ಗೌಡ ಕುಟುಂಬದ ಕಾನೂನು ಮೀರಿದ ಮನಸ್ಥಿತಿ

 ತಾವು ಕಾನೂನಿಗೆ ಅತೀತರು ಎಂದು ಭಾವಿಸಿರುವ ಪಾಳೆಯಗಾರಿಕೆ ಪ್ರವೃತ್ತಿಯ ಗೌಡ & ಸನ್ಸ್

ಬಿವಿಸೀ

ತಮ್ಮ ಸ್ವಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಪಕ್ಷದ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಭಾಷಣ ಕೆಲವು ಅಹಿತಕರ ಪ್ರಶ್ನೆಗಳನ್ನು ಎತ್ತಿದ್ದು, ಮಾಜಿ ಪ್ರಧಾನಮಂತ್ರಿ ಹೇಗೆ ಅಧಿಕಾರ, ಆಡಳಿತ ಪ್ರಕ್ರಿಯೆ ಮತ್ತು ಸಂಯಮದ ನಡತೆಯನ್ನು ಅರ್ಥಮಾಡಿಕೊಂಡಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.  ಪ್ರಜ್ಞಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಸಿದ್ದರಾಮಯ್ಯ ಸರ್ಕಾರ ವಿಶೇಷ ತನಿಖಾ ದಳದ (ಎಸ್‍ಐಟಿ) ಅಧಿಕಾರಿಗಳನ್ನು ಸನ್ಮಾನಿಸಿರುವುದನ್ನು ಖಂಡಿಸಿರುವ ಗೌಡರ ವರ್ತನೆ ಕೇವಲ ಅಸಹನೆಯ ಪ್ರತೀಕವಷ್ಟೇ ಅಲ್ಲದೆ, ಸಾಂವಿಧಾನಿಕ ಸಂಸ್ಥೆಗಳು ರಾಜಕೀಯ ಕುಟುಂಬಗಳ ಸೇವೆಗಾಗಿಯೇ ಇವೆ ಎಂಬ ಅರ್ಥವನ್ನು ಮೂಡಿಸುತ್ತದೆ.

ಉನ್ನತ ಮಟ್ಟದ, ರಾಜಕೀಯವಾಗಿ ಸೂಕ್ಷ್ಮವಾದ ಪ್ರಕರಣಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಪೆÇಲೀಸ್ ಅಧಿಕಾರಿಗಳನ್ನು ಸನ್ಮಾನಿಸುವುದು ಆಡಳಿತದಲ್ಲಿ ಸಾಮಾನ್ಯವಾದ ಅಭ್ಯಾಸವಾಗಿರುತ್ತದೆ. ಪ್ರತಿಯೊಂದು ಪಕ್ಷದ ಸರ್ಕಾರವೂ ಇದನ್ನು ಮಾಡಿರುತ್ತದೆ. ಅಂತಹ ಗುರುತಿಸುವಿಕೆಯನ್ನು ಗೌಡರ ಕುಟುಂಬದ ವಿರುದ್ಧ ಸೇಡಿನ ಕ್ರಮ ಎಂದು ಆರೋಪಿಸುವುದು ನಿಯಮಾಧಾರಿತ ಆಳ್ವಿಕೆಯನ್ನೇ ನಿರಾಕರಿಸಿದಂತಾಗುತ್ತದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಆಳ್ವಿಕೆ ನಡೆಸಿರುವ ವ್ಯಕ್ತಿಯಿಂದ ಈ ರೀತಿಯ ಅಭಿಪ್ರಾಯ ಬರುವುದು ಅವರ ಕುಂದು ಕೊರತೆಗಿಂತಲೂ ಅವರೊಳಗಿನ ಗೊಂದಲವನ್ನು ಎತ್ತಿ ತೋರಿಸುತ್ತದೆ.

ಇನ್ನೂ ಆಘಾತಕಾರಿ ಅಂಶವೆಂದರೆ, ದೇವೇಗೌಡರು ಸಿದ್ದರಾಮಯ್ಯ ಅವರಿಗೆ ನೇರವಾಗಿ ಬೆದರಿಕೆ ಒಡ್ಡಿರುವುದು. ತಮಗೆ ಅಧಿಕಾರ ದೊರೆತಾಗ ತಾವೂ ಸಹ ಸಿದ್ದರಾಮಯ್ಯ ಅವರನ್ನು ಸಿಲುಕಿಸುತ್ತೇವೆ ಎಂಬ ಹೇಳಿಕೆ ಆಘಾತ ಮೂಡಿಸುತ್ತದೆ. ಇದು ಬೀದಿ ರಾಜಕಾರಣದ ಪರಿಭಾಷೆಯಾಗಿ ಕಾಣುವುದೇ ಹೊರತು, ಸಾಂವಿಧಾನಿಕ ಪ್ರಜಾಪ್ರಭುತ್ವ ಎನಿಸುವುದಿಲ್ಲ. ಮಾಜಿ ಪ್ರಧಾನಿಯೊಬ್ಬರು ಹಾಲಿ ಮುಖ್ಯಮಂತ್ರಿಯನ್ನು, ಅವರು ಕಾನೂನು ಪ್ರಕಾರ ಕೈಗೊಂಡ ಕ್ರಮಗಳಿಗಾಗಿ ಖಂಡಿಸುವುದು, ಬೆದರಿಕೆ ಒಡ್ಡುವುದು ಸಾರ್ವಜನಿಕ ಹುದ್ದೆಯ ಘನತೆಗೆ ಕುಂದು ತರುವುದೇ ಅಲ್ಲದೆ ಅಧಿಕಾರವನ್ನು ವೈಯುಕ್ತಿಕ ನೆಲೆಯಲ್ಲಿ ಪರಿಹರಿಸಿಕೊಳ್ಳಬೇಕು, ಸಾಂಸ್ಥಿಕವಾಗಿ ಅಲ್ಲ ಎಂಬ ತಪ್ಪು ಸಂದೇಶವನ್ನು ನೀಡುತ್ತದೆ.

ಒಂದು ಕಾಲದಲ್ಲಿ ಕರ್ನಾಟಕದ ರಾಜಕೀಯದಲ್ಲಿ ನಿರ್ಣಾಯಕ ಶಕ್ತಿಯಾಗಿದ್ದ ಜೆಡಿಎಸ್ ಈಗ ತನ್ನ ಶಕ್ತಿಯನ್ನು ಕಳೆದುಕೊಂಡಿದ್ದು, ಬಹುಮಟ್ಟಿಗೆ ಬಿಜೆಪಿಯ ಬಾಲಂಗೋಚಿಯಾಗಿ ಅಸ್ತಿತ್ವ ಉಳಿಸಿಕೊಂಡಿದೆ. ಕಳೆದ ವಿಧಾನಸಭಾ ಚುನಾವಣೆಗಳಲ್ಲಿ 224 ಸದಸ್ಯರ ವಿಧಾನಸಭೆಗೆ ಕೇವಲ 20 ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾದ ಪಕ್ಷದ ಸ್ಥಾನ ಇನ್ನೂ ಹೆಚ್ಚಾಗಿದೆ ಎನ್ನಲು ಯಾವುದೇ ಪುರಾವೆಗಳಿಲ್ಲ. ಪಕ್ಷದ ತಳಪಾಯ ಇದೀಗ ಇನ್ನೂ ಶಿಥಿಲವಾಗಿದೆ. ತಮ್ಮದೇ ಒಕ್ಕಲಿಗ ಕೇಂದ್ರ ಸ್ಥಾನ ಚನ್ನಪಟ್ಟಣದಲ್ಲಿ ತಮ್ಮ ಮೊಮ್ಮಗನನ್ನು ಮೂರನೇ ಬಾರಿಗೂ ಗೆಲ್ಲಿಸಲಾಗದ ಜೆಡಿಎಸ್ ಅಸಾಮಥ್ರ್ಯ ಇದಕ್ಕೊಂದು ಸಾಕ್ಷಿ.

ಆದಾಗ್ಯೂ ಈ ಹಿನ್ನೆಲೆಯಲ್ಲಿ ಗೌಡರ ಪುತ್ರ ಎಚ್ ಡಿ ಕುಮಾರಸ್ವಾಮಿ, ತಾವು ರಾಜ್ಯ ರಾಜಕಾರಣಕ್ಕೆ ಮರಳಿ ಮುಂದಿನ ಮುಖ್ಯಮಂತ್ರಿಯಾಗುವುದಾಗಿ ಘೋಷಿಸಿದ್ದಾರೆ. ಯಾವ ಆಧಾರದಲ್ಲಿ ಯಾವ ಲೆಕ್ಕಾಚಾರದಲ್ಲಿ ಇದನ್ನು ಹೇಳಿದ್ದಾರೆ? ಪ್ರಜಾಪ್ರಭುತ್ವದಲ್ಲಿ ನಾಯಕತ್ವ ಎನ್ನುವುದು ಸಂಖ್ಯೆಗಳು ಮತ್ತು ಮತದಾರರ ಆದೇಶದಿಂದ ನಿರ್ಧಾರವಾಗುತ್ತದೆಯೇ ಹೊರತು ವಂಶವಾಹಿಯಿಂದ ಅಲ್ಲ. ಚುನಾವಣಾ ಸಾಮಥ್ರ್ಯ ಕುಸಿಯುತ್ತಿರುವಾಗ ಈ ರೀತಿಯ ಘೋಷಣೆ ಮಾಡುವುದು ಹಗಲುಗನಸಿನಂತೆ ಕಾಣುತ್ತದೆ.

ಈ ಬೆದರಿಕೆ ಮತ್ತು ಘೋಷಣೆ ಎರಡನ್ನೂ ನೋಡಿದಾಗ, ಗೌಡರ ಕುಟುಂಬಕ್ಕೆ ಆಳುವ ಹಕ್ಕು ಸ್ವಾಭಾವಿಕವಾಗಿ ದಕ್ಕಿದೆ ಎಂಬ ಗೌಡ & ಸನ್ಸ್ ಧೋರಣೆ ಕಂಡುಬರುತ್ತದೆ. ಪಕ್ಷವು ಎದುರಿಸುವ ಹಿನ್ನಡೆಗಳನ್ನು ಪರಿಣಾಮಗಳ ನೆಲೆಯಲ್ಲಿ ನೋಡದೆ ಪಿತೂರಿಗಳು ಎಂದೇ ಭಾವಿಸುವ ಅವರ ಧೋರಣೆ ಕಾಣುತ್ತದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯುವುದರಿಂದ ಈ ಪರಿತಾಪ ಇನ್ನೂ ಹೆಚ್ಚಾಗಿದೆ. ಹಿಂದೆ ಶಿಷ್ಯನಾಗಿದ್ದ ವ್ಯಕ್ತಿ ಈಗ ಮುಖ್ಯಮಂತ್ರಿಯ ಸ್ಥಾನದಲ್ಲಿರುವುದೇ ಅಲ್ಲದೆ, ಇನ್ನೂ ಮುಂದುವರೆಯುತ್ತಾರೆ, ಈಗಾಗಲೇ ಹಿಂದಿನ ಎಲ್ಲ ಮುಖ್ಯಮಂತ್ರಿಗಳ ಆಡಳಿತಾವಧಿಯ ಸಮಯವನ್ನೂ ಮೀರಿ ನಡೆದಿದ್ದಾರೆ ಎನ್ನುವುದು ಗೌಡರ ಮತ್ಸರಕ್ಕೆ ಕಾರಣ.

ಇಲ್ಲಿ ಸ್ಪಷ್ಟವಾಗಿ ಕಾಣುವುದು ಸೋತ ನಾಯಕರ ಚಿತ್ರಣವಲ್ಲ ಬದಲಾಗಿ ರಾಜಕೀಯ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಒಂದು ರಾಜಕೀಯ ಕುಟುಂಬದ ಚಿತ್ರಣ. ಪ್ರಜಾಪ್ರಭುತ್ವದಲ್ಲಿ ಅಧಿಕಾರ ವಂಶವಾಹಿಯಾಗಿ ಬರುವುದಿಲ್ಲ. ಬೆದರಿಕೆಗಳು ಮತದಾನದ ಫಲಿತಾಂಶವನ್ನು ನಿರ್ಧರಿಸುವುದಿಲ್ಲ. ಸಂಸ್ಥೆಗಳು ವೈಯುಕ್ತಿಕ ದ್ವೇಷದ ಸಾಧನಗಳಾಗುವುದಿಲ್ಲ. ಈ ಸತ್ಯವನ್ನು ಮರೆಯುವುದರಿಂದ ಅಧಿಕಾರ ಮರಳಿ ಬರುವುದಿಲ್ಲ, ಇನ್ನೂ ಅಸಾಧ್ಯವಾಗಿಸುತ್ತದೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again