ನಡುರಾತ್ರಿ ಕಸಿದುಕೊಡ ಸಾರ್ವಭೌಮತೆ ವೆನೆಜುವೆಲಾ ಮೇಲಿನ ದಾಳಿ

 ವಿಶ್ವ ಪರ್ಯಟನೆ * ಬಿವಿಸೀ

ಒಂದು ದೇಶದ ಹಾಲಿ ಮುಖ್ಯಸ್ಥನನ್ನು ನಡುರಾತ್ರಿ ಆತನ ಕೋಣೆಯಿಂದ ಅಪಹರಣ ಮಾಡಲಾಯಿತು. ವಿದೇಶಿ ಯೋಧರು ಖಾಸಗಿ ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ನಾಯಕ ಮತ್ತು ಆತನ ಪತ್ನಿಯನ್ನು ವಶಪಡಿಸಿಕೊಂಡರು. ಈ ದೃಶ್ಯ 2026ಕ್ಕೆ ಹೋಲುವಂತಹುದಲ್ಲ. ವಸಾಹತುದಾಳಿ ಆಕ್ರಮಣದ ಕರಾಳ ಯುಗಕ್ಕೆ ಹೋಲುತ್ತದೆ. ಕರಕಾಸ್ ಮೇಲೆ ಅಮೆರಿಕದ ದಾಳಿ ಕೇವಲ ಮಿಲಿಟರಿ ದಾಳಿಯಲ್ಲ, ಅದು ಅಂತಾರಾಷ್ಟ್ರೀಯ ನಿಯಮಗಳ ಮೇಲೆ ನಡೆಸಿದ ಆಕ್ರಮಣವಾಗಿದೆ.

ಅಮೆರಿಕ ಪ್ರಜಾಪ್ರಭುತ್ವದ ರಕ್ಷಕ ಎಂದೇ ಹೇಳಿಕೊಳ್ಳುತ್ತಿದೆ. ಜಾಗತಿಕ ವರ್ತನೆಯನ್ನು ಆಳಲು ಅಗತ್ಯವಾದ ನಿಯಮಗಳನ್ನೂ ರೂಪಿಸುತ್ತಾ ಬಂದಿದೆ. ಈಗ ಅದರ ಮುಖವಾಡ ಕಳಚಿಬಿದ್ದಿದೆ. ವೆನೆಜುವೆಲಾದ ಅಧ್ಯಕ್ಷ ನಿಕೊಲಾಸ್ ಮಡುರೋ ಅವರನ್ನು ಅಪಹರಿಸುವ ಮೂಲಕ ವಾಷಿಂಗ್‍ಟನ್, ಬಲಾಢ್ಯರೇ ಸದಾ ಸರಿ ಎಂಬ ನಿಯಮವನ್ನು ಅನುಸರಿಸಿದ್ದು, ಇತರ ಕಾನೂನುಗಳನ್ನು ಉಲ್ಲಂಘಿಸಿದೆ. ಸಾರ್ವಭೌಮತ್ವ ಎನ್ನುವುದು ಕೇವಲ ಬಲಾಢ್ಯರ ಮಿತ್ರರಿಗೆ ಮಾತ್ರ ಅನ್ವಯಿಸುವುದಾದರೆ, ಯಾವ ದೇಶವೂ ಮುಕ್ತವಾಗಿರಲು ಸಾಧ್ಯವಿಲ್ಲ.

ಅಮೆರಿಕ ತನ್ನ ದಾಳಿಯನ್ನು ಕಾನೂನು ಜಾರಿಗೊಳಿಸುವ ಕಾಯ್ದೆಯ ಅನುಸಾರ ಸಮರ್ಥಿಸಿಕೊಳ್ಳುತ್ತದೆ. ವೆನೆಜುವೆಲಾದಲ್ಲಿ ಮಾದಕ ವಸ್ತುಗಳು ಮತ್ತು ಅಕ್ರಮ ಚುನಾವಣೆಗಳನ್ನು ಕಾರಣವಾಗಿ ಮುಂದೊಡ್ಡುತ್ತದೆ. ಇವೆಲ್ಲಾ ಗಂಭೀರ ವಿಚಾರಗಳೇ, ಆದರೆ, ಅಂದ ಮಾತ್ರಕ್ಕೆ ಅಮೆರಿಕವನ್ನು ವಿಶ್ವದ ಪೆÇಲೀಸ್ ಆಗಿ, ನ್ಯಾಯಾಧೀಶನಾಗಿ, ಅಂತಿಮ ತೀರ್ಪುಗಾರನಾಗಿ ಪರಿಗಣಿಸಲಾಗುವುದಿಲ್ಲ. ಲ್ಯಾಟಿನ್ ಅಮೆರಿಕದ ಗಡಿಗಳೆಲ್ಲವೂ ಕೇವಲ ಭೌಗೋಳಿಕ ಗೆರೆಗಳಷ್ಟೇ ಎಂದು ಅಮೆರಿಕ ಘೋಷಿಸಿದೆ. ಇದು ನಾಯಕತ್ವ ಅಲ್ಲ, ಜಾಗತಿಕ ಅರಾಜಕತೆಗೆ ನಾಂದಿ ಹಾಡುವ ಬುನಾದಿ.

ಅಮೆರಿಕದ ಠಕ್ಕುತನವನ್ನು ನಿರ್ಲಕ್ಷಿಸಲಾಗುವುದಿಲ್ಲ. ಉಕ್ರೇನ್ ಮೇಲೆ ದಾಳಿ ನಡೆಸಿದ್ದನ್ನು ಅಮೆರಿಕ ವಿರೋಧಿಸುವುದು ಸರಿಯಾದ ಕ್ರಮವೇ ಆಗಿತ್ತು. ಚೀನಾ ತೈವಾನ್ ಮೇಲೆ ಆಕ್ರಮಣ ನಡೆಸಕೂಡದು ಎಂದು ಅಮೆರಿಕಾ ಎಚ್ಚರಿಕೆಯನ್ನೂ ನೀಡುತ್ತದೆ. ಆದರೂ ಸ್ವತಃ ಅಮೆರಿಕ ಒಂದು ಆಳ್ವಿಕೆಯನ್ನು ರಾತ್ರೋರಾತ್ರಿ ಬದಲಾಯಿಸಿದಾಗ ಅದು ಜಗತ್ತಿನ ಎಲ್ಲ ನಿರಂಕುಶಾಧಿಕಾರಕ್ಕೂ ನೆರವಾಗುತ್ತದೆ. ಅರಣ್ಯ ನ್ಯಾಯವನ್ನು ಉತ್ತೇಜಿಸುತ್ತದೆ. ಬಲಾಢ್ಯರು ಕಾನೂನು ನಿಯಮಗಳನ್ನು ಉಲ್ಲಂಘಿಸಿದಾಗ, ಇಡೀ ವಿಶ್ವಕ್ಕೇ ನಿಯಮಗಳು ಯಾವುದೂ ಲೆಕ್ಕಕ್ಕಿಲ್ಲ ಎಂದು ಸಂದೇಶ ನೀಡಿದಂತಾಗುತ್ತದೆ.

ಅಮೆರಿಕ ಜಗತ್ತಿನ ದೊಡ್ಡಣ್ಣನ ಹಾಗೆ ವರ್ತಿಸುತ್ತದೆ. ಆದರೆ ಈ ಪಾತ್ರ ನಿರ್ವಹಿಸುವಾಗ ಜವಾಬ್ದಾರಿ ಅಗತ್ಯ. ನೈತಿಕತೆ ಇರಬೇಕಾಗುತ್ತದೆ. ನಿಜವಾದ ನಾಯಕನಾದವನು ನಿಯಮಗಳನ್ನು ಕಾಪಾಡುತ್ತಾನೆ, ಜಾಗತಿಕ ಕುಟುಂಬವನ್ನು ಸುರಕ್ಷಿತವಾಗಿರಿಸುತ್ತಾನೆ. ಆದರೆ ಅಲ್ಲಿರುವ ನಿವಾಸಿ ಇಷ್ಟವಾಗುವುದಿಲ್ಲ ಎಂಬ ಕಾರಣಕ್ಕೆ ಆ ಮನೆಯನ್ನೇ ಸುಟ್ಟುಹಾಕುವುದು ಅನ್ಯಾಯ. ಮಧ್ಯಪ್ರಾಚ್ಯದ ಪ್ರಕ್ಷುಬ್ಧತೆಯಿಂದ ವೆನೆಜುವೆಲಾ ಆಕ್ರಮಣದವರೆಗೆ ಅಮೆರಿಕಾ ಅನುಸರಿಸಿದ ಇದೇ ಮಾದರಿಯನ್ನು ನೋಡಬಹುದು. ಇದು ಕಚ್ಚಾ ಅಧಿಕಾರದ ಪರಿಣಾಮಗಳನ್ನು ಲೆಕ್ಕಿಸದ ಒಂದು ಧೋರಣೆಯಾಗಿದೆ. 

ಅಮೆರಿಕದ ಅಧ್ಯಕ್ಷ ಶಾಂತಿಯ ಪರ್ವ ಬಯಸುವುದೇ ಆದರೆ, ಇಲ್ಲಿ ಸೋತಿದ್ದಾರೆ. ಶಾಂತಿಯನ್ನು ಅಂತಾರಾಷ್ಟ್ರೀಯ ಕಾನೂನು ನಿಯಮಗಳನ್ನು ಉಲ್ಲಂಘಿಸಿ ಅವಶೇಷಗಳ ಮೇಲೆ ನಿರ್ಮಿಸಲಾಗುವುದಿಲ್ಲ. ವಿದೇಶಿ ನಾಯಕನೊಬ್ಬನನ್ನು ಅಮೆರಿಕದ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸುವುದು ಭಯಾನಕ ಪೂರ್ವನಿದರ್ಶನವಾಗುತ್ತದೆ. ಇದು ಯಾವ ನಾಯಕನೂ ಸುರಕ್ಷಿತವಲ್ಲದ, ಯಾವ ದೇಶವೂ ಸ್ವತಂತ್ರವಲ್ಲದ ಭವಿಷ್ಯವನ್ನು ರೂಪಿಸುತ್ತದೆ.

ಅಂತಿಮ ಫಲಿತಾಂಶ ಸರಳ. ಅಮೆರಿಕದ ದೃಷ್ಟಿಯಲ್ಲಿ ಜಾಗತಿಕ ನಿಯಮಗಳು ಸರಕು ಪಟ್ಟಿಯ ಹಾಗೆ ಕಾಣುತ್ತದೆ. ತನಗೆ ಇಷ್ಟವಾದದ್ದನ್ನು ತೆಗೆದುಕೊಂಡು ಉಳಿದಿದ್ದನ್ನು ನಿರ್ಲಕ್ಷಿಸುತ್ತದೆ. ಆದರೆ ನಿಯಮಾಧಾರಿತ ವ್ಯವಸ್ಥೆಯು ಬಲಾಢ್ಯರಿಗೆ ಅಸ್ತ್ರವಾಗಲು ಸಾಧ್ಯವಿಲ್ಲ. ಅದು ದುರ್ಬಲರನ್ನು ರಕ್ಷಿಸುವಂತಿರಬೇಕು. ರಕ್ಷಾ ಕವಚ ಇಲ್ಲದೆ ಹೋದರೆ ಇಡೀ ಜಗತ್ತು ಪ್ರಕ್ಷುಬ್ಧವಾಗುತ್ತದೆ. ನೀತಿ ನಿಯಮ ಇಲ್ಲದ ಅಧಿಕಾರ ನಾಯಕತ್ವ ಆಗುವುದಿಲ್ಲ, ಅದು ಕೇವಲ ಬಲಾತ್ಕಾರವಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again