ಬಿಜೆಪಿ-ಜೆಡಿಎಸ್ ಮೈತ್ರಿ ಸಮೀಕರಣ ಧ್ರತಿಗೊಳಿಸಿದ ದೇವೇಗೌಡ

 ದೇವೇಗೌಡರ ಒಂದು ಲಕ್ಷಣವನ್ನು ಮೊದಲಿನಿಂದಲೂ ಗುರುತಿಸಬಹುದು. ಅದು ಏನೆಂದರೆ, ಸ್ಥಾಪಿತವಾಗಿರುವ ರಾಜಕೀಯ ಚಿತ್ರಣವನ್ನು ಒಂದೇ ಏಟಿನಲ್ಲಿ, ಸಕಾಲದಲ್ಲಿ ಪ್ರಕ್ಷುಬ್ಧಗೊಳಿಸುವುದು. ಅವರ ಜೆಡಿಎಸ್ ಪಕ್ಷವು ಬಿಜೆಪಿಯೊಡನೆ ಶಾಶ್ವತವಾದ ಮತ್ತು ಬೇರ್ಪಡಿಸಲಾಗದ ಮೈತ್ರಿಯನ್ನು ಸಾಧಿಸಿದೆ ಎಂಬ ಅಭಿಪ್ರಾಯವು ರಾಜಕೀಯ ವಲಯದಲ್ಲಿ ಗಟ್ಟಿಯಾಗಿರುವ ಹೊತ್ತಿನಲ್ಲೇ, ಪಕ್ಷದ ಧುರೀಣ ಮತ್ತು ಸಂಸ್ಥಾಪಕ ದೇವೇಗೌಡರು ಅನುಮಾನಗಳನ್ನು ಸೃಷ್ಟಿಸಿದ್ದಾರೆ. ಇದು ಹಲವು ರೀತಿಯ ಅಹಿತಕರ ಬೆಳವಣಿಗೆಗಳಿಗೆ ಕಾರಣವಾಗಲಿದೆ. ಬಿಜೆಪಿಯು ಮುಂದಿನ ತನ್ನ ಕಾರ್ಯತಂತ್ರದ ಬಗ್ಗೆ ಯೋಚಿಸುವಂತಾಗಿದೆ. ಕರ್ನಾಟಕದ ರಾಜಕಾರಣದಲ್ಲಿ ಇದೇ  ಒಂದು ಸಾಧನೆಯಾಗಿ ಕಾಣುತ್ತದೆ!

ಹಲವು ವರ್ಷಗಳಿಂದ ಬಿಜೆಪಿಯ ಬಾಲಂಗೋಚಿಯಂತೆ ಅಥವಾ ವಿಸ್ತರಣೆಯಂತೆ ಜೆಡಿಎಸ್ ವರ್ತಿಸುತ್ತಾ ಬಂದಿದೆ. ಪ್ರತಿಯೊಂದು ವಿಷಯದಲ್ಲೂ ಸಹ ಮೋದಿ ಸರ್ಕಾರವನ್ನು ಬೆಂಬಲಿಸುವುದೇ ಅಲ್ಲದೆ ಸಂಸತ್ತಿನಲ್ಲೂ ಸಹ ಕೇಸರಿ ಪಕ್ಷಕ್ಕೆ ಒತ್ತಾಸೆಯಾಗಿ ನಿಂತಿದೆ.  ಎಚ್ ಡಿ ಕುಮಾರಸ್ವಾಮಿ ಅವರನ್ನು ಕೇಂದ್ರ ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿದ್ದು, ಜೆಡಿಎಸ್ ಪಕ್ಷವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಎಂಬ ಅಭಿಪ್ರಾಯ ತಪ್ಪೇನಲ್ಲ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷ ಕ್ರಮೇಣ ಬಿಜೆಪಿಯಲ್ಲಿ ಲೀನವಾಗಲಿದೆ ಎಂಬ ರಾಜಕೀಯ ವಿಶ್ಲೇಷಕರ ಅಭಿಪ್ರಾಯವೂ ಮೂಡಿತ್ತು. ಈ ಪಕ್ಷವು ಶಾಶ್ವತವಾಗಿ ಬಿಜೆಪಿಯೊಡನೆ ಮೈತ್ರಿ ಹೊಂದಿರುತ್ತದೆ ಎಂಬ ಸಾರ್ವಜನಿಕ ಅಭಿಪ್ರಾಯವೂ ದಟ್ಟವಾಗತೊಡಗಿತ್ತು. ಈ ನಿಟ್ಟಿನಲ್ಲಿ ದೇವೇಗೌಡರೇ ಬಿಜೆಪಿ ಪರ ಪ್ರಖರ ದನಿಯಾಗಿದ್ದರು.

ಈಗ ದೇವೇಗೌಡರ ಘೋಷಣೆ ಎಲ್ಲರನ್ನೂ ವಿಚಲಿತಗೊಳಿಸಿದೆ. ಜೆಡಿಎಸ್ ಮುಂಬರುವ ಸ್ಥಳೀಯ ಚುನಾವಣೆಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂಬ ಅಧಿಕೃತ ಘೋಷಣೆ ರಾಜಕೀಯ ಕಂಪನ ಸೃಷ್ಟಿಸಿದೆ. ಇದು ವಿಧಾನಸಭಾ ಚುನಾವಣೆಗಳಿಗೂ ವಿಸ್ತರಿಸುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಸಹಜವಾಗಿಯೇ ಕರ್ನಾಟಕದ ಬಿಜೆಪಿ ನಾಯಕರು ಜೆಡಿಎಸ್‍ನೊಡನೆ ಸಹಕಾರ ಮುಂದುವರೆಯುವ ಆಶ್ವಾಸನೆ ನೀಡಲಾರಂಭಿಸಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಇದನ್ನು ಹೈಕಮಾಂಡ್ ಹೆಗಲಿಗೆ ಹೊರಿಸಿದ್ದಾರೆ. ಈ ನಿರ್ಣಯವೇ ರಾಜ್ಯದ ಮೈತ್ರಿಯ ನಿಯಂತ್ರಣ ಹೈಕಮಾಂಡ್ ಬಳಿ ಇದೆ ಎನ್ನುವುದನ್ನು ನಿರೂಪಿಸಿದೆ. ರಾಜ್ಯದಲ್ಲಿ ಅನಿಶ್ಚಿತತೆ ಮೂಡಿಸುವ ಮೂಲಕ ಬಿಜೆಪಿಯನ್ನು ಹೈಕಮಾಂಡ್ ಕಡೆಗೆ ನೋಡುವಂತೆ ಮಾಡುವ ದೇವೇಗೌಡರ ತಂತ್ರ ಫಲಿಸಿದೆ.

ದೇವೇಗೌಡರ ಈ ವರ್ತನೆ ವ್ಯಾವಹಾರಿಕ ಲಕ್ಷಣಗಳನ್ನು ಹೊಂದಿವೆ. ತತ್ವ ಸಿದ್ದಾಂತಗಳಿಗಿಂತಲೂ ಹೆಚ್ಚಾಗಿ ಮೈತ್ರಿಯ ಮಾತುಕತೆಗಳ ಚೌಕಾಸಿಯ ಕಡೆ ಗೌಡರ ಗಮನ ಇರುವುದು ಸ್ಪಷ್ಟವಾಗುತ್ತದೆ. ಇದರಲ್ಲಿ ಬಹಳ ಪ್ರಧಾನವಾಗಿ ಕಾಣುವುದು ತಮ್ಮ ಪುತ್ರ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವುದು. ಈ ನಿಟ್ಟಿನಲ್ಲಿ ಮೋದಿ-ಶಾ ಜೋಡಿಯನ್ನು ಒಪ್ಪಿಸುವುದು. ಆದರೆ ಇದು ಸಾಧ್ಯವಾದರೆ, ರಾಜ್ಯ ಬಿಜೆಪಿ ತನ್ನ ಸ್ಥಾನವನ್ನು ವಂಶಾಡಳಿತವನ್ನು ಪ್ರತಿನಿಧಿಸುವ ಪ್ರಾದೇಶಿಕ ಪಕ್ಷಕ್ಕೆ ಬಿಟ್ಟುಕೊಟ್ಟಂತೆ ಆಗುತ್ತದೆ. ಇಲ್ಲಿ ರಾಜಕೀಯ ಅಸ್ಮಿತೆಯ ಪ್ರಶ್ನೆಯೂ ಇದೆ. ಬಿಜೆಪಿಯಲ್ಲಿ ವಿಲೀನವಾದರೆ ದೇವೇಗೌಡರ ಕುಟಂಬದ ವಿಶಿಷ್ಟ ಸ್ಥಾನ  ಮತ್ತು ಅಸ್ತಿತ್ವ ನಿರ್ನಾಮವಾದಂತೆಯೇ ಸರಿ. ಸದ್ಯಕ್ಕೆ ದೇವೇಗೌಡರ ನಡೆ ಕೇವಲ ಒತ್ತಡದ ತಂತ್ರವಾಗಿ ಕಾಣುತ್ತಿದೆ. ಜೆಡಿಎಸ್ ಪಕ್ಷವನ್ನು ಸಾಧಾರಣವಾಗಿ ಪರಿಗಣಿಸಲಾಗುವುದಿಲ್ಲ ಎಂಬ ಸಂದೇಶವನ್ನಂತೂ ಗೌಡರು ಎಲ್ಲ ಪಕ್ಷಗಳಿಗೂ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುವುದೋ ಕಾದು ನೋಡಬೇಕಿದೆ. ಗೌಡರ ನಡೆಯ ಮೇಲೆ ಇಡೀ ರಾಜ್ಯದ ಗಮನವಂತೂ ಶತಃಸಿದ್ಧ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again