾಮಯ್ಯ, ಸಾರ್ವಜನಿಕ ಸಭೆಗಳ ಭಾಷಣಗಳಲ್ಲಿ ತುರ್ತುಪರಿಸ್ಥಿತಿಯನ್ನು ನೇರವಾಗಿ ಖಂಡಿಸಿದ್ದರು. ಸಾಮೂಹಿಕ ಬಂಧನ, ಪತ್ರಿಕೆಗಳ ಮೇಲಿನ ನಿಬರ್ಂಧ ಮುಂತಾದುವನ್ನು ಖಂಡಿಸಿದ್ದ ಸಿದ್ದರಾಮಯ್ಯ ಇದು ಪ್ರಜಾಸತ್ತಾತ್ಮಕ ಸ್ವಾತಂತ್ರ್ಯದ ಹರಣ ಎಂದು ಆರೋಪಿಸಿದ್ದರು. ಅವರಿಗೆ ತುರ್ತುಪರಿಸ್ಥಿತಿ ಕೇವಲ ಕೆಟ್ಟ ಆಳ್ವಿಕೆಯಷ್ಟೇ ಅಲ್ಲದೆ, ಸಂವಿಧಾನದ ಮೇಲೆ ನಡೆಸಿದ ಆಕ್ರಮಣವಾಗಿತ್ತು.
ಈ ವಿರೋಧವೇ ಅವರನ್ನು 1977ರಲ್ಲಿ ಕಾಂಗ್ರೆಸ್ ವಿರೋಧಿ ಬಣದಲ್ಲಿ ಗಟ್ಟಿಯಾಗಿ ನೆಲೆಗೊಳ್ಳುವಂತೆ ಮಾಡಿತ್ತು. ಜನತಾ ಪಕ್ಷದ ಅನೇಕ ನಾಯಕರ ಹಾಗೆ ಸಿದ್ದರಾಮಯ್ಯ ತುರ್ತುಪರಿಸ್ಧಿತಿಯನ್ನು ಭಾರತದ ಇತಿಹಾಸದ ಕರಾಳ ಯುಗ ಎಂದು ಬಣ್ಣಿಸಿದ್ದರು. ಆ ಕಾಲದ ಅವರ ಭಾಷಣಗಳನ್ನು ಪುನಃ ಪರಾಮರ್ಶಿಸುವ ರಾಜಕೀಯ ವಿಶ್ಲೇಷಕರು ಗುರುತಿಸುವಂತೆ, ಸಿದ್ದರಾಮಯ್ಯ ತಮ್ಮ ಮಾತುಗಳಲ್ಲಿ ಇಂದಿರಾಗಾಂಧಿ ಅಧಿಕಾರವನ್ನು ಕ್ರೋಢಿಕರಿಸುವ, ಪ್ರತಿರೋಧವನ್ನು ದಮನಿಸುವ, ಸಂಸ್ಥೆಗಳನ್ನು ಕಡೆಗಣಿಸುವ ನಾಯಕಿಯಾಗಿ ಬಿಂಬಿಸುತ್ತಿದ್ದರು.. ಆ ಹಂತದಲ್ಲಿ ಅವರ ರಾಜಕೀಯ ನಡೆ ಸ್ಪಷ್ಟವಾಗಿತ್ತು. ಸರ್ವಾಧಿಕಾರ ವಿರೋಧಿ, ಕಾಂಗ್ರೆಸ್ ವಿರೋಧಿ ಧೋರಣೆಗಳೊಂದಿಗೆ, ಸಮಾಜವಾದಿ ತತ್ವಗಳಿಗೆ ಬದ್ಧವಾಗಿತ್ತು.
ಕಾಲ ಕಳೆದಂತೆ ಕರ್ನಾಟಕದ ರಾಜಕೀಯ ವಾತಾವರಣ ಬದಲಾಯಿತು. ಜನತಾ ಚಳುವಳಿ ದುರ್ಬಲವಾಗಿದೆ, ಪ್ರಾದೇಶಿಕ ಸಮೀಕರಣಗಳು ಬದಲಾಗಿವೆ, ಸೈದ್ಧಾಂತಿಕ ಗುಂಪುಗಳು ಮಸುಕಾಗಿವೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪ್ರವೇಶ ಅವರ ಮೊದಲಿನ ನಿಲುವಿನಿಂದ ನಿರ್ಣಾಯಕ ಬದಲಾವಣೆಯನ್ನು ಕಂಡಿದೆ. ಒಂದು ಕಾಲದಲ್ಲಿ ಇಂದಿರಾಗಾಂಧಿಯನ್ನು ಖಂಡಿಸಿದವರೇ ಈಗ ಆಕೆಯ ಪರಂಪರೆಯ ಪಕ್ಷದಲ್ಲಿ ಮುಂದುವರೆದಿದ್ದಾರೆ.
ಬೆಂಬಲಿಗರ ದೃಷ್ಟಿಯಲ್ಲಿ ಇದು ರಾಜಕೀಯ ಪ್ರಬುದ್ಧತೆಯಾಗಿ ಕಾಣುತ್ತದೆ. ಕಲ್ಯಾಣ ರಾಜಕೀಯದ ಮೂಲಕ ಸಾಮಾಜಿಕ ನ್ಯಾಯವನ್ನು ಪರಿಪಾಲಿಸಿಕೊಂಡು, ವಾಸ್ತವಗಳೊಡನೆ ಹೊಂದಾಣಿಕೆ ಮಾಡಿಕೊಳ್ಳುವ ನೀತಿ ಅಪ್ಯಾಯಮಾನವಾಗುತ್ತದೆ. ಟೀಕಾಕಾರರು ಭಿನ್ನವಾಗಿ ಕಾಣುತ್ತಾರೆ. ಅಧಿಕಾರ ಮತ್ತು ಪ್ರಸ್ತುತತೆಯನ್ನು ಕಾಪಾಡುವ ಸಲುವಾಗಿ ತತ್ವಾದರ್ಶಗಳನ್ನು ಕೈಬಿಟ್ಟ ಒಂದು ನೀತಿ ಎಂದು ಖಂಡಿಸುತ್ತಾರೆ. ತುರ್ತುಪರಿಸ್ಥಿತಿಯ ಸಂದರ್ಭದ ಭಾಷಣಗಳಿಗೂ ವರ್ತಮಾನದ ರಾಜಕೀಯ ನಿಲುವಿಗೂ ಇರುವ ವ್ಯತ್ಯಾಸವನ್ನು ನಿರ್ಲಕ್ಷಿಸಲಾಗುವುದಿಲ್ಲ.
ಸಿದ್ದರಾಮಯ್ಯ ಅವರ ಪಯಣವನ್ನು ಗಮನಿಸಿದರೆ, ಭಾರತದ ರಾಜಕಾರಣದಲ್ಲಿ ಹೇಗೆ ಸಿದ್ಧಾಂತಗಳು, ನಿರಾಕರಣೆಗೊಳಗಾಗುತ್ತವೆ, ಅಧಿಕಾರದ ಪ್ರಶ್ನೆ ಬಂದಾಗ ಹೇಗೆ ಅದಲುಬದಲಾಗುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ತುರ್ತುಪರಿಸ್ಥಿತಿ ವಿರೋಧಿ ಸಮಾಜವಾದಿಯ ಅವರ ಹಿನ್ನೆಲೆ ಅಳಿಸಿಹೋಗಿಲ್ಲ, ಆದರೆ ಜಾಣ್ಮೆಯಿಂದ ಹಿಂಬದಿಗೆ ಸರಿಸಲಾಗಿದೆ.
ಅಂತಿಮವಾಗಿ ಸಿದ್ದರಾಮಯ್ಯ ಸಾಮಾನ್ಯವಾಗಿ ಕಾಣುವಂತಹ ಭಾರತದ ರಾಜಕೀಯ ಕಥನವನ್ನು ಪ್ರತಿನಿಧಿಸುತ್ತಾರೆ. ಈ ವಾತಾವರಣದಲ್ಲಿ ಸರ್ವಾಧಿಕಾರದ ವಿರುದ್ಧ ಪ್ರಖರ ಮಾತುಗಳು ತದನಂತರದಲ್ಲಿ ಹೊಂದಾಣಿಕೆಗೂ ಮುಂದಾಗುತ್ತದೆ. ಇಲ್ಲಿ ಸಿದ್ದಾಂತಗಳು ಅಸ್ತಿತ್ವವನ್ನು ಉಳಿಸಿಕೊಳ್ಳುವ ಮತ್ತು ಯಶಸ್ಸು ಸಾಧಿಸುವ ಅಗತ್ಯತೆಗಳಿಗೆ ಶರಣಾಗುತ್ತವೆ
Comments
Post a Comment