ಅತಿಯಾದ ಮಾತುಗಾರ ನಮ್ಮ ಗೃಹಮಂತ್ರಿ

 ಮಾತಿನಲ್ಲೇ ಮಂಟಪ ಕಟ್ಟುವ ಪರಮೇಶ್ವರರ ವಾಕ್-ಚಪಲ ಪೊಲೀಸ್ ಇಲಾಖೆ ಸಚಿವರಿಗೆ ಹೇಳಿಮಾಡಿಸಿದ್ದಲ್ಲ. ಅದು ಜನರಲ್ಲಿ ವಿಶ್ವಾಸ ಮೂಡಿಸಬೇಕಾದ ಇಲಾಖೆಯ ಸಚಿವರ ಬಗ್ಗೆ ಹಗುರವಾಗಿ ಜನ ಆಲೋಚಿಸುವಂತೆ ಮಾಡುತ್ತದೆ.

ಅಹುದಾದರಹುದೆನ್ನಿ * ಬಿವಿಸೀ

ಒಂದು ಸರ್ಕಾರದಲ್ಲಿ ಗೃಹ ಮಂತ್ರಿಯ ಸ್ಥಾನವನ್ನು ನಿರ್ಧರಿಸಲು ಅವರು ಏನು ಮಾತನಾಡುತ್ತಾರೆ ಎನ್ನುವುದು ಆಧಾರವಾಗುವುದಿಲ್ಲ, ಬದಲಾಗಿ ಏನನ್ನು ಮಾತನಾಡುವುದಿಲ್ಲ ಎನ್ನುವುದು ನಿರ್ಣಾಯಕವಾಗುತ್ತದೆ. ಗೃಹ ಸಚಿವರ ಹುದ್ದೆಯಲ್ಲಿರುವವರಿಂದ ಸಂಯಮ, ಸ್ಪಷ್ಟತೆಯನ್ನು ಅಪೇಕ್ಷಿಸಲಾಗುತ್ತದೆ. ಅಷ್ಟೇ ಅಲ್ಲದೆ ಯಾವುದೇ ಅನಿಶ್ಚಿತತೆಯ ಭಾವ ಮೂಡದ ಹಾಗೆ ಸಾರ್ವಜನಿಕರ ನಡುವೆ ಇದ್ದು ಅವರಲ್ಲಿ ಭರವಸೆ ಮೂಡಿಸುವಂತೆ ಇರಬೇಕು ಅವರ ಸ್ವಭಾವ. ರಾಜ್ಯದಲ್ಲಿ ಗೃಹ ಸಚಿವ ಜಿ ಪರಮೇಶ್ವರ ಈ ಸಮತೋಲನವನ್ನು ಕಾಪಾಡುವಲ್ಲಿ ವಿಫಲರಾಗಿದ್ದಾರೆ - ಅಗತ್ಯಕ್ಕಿಂತಲೂ ಹೆಚ್ಚು ಮಾತನಾಡುತ್ತಾರೆ, ಪರಿಸ್ಥಿತಿಯು ನಿರೀಕ್ಷಿಸುವುದಕ್ಕಿಂತಲೂ ಕಡಿಮೆ ಸಂಯಮ ತೋರುತ್ತಾರೆ.

ಪರಮೇಶ್ವರ್ ಅವರು ಪದೇಪದೇ ತಾವು ದುರ್ಬಲ ಗೃಹ ಸಚಿವರಲ್ಲ ಎಂದು ಹೇಳುತ್ತಲೇ ಇರುವುದುಂಟು. ಹಾಗೆಯೇ ಅವರ ಪರಿಣಾಮಕಾರಿ ಕಾರ್ಯಗಳ ಪಟ್ಟಿಯನ್ನು ಕೊಡುತ್ತಲೇ ಇರುತ್ತಾರೆ. ಆದರೆ ಕಾನೂನು ಮತ್ತು ಸುವ್ಯವಸ್ಥೆಯ ವಿಚಾರದಲ್ಲಿ ಪದೇಪದೇ ತಮ್ಮ ಕೆಲಸ-ಕಾರ್ಯಗಳ ಬಗ್ಗೆ ಸ್ವಪ್ರಚಾರ ಮಾಡಿಕೊಳ್ಳುವ ಮೂಲಕ ಏನನ್ನೂ ಸಾಧಿಸಲಾಗುವುದಿಲ್ಲ. ಇದು ನಿರಂತರವಾದ ಸ್ಥಿರವಾದ ಕ್ರಿಯೆ ಮತ್ತು ಸಮರ್ಪಕವಾದ ಸಂವಹನದ ಮೂಲಕ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪರಮೇಶ್ವರ ಅವರ ಸಾರ್ವಜನಿಕ ವರ್ತನೆ ಸಾರ್ವಜನಿಕರಲ್ಲಿ ವಿಶ್ವಾಸ ಸ್ಫುರಿಸುವಂಥದ್ದಲ್ಲ.

ಧರ್ಮಸ್ಥಳದಲ್ಲಿ ನಡೆದ ಸರಣಿ ಸಾವುಗಳು ಈ ದೌರ್ಬಲ್ಯವನ್ನು ಸ್ಪಷ್ಟವಾಗಿ ತೆರೆದಿಟ್ಟಿವೆ. ನಿಯಂತ್ರಿತವಾದ ಸೀಮಿತ ಹೇಳಿಕೆಗಳ ಬದಲು ಗೃಹ ಸಚಿವರು ಒಂದೇ ಸಮನೆ ಹೇಳಿಕೆಗಳನ್ನು ನೀಡುತ್ತಿದ್ದು, ಹಲವಾರು ಸಲ ಇದು ವಿರೋಧಾಭಾಸದ ಹೇಳಿಕೆಗಳಾಗಿವೆ.  ಈ ಹೊಯ್ದಾಟ ಮತ್ತು ಅಸ್ಪಷ್ಟತೆ ಸೂಕ್ಷ್ಮತೆಯನ್ನಾಗಲೀ, ಮುಕ್ತ ಲಕ್ಷಣವನ್ನಾಗಲೀ ಸೂಚಿಸುವುದಿಲ್ಲ. ಬದಲಾಗಿ ಗೊಂದಲವನ್ನು ಎತ್ತಿ ತೋರಿಸುತ್ತದೆ, ಗಂಭೀರವಾದ ಕಾನೂನು ಸುವ್ಯವಸ್ಥೆಯ ನಿರ್ವಹಣೆಯಲ್ಲಿ ಬಿಗಿಯಾದ ಹಿಡಿತ ಇಲ್ಲದಿರುವುದನ್ನು ಸೂಚಿಸುತ್ತದೆ. ಒಬ್ಬ ಗೃಹ ಸಚಿವರಿಗೆ ಈ ಅಭಿಪ್ರಾಯವೇ ದುಬಾರಿಯಾಗುತ್ತದೆ. ಸ್ವತಂತ್ರ ತನಿಖಾ ತಂಡದ ಕೆಲಸವನ್ನು ಪ್ರಭಾವಿಸುತ್ತಿದ್ದಾರೆ ಎಂದು ಭಾಸವಾಗುವ ರೀತಿಯಲ್ಲಿ ಅವರ ಮಾತುಗಳಿದ್ದವು. ಇದು ಅವರಿಗೆ ಭೂಷಣಪ್ರಾಯವಾಗಿಯೇನೂ ಇರಲಿಲ್ಲ.  

ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆಯ ಸವಾಲುಗಳು ಇನ್ನೂ ವಿಶಾಲವಾಗಿವೆ. ಉತ್ತರ ಕರ್ನಾಟಕದಲ್ಲಿ, ಹುಬ್ಬಳ್ಳಿಯನ್ನೂ ಸೇರಿದಂತೆ, ಘರ್ಷಣೆಗಳು ಮತ್ತು ಕೆಲವು ಪ್ರಕರಣಗಳು ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವಂತಿದೆ. ಆದರೂ ಈ ಸಮಸ್ಯೆಗಳ ಬಗ್ಗೆ ಗೃಹಸಚಿಚವರು ಬಹುತೇಕ ಮೌನವಾಗಿದ್ದಾರೆ. ಈ ಪ್ರದೇಶದ ಜನಗಳ ಕುಂದು ಕೊರತೆಗಳನ್ನು, ಆತಂಕಗಳನ್ನು ಪರಾಮರ್ಶಿಸಲು ಹೆಚ್ಚಿನ ಪ್ರಯತ್ನಗಳು ನಡೆದೇ ಇಲ್ಲ. ಸರ್ಕಾರದ ಸ್ಪಷ್ಟ ಉದ್ದೇಶವನ್ನು ಜನರಿಗೆ ಮನದಟ್ಟು ಮಾಡಲಾಗಿಲ್ಲ. ಅಥವಾ ಕಾನೂನು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ ಎಂಬ ಭರವಸೆಯನ್ನು ಜನರಿಗೆ ನೀಡಲಾಗಿಲ್ಲ.

ರಾಜ್ಯ ರಾಜಧಾನಿಯೂ ಸಹ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಬೆಂಗಳೂರಿನಲ್ಲಿ ಪದೇಪದೇ ತಲೆಎತ್ತುತ್ತಿರುವ ಸಮಸ್ಯೆಗಳು ಸಾರ್ವಜನಿಕರ ಸುರಕ್ಷತೆಯನ್ನು ಕಂಗೆಡಿಸುವ ಅಪರಾಧಗಳನ್ನೂ ಒಳಗೊಂಡಂತೆ, ವಿಶ್ವಾಸಾರ್ಹ ರೀತಿಯ ಗೃಹ ಸಚಿವರ ಉಪಸ್ಥಿತಿಯನ್ನು ಅಪೇಕ್ಷಿಸುತ್ತದೆ. ಇಲ್ಲಿಯೂ ಸಹ ಮಾಹಿತಿಯ ಸಂವಹನವು ಚದುರಿದಂತಿದ್ದು, ಪ್ರತಿಕ್ರಿಯಾತ್ಮಕವಾಗಿ ಕಾಣುತ್ತದೆ. ಜನರಲ್ಲಿ ವಿಶ್ವಾಸ ಮೂಡಿಸುವಂತೆ ಇಲ್ಲ.

ತಮ್ಮ ಮೂಲ ಜವಾಬ್ದಾರಿಗಳನ್ನೂ ದಾಟಿ ಕೆಲವು ವಿಷಯಗಳ ಬಗ್ಗೆ ಮಾತನಾಡುವ ಗೃಹ ಸಚಿವರ ಪ್ರವೃತ್ತಿ ಬಹುಶಃ ಸದಾ ಸುದ್ದಿಯಲ್ಲಿದ್ದು ರಾಜಕೀಯವಾಗಿ ಪ್ರಸ್ತುತತೆಯನ್ನು ಕಾಪಾಡಿಕೊಳ್ಳುವ ಉದ್ದೇಶ ಹೊಂದಿರಬಹುದು, ಇದು ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ. ಕಾಲ ಕ್ರಮೇಣ ಇದು, ತಕ್ಷಣವೇ ಮಾತುಗಳ ಮೂಲಕ ಸ್ಪಂದಿಸುವ ಗೃಹ ಸಚಿವರು ತಮ್ಮ ವಿವೇಚನಾಧಿಕಾರವನ್ನು ಬಳಸುವುದು ವಿರಳ ಎಂಬ ಅಭಿಪ್ರಾಯಕ್ಕೆ ಎಡೆಮಾಡಿಕೊಡುತ್ತದೆ. ಮುಖ್ಯಮಂತ್ರಿಯಾಗುವ ತಮ್ಮ ಮಹತ್ವಾಕಾಂಕ್ಷೆಯನ್ನು ಸಾರ್ವಜನಿಕವಾಗಿ ಆಗೀಗ ಘೋಷಿಸುವುದು ಸಾಂಸ್ಥಿಕ ಕರ್ತವ್ಯ ಮತ್ತು ವೈಯುಕ್ತಿಕ ಸ್ಥಾನಮಾನದ ನಡುವಿನ ಅಂತರವನ್ನು ಮಸುಕಾಗಿಸುತ್ತದೆ.

ಗೃಹ ಸಚಿವರೊಬ್ಬರು ನಿರಂತರ ಮಾತುಗಾರರಾಗಿದ್ದು, ಕೇಳಿಸಿಕೊಳ್ಳುವುದರಲ್ಲಿ ಹಿಂದುಳಿಯುವುದು ಅಪೇಕ್ಷಿತವಲ್ಲ. ಕಾನೂನು ಸುವ್ಯವಸ್ಥೆಯ ನಿರ್ವಹಣೆಗೆ ದಿಟ್ಟ ಕ್ರಮಗಳು ಅಗತ್ಯ, ಕೆಲವೊಮ್ಮೆ ಮೌನವಾಗಿಯೂ ಇರಬೇಕಾಗುತ್ತದೆ. ಅಗತ್ಯ ಇದ್ದಲ್ಲಿ ಜನರಿಗೆ ವಿಶ್ವಾಸ ಮೂಡಿಸುವಂತಿರಬೇಕು. ಚಟುವಟಿಕೆಗಳನ್ನು, ಕ್ರಿಯೆಯನ್ನು ಕೇವಲ ಮಾತುಗಳೇ ಆವರಿಸಿದರೆ, ಅಧಿಕಾರ ದುರ್ಬಲವಾಗುತ್ತದೆ. ಸಾರ್ವಜನಿಕರ ವಿಶ್ವಾಸವೂ ಕುಸಿಯುತ್ತಾ ಹೋಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again