ಕರ್ನಾಟಕಕ್ಕೆ ಮೊದಲು ಸಾರಾಯಿ ನಿಷೇಧ ಗ್ಯಾರಂಟಿ ಬೇಕಿದೆ
ಸರ್ಕಾರವು ಪಾನನಿಷೇಧವನ್ನು ಘೋಷಿಸಲು ಧೈರ್ಯ ತೋರಿ, ನಿರ್ವಹಿಸಲಾಗದ ಗ್ಯಾರಂಟಿಗಳನ್ನು ನಿಲ್ಲಿಸುವುದಾದರೆ ಅದರಿಂದ ಲಾಭವೇ ಹೊರತು ನಷ್ಟವಿಲ್ಲ.
................
ಖುಲ್ಲಂಖುಲ್ಲಾ * ಬಿವಿಸೀ
ಕರ್ನಾಟಕ ಇಂದು ನೈತಿಕ ಹಾಗೂ ರಾಜಕೀಯ ವಿರೋಧಾಭಾಸಗಳ ನಡುವೆ ಸಿಲುಕಿದ್ದು ತಪ್ಪಿಸಿಕೊಳ್ಳಲಾಗದ ಪರಿಸ್ಥಿತಿಯಲ್ಲಿದೆ. ರಾಮಮನೋಹರ್ ಲೋಹಿಯಾ ಅವರ ಸಮಾಜವಾದ ಮತ್ತು ಮಹಾತ್ಮ ಗಾಂಧಿಯ ಪರಂಪರೆಯನ್ನು ಅನುಸರಿಸುವ ಸರ್ಕಾರ ತನ್ನ ಮೂಲ ಆದಾಯವಾಗಿ ಸಾರಾಯಿ ಮಾರಾಟವನ್ನೇ ಅವಲಂಬಿಸಿದೆ; ಮತ್ತೊಂದೆಡೆ, ರಾಜ್ಯಾದ್ಯಂತ ಸಾವಿರಾರು ಕುಟುಂಬಗಳು ಸಾರಾಯಿ ಸೇವನೆಯಿಂದ ನಾಶವಾಗುತ್ತಿವೆ. ಇದು ಕೇವಲ ನೀತಿಯ ಅನಿಶ್ಚಿತತೆ ಅಲ್ಲ ನೈತಿಕ ಅಸಂಬದ್ಧತೆಯೂ ಹೌದು.
ಸಾರಾಯಿ ನಿಷೇಧಕ್ಕೆ ಪ್ರಮುಖ ಆಗ್ರಹ ಕೇಳಿಬರುತ್ತಿರುವುದು ನೈತಿಕ ಉಪನ್ಯಾಸಗಳಿಂದ ಅಥವಾ ಧಾರ್ಮಿಕ ನಿಬಂಧನೆಗಳಿಂದಲ್ಲ. ಇದು ಮಹಿಳೆಯರಿಂದ ಕೇಳಿಬರುತ್ತಿದೆ. ಕರ್ನಾಟಕದಾದ್ಯಂತ ಮಹಿಳಾ ಗುಂಪುಗಳು, ಸರ್ಕಾರ ಸಾರಾಯಿ ಒಮ್ಮೆಲೆ ನಿಷೇಧಿಸುವುದಾದರೆ, ತಾವು ಸರ್ಕಾರ ನೀಡುತ್ತಿರುವ ಐದು ಗ್ಯಾರಂಟಿಗಳನ್ನು ಬಿಟ್ಟುಕೊಡುವುದಾಗಿ ಹೇಳುತ್ತಿವೆ. ಇವರ ತರ್ತವೂ ಸರಳವಾಗಿದೆ. ಒಂದು ಕೈಯ್ಯಲ್ಲಿ ನೀಡುವ ಹಣವನ್ನು ಮತ್ತೊಂದರಲ್ಲಿ ಸಾರಾಯಿ ಮೂಲಕ ಕಸಿದುಕೊಳ್ಳಲಾಗುತ್ತಿದೆ. ಸಂಪಾದನೆ ಮಾಡಬೇಕಾದ ಗಂಡಸರು ತಮ್ಮ ಕುಟುಂಬಗಳನ್ನು ನಿರ್ವಹಿಸುವ ಬದಲು ಸಂಪಾದನೆಯನ್ನು ಸಾರಾಯಿಗಾಗಿ ಸುರಿಯುತ್ತಿದ್ದಾರೆ. ಇದು ಕುಟುಂಬಗಳನ್ನು ಸಾಲದ ಬಲೆಗೆ ಸಿಲುಕಿಸುತ್ತಿದೆ. ಅಭದ್ರತೆಗೆ ನೂಕುತ್ತಿದೆ. ಕಲ್ಯಾಣ ಯೋಜನೆಗಳು ಸರ್ಕಾರವೇ ಮಾಡಿರುವ ಈ ಹಾನಿಯನ್ನು ಸರಿಪಡಿಸುವ ಸಾಧನಗಳಾಗಿವೆ.
ನೀತಿಶ್ ಕುಮಾರ್ ಆಡಳಿತದಲ್ಲಿ ಬಿಹಾರದ ಅನುಭವವನ್ನು ಗಮನಿಸಿದರೆ, ಮದ್ಯಪಾನ ನಿಷೇಧ ಅಸಾಧ್ಯವಾದುದೇನಲ್ಲ. ಸವಾಲುಗಳ ನಡುವೆಯೂ ಸಹ ರಾಜಕೀಯ ನಿರ್ಧಾರವು ಸ್ಪಷ್ಟವಾಗಿದೆ. ಮಹಿಳೆಯರು ಈ ನೀತಿಯನ್ನು ಚುನಾವಣಾ ಬೆಂಬಲದ ಮೂಲಕ ಪುರಸ್ಕರಿಸಿದ್ದಾರೆ. ಇದು ಅವರ ನಿತ್ಯ ಬದುಕಿಗೆ ನೆಮ್ಮದಿಯನ್ನು ತಂದಿದೆ. ಗುಜರಾತ್ ಮತ್ತು ಕೇರಳ ಸಹ ಮದ್ಯಪಾನ ನಿಯಂತ್ರಣವನ್ನು ಸಾಧಿಸಿವೆ. ಈ ರಾಜ್ಯಗಳು ಆಡಳಿತ ಮತ್ತು ಹಣಕಾಸು ವೆಚ್ಚಗಳನ್ನು ಸಾರಾಯಿಯ ಆದಾಯವಿಲ್ಲದೇ ಸರಿದೂಗಿಸಬಹುದಾದರೆ, ಕರ್ನಾಟಕಕ್ಕೆ ಸಾಧ್ಯವಾಗುವುದಿಲ್ಲ ಎನ್ನಲು ಯಾವುದೇ ಸಕಾರಣಗಳಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಕಾರಣ.
ಪಾನ ನಿಷೇಧದ ವಿರೋಧಿಗಳು ಆದಾಯದ ನಷ್ಟ ಮತ್ತು ಅಕ್ರಮ ಮದ್ಯದ ಪ್ರಸ್ತಾಪ ಮಾಡುತ್ತಾರೆ. ಈ ಕಾಳಜಿಗಳು ನಿಜವಾದುದೇ ಆದರೂ ಅತಿರೇಕ ಎನಿಸುತ್ತದೆ. ಇಲ್ಲಿ ನಿಜವಾಗಿ ಲೆಕ್ಕ ಹಾಕಬೇಕಿರುವುದು ಸಾರಾಯಿಯ ಗುಪ್ತ ವೆಚ್ಚ. ಆರೋಗ್ಯದ ಹೊರೆ, ನಿತ್ಯ ಸಾವುಗಳು, ಅಪರಾಧಗಳು, ಕೌಟುಂಬಿಕ ಹಿಂಸೆ, ಕುಸಿದ ಉತ್ಪಾದಕೀಯತೆ ಮತ್ತು ತೀವ್ರ ಬಡತನ. ಈ ಅಂಶಗಳನ್ನು ಪರಿಗಣಿಸಿದಾಗ, ಸಾರಾಯಿ ನಿಷೇಧ ದುಬಾರಿ ವೆಚ್ಚ ಎನಿಸುವುದಿಲ್ಲ; ಬದಲಾಗಿ ಸಾಮಾಜಿಕ ಹೂಡಿಕೆಯಾಗಿ ಕಾಣುತ್ತದೆ. ಮೇಲಾಗಿ ರಾಜ್ಯವು ನಗದು ಗ್ಯಾರಂಟಿಗಳಿಗಾಗಿ ವರ್ಷಕ್ಕೆ ಒಂದು ಲಕ್ಷ ಕೋಟಿ ರೂ ಖರ್ಚು ಮಾಡುತ್ತಿರುವಾಗ ಅದರ ಹಣಕಾಸು ವ್ಯವಸ್ಥೆಯನ್ನು ಪುನಾರಚಿಸಿ, ಕುಟುಂಬಗಳ ವಿನಾಶದ ಮೂಲ ಕಾರಣವನ್ನು ತೊಡೆದುಹಾಕಲು ಪ್ರಯತ್ನಿಸಬಹುದು.
ಲೋಹಿಯಾ ಮತ್ತು ಗಾಂಧಿ ಸಾರಾಯಿ ನಿಷೇಧದ ವಿಚಾರದಲ್ಲಿ ದೃಢ ನಿರ್ಧಾರ ತಳೆದಿದ್ದರು. ಕಲ್ಯಾಣ ರಾಜ್ಯವೊಂದು ಸಾರಾಯಿ ಗೀಳು ನಂಬಿಕೊಂಡು ಲಾಭ ಗಳಿಸಲಾಗುವುದಿಲ್ಲ ಎಂದು ವಾದಿಸಿದ್ದರು. ತನ್ನ ಆಡಳಿತ ಯಂತ್ರವನ್ನು ನಿರ್ವಹಿಸಲು ಕುಡಿತ ವ್ಯಸನವನ್ನು ಪೆÇ್ರೀತ್ಸಾಹಿಸುವ ಸರ್ಕಾರವೊಂದು ತನ್ನ ನ್ಯಾಯೋಚಿತತೆಯನ್ನೇ ರಾಜಿಮಾಡಿಕೊಳ್ಳುತ್ತದೆ. ಒಂದು ಸಭ್ಯ ಸಮಾಜದಲ್ಲಿ ಯಾವ ನಂಬಿಕೆಯೂ ಸಾರಾಯಿ ಸೇವನೆಯನ್ನು ಅನುಮೋದಿಸುವುದಿಲ್ಲ, ಅರ್ಧದಷ್ಟು ಜನಸಂಖ್ಯೆ ಇರುವ ಮಹಿಳಾ ಸಮೂಹವು ನಿಷೇಧವನ್ನು ಆಗ್ರಹಿಸುತ್ತಿದ್ದಾರೆ, ಹಾಗಾಗಿ ಪ್ರಜಾಸತ್ತಾತ್ಮಕ ನೈತಿಕತೆ ಈ ದಿಕ್ಕಿನಲ್ಲಿ ಸಾಗುತ್ತದೆ.
ಕರ್ನಾಟಕ ಸರ್ಕಾರವು ಪಾನನಿಷೇಧವನ್ನು ಘೋಷಿಸಲು ಧೈರ್ಯ ತೋರಿ, ನಿರ್ವಹಿಸಲಾಗದ ಗ್ಯಾರಂಟಿಗಳನ್ನು ನಿಲ್ಲಿಸುವುದಾದರೆ ಅದರಿಂದ ಲಾಭವೇ ಹೊರತು ನಷ್ಟವಿಲ್ಲ. ಅದು ಇನ್ನೂ ಶಾಶ್ವತವಾದುದನ್ನು ಪಡೆದುಕೊಳ್ಳುತ್ತದೆ. ಸಾಮಾಜಿಕ ಸ್ಥಿರತೆ, ಆರೋಗ್ಯಕರ ಕುಟುಂಬಗಳು, ನೈತಿಕ ಅಧಿಕಾರವನ್ನು ಪಡೆಯುತ್ತದೆ. ಮದ್ಯಪಾನ ನಿಷೇಧ ಮುಖ್ಯವೇ ಹೊರತು ಜನಪ್ರಿಯ ಉಚಿತಗಳ ಕೊಡುಗೆ ಅಲ್ಲ, ಇದು ಉತ್ತಮ ಆಳ್ವಿಕೆಯ ವಿಶ್ವಾಸಾರ್ಹ ಗ್ಯಾರಂಟಿಯಾಗಿ ಪರಿಣಮಿಸುತ್ತದೆ. ರಾಜಕೀಯ ಅಸ್ತಿತ್ವದ ನೈತಿಕತೆಯನ್ನೂ ಉಳಿಸುತ್ತದೆ.
Comments
Post a Comment