ಕಾಸಿಲ್ಲದೇ ಕೈಲಾಸ: ಸರಕಾರ ನಡೆಸಲು ದುಡ್ಡು ಬೇಕೆಂದವರು ಯಾರು?
ನೋಡ್ರಪ್ಪೋ ನೋಡಿ, ಕೇಳ್ರಪ್ಪೋ ಕೇಳಿ ಸರ್ಕಾರ ನಡೆಸುವ ಕರ್ನಾಟಕದ ಮಾದರಿ!
ಬುಡಬುಡಿಕೆ * ಬಿವಿಸೀ
ಕರ್ನಾಟಕ ಇಂದು ಇಡೀ ದೇಶಕ್ಕೆ ಒಂದು ಹೊಸ ಮಾದರಿಯ ಆಳ್ವಿಕೆಯನ್ನು ಕಲಿಸುತ್ತಿದೆ. ಸರ್ಕಾರ ನಡೆಸಲು ಹಣಕಾಸು ಅವಶ್ಯಕತೆ ಇಲ್ಲ ಎಂದು ಸಾರಿ ಹೇಳುತ್ತಿದೆ. ಸರ್ಕಾರ ನಡೆಸಲು ಬೇಕಿರುವುದು ಕೇವಲ ಅಂಕಿಸಂಖ್ಯೆಗಳ ರಾಜಕಾರಣ, ಶಾಸಕರ ಬೆಂಬಲ ಮತ್ತು ಸತತವಾಗಿ ಸ್ವರ್ಗ ತೋರಿಸುವ ಘೋಷಣೆಗಳನ್ನು ಸಾರ್ವಜನಿಕರ ನಡುವೆ ಹರಡುವುದು. ತತ್ಪರಿಣಾಮವಾಗಿ ಸರಿಯಾದ ಸಮಯಕ್ಕೆ ಸಂಬಳ ಕೊಡಲು, ಗುತ್ತಿಗೆದಾರರ ಬಿಲ್‍ಗಳನ್ನು ಪಾವತಿಸಲು, ರಸ್ತೆ ರಿಪೇರಿ, ಆಸ್ಪತ್ರೆಗಳಿಗೆ ಹಣ ಒದಗಿಸಲು, ವಿಶ್ವವಿದ್ಯಾಲಯಗಳನ್ನು ನಡೆಸಲು ಅಥವಾ ತನ್ನದೇ ಕಾರ್ಯಕರ್ತರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಹಣಕಾಸು ಮಾತ್ರ ಬೇಕಿಲ್ಲ ಎಂದು ಸರ್ಕಾರ ಹೇಳಿದಂತಿದೆ.
ಇದು ಸಾಮಾನ್ಯವಾದ ಒಂದು ಹಣಕಾಸು ಬಿಕ್ಕಟ್ಟು ಅಲ್ಲ. ಅದಕ್ಕೂ ಹೆಚ್ಚಿನ ವೈರುಧ್ಯ ಇಲ್ಲಿದೆ. ಮೇಲ್ಮಟ್ಟದಲ್ಲಿ ಯಾವುದೇ ಕೊರತೆ ಇಲ್ಲ. ಸಚಿವರು ತಮ್ಮ ವೇತನ ಮತ್ತು ಭತ್ಯೆಗಳನ್ನು ಪಡೆಯುತ್ತಿದ್ದಾರೆ. ಅಧಿಕೃತ ಪ್ರವಾಸ, ಅದರೊಂದಿಗೆ ಅಧಿಕಾರಿಗಳ ದಿಬ್ಬಣ, ವಿವೇಚನಾಧಿಕಾರ ಎಲ್ಲವೂ ಚಾಲ್ತಿಯಲ್ಲಿವೆ. ಮಂತ್ರಿಕೂಟದವರು ಹೇಗೋ ನಿಭಾಯಿಸುತ್ತಾರೆ. ಅವರಿಗೆ ಕೊರತೆಯಿಲ್ಲ. ರಾಜಕೀಯ ಜೀವನ ಅನಿಬರ್ಂಧಿತವಾಗಿ ನಡೆಯುತ್ತಿದೆ. ಕೊರತೆ ಏನಾದರೂ ಇದ್ದರೂ ಅದನ್ನು ಕೆಳಹಂತಕ್ಕೆ ರವಾನಿಸಲಾಗುತ್ತಿದೆ.
ಸರ್ಕಾರವು ಪಾವತಿಸಬೇಕಾದ ಬಿಲ್‍ಗಳನ್ನು ಮುಂದೂಡುತ್ತಾ, ಹಣಕಾಸಿನ ವಿತರಣೆಗೆ ಬೇಕಾದ ಫೈಲುಗಳ ವಿಲೇವಾರಿಯನ್ನು ವಿಳಂಬ ಮಾಡುತ್ತಾ ಎಲ್ಲ ಸರಿಯಾಗಿದೆ ಎನ್ನುವ ಭ್ರಮೆಯ ಹೊಗೆ ಮಾತ್ರ ಸರ್ವತ್ರ ಹಬ್ಬಿಸಲಾಗುತ್ತದೆ. ಫಂಡಿಂಗ್ ಇಲ್ಲದೇ ಸಂಸ್ಥೆಗಳು ಕುಂಟುತ್ತಾ ಸಾಗುತ್ತಿವೆ, ಗುತ್ತಿಗೆ ಕಾರ್ಮಿಕರು ವೇತನ ಇಲ್ಲದೆ ವರ್ಷಗಳನ್ನು ಕಳೆಯುತ್ತಿದ್ದಾರೆ. ಇತ್ತೀಚಿನ ಸಮೀಕ್ಷೆಯೊಂದರ ಅನುಸಾರ ಸರಕಾರದಲ್ಲಿ ಖಾಯಂ ಹುದ್ದೆಗಳನ್ನು ತುಂಬಬೇಕಾದ ಸ್ಥಳದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಗುತ್ತಿಗೆ ಕಾರ್ಮಿಕರು ದೀರ್ಘಕಾಲ ವೇತನ ಪಡೆಯದಿರುವುದು ವಾಸ್ತವವಾದರೂ ಯಾವುದೇ ಆಕ್ರೋಶ ವ್ಯಕ್ತವಾಗದಿರುವುದು ಯಾವುದೇ ಸಂಚಲನವನ್ನೂ ಉಂಟುಮಾಡಿಲ್ಲ. ಮೌನವೇ ವ್ಯವಸ್ಥೆಯನ್ನು ನಡೆಸುವ ಇಂಧನ.
ಕ್ರಿಯೆಯ ಬದಲು ಕೇವಲ ಘೋಷಣೆಗಳು. ನೇಮಕಾತಿ ಪ್ರಕ್ರಿಯೆಯನ್ನು ಘೋಷಿಸಲಾಗುತ್ತದೆ, ಆದರೆ ಕಾರ್ಯಗತ ಮಾಡುವುದಿಲ್ಲ. ದೊಡ್ಡ ಯೋಜನೆಗಳನ್ನು ನೂರಾರು ಕೋಟಿ ರೂ ಬಜೆಟ್‍ನೊಂದಿಗೆ ಘೋಷಿಸಲಾದರೂ, ಸಂಭ್ರಮದಿಂದ ಆಚರಿಸಲಾದರೂ, ಯೋಜನೆಗಳ ಅನುಷ್ಠಾನ ಮಾತ್ರ ಅನಿರ್ದಿಷ್ಟ ಕಾಲ ಮುಂದೆ ಹೋಗುತ್ತಿದೆ. ಶಾಶ್ವತ ಉದ್ಯೋಗವನ್ನು ನಿರಾಕರಿಸಲಾಗುತ್ತಿದ್ದು, ಆಳ್ವಿಕೆ ಎಂದರೆ ಕೇವಲ ಪ್ರದರ್ಶನ. ಆಡಳಿತ ವ್ಯವಸ್ಥೆಯಲ್ಲಿ ತಾಳ್ಮೆಯೇ ಪ್ರಧಾನ. `ತಾಳಿದವನು ಬಾಳಿಯಾನು' ಎಂಬುದರ ಪ್ರಹಸನ ನಡೆಯುತ್ತಿದೆ.
ನಾಗರಿಕರು, ಉದ್ಯಮಗಳು ಸರಕಾರಕ್ಕೆ ಕೊಡುವ ತೆರಿಗೆ ರೂಪದ ಹಣಕಾಸು ಎಲ್ಲಿ ಹೋಗುತ್ತದೆ? ಬಹುಮಟ್ಟಿಗೆ ಗ್ಯಾರಂಟಿ ಯೋಜನೆಗಳಿಗೆ. ತಕ್ಷಣದ ರಾಜಕೀಯ ಲಾಭ ಗಳಿಸಿಕೊಡುವ ಉಚಿತಗಳಿಗೆ. ಈ ಯೋಜನೆಗಳು ಸಾಕಷ್ಟು ಪ್ರಮಾಣದ ಆದಾಯವನ್ನು ಕಬಳಿಸುತ್ತವೆ, ಸರ್ಕಾರದ ನಿತ್ಯ ಚಟುವಟಿಕೆಗಳಿಗೆ ಅಗತ್ಯವಾದ ಹಣಕಾಸು ಇಲ್ಲವಾಗುತ್ತದೆ. ಇಲ್ಲಿಯೂ ಸಹ ವಾಸ್ತವಗಳನ್ನು ಗಮನಿಸಬೇಕಿದೆ. ಪ್ರಮುಖ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ನಿರುದ್ಯೋಗ ಭತ್ಯೆಯ ವಿಚಾರದಲ್ಲೂ ಸಹ ಹಣಕಾಸು ಇಲ್ಲ. ಆದರೂ ಹೊಸ ಭರವಸೆಗಳು ಮುಂದುವರೆಯುತ್ತಿವೆ. ಏಕೆಂದರೆ ಭರವಸೆಗಳು ದುಬಾರಿಯಾಗುವುದಿಲ್ಲ.
ಈ ವಾತಾವರಣದಲ್ಲಿ ಭ್ರಷ್ಟಾಚಾರ ತಾಂಡವ. ಇದು ನೈತಿಕ ಅವನತಿ ಮಾತ್ರವೇ ಅಲ್ಲದೆ ಆರ್ಥಿಕ ಹೊಂದಾಣಿಕೆಯೂ ಆಗಿ ಕಾಣುತ್ತದೆ. ವಿಳಂಬವಾಗುವುದು ವಿವೇಚನಾಧಿಕಾರಕ್ಕೆ ಕಾರಣವಾಗುತ್ತದೆ, ಇದು ಬಾಕಿಯನ್ನು ಹೆಚ್ಚಿಸುತ್ತದೆ. ಅನೇಕರಿಗೆ ಅನೌಪಚಾರಿಕ ಪಾವತಿಗಳೇ ವೇತನದ ಬದಲು ನೀಡಲಾಗುತ್ತದೆ. ಕಮಿಷನ್‍ಗಳು ವೇತನವಾಗದೆ ಇರುವ ಬಿಲ್‍ಗಳ ಮೇಲಿನ ಬಡ್ಡಿಯ ಸ್ಥಾನ ಪಡೆಯುತ್ತವೆ. ನೀತಿಯ ಬದಲು ತಮ್ಮವರನ್ನು ಪೆÇೀಷಿಸುವ ನಡೆ ಸಾಮಾನ್ಯವಾಗುತ್ತದೆ. ಪ್ರತಿಭಟನೆಗಳು ಕ್ಷೀಣವಾಗಿದ್ದು, ಇದಕ್ಕೆ ಕಾರಣ ಅನೌಪಚಾರಿಕ ಆರ್ಥಿಕತೆಯು ಸಮಸ್ಯೆಗಳಿಗೆ ಆಸರೆ ಒದಗಿಸುತ್ತದೆ.
ಇದು ಹಣಕಾಸು ಇಲ್ಲದೆಯೇ ಸರ್ಕಾರ ನಡೆಸುವ ಒಂದು ಕಲೆ. ರಾಜಕೀಯವಾಗಿ ಪ್ರಬಲವಾಗಿರುವವರನ್ನು ರಕ್ಷಿಸುವುದು, ಸಂಸ್ಥೆಗಳು ಹಣಕಾಸು ಇಲ್ಲದೆ ಬಳಲುವಂತೆ ಮಾಡುವುದು, ದುರ್ಬಲಗೊಳಿಸುವುದು, ಅಷ್ಟಿಷ್ಟು ನಗದು ಪಾವತಿ ಮತ್ತು ಘೋಷಣೆಗಳ ಮೂಲಕ ಜನಸಾಮಾನ್ಯರನ್ನು ತೃಪ್ತಿಪಡಿಸುವುದು ಮತ್ತು ಸರ್ಕಾರದ ರಚನೆಯನ್ನು ಕಾಪಾಡುವ ಸಲುವಾಗಿ ಮೌನಕ್ಕೆ ಶರಣಾಗುವುದು, ಈ ಕಲೆಯ ಒಂದು ಭಾಗ.
ಕರ್ನಾಟಕ ಈ ತೆರನ ಮಾದರಿಗೆ ದಾರಿ ತೋರುತ್ತಿದೆ. ಆದರೆ ಇದು ಮಾದರಿ ಎನ್ನುವುದಕ್ಕಿಂತಲೂ ಎಚ್ಚರಿಕೆಯಾಗಿದೆ. ಸರ್ಕಾರವು ಈ ರೀತಿಯಾಗಿ ಹಲವು ವರ್ಷಗಳು ಅಧಿಕಾರದಲ್ಲಿರಬಹುದು, ಆದರೆ ತನ್ನನ್ನೇ ಬಂಡವಾಳವಿಲ್ಲದಂತೆ ಮಾಡುತ್ತದೆ. ಆಳ್ವಿಕೆಯು ಒಂದು ಪ್ರದರ್ಶನದ ನಾಟಕವಾದಾಗ, ಹಣಕಾಸು ಕೇವಲ ಆಯ್ಕೆಯ ಪ್ರಶ್ನೆಯಾಗುತ್ತದೆ. ಪ್ರಜಾಪ್ರಭುತ್ವವು ಆಕ್ರೋಶದಿಂದ ಕುಸಿಯುವುದಿಲ್ಲ, ಕ್ರಮೇಣ ಅವನತಿಯತ್ತ ಸಾಗುತ್ತದೆ.
Comments
Post a Comment