ಬ್ರಾಹ್ಮಣರನ್ನು ಒಟಗುಟ್ಟುವ ಕಪ್ಪೆಗಳು ಎಂದ ಬಿಳಿಮಲೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಹೇಳಿಕೆಗಳು ದ್ವೇಷ ಭಾಷಣದ ಅಂಚಿನಲ್ಲಿವೆ
* ವಿಶ್ಲೇಷಣೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರಷೋತ್ತಮ ಬಿಳಿಮಲೆ ಮತ್ತೊಮ್ಮೆ ಭಾರೀ ವಿವಾದದ ಮಧ್ಯೆ ಸಿಲುಕಿದ್ದಾರೆ. ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಅವರ ಹೇಳಿಕೆಗಳು ಸಂಪ್ರದಾಯವಾದಿ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ. ಈ ಬಾರಿ ವಿವಾದ ಕೇವಲ ಸಾಂಸ್ಕøತಿಕ ಚರ್ಚೆಗೆ ಸೀಮಿತವಾಗದೆ, ಕಾನೂನು ಕ್ರಮದ ಅಂಚಿನವರೆಗೆ ತಲುಪಿರುವುದು ಗಮನಾರ್ಹ. ತಾನು ನಾಸ್ತಿಕನಾಗಿರುವುದಾಗಿ ಹೇಳಿಕೊಂಡು ಮಾತನಾಡಿದ ಅವರು, ಸಂಸ್ಕøತ ಪರಂಪರೆ, ಬ್ರಾಹ್ಮಣ ಆಚರಣೆಗಳು ಮತ್ತು ಜನಪದ-ಧಾರ್ಮಿಕ ಆಚರಣೆಗಳ ಕುರಿತು ನೀಡಿದ ಕಠಿಣ ಟೀಕೆಗಳು, ಕೇವಲ ವೈಚಾರಿಕ ಭಿನ್ನಾಭಿಪ್ರಾಯವಲ್ಲ; ಸಾರ್ವಜನಿಕ ಹುದ್ದೆಯ ಗೌರವವನ್ನು ಮೀರಿ ಹೋಗಿವೆ ಎಂಬ ಆರೋಪಗಳು ಇದೀಗ ಗಟ್ಟಿಯಾಗಿವೆ.
ಬಿಳಿಮಲೆ ತಮ್ಮ ಭಾಷಣದಲ್ಲಿ “ಮುಂಡಕೋಪನಿಷತ್ತನ್ನು ಉಚ್ಚರಿಸುವ ಬ್ರಾಹ್ಮಣರು ಕಪ್ಪೆಗಳಂತಿದ್ದಾರೆ” ಎಂಬ ಅರ್ಥದ ಹೇಳಿಕೆಯನ್ನು ಮಾಡಿದ್ದಾರೆ ಎಂಬ ಆರೋಪ ಪ್ರಮುಖವಾಗಿದೆ. ಉಪನಿಷತ್ತುಗಳು ಭಾರತೀಯ ತತ್ವಚಿಂತನೆಯ ಮೂಲಸ್ತಂಭಗಳಾಗಿರುವಾಗ, ಅವುಗಳನ್ನು ಉಚ್ಚರಿಸುವವರನ್ನು ಈ ರೀತಿಯಲ್ಲಿ ಹೋಲಿಕೆ ಮಾಡಿರುವುದು ಸಂಪೂರ್ಣ ಸಮುದಾಯವೊಂದನ್ನು ಅವಮಾನಿಸುವುದಕ್ಕೆ ಸಮಾನ ಎಂದು ಟೀಕಾಕಾರರು ವಾದಿಸುತ್ತಿದ್ದಾರೆ. ಇದಲ್ಲದೆ ಅವರು ಜ್ಯೋತಿಷ್ಯ ಶಾಸ್ತ್ರವನ್ನು ವ್ಯಂಗ್ಯವಾಡಿದ್ದಾರೆ.
ಇನ್ನೊಂದು ಗಂಭೀರ ಅಂಶವೆಂದರೆ, ಬೆಂಗಳೂರಿನ ಕರಗ ಮಹೋತ್ಸವದಲ್ಲಿ ದ್ರೌಪದಿ ಆರಾಧನೆಯನ್ನೇ ಲೇವಡಿಗೈದ ವಿಷಯ. ಕರಗವು ಕೇವಲ ಧಾರ್ಮಿಕ ಆಚರಣೆಯಷ್ಟೇ ಅಲ್ಲ, ಶತಮಾನಗಳ ಸಾಂಸ್ಕøತಿಕ ಪರಂಪರೆ. ಅದನ್ನು ನಿಂದಿಸುವ ಧಾಟಿಯ ಹೇಳಿಕೆಗಳು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಟೀಕೆ ವ್ಯಕ್ತವಾಗಿದೆ. ಈ ಎಲ್ಲ ಹೇಳಿಕೆಗಳನ್ನು ಮಾಡುವಾಗ ಬಿಳಿಮಲೆ ತಾವು ನಾಸ್ತಿಕ ಎಂದು ಘೋಷಿಸಿಕೊಂಡಿದ್ದು, “ವೈಯಕ್ತಿಕ ನಂಬಿಕೆ” ಮತ್ತು “ಸಾರ್ವಜನಿಕ ಹುದ್ದೆಯ ಜವಾಬ್ದಾರಿ” ನಡುವಿನ ಗಡಿ ಎಲ್ಲಿದೆ ಎಂಬ ಪ್ರಶ್ನೆಯನ್ನು ಎತ್ತಿದೆ.
ಟೀಕಾಕಾರರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಬಿಳಿಮಲೆ ಈ ರೀತಿಯ ಹೇಳಿಕೆಗಳನ್ನು “ಯಾರನ್ನೋ ಸಂತೃಪ್ತಿಪಡಿಸಲು” ಮಾಡುತ್ತಿದ್ದಾರೆಯೇ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಸೂಚ್ಯವಾಗಿ ಮುಖ್ಯಮಂತ್ರಿ ಅವರನ್ನೇ ಉಲ್ಲೇಖಿಸುತ್ತಿರುವುದಾಗಿ ಕೆಲವರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, “ಭುವನೇಶ್ವರಿ” ಎಂಬ ಕನ್ನಡ ನಾಡದೇವಿಯ ತತ್ವವನ್ನೇ ಪ್ರಶ್ನಿಸುವ ಮನಸ್ಥಿತಿಯ ವ್ಯಕ್ತಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಂತಹ ಸಂಸ್ಥೆಯ ಅಧ್ಯಕ್ಷರಾಗಿರಲು ಅರ್ಹರೇ ಎಂಬ ಪ್ರಶ್ನೆ ಉದ್ಭವಿಸಿದೆ. ಈ ಹಿನ್ನೆಲೆಯಲ್ಲಿ, ಹಲವು ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿಕೊಂಡಿದ್ದು, ಬಿಳಿಮಲೆ ಅವರನ್ನು ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿವೆ.
ಈ ವಿವಾದದ ನಡುವೆ, ಕರ್ನಾಟಕ ರಾಜ್ಯ ದೇವಾಲಯ ಅರ್ಚಕರ ಸಂಘಟನೆ ಅತ್ಯಂತ ಮಹತ್ವದ ನಿರ್ಧಾರವೊಂದನ್ನು ಪರಿಗಣಿಸುತ್ತಿದೆ. ಇತ್ತೀಚೆಗೆ ರಾಜ್ಯ ವಿಧಾನಸಭೆಯಲ್ಲಿ ಅಂಗೀಕೃತವಾದ ದ್ವೇಷ ಭಾಷಣ ವಿರೋಧಿ ಕಾನೂನು ವಿಧಿಗಳನ್ನು ಆಧರಿಸಿ, ಬಿಳಿಮಲೆ ವಿರುದ್ಧ ದೂರು ದಾಖಲಿಸುವ ಬಗ್ಗೆ ಸಂಘಟನೆ ಚಿಂತನೆ ನಡೆಸುತ್ತಿದೆ. ಸಾರ್ವಜನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ನಿರ್ದಿಷ್ಟ ಸಮುದಾಯ ಹಾಗೂ ಧಾರ್ಮಿಕ ಆಚರಣೆಗಳನ್ನು ಅವಮಾನಿಸುವ ಹೇಳಿಕೆಗಳನ್ನು ನೀಡುವುದು ಕಾನೂನು ವ್ಯಾಪ್ತಿಗೆ ಬರುತ್ತದೆ ಎಂಬುದು ಅವರ ವಾದ.
ಇದು ಬಿಳಿಮಲೆಗೆ ಮೊದಲ ವಿವಾದವಲ್ಲ. ಹಿಂದೆ ಯಕ್ಷಗಾನ ಕಲಾವಿದರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ, ತೀವ್ರ ವಿರೋಧದ ಬಳಿಕ ಕ್ಷಮೆ ಯಾಚಿಸಿದ್ದ ಘಟನೆಯೂ ಇನ್ನೂ ಜನಮನದಲ್ಲಿ ತಾಜವಾಗಿಯೇ ಇದೆ. ಅದೇ ರೀತಿಯ ನಡೆ ಮತ್ತೆ ಮತ್ತೆ ಮರುಕಳಿಸುತ್ತಿರುವುದು ಅವರ ಉದ್ದೇಶ ಮತ್ತು ಸಂವೇದನೆಗಳ ಬಗ್ಗೆ ಸಂಶಯ ಹುಟ್ಟಿಸಿದೆ.
ಒಟ್ಟಿನಲ್ಲಿ, ಈ ವಿವಾದವು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾರ್ವಜನಿಕ ಹುದ್ದೆಯ ಮಿತಿಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಸರ್ಕಾರ ಬಿಳಿಮಲೆಯನ್ನು ಹುದ್ದೆಯಿಂದ ತೆರವುಗೊಳಿಸಬೇಕೇ, ಅಥವಾ ಕಾನೂನು ತನ್ನ ಹಾದಿ ತಾನೇ ಕಂಡುಕೊಳ್ಳಬೇಕೇ ಎಂಬ ಪ್ರಶ್ನೆಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ. ಆದರೆ ಒಂದಂತೂ ಸ್ಪಷ್ಟ: ಈ ಬಾರಿ ಬಿಳಿಮಲೆ ಎಬ್ಬಿಸಿರುವ ಬಿರುಗಾಳಿ ಸಾಂಸ್ಕøತಿಕ ವಾದವಿವಾದಕ್ಕಿಂತಲೂ ಗಂಭೀರ ಪರಿಣಾಮಗಳನ್ನು ಹೊತ್ತಿದೆ.
Comments
Post a Comment