ಕರಾವಳಿ ಜಿಲ್ಲೆಗಳಿಗೆ ಬೇಕಿದೆ ಇಲ್ಲಿನ ಅತ್ಯಮೂಲ್ಯ ಪರಿಸರ ಮತ್ತು ಸಂಪ್ರದಾಯ ಆಧರಿತ ಪ್ರವಾಸೋದ್ಯಮದ ದೃಷ್ಟಿ
ಖುಲ್ಲಂಖುಲ್ಲಾ * ಬಿವಿಸೀ
ಕರ್ನಾಟಕದ ರಾಜಕೀಯ ನಾಯಕತ್ವವು ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ನಿರಂತರವಾಗಿ ಆಗ್ರಹಿಸುತ್ತಿದ್ದು, ಗೋವಾದ ಮಾದರಿಯನ್ನು ಅನುಸರಿಸಲು ಹೇಳುತ್ತಿದೆ. ಆದರೆ ಈ ಆಗ್ರಹದ ಹಿಂದೆ, ಕರ್ನಾಟಕದ ಕರಾವಳಿ ಪ್ರದೇಶದ ಬಗ್ಗೆ ಮತ್ತು ಅಲ್ಲಿನ ಅಭಿವೃದ್ಧಿಯ ಬಗ್ಗೆ ತಪ್ಪು ಗ್ರಹಿಕೆಗಳೇ ಪ್ರಧಾನವಾಗಿ ಕಾಣುತ್ತವೆ. ಪ್ರವಾಸೋದ್ಯಮವನ್ನು ಸಂಕುಚಿತ ದೃಷ್ಟಿಯಿಂದ ನೋಡಲಾಗುತ್ತಿದ್ದು, ಕಡಲ ತೀರ ಕೇಂದ್ರಿತ, ಮದ್ಯಪಾನಕ್ಕೆ ಪೆÇ್ರೀತ್ಸಾಹಿಸುವ ವಿರಾಮಶೈಲಿಯ ಪ್ರವಾಸ ಮತ್ತು ರಿಯಲ್ ಎಸ್ಟೇಟ್ ಲೂಟಿಯ ನೆಲೆಯಲ್ಲಿ ಈ ಆಲೋಚನೆ ಹೊರಹೊಮ್ಮಿದೆ. ಇದು ಹಳಸಲು ಮಾದರಿಯಷ್ಟೇ ಅಲ್ಲದೆ, ಈಗಾಗಲೇ ಗೋವಾ ಮತ್ತು ಕೇರಳ ಈ ಮಾದರಿಯ ವ್ಯತ್ಯಯಗಳನ್ನು ನಿಯಂತ್ರಿಸಲು ಪರದಾಡುತ್ತಿವೆ.
ಕರಾವಳಿ ಕರ್ನಾಟಕಕ್ಕೆ ಇತರ ರಾಜ್ಯಗಳನ್ನು ಅನುಕರಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಇಲ್ಲಿರುವುದನ್ನು ಗುರುತಿಸಿ, ವಿವೇಚನಾರಹಿತ ಪ್ರವಾಸೋದ್ಯಮ ಉತ್ಕರ್ಷದಿಂದ ಏನನ್ನು ಕಳೆದುಕೊಳ್ಳಬಹುದು ಎಂದು ಯೋಚಿಸಬೇಕಿದೆ.
ಗೋವಾ ಮಾದರಿಯು ದುಬಾರಿ ವೆಚ್ಚದೊಂದಿಗೆ ಕೈಗೂಡುತ್ತದೆ. ಕಡಲತೀರಗಳು ರಿಯಲ್ ಎಸ್ಟೇಟ್ ಕಾಂಕ್ರೀಟ್ ವಲಯಗಳಾಗಿ ರೂಪುಗೊಂಡಿದ್ದು, ಪರಿಸರದ ರಕ್ಷಣಾ ಗೋಡೆಗಳು ದುರ್ಬಲವಾಗಿವೆ. ಮಾದಕ ವಸ್ತುಗಳ ಜಾಲಗಳು ಮತ್ತು ಜೂಜು ಆಧಾರಿತ ಆರ್ಥಿಕತೆ ವ್ಯಾಪಕವಾಗಿ ಹರಡಿದ್ದು, ಸ್ಥಳೀಯ ಸಮುದಾಯಗಳನ್ನು ಅಂಚಿಗೆ ತಳ್ಳಲಾಗಿದೆ. ಕೇರಳದಲ್ಲೂ ಸಹ ಪರಿಸರವಾದಿಗಳಿಂದ ತೀವ್ರ ಪ್ರತಿರೋಧ ವ್ಯಕ್ತವಾಗುತ್ತಿದ್ದು ಪ್ರವಾಸೋದ್ಯಮದ ಅತಿಯಾದ ಬೆಳವಣಿಗೆಯಿಂದ ಬೇಸತ್ತ ನಿವಾಸಿಗಳೂ ಆಕ್ಷೇಪಿಸುತ್ತಿದ್ದಾರೆ. ಸಾಂಸ್ಕøತಿಕ ವಲಯಗಳು ದುರ್ಬಲವಾಗುತ್ತಿದ್ದು, ಪರಿಸರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಕರ್ನಾಟಕಕ್ಕೆ ಈ ಮಾದರಿಗಳನ್ನೇ ಅಳವಡಿಸುವುದು ಈ ಹಂತದಲ್ಲಿ ವ್ಯರ್ಥವಷ್ಟೇ ಅಲ್ಲದೆ, ಇದು ಯಶಸ್ಸಿನಿಂದ ಕಲಿತ ಪಾಠ ಎನಿಸುವುದಿಲ್ಲ; ಬದಲಾಗಿ ದುಷ್ಪರಿಣಾಮಗಳನ್ನು ಅರಿತಿದ್ದರೂ ಅದೇ ತಪ್ಪುಗಳನ್ನು ಮಾಡುವ ಮಾದರಿಯಾಗಿ ಕಾಣುತ್ತದೆ.
ಚಿಂತೆಗೀಡುಮಾಡುವ ವಿಚಾರ ಎಂದರೆ, ಈ ಧೋರಣೆಯಲ್ಲಿ ಕರಾವಳಿ ಪ್ರದೇಶವನ್ನು ಖಾಲಿ ಇರುವ ರಿಯಲ್ ಎಸ್ಟೇಟ್‍ನಂತೆ ಪರಿಗಣಿಸಲಾಗುವುದೇ ಹೊರತು, ಜೀವಂತ ಪರಿಸರ ಮತ್ತು ಸಾಂಸ್ಕೃತಿಕ ಪ್ರದೇಶ ಎಂದು ಭಾವಿಸಲಾಗುವುದಿಲ್ಲ. ಕರಾವಳಿ ನಿಯಂತ್ರಣ ವಲಯ ರಕ್ಷಣಾ ನಿಯಮಗಳನ್ನು ಅಡ್ಡಿ ಎಂದು ಬಿಂಬಿಸಲಾಗುತ್ತಿದ್ದು, ಮೋಜು-ಮಸ್ತಿಯಾಧಾರಿತ ಪ್ರವಾಸೋದ್ಯಮವನ್ನು ಪೆÇ್ರೀತ್ಸಾಹಿಸುವುದು ನಿಯಮಗಳನ್ನು ಉಲ್ಲಂಘಿಸುವ ಮತ್ತು ಭೂಮಿಯನ್ನು ಕಬಳಿಸುವ ಅವಕಾಶಗಳಾಗಿ ಕಾಣುತ್ತಿವೆ. ಈ ರೀತಿಯ ಪ್ರವಾಸೋದ್ಯಮ ಅಲ್ಪಕಾಲಿಕ ಹಾಗೂ ಅಭದ್ರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಲ್ಲದೆ, ದೀರ್ಘಾವಧಿಯಲ್ಲಿ ಸಾರ್ವಜನಿಕರಿಗೆ ಹೊರೆಯಾಗುತ್ತದೆ. ಕೆಲವೇ ಹೂಡಿಕೆದಾರರು ಲಾಭ ಬಾಚಿಕೊಳ್ಳುತ್ತಾರೆ. ಇದು ಸುಸ್ಥಿರ ಅಭಿವೃದ್ಧಿ ಆಗುವುದಿಲ್ಲ. ಅಲ್ಪಾವಧಿಯ ಲೂಟಿಯಾಗುತ್ತದೆ
ಗಮನಾರ್ಹ ಸಂಗತಿ ಎಂದರೆ, ಉತ್ತರ ಕನ್ನಡದ ಸಂಸದ ಕಾಗೇರಿ ಹೆಗಡೆ ಈ ನಿಟ್ಟಿನಲ್ಲಿ ಗಂಭೀರ ಕ್ರಮಗಳನ್ನು ಕೈಗೊಂಡಿದ್ದು, ಪೌರಾಣಿಕ ಮತ್ತು ಐತಿಹಾಸಿಕ ಮಹತ್ವದ ಗೋಕರ್ಣ ಮತ್ತು ಬನವಾಸಿಯಲ್ಲಿ ಪ್ರವಾಸೋದ್ಯಮವನ್ನು ಪೆÇ್ರೀತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರದಿಂದ ದೊಡ್ಡ ಮೊತ್ತದ ಹೂಡಿಕೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಸಂಸದರ ಗಮನ ರಸ್ತೆಗಳು, ಸರ್ಕಾರವೇ ನಡೆಸುವ ವಸತಿ ಸೌಕರ್ಯಗಳು, ಪರಂಪರೆಯನ್ನು ಬಿಂಬಿಸುವ ಮೂಲ ಸೌಕರ್ಯಗಳು ಆಗಿದ್ದು, ಈ ಮಾದರಿಯಲ್ಲಿ ಸಾಮಾಜಿಕ ಚೌಕಟ್ಟನ್ನು ಭಂಗಪಡಿಸದೆ, ಪರಿಸರವನ್ನು ನಾಶ ಪಡಿಸದೆ ಸಾರ್ವಜನಿಕ ಹೂಡಿಕೆಯ ಮೂಲಕ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಈ ರೀತಿಯ ಪ್ರಸ್ತಾವನೆಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ಗಮನ ನೀಡುತ್ತಿಲ್ಲ, ಇದು ಸರ್ಕಾರದ ಇಂದಿನ ಆದ್ಯತೆಗಳನ್ನು ಸ್ಪಷ್ಟವಾಗಿ ಎತ್ತಿತೋರಿಸುತ್ತದೆ.
ದೇವಸ್ಥಾನಗಳು ಮತ್ತು ಪರಂಪರೆಯನ್ನಾಧರಿಸಿದ ಪ್ರವಾಸೋದ್ಯಮವನ್ನು ಹಿಮ್ಮುಖ ಚಲನೆ ಎಂದು ಪರಿಗಣಿಸಬೇಕಿಲ್ಲ. ಇದರಲ್ಲಿ ಸುಸ್ಥಿರವಾದ, ವರ್ಷವಿಡೀ ಸ್ಥಳೀಯ ಸಮುದಾಯಗಳಿಗೆ ಜೀವನೋಪಾಯವನ್ನು ಒದಗಿಸುವ ವ್ಯವಸ್ಥೆ ಸೃಷ್ಟಿಯಾಗುತ್ತದೆ. ಪುರೋಹಿತರು, ಅರ್ಚಕರು, ಮಾರ್ಗದರ್ಶಿಗಳು, ಕಲಾವಿದರು, ಕುಶಲಕರ್ಮಿಗಳು, ಸಾರಿಗೆ ನಿರ್ವಾಹಕರು, ಸಣ್ಣ ಹೋಟೆಲುಗಳ ವರ್ತಕರು ಇದರ ಪ್ರಯೋಜನ ಪಡೆಯುವುದರಿಂದ, ಆರ್ಥಿಕ ಲಾಭ ಮತ್ತು ಪ್ರಯೋಜನಗಳು ವ್ಯಾಪಕವಾಗಿ ವಿತರಣೆಯಾಗುತ್ತವೆ. ಇದು ಸಾಂಸ್ಕೃತಿಕ ವಿಶ್ವಾಸವನ್ನು ಹೆಚ್ಚಿಸುವುದೇ ಅಲ್ಲದೆ, ಸ್ಥಳೀಯ ಆಚರಣೆ, ಪದ್ಧತಿಗಳನ್ನು ಉತ್ತೇಜಿಸುವ ಮೂಲಕ, ಪರಿಸರ ನಾಶಕ್ಕೆ ಕಾರಣವಾಗುವ ಅನಿರ್ಬಂಧಿತ ಕರಾವಳಿ ನಿರ್ಮಾಣದ ಲೂಟಕೋರರ ಹಾವಳಿಯನ್ನು ತಪ್ಪಿಸುತ್ತದೆ.
ಕರ್ನಾಟಕವೂ ಸಹ, ಹಿಂದುಳಿಯುವಿಕೆಯನ್ನು ತಪ್ಪಿಸುವ ಸಲುವಾಗಿ ಕೇರಳ ಮತ್ತು ಗೋವಾ ಮಾದರಿಗಳನ್ನೇ ಅನುಸರಿಸಬೇಕು ಎಂಬ ವಾದ ಬೌದ್ಧಿಕ ದಿವಾಳಿತನವಾಗುತ್ತದೆ. ಸ್ಥಳೀಯ ಶಕ್ತಿ ಸಾಮಥ್ರ್ಯಗಳನ್ನು ಬುದ್ಧಿವಂತಿಕೆಯಿಂದ ಬಳಸುವ ಮೂಲಕ ದೀರ್ಘಾವಧಿಯ ಸಮೃದ್ಧಿ ಸಾಧಿಸಲು ಸಾಧ್ಯ. ಯಾತ್ರಾ ಸ್ಥಳಗಳಿಗೆ ರಸ್ತೆಗಳು, ಸ್ವಚ್ಚವಾದ ಕೈಗೆಟುಕುವ ವಸತಿ ಸೌಕರ್ಯಗಳು, ಪರಂಪರೆಯ ರಕ್ಷಣೆ, ವ್ಯಾಖ್ಯಾನ ಕೇಂದ್ರಗಳು ಮತ್ತು ಸಮುದಾಯ ಮತ್ತು ಸಂಪ್ರದಾಯಪ್ರೇರಿತ ಪ್ರವಾಸೋದ್ಯಮ ನೀತಿಯು, ಐಷಾರಾಮಿ ಕಡಲತೀರದ ರೆಸಾರ್ಟ್‍ಗಳಷ್ಟೇ ಅಭಿವೃದ್ಧಿಯನ್ನು ಸಾಧಿಸಲು ನೆರವಾಗುತ್ತದೆ. ಮಾತ್ರವಲ್ಲ, ಇನ್ನೂ ಹೆಚ್ಚಿನ ಅಭಿವೃದ್ಧಿಯೂ ಸಾಧ್ಯ.
ನೀತಿ ನಿರೂಪಕರು ಎದುರಿಸಬೇಕಾದ ಸರಳ ಪ್ರಶ್ನೆ ಎಂದರೆ, ಪ್ರವಾಸೋದ್ಯಮ ಅಭಿವೃದ್ಧಿ ಎಂದರೆ ಕೇವಲ ಕಡಲ ತೀರಗಳು, ಮದ್ಯಪಾನ, ನಿಯಮ ಉಲ್ಲಂಘನೆ ಮಾತ್ರವೇ ಅಥವಾ ಘನತೆ, ಸುಸ್ಥಿರತೆ ಮತ್ತು ಸಾಂಸ್ಕೃತಿಕ ಮುಂಚಲನೆಯೂ ಸಹ ಅಭಿವೃದ್ಧಿ ಎನಿಸಿಕೊಳ್ಳುತ್ತದೆಯೇ? ಕರಾವಳಿ ಕರ್ನಾಟಕಕ್ಕೆ ತನ್ನದೇ ಆದ ಪ್ರವಾಸೋದ್ಯಮ ಮಾದರಿ ಬೇಕಿದೆ. ಇದು ಇಲ್ಲಿ ನಾಗರಿಕತೆಯಲ್ಲಿ ಬೇರೂರಿರಬೇಕು, ಪರಿಸರವನ್ನು ಗೌರವಿಸುವಂತಿರಬೇಕು, ಜನತೆಗೆ ಉಪಯುಕ್ತವಾಗಿರಬೇಕು. ಈ ಧ್ಯೇಯಗಳನ್ನು ಕಡೆಗಣಿಸುವುದು ದೂರ ದೃಷ್ಟಿಯ ವೈಫಲ್ಯವೆನಿಸುತ್ತದೆಯೇ ಹೊರತು ಅವಕಾಶವನ್ನು ತಪ್ಪಿಸಿಕೊಂಡಂತಾಗುವುದಿಲ್ಲ.
Comments
Post a Comment