ಪ್ರಗತಿಪರರು ಮತ್ತು ಯಥಾಸ್ಥಿತಿವಾದಿಗಳು
ಪ್ರಗತಿ ಎಂದರೆ ಸಂಪ್ರದಾಯವನ್ನು ಅವಮಾನಿಸುವುದಲ್ಲ. ಸಂಪ್ರದಾಯ ಎಂದರೆ ಬದಲಾವಣೆಗೆ ಹೆದರುವುದಲ್ಲ.
.........................
ಹೀಗೆ ಸುಮ್ಮನೆ * ಬಿವಿಸೀ
ಕರ್ನಾಟಕದಲ್ಲಿ ಇಂದು ಪ್ರಗತಿಪರ ಎಂಬ ಪದ ಸರಳವಾಗಿ ಬಳಕೆಯಾಗುತ್ತಿಲ್ಲ. ಇದು ಒಂದು ರೀತಿಯಲ್ಲಿ ರಾಜಕೀಯ ಲೇಬಲ್ ಆಗಿದ್ದು, ಅನೇಕ ಸಂದರ್ಭಗಳಲ್ಲಿ ವ್ಯಂಗ್ಯವಾಗಿ, ನಿಂದನೆಯ ರೂಪದಲ್ಲಿ ಬಳಸಲಾಗುತ್ತದೆ. ಬಿಜೆಪಿ-ಆರೆಸ್ಸೆಸ್‍ಗೆ ನಿಕಟವಾಗಿರುವ ನಾಯಕರು ಮತ್ತು ವಿಶ್ಲೇಷಕರು ಈ ಪದವನ್ನು ಉದಾರವಾದಿಗಳ, ಸೆಕ್ಯುಲರ್ ಚಿಂತಕರ, ಬರಹಗಾರರ ಮತ್ತು ಕಾರ್ಯಕರ್ತರ ಮೇಲೆ ವಾಗ್ದಾಳಿ ನಡೆಸಲು ಬಳಸುತ್ತಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಹೀಗೆ ಉದಾರವಾದಿಗಳಿಂದ ಟೀಕೆಗೊಳಗಾದವರು ಕೋಮುವಾದಿ, ವಿಭಜಕ ರಾಜಕೀಯದಿಂದ ರಕ್ಷಣೆ ಪಡೆಯುವ ಸಲುವಾಗಿ ಇದನ್ನು ಕವಚದಂತೆ ಬಳಸುತ್ತಾರೆ. ಈ ಮೇಲಾಟದಲ್ಲಿ ಪ್ರಗತಿಪರ ಪದದ ನಿಜವಾದ ಅರ್ಥ ಮತ್ತು ಅದರ ತತ್ಸಂಭಿತ ಬದಲಾವಣೆಗಳು ಹಿಂಬದಿಗೆ ಸರಿಯುತ್ತಿವೆ.
ಸರಳವಾಗಿ ಹೇಳುವುದಾದರೆ, ಪ್ರಗತಿಪರರು ಎಂದರೆ ಬದಲಾವಣೆಗೆ ಮುಕ್ತರಾಗಿರುವುದು ಎಂದಷ್ಟೇ ಅರ್ಥ. ಬದಲಾವಣೆಯನ್ನು ಯಾರೂ ಸಹ ತಡೆಗಟ್ಟಲಾಗುವುದಿಲ್ಲ. ಸಮಾಜ ಕಾಲಕ್ಕೆ ತಕ್ಕಂತೆ ಬದಲಾವಣೆ ನಡೆಯುತ್ತಲೇ ಇರುತ್ತದೆ. ಜನರು ಹೇಗೆ ಜೀವನ ನಡೆಸುತ್ತಾರೆ, ಹೇಗೆ ಕೆಲಸ ಮಾಡುತ್ತಾರೆ, ಆರಾಧಿಸುತ್ತಾರೆ, ಸಂವಹನ ನಡೆಸುತ್ತಾರೆ ಮತ್ತು ಯೋಚಿಸುತ್ತಾರೆ ಎಲ್ಲವೂ ಬದಲಾಗುತ್ತದೆ. ಐವತ್ತು ವರ್ಷಗಳ ಹಿಂದೆ ಸಹಜ ಎಂದು ಕಂಡಿದ್ದ ವಿದ್ಯಮಾನಗಳು ಈಗ ಸಾಮಾನ್ಯ ಸಹಜ ಎನಿಸಿಕೊಳ್ಳುವುದಿಲ್ಲ. ಯಾವ ಸಮಾಜವೂ ಜಡಗಟ್ಟುವುದಿಲ.್ಲ ಯಾವುದೇ ಪೀಳಿಗೆಯೂ ತನ್ನ ಮೌಲ್ಯವನ್ನು ಬದಲಾವಣೆ ಇಲ್ಲದೆ ಮುಂದೆ ಸಾಗಲು ಸಾಧ್ಯವಿಲ್ಲ.
ಪ್ರಗತಿಪರರ ವಿರುದ್ಧ ಈಗ ಕಾಣಲಾಗುತ್ತಿರುವ ವಿರೋಧವನ್ನು ರಾಜಕೀಯ ಸಂದರ್ಭದಲ್ಲಿ ನೋಡಬೇಕಿದೆ. ಬಿಜೆಪಿ-ಆರೆಸ್ಸೆಸ್ ಧೋರಣೆ ಮುಖ್ಯವಾಗಿ ಧಾರ್ಮಿಕ, ಸಾಂಸ್ಕøತಿಕ ಮತ್ತು ಪರಸ್ಪರ ಸಂಬಂಧಗಳ ಅಸ್ಮಿತೆಗಳ ಮೂಲಕ ವ್ಯಕ್ತವಾಗುತ್ತದೆ. ಪ್ರಗತಿ ಅಥವಾ ಬದಲಾವಣೆ ಪರ ವಾದಿಸುವವರನ್ನು ಅವರು ಶತ್ರುಗಳಾಗಿ ಕಾಣುತ್ತಾರೆ. ಇಂತಹ ವಿಮರ್ಶಕರನ್ನು, ಟೀಕಾಕಾರರನ್ನು ಪ್ರಗತಿಪರರು ಎಂದು ಕರೆಯುವುದರ ಮೂಲಕ ಅವರನ್ನು ಭೌತಿಕವಾಗಿ ದೂರ ಇರಿಸಲಾಗುತ್ತದೆ, ಸಂಪ್ರದಾಯ ವಿರೋಧಿಗಳು ಎಂದು ಹಳಿಯಲಾಗುತ್ತದೆ ಮತ್ತು ಹಿಂದೂ ವಿರೋಧಿ ಎಂದೂ ಪರಿಗಣಿಸಲಾಗುತ್ತದೆ. ಇವರ ವಾದಗಳಿಗೆ ಪ್ರತಿವಾದವನ್ನು ಮಾಡುವ ಪ್ರಯತ್ನವನ್ನೂ ಮಾಡುವುದಿಲ್ಲ. ಭಿನ್ನಾಭಿಪ್ರಾಯಗಳನ್ನು ಅನುಮಾನಾಸ್ಪದವಾಗಿ ನೋಡಲಾಗುತ್ತದೆ.
ಇದೇ ವೇಳೆ, ಉದಾರವಾದಿಗಳು ಮತ್ತು ಪ್ರಗತಿಪರರು ಈಗ ಆಂತರಿಕವಾಗಿ ಗಮನ ಹರಿಸಬೇಕಿದೆ. ಸಾಧಾರಣ ಜನರಲ್ಲಿ ಹಲವರು ಪ್ರಗತಿಪರರು ತಮ್ಮನ್ನು ಕೀಳರಿಮೆಯಿಂದ ನೋಡುತ್ತಾರೆ ಎಂದು ಭಾವಿಸುವವರಿದ್ದಾರೆ. ಪ್ರಗತಿಪರರು ಮಾತನಾಡುವ ಪರಿಭಾಷೆ ಬೌದ್ಧಿಕ ರೂಪದಲ್ಲಿ ನೈತಿಕತೆಯ ಸುತ್ತ ಇದ್ದು, ನಿತ್ಯ ಸಮಸ್ಯೆಗಳಿಂದ ವಿಮುಖವಾಗಿರುತ್ತದೆ. ತಾಳ್ಮೆಯಿಂದ ಬದಲಾವಣೆಗಳನ್ನು ಮನದಟ್ಟು ಮಾಡಿದರೆ ಒಪ್ಪಿಕೊಳ್ಳುವುದು ಸುಲಭವಾಗುವುದೇ ಹೊರತು, ಮೇಲರಿಮೆಯ ಮೂಲಕ ಮಾತನಾಡಿದರೆ ಜನರು ಪ್ರಗತಿಪರರು ತಮ್ಮ ಅಹಮಿಕೆಯ ಪ್ರದರ್ಶನ ಮಾಡುತ್ತಿದ್ದಾರೆ ಎಂದು ಭಾವಿಸುತ್ತಾರೆ.
ಹಾಗಾಗಿ ಪ್ರಗತಿಪರರನ್ನು ಟೀಕಿಸುವುದು ಎಲ್ಲ ಸಂದರ್ಭಗಳಲ್ಲೂ ತಪ್ಪು ಎನ್ನಲಾಗುವುದಿಲ್ಲ. ಟೀಕೆಗೊಳಗಾಗಬೇಕಿರುವುದು, ಹೊಸತಾದ ಎಲ್ಲವೂ ಸಹ ಸಹಜವಾಗಿ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಅಥವಾ ಸಾಮಾಜಿಕ ಬದಲಾವಣೆಯು ಯಾವುದೇ ಚರ್ಚೆ ಇಲ್ಲದೆ ತ್ವರಿತವಾಗಿ ಸಾಧ್ಯವಾಗಬೇಕು ಎಂಬ ನಿರೀಕ್ಷೆ. ಜನರು ತಮ್ಮ ಸಂಪ್ರದಾಯಗಳನ್ನು, ಅಸ್ಮಿತೆಗಳನ್ನು, ಸಾಮಾಜಿಕ ಸಮತೋಲನವನ್ನು ಕಳೆದುಕೊಳ್ಳುವ ಆತಂಕದಲ್ಲಿರುತ್ತಾರೆ. ಈ ಯೋಚನೆಗಳು ಯಾವಾಗಲೂ ಸರಿಯಾಗಿರುವುದಿಲ್ಲ ಆದರೆ ಅದು ವಾಸ್ತವವಾಗಿದ್ದನ್ನು ಅಲ್ಲಗಳೆಯಲಾಗುವುದಿಲ್ಲ.
ವಿಡಂಬನೆ ಎಂದರೆ ಬಲಪಂಥೀಯರೂ ಸಹ ಬದಲಾವಣೆಯನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಅದು ಅವರಿಗೆ ಸೂಕ್ತ ಎನಿಸಿದಾಗ ಮಾತ್ರ. ಉದಾಹರಣೆಗೆ ಹೊಸ ತಂತ್ರಜ್ಞಾನ, ಡಿಜಿಟಲ್ ಸೇವೆಗಳು, ಕಲ್ಯಾಣ ಯೋಜನೆಗಳ ವಿತರಣೆ ಇತ್ಯಾದಿ. ಆದರೆ ಸಾಮಾಜಿಕ ಚಿಂತನೆ, ಧೋರಣೆಗಳಲ್ಲಿ, ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ಬದಲಾವಣೆಯನ್ನು ವಿರೋಧಿಸುತ್ತಾರೆ. ಸಂಪ್ರದಾಯ ಸದಾ ಬದಲಾವಣೆಗಳ ಮೂಲಕ ಉಗಮಿಸುತ್ತಿರುತ್ತದೆ. ಏಕ ರೀತಿಯ ಹಿಂದಿನ ಸಂಪ್ರದಾಯ ಎಂದೂ ಇರಲಿಲ್ಲ.
ಕರ್ನಾಟಕದ ಸಾರ್ವಜನಿಕ ಚರ್ಚೆ ಸುಧಾರಣೆಯಾಗಬೇಕಾದರೆ, ಎರಡೂ ಬಣಗಳು ತಮ್ಮ ಲೇಬಲ್‍ಗಳಿಂದಾಚೆಗೆ ಯೋಚಿಸಬೇಕು. ಪ್ರಗತಿ ಎಂದರೆ ಸಂಪ್ರದಾಯವನ್ನು ಅವಮಾನಿಸುವುದಲ್ಲ. ಸಂಪ್ರದಾಯ ಎಂದರೆ ಬದಲಾವಣೆಗೆ ಹೆದರುವುದಲ್ಲ. ಬದಲಾವಣೆ ಸಹಜ ಪ್ರಕ್ರಿಯೆ. ನಿಜವಾದ ಗುರಿ ಇರುವುದು ಅದನ್ನು ನಿರ್ವಹಿಸುವಲ್ಲಿ, ಪರಸ್ಪರ ಅರ್ಥಮಾಡಿಕೊಳ್ಳುವ ಮೂಲಕ ಪ್ರಾಮಾಣಿಕವಾಗಿ ಜನರ ಕಾಳಜಿಗಳನ್ನು ಗೌರವಿಸುವುದರಲ್ಲಿ.
Comments
Post a Comment