ಕಾಂಗ್ರೆಸ್ ಕೈಯಾರೆ ಕರ್ನಾಟಕವನ್ನು ಕಳೆದುಕೊಳ್ಳುತ್ತಿದೆ, ಬಿಜೆಪಿಗೆ ದಾರಿ ಮಾಡುತ್ತಿದೆ

 ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ತಾನು ಹಿಂದಿನ ದಿನಗಳಲ್ಲಿ ಮಾಡಿದ ತಪ್ಪುಗಳನ್ನು ಮತ್ತೆ ಮರುಕಳಿಸುವ ದಿಕ್ಕಿನಲ್ಲಿ ಸಾಗುತ್ತಿದೆ. ಜನರು ಸ್ಪಷ್ಟ ಬಹುಮತ ನೀಡಿ ಆಡಳಿತ ಸ್ಥಿರತೆಗೆ ಅವಕಾಶ ನೀಡಿದ ಮೇಲೂ ಸರ್ಕಾರದ ಕೆಲಸದ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಶಿವಕುಮಾರರ ಮಧ್ಯೆ ನಡೆಯುತ್ತಿರುವ ನಿರಂತರ ಅಧಿಕಾರ ಕಲಹವೇ ರಾಜ್ಯದ ರಾಜಕೀಯವನ್ನು ಆಕ್ರಮಿಸಿದೆ. ದೆಹಲಿ ನಾಯಕತ್ವ ಇದನ್ನು ನಿಯಂತ್ರಣದಲ್ಲಿಟ್ಟಿದ್ದೇವೆ ಎಂಬ ಭ್ರಮೆಯಲ್ಲಿದ್ದರೂ ತಳಮಟ್ಟದಲ್ಲಿ ನಡೆಯುತ್ತಿರುವುದೇ ಬೇರೆ. ಜನರ ಒತ್ತಡಕ್ಕೆ ಮಣಿದು ಬಲವಂತವಾಗಿ ವಿರಾಮ ಪಡೆದ ಈ ಇಬ್ಬರ ಶಿಬಿರಗಳು ಈಗ ಮತ್ತೆ ತಂತಮ್ಮಲ್ಲೇ ಒಗ್ಗೂಡಿಕೊಂಡು ಕಲಹಕ್ಕೆ ಕಚ್ಚೆ ಕಟ್ಟಿ ನಿಂತಿವೆ.

ಹೈಕಮಾಂಡಿನ `ಬ್ರೇಕ್‍ಫಾಸ್ಟ್ ರಣನೀತಿ' ತಾತ್ಕಾಲಿಕ ವಿರಾಮವಷ್ಟೇ ಹೊರತು, ಪರಿಹಾರವಾಗಲಿಲ್ಲ. ಒಂದೆರಡು ಸಭೆಗಳನ್ನು ನಡೆಸಿ ನಗುಮುಖ ತೋರಿಸಿದ ಬಳಿಕ, ಇಬ್ಬರೂ ಮತ್ತೆ ತಮ್ಮ ತಮ್ಮ ಹಕ್ಕು  ಗಟ್ಟಿಯಾಗಿ ಮಂಡಿಸುತ್ತಿದ್ದಾರೆ - ಎಲ್ಲ ಮರ್ಯಾದೆ ಮತ್ತು ಸಭ್ಯತೆ ಬಿಟ್ಟು. ಕೇಂದ್ರ ನಾಯಕತ್ವ ಯಾವುದೇ ಕ್ಲಿಯರೆನ್ಸ್ ನೀಡದಿದ್ದರೂ, ಸಿದ್ದರಾಮಯ್ಯ ತಾನೇ ಸಿಎಂ ಆಗಿ ಐದು ವರ್ಷಗಳ ಪೂರ್ಣ ಅವಧಿಯನ್ನು ಪೂರೈಸುತ್ತೇನೆ ಎಂಬುದನ್ನು ಪುನರಾವರ್ತಿತವಾಗಿ ಘೋಷಿಸುವುದು ನಿಖರವಾದ ರಾಜಕೀಯ ಸಂದೇಶ. ಮತ್ತೊಂದೆಡೆ, ಉಪಮುಖ್ಯಮಂತ್ರಿಯ ಬಳಗ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯಂತೆ, ಮುಖ್ಯಮಂತ್ರಿ ಎದುರಲ್ಲೇ ಡಿಕೆಶಿ ಪರ ಘೋಷಣೆ ಕೂಗಿದುದು ಶಕ್ತಿಯ ಪ್ರದರ್ಶನವೇ. ಇದರಿಂದ ಒಂದೇ ಸರ್ಕಾರದೊಳಗೆ ಇಬ್ಬರ ಪ್ರಭಾವವಲಯಗಳು ಎಷ್ಟರ ಮಟ್ಟಿಗೆ ಬೇರ್ಪಟ್ಟಿವೆ ಎಂಬುದು ಸ್ಪಷ್ಟವಾಗಿದೆ. ಶಾಸಕರೆಲ್ಲಾ ಕ್ರಮೇಣ ತಮ್ಮ ಭವಿಷ್ಯವನ್ನು ಯಾವ ಬಳಗ ಸೇರುವುದರಿಂದ ಸುರಕ್ಷಿತವಾಗುತ್ತದೆ ಎಂಬ ಲೆಕ್ಕಾಚಾರಕ್ಕೆ ಇಳಿದಿದ್ದಾರೆ.

ನಿಜವಾದ ವ್ಯಂಗ್ಯವೇನೆಂದರೆ, ಗದ್ದುಗೆಗಾಗಿ ಬಹಿರಂಗ ಕುಸ್ತಿ ನಡೆಯುತ್ತಿರುವ ಸಮಯದಲ್ಲಿ ಆಂತರಿಕವಾಗಿ ದುರ್ಬಲವಾಗಿದ್ದ ವಿರೋಧ ಪಕ್ಷವಾದ ಭಾಜಪ ಮೈಕೊಡವಿಕೊಂಡು ನಿಲ್ಲಲು ಅವಕಾಶವಾಗಿರುವುದು. 2023ರ ಸೋಲಿನ ಬಳಿಕ ಭಾಜಪ ಆಗೀಗ ಬುಸುಗುಡುತ್ತ ಮೂಲೆಯಲ್ಲಿ ಬಿದ್ದ ಸ್ಥಿತಿಯಲ್ಲಿತ್ತು. ಇಂಥ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಐದು ವರ್ಷಗಳ ಗಟ್ಟಿಯಾದ ಆಡಳಿತವನ್ನು ಭದ್ರಪಡಿಸಬಹುದಾಗಿತ್ತು. ಆದರೆ ಕಾಂಗ್ರೆಸ್‍ನ ಒಳ ಕಲಹವೇ ಭಾಜಪಕ್ಕೆ ಜೀವ ತುಂಬುವ ಕೆಲಸ ಮಾಡುತ್ತಿದೆ. ಜನತೆ ಭಾಜಪ ಹಿಂದಿರುಗುವುದನ್ನು ಸಕಲೋತ್ಸಾಹದಿಂದ ಬಯಸುವುದಿಲ್ಲ. ಅದು ಬದಲಾವಣೆ ವಿರೋಧಿ, ಯಥಾಸ್ಥಿತಿ ವಾದಿ ರಾಜಕಾರಣಕ್ಕೆ ಜೋತು ಬಿದ್ದಿರುವ ಸ್ವಾರ್ಥಿಗಳ ಕೂಟ.  ಆದರೆ ಕಾಂಗ್ರೆಸ್ ಅಸ್ಥಿರತೆ ಬಿಜೆಪಿಗೆ ಆಕ್ಸಿಜನ್ ತುಂಬುತ್ತಿದೆ. ಆಡಳಿತದಲ್ಲಿ ಒಳಜಗಳ ಸಹಿಸಲಾಗದ ಮಟ್ಟ ಮುಟ್ಟಿದರೆ, ಜನರು ಒಪ್ಪದಿದ್ದರೂ ಆಡಳಿತ ಭಾಜಪಕ್ಕೆ ಒಲಿಯುವ ಸಾಧ್ಯತೆ ಹೆಚ್ಚಾಗುತ್ತದೆ.

ಇದು ರಾಜ್ಯದ ಮತದಾರರನ್ನು ಅಸಹಜ ಪರಿಸ್ಥಿತಿಗೆ ತಳ್ಳುತ್ತಿದೆ - ಒಳಜಗಳದಿಂದ ಜರ್ಜರಿತಗೊಂಡಿರುವ ಆಡಳಿತ ಪಕ್ಷವೋ, ಅಥವಾ ಯಾವುದೇ ಹೊಸ ಆಶಾಭಾವನೆ ತಂದಿಡದ ವಿರೋಧ ಪಕ್ಷವೋ ಎಂಬ ಆಯ್ಕೆಗೆ ಜನರನ್ನು ಬಲವಂತಪಡಿಸಿದೆ. ಜನರು ಬೆಲೆ ಏರಿಕೆ, ಉದ್ಯೋಗ, ಆಡಳಿತ ಶಿಸ್ತು ಇವುಗಳ ಪರಿಹಾರ ಬಯಸಿದರು. ಆದರೆ ಅವರಿಗೆ ಸಿಗುತ್ತಿರುವುದು ಪ್ರತೀ ವಾರ ಒಂದೇ -- ಸರ್ಕಾರದೊಳಗಿನ ಎರಡು ಶಕ್ತಿ ಗುಂಪುಗಳ ನಾಟಕ.

ಕಾಂಗ್ರೆಸ್ ಸ್ವಯಂವಿನಾಶದ ಅಂಚಿನಲ್ಲಿದೆ. ಬಿಜೆಪಿ ಡಿಫಾಲ್ಟ್ ಫಲಾನುಭವಿಯಾಗದಿರಲು ಸಾಧ್ಯವೇ?

ಈ ಸಂದರ್ಭವನ್ನು ಸಂಸ್ಕøತದ ಒಂದು ನುಡಿ ಸರಿಯಾಗಿ ವರ್ಣಿಸುತ್ತದೆ: "ವಿನಾಶಕಾಲೇ ವಿಪರೀತ ಬುದ್ಧಿಃ"- ನಾಶ ಹತ್ತಿರ ಬಂದಾಗ ಮನುಷ್ಯ ತಾನೇ ತನ್ನ ಹಿತಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾನೆ. ಕಾಂಗ್ರೆಸ್ ತನ್ನದೇ ಕೈಯಲ್ಲಿ ತನ್ನ ಸರ್ಕಾರವನ್ನು ದುರ್ಬಲಗೊಳಿಸುವ ಈ ಮಾರ್ಗವನ್ನು ತಕ್ಷಣ ಬದಲಿಸದಿದ್ದರೆ, ಕರ್ನಾಟಕವನ್ನು ಮತ್ತೆ ಭಾಜಪಕ್ಕೆ ಒಪ್ಪಿಸಿಬಿಡುವ ದಿನ ದೂರವಿಲ್ಲ - ಅದು ಭಾಜಪದ ಸ್ವಯಂಬಲದಿಂದಲ್ಲ, ಕಾಂಗ್ರೆಸ್ ತನ್ನ ಅವಕಾಶವನ್ನು ಹಾಳುಮಾಡಿಕೊಂಡಿರುವುದರಿಂದ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again