ಕೊಲೆ ಆರೋಪಿಗಳಿಗೆ ಜೈಲಿನ ಸವಲತ್ತುಗಳು ಹಕ್ಕುಗಳಾಗುವುದಿಲ್ಲ
ಖುಲ್ಲಂಖುಲ್ಲಾ * ಬಿವಿಸೀ
ಕನ್ನಡ ಸಿನಿಮಾ ನಟ ದರ್ಶನ್ ಮತ್ತು ಆತನ ಸಂಗಡಿಗರಿಗೆ ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ಒದಗಿಸಿಲ್ಲ ಎಂಬ ಕಾರಣಕ್ಕೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು ಸೆರೆಮನೆ, ಅಲ್ಲಿನ ಸವಲತ್ತುಗಳು ಮತ್ತು ಕಾನೂನು ನಿಯಮಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೊರಗೆಡಹಿದೆ. ದರ್ಶನ್ ಬೆಂಬಲಿಗರು ಮತ್ತು ಅವರ ಭಾವನಾತ್ಮಕ ಸಾರ್ವಜನಿಕ ಹೇಳಿಕೆಗಳು ಸದ್ದು ಮಾಡುತ್ತಿದ್ದು, ವಿಚಾರಣಾಧೀನ ಆರೋಪಿಗಳು ಮನೆಯಲ್ಲೇ ತಯಾರು ಮಾಡಿದ ಊಟ, ಖಾಸಗಿ ಹಾಸಿಗೆ ಮತ್ತಿತರ ವೈಯುಕ್ತಿಕ ಸೌಕರ್ಯಗಳಿಗೆ ಕಾನೂನಾತ್ಮಕ ಹಕ್ಕು ಹೊಂದಿರುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಜೈಲು ಅಧಿಕಾರಿಗಳು ಕಾನೂನುಬಾಹಿರವಾಗಿ ಇವುಗಳನ್ನು ನಿರಾಕರಿಸುತ್ತಿದ್ದಾರೆ ಎಂದೂ ಆರೋಪಿಸಲಾಗುತ್ತಿದೆ. ಈ ನಿರೂಪಣೆಯು ದಾರಿ ತಪ್ಪಿಸುವ ತಂತ್ರವಾಗಿದ್ದು ಅಪಾಯಕಾರಿಯಾಗಿದೆ.
ಭಾರತದ ಕಾರಾಗೃಹ ಕಾನೂನು ಹಕ್ಕುಗಳು ಮತ್ತು ಸವಲತ್ತುಗಳ ನಡುವೆ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸುತ್ತದೆ. ಕರ್ನಾಟಕ ಸೆರೆಮನೆ ಕಾಯ್ದೆಯಲ್ಲಿ ಜೈಲು ಅಧಿಕಾರಿಗಳು ವಿಚಾರಣಾಧೀನ ಖೈದಿಗಳಿಗೆ ಕೆಲವು ಸೌಕರ್ಯಗಳನ್ನು ಖಾಸಗಿ ಮೂಲಗಳಿಂದ ಪಡೆಯಲು ಅವಕಾಶ ನೀಡುತ್ತದೆ. ಇಲ್ಲಿ ಅನುಮತಿ ಎನ್ನುವ ಪದ ಮುಖ್ಯವಾಗಿ ಕಾರ್ಯಗತವಾಗುತ್ತದೆ. ಇದು ಅಧಿಕಾರಿಗಳ ವಿವೇಚನಾಧಿಕಾರವನ್ನು ಪ್ರತಿನಿಧಿಸುವುದೇ ಹೊರತು, ಆರೋಪಿಗಳ ಹಕ್ಕುಗಳನ್ನಲ್ಲ. ಈ ವಿವೇಚನಾಧಿಕಾರವನ್ನು ಕರ್ನಾಟಕ ಸೆರೆಮನೆ ಮತ್ತು ಸೇವಾ ತಿದ್ದುಪಡಿ ಕೈಪಿಡಿಯಲ್ಲಿ ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದ್ದು, ಈ ನಿಯಮಗಳು ಜೈಲಿನಲ್ಲಿ ಶಿಸ್ತು, ಏಕರೂಪತೆ ಮತ್ತು ಸಮಾನತೆಯನ್ನು ಕಾಪಾಡಲು ನಿರ್ದೇಶಿಸುತ್ತವೆ.
ದರ್ಶನ್ ಪ್ರಕರಣದಲ್ಲಿ ನ್ಯಾಯಾಲಯಗಳು ಜೈಲಿನ ಕೈಪಿಡಿಯನ್ನೇ ಆಧರಿಸಿದ್ದು, ಮನೆಯ ಊಟ ಮತ್ತು ವೈಯುಕ್ತಿಕ ಸೌಕರ್ಯಗಳನ್ನು ಒದಗಿಸಲು ನಿರಾಕರಿಸಿವೆ. ಕಾರಣವೇನೆಂದರೆ, ಜೈಲುಗಳು ಹೋಟೆಲ್‍ಗಳಲ್ಲ, ಘನತೆ ಎಂದರೆ ಐಷಾರಾಮಿ ಸೌಕರ್ಯಗಳೂ ಅಲ್ಲ. ಗಂಭೀರ ಅಪರಾಧಗಳಾದ ಕೊಲೆ ಇತ್ಯಾದಿಗಳ ಆರೋಪ ಹೊತ್ತಿರುವ ಪ್ರತಿಯೊಬ್ಬ ವಿಚಾರಣಾಧೀನ ಖೈದಿಯೂ ಇದೇ ನಿಯಮಗಳಿಗೆ ಒಳಪಡುತ್ತಾನೆ. ಆರೋಪಿಗಳ ಸಾರ್ವಜನಿಕ ಸ್ಥಾನಮಾನಗಳನ್ನು ಆಧರಿಸಿ ಕೆಲವು ರಿಯಾಯಿತಿಗಳನ್ನೂ ನೀಡುವುದು ಸಾಂಸ್ಥಿಕ ತಾರತಮ್ಯವಾಗುವುದೇ ಅಲ್ಲದೆ, ಸಾಧಾರಣ ಖೈದಿಗಳ ವಿರುದ್ಧ ತಾರತಮ್ಯ ಮಾಡಿದಂತಾಗುತ್ತದೆ.
ಈ ಪ್ರಕರಣವು ಸಮಸ್ಯೆ ಉಂಟುಮಾಡುತ್ತಿರುವುದು ಇದರ ಕಾನೂನಾತ್ಮಕ ಫಲಿತಾಂಶದ ಕಾರಣಕ್ಕಲ್ಲ; ಬದಲಾಗಿ, ಈ ಬೇಡಿಕೆಗಳ ಹಿಂದಿರುವ ಭಾರಿ ನಿರೀಕ್ಷೆಗಳು. ಪ್ರಸಿದ್ಧಿ ಅಥವಾ ಖ್ಯಾತಿ ಬಂಧನದ ನಿಯಮಗಳನ್ನು ಸಡಿಲಗೊಳಿಸಬೇಕು, ಪ್ರಭಾವ ಇದ್ದರೆ ನಿಯಮಗಳನ್ನು ಉಲ್ಲಂಘಿಸಬೇಕು, ವಿಶೇಷ ಸವಲತ್ತುಗಳನ್ನು ನಿರಾಕರಿಸುವುದು ಹಕ್ಕುಗಳ ನಿರಾಕರಣೆಯಾಗುತ್ತದೆ - ಇದೇ ಮುಂತಾದ ಭಾವನೆಗಳನ್ನು ಈ ಆಕ್ರೋಶದ ಹಿಂದೆ ಕಾಣಬಹುದು. ಈ ರೀತಿಯ ಆಲೋಚನೆಯೇ ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬ ನೀತಿಯ ಉಲ್ಲಂಘನೆಯಾಗುತ್ತದೆ.
ಜೈಲು ಅಧಿಕಾರಿಗಳು ತಮ್ಮ ಸ್ವ-ಇಚ್ಛೆಯಿಂದ ವರ್ತಿಸಿಲ್ಲ, ಏಕ ಪಕ್ಷೀಯ ನಿರ್ಧಾರ ಕೈಗೊಂಡಿಲ್ಲ, ಬಹಳ ಎಚ್ಚರಿಕೆಯಿಂದ ನಿರ್ಧಾರ ಕೈಗೊಂಡಿದ್ದಾರೆ. ವಿಶೇಷ ಸವಲತ್ತುಗಳನ್ನು ಒದಗಿಸುವುದರಿಂದ ವಿಚಾರಣೆಗೊಳಪಡಬೇಕಾಗುತ್ತದೆ, ಸಾರ್ವಜನಿಕರಿಂದ ವಿಐಪಿ ಜೈಲು ಸಂಸ್ಕøತಿಯನ್ನು ಸೃಷ್ಟಿಸಿದ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂಬ ಅರಿವು ಅಧಿಕಾರಿಗಳಲ್ಲಿದೆ. ಈ ಎಚ್ಚರಿಕೆಯ ಕ್ರಮವನ್ನು ನ್ಯಾಯಾಲಯಗಳು ಅನುಮೋದಿಸಿದ್ದು, ಸವಲತ್ತುಗಳನ್ನು ತಪ್ಪಾಗಿ ಹಕ್ಕುಗಳು ಎಂದು ಒಮ್ಮೆ ಭಾವಿಸಿದರೆ, ಶಿಸ್ತು ನಶಿಸಿಹೋಗುತ್ತದೆ ಎಂದು ನ್ಯಾಯಾಲಯಗಳು ವ್ಯಾಖ್ಯಾನಿಸಿವೆ.
ದರ್ಶನ್ ಜೈಲು ವಿವಾದ ಮಾನವ ಹಕ್ಕುಗಳ ಉಲ್ಲಂಘನೆಯ ವಿಚಾರವಲ್ಲ. ಇದು ಲಭ್ಯ ಸೌಲಭ್ಯಗಳನ್ನು ಸಾಮಾನ್ಯೀಕರಿಸುವುದನ್ನು ಪ್ರತಿರೋಧಿಸುವ ಒಂದು ವಿಷಯ. ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಜೈಲುಗಳು ಇರುವುದು ಸಮಾನತೆಯನ್ನು ಎತ್ತಿಹಿಡಿಯುವ ಸಲುವಾಗಿಯೇ ಹೊರತು, ಸಾಮಾಜಿಕ ಶ್ರೇಣಿಯನ್ನು ಬಿಂಬಿಸುವುದಕ್ಕಲ್ಲ. ಕಾನೂನು ನ್ಯಾಯಪರತೆಯನ್ನು ಕೇಳುವುದೇ ಹೊರತು, ಅನುಕೂಲಗಳನ್ನಲ್ಲ.
Comments
Post a Comment