ಆಧ್ಯಾತ್ಮಿಕ ನಿಷ್ಠೆಗೊಂದು ಪ್ರಣಾಳಿಕೆ: ಸಾರ್ವಜನಿಕ ಕರೆ
ಧಾರ್ಮಿಕ ಕ್ಷೇತ್ರದಲ್ಲಿ ವಂಚಕರನ್ನು ಹೊಡೆದೋಡಿಸಲು ಇದು ಸಕಾಲ.
...............................
ಸತ್ಯಾನ್ವೇಷಣೆ * ಬಿವಿಸೀ
ಆಧ್ಯಾತ್ಮಿಕ ನಾಯಕತ್ವ ಒಂದು ಸವಲತ್ತು ಆಗಿರಬಹುದೇ ಹೊರತು ಹಕ್ಕು ಎನಿಸಿಕೊಳ್ಳುವುದಿಲ್ಲ. ನಾಯಕರೊಬ್ಬರು ನೈತಿಕ ಸಂಹಿತೆಗಳನ್ನು ಉಲ್ಲಂಘಿಸಿ ತಮ್ಮ ಹುದ್ದೆಯಲ್ಲಿದ್ದುಕೊಂಡೇ ವಂಚನೆ, ಲೈಂಗಿಕ ಶೋಷಣೆ, ಲೇವಾದೇವಿ ಮುಂತಾದ ಚಟುವಟಿಕೆಗಳಲ್ಲಿ ತೊಡಗಿದಾಗ ಅವರು ನೈತಿಕ ಅಧಿಕಾರದ ಹಕ್ಕನ್ನು ಕಳೆದುಕೊಳ್ಳುತ್ತಾರೆ. ಸಾರ್ವಜನಿಕರಾಗಿ ನಾವು ಈ ದುಷ್ಟ ವ್ಯಕ್ತಿಗಳನ್ನು ಅವರ ಹುದ್ದೆಗಳಿಂದ, ಉನ್ನತ ಸ್ಥಾನಗಳಿಂದ ಪದಚ್ಯುತಗೊಳಿಸಿ ಸಮಾಜವನ್ನು ಶುದ್ಧೀಕರಣಗೊಳಿಸಲು ನಿರ್ಣಾಯಕ ಆಗ್ರಹ ಮಾಡಬೇಕಿದೆ. ಆಗ ಮಾತ್ರವೇ ನಮ್ಮ ಸಮಾಜದ ಅಂತಃಸತ್ವವನ್ನು ಕಾಪಾಡಲು ಸಾಧ್ಯ.
ಅಂಧ ಶ್ರದ್ಧೆ ಅಥವಾ ವಿನಮ್ರತೆಯ ಹುಸಿ ಸಂಸ್ಕøತಿಯನ್ನು ತೊರೆಯಬೇಕು. ಒಂದು ನಮೂನೆಯ ದಿರಿಸು, ಹುದ್ದೆ, ಬಿರುದು ಅಥವಾ ವಂಶವಾಹಿನಿ ಇದಾವುದೂ ಸಹ ಕಾನೂನಿನಿಂದ ವಿನಾಯಿತಿ ನೀಡುವುದಿಲ್ಲ ಅಥವಾ ಸಾಮಾನ್ಯ ನೈತಿಕತೆಯಿಂದ ಪಾರು ಮಾಡುವುದಿಲ್ಲ. ಯಾವುದೇ ನಾಯಕರಾದರೂ ನೈತಿಕ ನೀಚತನ ಅಥವಾ ಅಪರಾಧಿಕ ವರ್ತನೆಯ ಆರೋಪಗಳನ್ನು ಎದುರಿಸಿದ್ದಾಗ ಅವರನ್ನು ತಮ್ಮ ಆಡಳಿತಾತ್ಮಕ ಹುದ್ದೆಯಿಂದ, ಆಧ್ಯಾತ್ಮಿಕ ಪೀಠದಿಂದ ಕೆಳಗಿಳಿಯುವಂತೆ ಒತ್ತಾಯಿಸಬೇಕು. ಅವರ ಚರ್ಚೆ, ಉಪನ್ಯಾಸಗಳನ್ನು ಬಹಿಷ್ಕರಿಸಬೇಕು, ಅವರ ಸಂಸ್ಥೆಗಳಿಗೆ ಹಣ ನೀಡುವುದನ್ನು ನಿಲ್ಲಿಸಬೇಕು. ಅವರ ಎಲ್ಲ ತಪ್ಪು ನಡೆಗಳನ್ನು ಸರಿಪಡಿಸಿಕೊಳ್ಳುವವರೆಗೂ ಇದು ಮುಂದುವರೆಯಬೇಕು.
ಮಠಾಧೀಶರು, ಸ್ವಾಮೀಜಿಗಳು ರಾಜಕೀಯ ರಕ್ಷಣೆ ಪಡೆಯಲು ಕಾರಣ ಅವರು ಹೇಳಿದ ಪಕ್ಷಕ್ಕೆ ಮತ್ತು ವ್ಯಕ್ತಿಗಳಿಗೆ ನಮ್ಮ ಮತ ಚಲಾವಣೆ. ಎಲ್ಲ ರಾಜಕೀಯ ಪಕ್ಷಗಳಿಗೂ ಸಹ ದೈವೀಕ ಅನುಮೋದನೆಗಳು ಚುನಾವಣಾ ಗೆಲುವನ್ನು ಖಾತರಿಪಡಿಸುವುದಿಲ್ಲ ಎಂಬ ಸೂಚನೆಯನ್ನು ನೀಡಬೇಕು. ಸಾರ್ವಜನಿಕವಾಗಿ ನಾವು ಧಾರ್ಮಿಕ ನಾಯಕರು ನಮ್ಮ ಮತಗಳನ್ನು ಪಡೆಯುವ ಏಜೆಂಟರಲ್ಲ ಎಂದು ಘೋಷಿಸಬೇಕು. ರಾಜಕೀಯ ನಾಯಕರು ಭ್ರಷ್ಟ ಧಾರ್ಮಿಕ ಮುಂದಾಳುಗಳನ್ನು ಸಮರ್ಥಿಸುವ, ರಕ್ಷಿಸುವ ಮೂಲಕ ಸಮುದಾಯದ ಬೆಂಬಲ ಕೋರಿದಾಗ, ಅಂತಹ ರಾಜಕಾರಣಿಯನ್ನು ಮತಗಟ್ಟೆಯ ಹಂತದಲ್ಲೇ ಸಾಮೂಹಿಕವಾಗಿ ಬಹಿಷ್ಕರಿಸಬೇಕು.
ಸಾರ್ವಜನಿಕರ ಹಣವನ್ನು ಸಂಗ್ರಹಿಸುವಾಗ, ಅದು ಖಾಸಗಿ ಐಷಾರಾಮಿ ಜೀವನಕ್ಕಾಗಲೀ, ಅಪರಾಧಗಳನ್ನು ರಕ್ಷಿಸಲಾಗಲೀ ಬಳಕೆಯಾಗಕೂಡದು. ಧಾರ್ಮಿಕ ಟ್ರಸ್ಟ್‍ಗಳನ್ನು ಸಾರ್ವಜನಿಕ ಸಂಸ್ಥೆಗಳಾಗಿ ಪರಿಗಣಿಸಲು ಕಾಯ್ದೆ ರೂಪಿಸುವಂತೆ ಆಗ್ರಹಿಸಬೇಕು. ಕಡ್ಡಾಯವಾದ, ಸ್ವತಂತ್ರ ವಾರ್ಷಿಕ ಲೆಕ್ಕ ಪರಿಶೋಧನೆಗಾಗಿ ಆಗ್ರಹಿಸಬೇಕು. ಹಾಗೆಯೇ ಧಾರ್ಮಿಕ ನಾಯಕರು ಹೊಂದಿರುವ ಎಲ್ಲ ಆಸ್ತಿಪಾಸ್ತಿಯನ್ನೂ ಸಾರ್ವಜನಿಕವಾಗಿ ಘೋಷಿಸುವಂತೆ ಒತ್ತಾಯಿಸಬೇಕು. ಹಣದ ವ್ಯವಹಾರದಲ್ಲಿ ತಪ್ಪುಗಳು ಕಂಡುಬಂದರೆ ಅಂತಹ ನಾಯಕರನ್ನು ಪದಚ್ಯುತಗೊಳಿಸಿ ಕಾನೂನಿನ ಕ್ರಮಕ್ಕೆ ಒಳಪಡಿಸಬೇಕು.. ಇದು ಆಗುತ್ತಿಲ್ಲ.. ಈ ಕಾರಣದಿಂದಲೇ ಅನೇಕ ಮಠಗಳು ಇಂದು ಅಕ್ರಮ ಹಣ ತೊಡಗಿಸುವ ಸೇಫ್ ಲಾಕರ್‍ಗಳಾಗಿವೆ.
ದುಷ್ಟ ಧಾರ್ಮಿಕ ಮುಂದಾಳುಗಳು ಸಿಕ್ಕಿಬಿದ್ದಾಗ, ಅವರು ಶ್ರದ್ಧೆಯನ್ನು ವಿರೋಧಿಸುವ ಶತ್ರುಗಳು ತಮ್ಮ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಸಾಮಾನ್ಯವಾಗಿ ಆರೋಪಿಸುತ್ತಾರೆ. ಇಂಥ ಬ್ರ್ಯಾಂಡಿಂಗ್ ತಿರಸ್ಕರಿಸಬೇಕು. ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ, ಧಾರ್ಮಿಕ ಮುಂದಾಳುಗಳನ್ನು ಉತ್ತರದಾಯಿಯಾಗಿ ಪರಿಗಣಿಸುವುದು ಆತನ ಶ್ರದ್ಧೆ ಮತ್ತು ನಂಬಿಕೆಯ ಬಗ್ಗೆ ಇರುವ ಭಕ್ತಿಯ ಸಂಕೇತವೇ ಹೊರತು, ದಾಳಿ ಅಲ್ಲ ಎಂದು ಹೇಳಬೇಕು. ಖಾದಿ ಮತ್ತು ನಿಲುವಂಗಿಯಂಥ ಪೆÇೀಷಾಕುಗಳು ಅಪರಾಧವನ್ನು ಮುಚ್ಚಿಡುವ ಕವಚಗಳಾದರೆ, ಅದು ಧರ್ಮಗಳಿಗೆ ಹೆಚ್ಚಿನ ಅಪಾಯಕಾರಿಯಾಗುತ್ತವೆ, ಇದು ಬಾಹ್ಯ ಶತ್ರುವಿಗಿಂತಲೂ ಹೆಚ್ಚು ಅಪಾಯ ಒಡ್ಡುತ್ತದೆ.
ಸಂತ್ರಸ್ತರ ಸಬಲೀಕರಣ ಮತ್ತು ಟೀಕಾಕಾರರಿಗೆ ಉತ್ತೇಜನ ಮುಖ್ಯವಾಗುತ್ತದೆ. ಧೈರ್ಯವಿರುವವರನ್ನು ತೆಪ್ಪಗಾಗಿಸುವ ವಿಷವೃತ್ತವು ಯಾವಾಗಲೂ ಸಕ್ರಿಯ. ಸ್ವತಂತ್ರ ಸಾಮುದಾಯಿಕ ನಿಗಾ ಘಟಕಗಳನ್ನು ಸೃಷ್ಟಿಸಿ ಪೆÇ್ರೀತ್ಸಾಹಿಸುವ ಮೂಲಕ ಧಾರ್ಮಿಕ ಸಂಸ್ಥೆಗಳ ಒಳಗೇ ಇರುವ ಮಾಹಿತಿದಾರರನ್ನು ಮತ್ತು ಸಂತ್ರಸ್ತರನ್ನು ರಕ್ಷಿಸಬೇಕು. ಬಲಾಢ್ಯ ಸ್ವಾಮಿಗಳ ಅಪರಾಧಗಳ ವಿರುದ್ಧ ಸೊಲ್ಲೆತ್ತುವ ಧೈರ್ಯವಂತರಿಗೆ ನಾವು ನಾಗರಿಕ ರಕ್ಷಾ ಕವಚ ಒದಗಿಸಬೇಕು.
ಸಮಾಜವನ್ನು ಶುದ್ಧೀಕರಿಸಬೇಕೆಂದರೆ ಕೊಳೆಯನ್ನು ನಿವಾರಿಸಬೇಕು. ಪ್ರತಿಯೊಬ್ಬ ನಾಗರಿಕರೂ ವ್ಯಕ್ತಿಯ ಶಿಷ್ಯ ಮಾತ್ರ ಆಗಿರದೆ ಸತ್ಯದ ನಿಷ್ಠಾವಂತ ಅನುಯಾಯಿಗಳಾಗಿರಬೇಕು. ಕಪಟ ಧಾರ್ಮಿಕ ನಾಯಕರು ಪಡೆದುಕೊಂಡಿರುವ ಉನ್ನತ ಸ್ಥಾನಮಾನಗಳು ಸನ್ಮಾರ್ಗದಲ್ಲಿ ನಡೆಯುವ ಹಾದಿಗೆ ಸಂಬಂಧಿಸಿರುವುದೇ ಹೊರತು, ಅದಕ್ಕೆ ಕಳಂಕ ತರುವ ವ್ಯಕ್ತಿಗಳು ಅವನ್ನು ಆಕ್ರಮಿಸಿ ಕೂತು ಸಮಾಜವನ್ನು ತಪ್ಪು ಹಾದಿಗೆಳೆಯಲು ಅವಕಾಶ ಕೊಡಬಾರದು.
ಧಾರ್ಮಿಕ ಕ್ಷೇತ್ರದಲ್ಲಿ ವಂಚಕರನ್ನು ಹೊಡೆದೋಡಿಸಲು ಇದು ಸಕಾಲ.
Comments
Post a Comment