ದುಬಾರಿ ಗಿಫ್ಟ್, ಡಿಸಿಎಂ ಮೌನ ಮತ್ತು ತಪ್ಪು ಸಂದೇಶ
ಅಧಿಕಾರವು ಕಳಂಕಿತರನ್ನು ಪೆÇ್ರೀತ್ಸಾಹಿಸುತ್ತಿರುವುದು ಸತೀಶ್ ಸೈಲ್ ಪ್ರಕರಣದಲ್ಲಿ ಸ್ಪಷ್ಟವಾಗಿದೆ. ಲಜ್ಜೆಗೆಟ್ಟ ಶಾಸಕ ತನ್ನ ಸಂಪತ್ತಿನಿಂದ ಎಲ್ಲವನ್ನೂ ಕೊಳ್ಳಬಹುದು ಎಂದುಕೊಳ್ಳುವುದು ಪ್ರಜಾಪ್ರಭುತ್ವದ ಅಣಕ.
ಇದ್ದುದು ಇದ್ದ ಹಾಗೆ * ಬಿವಿಸೀ
ಕಾರವಾರದ ಸತೀಶ್ ಸೈಲ್ ಪ್ರಕರಣವು ಕಾಂಗ್ರೆಸ್ ಪಕ್ಷಕ್ಕೆ ಉಂಟುಮಾಡಿರುವ ಮುಜುಗರ ಬೇಗನೇ ಮಾಸುವುದಲ್ಲ. ಸಾರ್ವಜನಿಕರ ನಡುವೆ ಆ ಒಂದು ಗಳಿಗೆಯೇ, ಭಿನ್ನ ಆಡಳಿತ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ದಾರಿ ತಪ್ಪುತ್ತಿರುವುದನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ.
ಅಕ್ರಮ ಆಸ್ತಿ ಮತ್ತು ಆದಾಯ ಮೀರಿದ ಸಂಪತ್ತು ಹೊಂದಿರುವ ಪ್ರಕರಣದಲ್ಲಿ ಸಿಲುಕಿದ್ದು, ಇ ಡಿ ಮತ್ತು ಸಿಬಿಐ ತನಿಖೆಗೂ ಒಳಗಾಗಿರುವ, ಹಲವು ಬಾರಿ ಜೈಲು ವಾಸ ಕಂಡಿರುವ ಆಡಳಿತಾರೂಢ ಪಕ್ಷದ ಕಾರವಾರದ ಶಾಸಕ ಸತೀಶ ಸೈಲ್ ಈಗ ಉಪಮುಖ್ಯಮಂತ್ರಿಗೆ 16 ಲಕ್ಷ ರೂ ಮೌಲ್ಯದ ಉಡುಗೊರೆಯನ್ನು ಕೊಟ್ಟಿರುವುದು ಮತ್ತು ಹೀಗೆ ಸಾರ್ವಜನಿಕವಾಗಿ ಕೊಡುವಾಗ ತನಗೆ ನೀಡಿದ ಭರವಸೆಯನ್ನು ಈಡೇರಿಸಲು ಕೋರಿರುವುದು ಅಚ್ಚರಿದಾಯಕವಾಗಿದೆ. ಈ ಮಾತುಗಳನ್ನು ಪಿಸುಮಾತಿನಲ್ಲಿ, ಕಚೇರಿಯ ಒಳಗೆ ಹೇಳಿಲ್ಲ, ಬದಲಾಗಿ ಸಾರ್ವಜನಿಕ ವೇದಿಕೆಯಲ್ಲಿ ಹೇಳಲಾಗಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿದ್ದು ಈ ಉಡುಗೊರೆಯನ್ನು ತಿರಸ್ಕರಿಸಲೂ ಇಲ್ಲ ಅಥವಾ ತಮಗೆ ಲಂಚ ನೀಡಲಾಗುತ್ತಿದೆ ಎಂದು ಶಾಸಕರನ್ನು ಖಂಡಿಸಲೂ ಮುಂದಾಗಿಲ್ಲ. ಮೌನವಾಗಿ ಸ್ವೀಕರಿಸಿದ್ದಾರೆ.
ರಾಜಕಾರಣದಲ್ಲಿ ಮೌನ ಎಂದಿಗೂ ಅಮಾಯಕತನದ ಲಕ್ಷಣವಾಗುವುದಿಲ್ಲ, ಇನ್ನೂ ಹೆಚ್ಚಿನದನ್ನು ಸೂಚಿಸುತ್ತದೆ.
ಇಲ್ಲಿ ಉದ್ಭವಿಸುವ ಮೊದಲನೆಯ ಪ್ರಶ್ನೆ ಎಂದರೆ, ಅಧಿಕಾರದಲ್ಲಿರುವ ರಾಜಕಾರಣಿಯೊಬ್ಬರು ತಮ್ಮ ಸಹವರ್ತಿಗಳಿಂದ ದುಬಾರಿ ಉಡುಗೊರೆಯನ್ನು ಏಕೆ ಸ್ವೀಕರಿಸಬೇಕು? ಅವರು ಕಳಂಕಿತರಾಗಿರುವುದು ಅಥವಾ ಬೇಲ್ ಮೇಲೆ ಜೈಲಿನಿಂದ ಹೊರಗಿರುವುದು ಅಪ್ರಸ್ತುತವೇನಲ್ಲ. ಅಧಿಕಾರ ಎನ್ನುವುದು ಖಾಸಗಿ ಅನುಕೂಲಗಳನ್ನು ಮಾಡಿಕೊಡಲು ಇರುವುದಿಲ್ಲ, ಒಪ್ಪಂದಗಳ ಮೂಲಕ ನಡೆಸಲಾಗುವುದಿಲ್ಲ. ಇದು ಸಾರ್ವಜನಿಕ ವಿಶ್ವಾಸದ ಪ್ರಶ್ನೆ. ಉಡುಗೊರೆಗಳನ್ನು ಸಾರ್ವಜನಿಕವಾಗಿ ನೀಡಿ, ತಮ್ಮ ನಿರೀಕ್ಷೆಗಳನ್ನು ಬಹಿರಂಗವಾಗಿ ಹೇಳಿದಾಗ, ಆಳ್ವಿಕೆಯು ವ್ಯಾವಹಾರಿಕವಾಗುತ್ತದೆಯೇ ಹೊರತು ಜವಾಬ್ದಾರಿ ಆಗುವುದಿಲ್ಲ.
ಕಾರವಾರದ ಮತ್ತು ಕರ್ನಾಟಕದ ಜನತೆಗೆ ಆಕ್ರೋಶ ಉಂಟಾಗಿರುವುದು ಕೇವಲ ಉಡುಗೊರೆಯ ಕಾರಣಕ್ಕಾಗಿ ಅಲ್ಲ. ಇದರ ಹಿಂದಿರುವ ಉದ್ದಟ ವರ್ತನೆಗಾಗಿ. ಸತೀಶ್ ಸೈಲ್ ಅವರ ವರ್ತನೆಯನ್ನು ನೋಡಿದರೆ ಅಧಿಕಾರದಲ್ಲಿರುವವರಿಗೆ ನಿಕಟವಾಗಿದ್ದರೆ, ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಭಾವನೆ ಅವರಲ್ಲಿರುವುದು ಸ್ಪಷ್ಟವಾಗುತ್ತದೆ. ಈ ವಿಶ್ವಾಸ ರಾತ್ರೋರಾತ್ರಿ ಮೂಡಿರುವುದಲ್ಲ. ಪ್ರಾಮಾಣಿಕತೆಗಿಂತಲೂ ನಿಷ್ಠೆಗೆ ಹೆಚ್ಚು ಬೆಲೆ ನೀಡುವ ರಾಜಕೀಯ ಪರಂಪರೆಯನ್ನು ಬಹಳ ಎಚ್ಚರಿಕೆಯಿಂದ ಪೆÇೀಷಿಸಲಾಗಿರುವುದು ಕಾರಣ.
ಈ ದೃಷ್ಟಿಯಿಂದಲೇ ವಿಶಾಲ ನೆಲೆಯಲ್ಲಿ ಇಂತಹ ಮಾದರಿಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಸೈಲ್ ತಮ್ಮ ಕಾನೂನು ಸಿಕ್ಕುಗಳ ನಡುವೆಯೂ ಜಿಲ್ಲಾ ರೈತರ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಮತ್ತು ರಾಜ್ಯ ಜಾಹಿರಾತು ಹಾಗೂ ಮಾರ್ಕೆಟಿಂಗ್ ಸಂಸ್ಥೆಯ ಅಧ್ಯಕ್ಷರಾಗಿ ನೇಮಿಸಲ್ಪಟ್ಟರು. ಎಸ್‍ಸಿ, ಎಸ್‍ಟಿಗಳ ಉನ್ನತಿಗಾಗಿ ಇರುವ ವಾಲ್ಮೀಕಿ ಸಹಕಾರಿ ನಿಗಮದಲ್ಲಿ ಕೋಟ್ಯಂತರ ರೂ ಲಪಟಾಯಿಸಿದ ಬಳ್ಳಾರಿಯ ನಾಗೇಂದ್ರ ಅವರನ್ನು ಮೊದಲು ಸಚಿವರನ್ನಾಗಿ ನೇಮಿಸಲಾಯಿತು, ಒಮ್ಮೆ ಬೇಲ್ ದೊರೆತರೆ ಅವರಿಗೆ ರಾಜಕೀಯ ಪುನರುಜ್ಜೀವನ ಖಚಿತ ಎಂದೂ ಹೇಳಲಾಗುತ್ತಿದೆ. ಅಶಿಸ್ತು ಮತ್ತು ಸಹಕಾರಿ ಒಕ್ಕೂಟದಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಿದ ರಾಜಣ್ಣ ಅವರು ಈಗಲೂ ಮುಖ್ಯಮಂತ್ರಿಗಳ ಕೃಪೆಯನ್ನು ಹೊಂದಿದ್ದು, ಸಂಪುಟಕ್ಕೆ ಹಿಂತಿರುವ ಸಾಧ್ಯತೆಗಳು ನಿಚ್ಚಳವಾಗಿವೆ.
ಇವೆಲ್ಲವೂ ಅಪವಾದಗಳಲ್ಲ, ಸೂಚನೆಗಳು.
ಕಾಂಗ್ರೆಸ್ ಪಕ್ಷವು ಬಿಜೆಪಿ ಆಳ್ವಿಕೆಯಲ್ಲಿದ್ದ ಭ್ರಷ್ಟಾಚಾರವನ್ನು ಬಯಲು ಮಾಡುತ್ತಲೇ ಅಧಿಕಾರಕ್ಕೆ ಬಂದಿತ್ತು. ಇದು ಕೇವಲ ಮತಗಳಿಕೆಯಲ್ಲ. ನೈತಿಕವಾಗಿ ಇನ್ನೂ ಬಲವಾದ ಗಳಿಕೆ. ಇಂದು ಈ ಲಾಭವನ್ನು ಕೈಚೆಲ್ಲಲಾಗುತ್ತಿದೆ. ಹಗರಣಗಳ ಆರೋಪಗಳು ನಿರಂತರವಾಗಿ ಕೇಳಿಬರುತ್ತಿವೆ. ಆದರೂ ಆಡಳಿತಾರೂಢ ಪಕ್ಷವು ಯಾವುದೇ ವಿವರಣೆ ನೀಡುವುದಿಲ್ಲ, ಉತ್ತರದಾಯಿತ್ವದ ಬಗ್ಗೆ ಮಾತನಾಡುವುದಿಲ್ಲ. ಆಳುವ ಪಕ್ಷ ಬದಲಾಗಿದ್ದರೂ ಅಧಿಕಾರದಲ್ಲಿರುವವರ ವರ್ತನೆಯೇನೂ ಬದಲಾಗಿಲ್ಲ. ಹಳೆಯ ಹೆಂಡವೇ, ಹಳೆಯ ಇನ್ನೊಂದು ಬಾಟಲಿಯಲ್ಲಿ!
ಆಳುವ ಪಕ್ಷದ ಒಳಗೆ ಇದು ರಾಜಕೀಯವಾಗಿ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿನ್ನಡೆಯಾಗಿರುವುದು ಮತ್ತು ಕಾಂಗ್ರೆಸ್ 2028ರಿಂದಾಚೆಗೆ ಉಳಿಯುವುದಿಲ್ಲ ಎಂಬ ಭಾವನೆ ದಟ್ಟವಾಗಿರುವುದರ ಹಿನ್ನೆಲೆಯಲ್ಲಿ ಆಳ್ವಿಕೆಯು ದೀರ್ಘಕಾಲಿಕ ವಿಶ್ವಾಸಾರ್ಹತೆಗಿಂತಲೂ ಹೆಚ್ಚಾಗಿ ಅಲ್ಪಕಾಲಿಕ ಲಾಭವನ್ನು ಬಾಚಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿರುವುದು ನಿಚ್ಚಳವಾಗುತ್ತಿದೆ. ನಾಯಕರು ಪ್ರಭಾವಗಳನ್ನು ಬಳಸುವುದರಲ್ಲಿ, ಸ್ಥಾನ ಗಳಿಸುವುದರಲ್ಲಿ, ಪಕ್ಷ ಕುಸಿಯುವ ಮುನ್ನ ಅನುಕೂಲಗಳನ್ನು ಪಡೆಯುವಲ್ಲಿ ತೋರುತ್ತಿರುವ ಅವಸರ ಇದನ್ನೇ ಸೂಚಿಸುತ್ತದೆ.
ಈ ಮಾತುಗಳು ಕಠೋರ ಎನಿಸಬಹುದು. ಆದರೆ ಇದು ತಳಮಟ್ಟದಲ್ಲಿರುವ ಮನಸ್ಥಿತಿಯನ್ನು ಸೂಚಿಸುತ್ತದೆ. ಅಧಿಕಾರದಲ್ಲಿರುವ ಯಾರೂ ಭ್ರಷ್ಟಾಚಾರಗಳಿಗೆ ಜವಾಬ್ದಾರಿ ಹೊರದಿದ್ದಾಗ, ಕಳಂಕಗಳಿಗೆ ಯಾವುದೇ ಪರಿಣಾಮ ಆಗದಿದ್ದಾಗ, ನಾಚಿಕೆಯ ಬದಲು ಮೌನವೆ ಎದ್ದುಕಾಣುವಾಗ ಸಾರ್ವಜನಿಕರ ವಿಶ್ವಾಸ ಬೇಗನೆ ಕುಂದಿಹೋಗುತ್ತದೆ.
ಸತೀಶ್ ಸೈಲ್ ಪ್ರಸಂಗ ಒಬ್ಬ ಶಾಸಕರ ಅಥವಾ ಒಂದು ಉಡುಗೊರೆಯ ಪ್ರಶ್ನೆಯಲ್ಲ. ಇದು ಸರ್ಕಾರ ಮತ್ತು ಅಧಿಕಾರ ಕೇಂದ್ರಗಳು ಲಜ್ಜೆಯೇ ಇಲ್ಲದೆ, ಯಾವುದಕ್ಕೂ ಲೆಕ್ಕಿಸದೆ ವರ್ತಿಸಿದಾಗ ಮತದಾರರು ಇದಕ್ಕೆ ತಕ್ಕ ಉತ್ತರ ನೀಡುವುದು ಅನಿವಾರ್ಯವಾಗುತ್ತದೆ.
Comments
Post a Comment