ಮುಖ್ಯಮಂತ್ರಿಯಾಗಲು ಅಪೇಕ್ಷಿಸದೆ ಇರುವವರಾರು?

 ಕಾಂಗ್ರೆಸ್ ನಾಯಕತ್ವವು ಸಿದ್ದು-ಡಿಕೆಶಿ ನಡುವಿನ ಜಟಿಲ ಪ್ರಶ್ನೆಯನ್ನು ಶೀಘ್ರವಾಗಿ ಬಗೆಹರಿಸದೆ ಇದ್ದರೆ, ಸಿಎಂ ಹುದ್ದೆಯ ಸ್ಪರ್ಧೆಯಲ್ಲಿ ಹೆಚ್ಚಿನ ಸ್ಪರ್ಧಿಗಳು ಸೇರಿ ರಾಜ್ಯವು ರಾಜಕೀಯ ಕ್ರೀಡೆಯ ವಾತಾವರಣ ತಲುಪಿ, ಪ್ರತಿಯೊಬ್ಬರೂ ಮುಖ್ಯಮಂತ್ರಿ ಆಕಾಂಕ್ಷಿಯಾಗಿ ಕಾಣತೊಡಗುತ್ತಾರೆ


............


 

ಗೋಡಾ ಹೈ, ಮೈದಾನ್ ಭೀ ಹೈ * ಬಿವಿಸೀ


ಕರ್ನಾಟಕದ ಕಾಂಗ್ರೆಸ್ ಅಸಾಮಾನ್ಯವಾದ ರಾಜಕೀಯ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಮುಖ್ಯಮಂತ್ರಿಯ ಪದವಿಯನ್ನು ಪಡೆಯಲು ಅರ್ಹರಾಗಿರುವುದಾಗಿ ಭಾವಿಸುವ ಅನೇಕ ನಾಯಕರು ಸಾಲುಗಟ್ಟಿ ನಿಂತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಡುವೆ ಅಧಿಕಾರಕ್ಕಾಗಿ ಸಂಘರ್ಷದ ರೂಪದಲ್ಲಿ ಆರಂಭವಾದ ಬೆಳವಣಿಗೆಗಳು ಈಗ ಬಹು ಹಂತದ ಗಲಿಬಿಲಿಯಾಗಿದ್ದು, ಪ್ರತಿ ವಾರವೂ ಹೊಸ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಇಲ್ಲಿ ಪ್ರಶ್ನೆ ಇರುವುದು ಯಾರು ಮುಖ್ಯಮಂತ್ರಿಯಾಗಲು ಬಯಸುತ್ತಾರೆ ಯಾರು ಬಯಸುವುದಿಲ್ಲ ಎನ್ನುವುದಲ್ಲ. ಆದರೆ ಯಾರು ಮುಖ್ಯಮಂತ್ರಿಯಾಗಲು ಬಯಸುವುದಿಲ್ಲ ಎನ್ನುವುದೇ ಮುಖ್ಯ ಪ್ರಶ್ನೆಯಾಗಿಬಿಟ್ಟಿದೆ.

ಈ ಗುಂಪಿನೊಳಗೆ ತೀರ ಇತ್ತೀಚೆಗೆ ಪ್ರವೇಶಿಸಿರುವವರು ದಾವಣಗೆರೆಯ ಕ್ಷೇತ್ರದಿಂದ ಮೊದಲ ಸಲ ಸಂಸದರಾಗಿ ಆಯ್ಕೆಯಾಗಿರುವ ಪ್ರಭಾ ಮಲ್ಲಿಕಾರ್ಜುನ್. ಅವರ ಬೆಂಬಲಿಗರು ಅವರ ಹೆಸರನ್ನು ಪ್ರಸ್ತಾಪಿಸುತ್ತಿದ್ದು, ಅವರು ಶಾಸನ ಸಭೆಯ ಭಾಗವಾಗದಿದ್ದರೂ ಈ ಪ್ರಸ್ತಾವನೆ ಬಂದಿರುವುದು ಆಶ್ಚರ್ಯಕರ ಬೆಳವಣಿಗೆಯಾಗಿದೆ. ಆದರೆ ಅವರ ರಾಜಕೀಯ ತರಬೇತಿಯೇ ಆಕಾಂಕ್ಷೆಯ ಕಾರಣಗಳನ್ನೂ ಸೂಚಿಸುತ್ತದೆ. ಪ್ರಭಾ ಅವರ ಪತಿ ಮಲ್ಲಿಕಾರ್ಜುನ್ ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಪ್ರಭಾರ ಮಾವ ಶಾಮನೂರು ಶಿವಶಂಕರಪ್ಪ ದಾವಣಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಪ್ರಭಾವಶಾಲಿ ನಾಯಕರಾಗಿದ್ದಾರೆ. ದೀರ್ಘಕಾಲದಿಂದ ಶಾಸಕರಾಗಿದ್ದು, ರಾಜ್ಯ ಸಚಿವರೂ ಆಗಿದ್ದರು. ಒಂದು ಸಲ ಸಂಸದರಾಗಿ ಆಯ್ಕೆಯಾಗಿದ್ದರು. ಈ ಕುಟುಂಬದ ಕ್ರೋಢೀಕೃತ ರಾಜಕೀಯ ಬಂಡವಾಳ ಪ್ರಭಾ ಬೆಂಬಲಿಗರನ್ನು ಹುರಿದುಂಬಿಸಿದ್ದು, ಮುಖ್ಯಮಂತ್ರಿಯ ಪದವಿಯಲ್ಲಿ ಕೂರಿಸಬಹುದು ಎಂದು ಭ್ರಮಿಸಲಾಗುತ್ತಿದೆ. ಇದು ರಾಜಕೀಯ ನಾಯಕರ ಆಕಾಂಕ್ಷೆಗಳು ಹೇಗೆ ಹಿಗ್ಗುತ್ತಿವೆ ಎನ್ನುವುದನ್ನು ಸೂಚಿಸುತ್ತದೆ.

ಸಮಾನಾಂತರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಚಿವ ಸಂಪುಟದಲ್ಲಿ ಏಕೈಕ ಬ್ರಾಹ್ಮಣರಾಗಿದ್ದು, ಈ ಹುದ್ದೆಯಲ್ಲಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಒಂದು ಕಾಲದಲ್ಲಿ ನಂಬಲರ್ಹವಾದ ಸಿದ್ದರಾಮಯ್ಯನವರ ನಿಷ್ಠಾವಂತರೆಂದು ಗುರುತಿಸಲ್ಪಟ್ಟಿದ್ದ ದಿನೇಶ್ ಈಗ ಸಿದ್ದು ಮತ್ತು ಡಿಕೆಶಿ ಬಣಗಳ ನಡುವೆ ಬಿರುಕುಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿ ತಮ್ಮ ಅವಕಾಶವನ್ನು ಕುರಿತು ಯೋಚಿಸುತ್ತಿದ್ದಾರೆ. ಅವರ ಆಕಾಂಕ್ಷೆಯೇ ಗಂಭೀರ ಸತ್ಯವೊಂದನ್ನು ಬಿಂಬಿಸುತ್ತದೆ. ಪಕ್ಷದ ಆಂತರಿಕ ಶಿಸ್ತು ದುರ್ಬಲವಾಗಿದ್ದು, ವಿಶಾಲ ಸಮೂಹ ಬೆಂಬಲ ಇಲ್ಲದಿರುವವರೂ ಸಹ ಮುಖ್ಯಮಂತ್ರಿ ಹುದ್ದೆ ತಮ್ಮ ಕೈಗೆಟುಕುವಂತಿದೆ ಎಂದು ಭಾವಿಸುವಂತಾಗಿದೆ.

ಇದು  ಈ ಮುನ್ನ ಕಾಣುತ್ತಿದ್ದ ಆಕಾಂಕ್ಷಿಗಳ ಪಟ್ಟಿಗೆ ಸೇರ್ಪಡೆಯಾಗಿದ್ದು, ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲು ಯಾರೊಬ್ಬರೂ ತಮ್ಮ ಇಚ್ಛೆಯನ್ನು ಮುಚ್ಚಿಡುತ್ತಿಲ್ಲ. ಸತೀಶ್ ಜಾರಕಿಹೊಳಿ, ಎಚ್ ಸಿ ಮಹದೇವಪ್ಪ, ಜಿ ಪರಮೇಶ್ವರ (ಎಲ್ಲರೂ ಎಸ್ ಸಿ ವರ್ಗಕ್ಕೆ ಸೇರಿದವರು) ಅನೇಕ ಸಂದರ್ಭಗಳಲ್ಲಿ ತಮ್ಮನ್ನು ಸ್ಥಿರ ಸರ್ಕಾರದ ಪರ್ಯಾಯ ಕೇಂದ್ರ ಎಂದು ಪ್ರತಿಪಾದಿಸುತ್ತಿದ್ದಾರೆ. ಈ ಸನ್ನಿವೇಶದಲ್ಲಿ ಹಿಂದುಳಿಯಲು ಇಚ್ಛಿಸದ ಎಮ್ ಬಿ ಪಾಟೀಲ್ ಪ್ರಬಲ ಲಿಂಗಾಯತ ನಾಯಕರಾಗಿದ್ದು ಅಪಾರ ಆಸ್ತಿ ಪಾಸ್ತಿ ಹೊಂದಿರುವವರಾಗಿದ್ದಾರೆ. ಇವರ ವಾದ ಸರಳವಾಗಿದೆ. ಸಿದ್ದರಾಮಯ್ಯ ಕೆಳಗಿಳಿಯುವುದೇ ಆದರೆ, ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಲು ಅವಕಾಶ ನೀಡಕೂಡದು. ಪ್ರತಿಯೊಬ್ಬರೂ ಸಹ ತಾವು ಜಾತಿ ಸಂಯೋಗಕ್ಕೆ ಸೂಕ್ತ, ಆಡಳಿತಾತ್ಮಕ ದಾಖಲೆ ಹೊಂದಿರುವ, ಸೈದ್ಧಾಂತಿಕ ಸಂಯಮ ಇರುವ ನಾಯಕರಂತೆಯೇ ಬಿಂಬಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ನಿಜವಾದ ಸಮಸ್ಯೆ ಇರುವುದು ಆಕಾಂಕ್ಷಿಗಳ ಸಂಖ್ಯೆ ಅಲ್ಲ, ಹೈಕಮಾಂಡ್ ನಿರ್ಧಾರ ಕೈಗೊಳ್ಳುವಲ್ಲಿ ವಿಫಲವಾಗಿರುವುದರಿಂದ ಉಂಟಾಗಿರುವ ನಿರ್ವಾತ. ದೆಹಲಿಯಿಂದ ಅಧಿಕಾರಯುತವಾಗಿ ಮಧ್ಯಪ್ರವೇಶ ಮಾಡದೆ ಇರುವುದರಿಂದ, ಕರ್ನಾಟಕದ ಆಳುವ ಪಕ್ಷವನ್ನು ಅಗೋಚರ ಶಕ್ತಿಯೊಂದು ನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ಸಚಿವರೂ, ಬಣದ ನಾಯಕರೂ ಮತ್ತು ವಂಶವಾಹಿಯ ಪ್ರತಿನಿಧಿಗಳೂ ಪೀಠಾರೋಹಣದ ನಿಜವಾದ ಹಕ್ಕುದಾರರಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ಕಾಂಗ್ರೆಸ್ ನಾಯಕತ್ವವು ಸಿದ್ದು-ಡಿ ಕೆ ಶಿ ನಡುವಿನ ಜಟಿಲ ಪ್ರಶ್ನೆಯನ್ನು ಶೀಘ್ರವಾಗಿ ಬಗೆಹರಿಸದೆ ಇದ್ದರೆ, ಕರ್ನಾಟಕವು ಆಳ್ವಿಕೆಯ ಅಸ್ತವ್ಯಸ್ತ ಸನ್ನಿವೇಶಕ್ಕೆ ತುತ್ತಾಗುತ್ತದೆ. ಸ್ಪರ್ಧೆಯಲ್ಲಿ ಹೆಚ್ಚಿನ ಸ್ಪರ್ಧಿಗಳು ಸೇರಿದಷ್ಟೂ ರಾಜ್ಯವು ರಾಜಕೀಯ ಕ್ರೀಡೆಯ ವಾತಾವರಣ ತಲುಪಿ, ಪ್ರತಿಯೊಬ್ಬರೂ ಮುಖ್ಯಮಂತ್ರಿ ಆಕಾಂಕ್ಷಿಯಾಗಿ ಕಾಣತೊಡಗುತ್ತಾರೆ. ಪ್ರತಿಯೊಂದು ಅತಿ ಆಕಾಂಕ್ಷೆಯೂ ಸರ್ಕಾರದ ಸ್ಥಿರತೆ, ವಿಶ್ವಾಸಾರ್ಹತೆ ಮತ್ತು ಆಡಳಿತ ಸಾಮಥ್ರ್ಯವನ್ನು ಹಾನಿಗೊಳಪಡಿಸುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again