ಸರ್ಕಾರಕ್ಕೆ ಕರ್ನಾಟಕದ ಎಚ್ಚರಿಕೆ - ಆಳ್ವಿಕೆ ನಡೆಸಿ ಇಲ್ಲವೇ ನಿರ್ಗಮಿಸಿ
ಕೇವಿಯಟ್ * ಬಿವಿಸೀ
ಕರ್ನಾಟಕದ ಸ್ವಯಮಾಡಳಿತ ಸಂಸ್ಥೆಗಳಿಗೆ ಇತ್ತೀಚೆಗೆ ನಡೆದ ಉಪಚುನಾವಣೆಗಳ ಫಲಿತಾಂಶಗಳು ಸಾಧಾರಣ ಚುನಾವಣಾ ಅಂಕಿ ಅಂಶಗಳು ಎಂದು ನಿರ್ಲಕ್ಷಿಸಲಾಗುವುದಿಲ್ಲ. ಇಲ್ಲಿ ಸ್ಪಷ್ಟವಾದ, ನೇರವಾದ ಮತ್ತು ತುರ್ತು ರಾಜಕೀಯ ಸಂದೇಶ ಇದೆ. ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲು, ವಿಶೇಷವಾಗಿ ಬಜ್ಪೆ, ಕಿನ್ನಿಗೊಳಿ ಮತ್ತು ಮಂಕಿಯ ಪಟ್ಟಣ ಪಂಚಾಯತ್ ಫಲಿತಾಂಶಗಳು ಹಾಗೂ ರಾಜ್ಯದ ಇತರೆಡೆಗಳಲ್ಲಿ ಬಂದಿರುವ ಫಲಿತಾಂಶಗಳು ಆಳವಾದ ಸಮಸ್ಯೆಯನ್ನು ತೋರುತ್ತವೆ. ಮತದಾರರು ತಮ್ಮ ಅಸಮಾಧಾನವನ್ನಷ್ಟೇ ದಾಖಲಿಸುತ್ತಿಲ್ಲ, ಎಚ್ಚರಿಕೆ ನೀಡುತ್ತಿದ್ದಾರೆ. ಕಾರ್ಯಕರ್ತರನ್ನು ಆಧರಿಸಿದ ಬಿಜೆಪಿ ಇದನ್ನು ಗಮನಿಸುತ್ತಿದ್ದು, ಈ ಉಪಚುನಾವಣೆಗಳ ಫಲಿತಾಂಶದ ಲಾಭ ಪಡೆಯಲು ಹವಣಿಸುತ್ತಿದೆ
ಸ್ಥಳೀಯ ಸಂಸ್ಥೆಯ ಚುನಾವಣೆಗಳು, ಉಪನಗರಗಳಲ್ಲಿ ಮತ್ತು ನಗರೀಕರಣಕ್ಕೊಳಗಾಗಿರುವ ಪ್ರದೇಶಗಳಲ್ಲಿ ತಳಮಟ್ಟದ ಆಳ್ವಿಕೆಯ ವಾಸ್ತವಗಳನ್ನು ಬಿಂಬಿಸುವುದೇ ಅಲ್ಲದೆ, ವಿಧಾನಸಭಾ ಚುನಾವಣೆಗಳಿಗಿಂತಲೂ ಸ್ಪಷ್ಟ ಸಂದೇಶ ನೀಡುತ್ತವೆ. ಈ ದೃಷ್ಟಿಯಿಂದ ನೋಡಿದಾಗ, ಫಲಿತಾಂಶಗಳು ಸಿದ್ದರಾಮಯ್ಯ ಸರ್ಕಾರಕ್ಕೆ ಸಮಸ್ಯಾತ್ಮಕವಾಗಲಿದೆ. ಕಾಂಗ್ರೆಸ್ ಸೋತಿರುವುದು ಬಿಜೆಪಿಯ ಪುನರುತ್ಥಾನದ ಕಾರಣದಿಂದ ಅಲ್ಲ, ಬದಲಾಗಿ ಆಳುವ ಪಕ್ಷವು ತನ್ನ ಆಡಳಿತ ಪರಿಣಾಮಕಾರಿಯಾಗಿರದ ಕಾರಣಕ್ಕೆ.
ಕಾಂಗ್ರೆಸ್ ಪಕ್ಷದೊಳಗಿನ ಗುಂಪುಗಾರಿಕೆ, ಮುಖ್ಯಮಂತ್ರಿಗಳ ಬಣ ಮತ್ತು ಉಪಮುಖ್ಯಮಂತ್ರಿಯ ಬಣದ ಒಳಜಗಳಗಳು ಆಡಳಿತವನ್ನು ದುರ್ಬಲಗೊಳಿಸಿದೆ. ಆಂತರಿಕ ಅಧಿಕಾರ ಸಮೀಕರಣದಲ್ಲೇ ಮುಳುಗಿರುವ ಸರ್ಕಾರವು ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಿಕೊಂಡಿಲ್ಲ. ಹಾಗೆಯೇ ಸರ್ಕಾರ ಕೇವಲ ಘೋಷಣೆಗಳಲ್ಲಿ, ರಾಜಕೀಯ ಸಂದೇಶಗಳಲ್ಲೇ ಹೆಚ್ಚು ಆಸಕ್ತಿ ಹೊಂದಿದೆಯೇ ಹೊರತು ದಿನನಿತ್ಯದ ಆಡಳಿತದಲ್ಲಿ ಅಲ್ಲ ಎಂಬ ಭಾವನೆ ಸಾರ್ವಜನಿಕರಲ್ಲಿ ದಟ್ಟವಾಗಿದೆ.
ಅತಿ ಹೆಚ್ಚು ಪ್ರಚಾರಕ್ಕೊಳಗಾಗಿರುವ ಗ್ಯಾರಂಟಿ ಯೋಜನೆಗಳನ್ನು ಸಾಮಾಜಿಕ ನ್ಯಾಯದ ಅಸ್ತ್ರಗಳೆಂದು ಬಿಂಬಿಸಲಾಗಿದ್ದರೂ, ಇದು ಸರ್ಕಾರವನ್ನು ಮತದಾರರ ಆಕ್ರೋಶದಿಂದ ಮುಕ್ತವಾಗಿಸಿಲ್ಲ. ವ್ಯತಿರಿಕ್ತವಾಗಿ, ಇದು ಸರಕಾರದ ಹಣಕಾಸು ಬಿಕ್ಕಟ್ಟಿಗೆ ಕಾರಣವಾಗಿದ್ದು, ಸಾಮಾನ್ಯ ಆಳ್ವಿಕೆಗೆ ಕಂಟಕಪ್ರಾಯವಾಗಿದೆ. ಸರ್ಕಾರಿ ಸಿಬ್ಬಂದಿಗಳಿಗೆ ವೇತನ ಪಾವತಿಯ ವಿಳಂಬ, ಹದಗೆಟ್ಟ ರಸ್ತೆಗಳು, ರೋಗಿಗಳಿಂದ ತುಂಬಿ ತುಳುಕುತ್ತಿರುವ ಆಸ್ಪತ್ರೆಗಳು, ನಿರ್ಲಕ್ಷಿತ ಶೈಕ್ಷಣಿಕ ಸಂಸ್ಥೆಗಳು ಮತ್ತು ಆಡಳಿತದ ನಿರ್ವಹಣೆಗಾಗಿ ಉತ್ತರದಾಯಿತ್ವ ಹೊಂದಿರುವ ಶಾಶ್ವತ ನೌಕರರ ಬದಲು ಹೊರಗುತ್ತಿಗೆ ನೌಕರರನ್ನು ಅವಲಂಬಿಸಿರುವುದು ಆಡಳಿತದ ದಿಕ್ಕು ತಪ್ಪಿಸಿದೆ.
ಮತದಾರರು ಸ್ಪಷ್ಟವಾದ ಸಂದೇಶವನ್ನು ಕಳುಹಿಸುತ್ತಿದ್ದಾರೆ. ಕಲ್ಯಾಣ ಯೋಜನೆಯ ಭರವಸೆಗಳು ಆಳ್ವಿಕೆಯ ಸ್ಥಾನವನ್ನು ವಹಿಸಿಕೊಳ್ಳುವುದಿಲ್ಲ. ಜನರು ನಿಗದಿತ ಗುರಿ ಇರುವ ನೆರವನ್ನು ಬೆಂಬಲಿಸುತ್ತಾರೆ; ಆದರೆ ಆಡಳಿತದ ನಿಷ್ಕ್ರಿಯತೆಯ ಮೂಲಕ ಅಲ್ಲ. ಗ್ಯಾರಂಟಿಗಳೇ ರಾಜಕೀಯ ನ್ಯಾಯೋಚಿತತೆಯನ್ನು ಕಾಪಾಡುತ್ತದೆ ಎಂಬ ವಾದ ತಪ್ಪು ಎನ್ನುವುದು ಮನದಟ್ಟಾಗುತ್ತಿದೆ.
ವಿಡಂಬನೆ ಎಂದರೆ ಬಿಜೆಪಿಯ ಇದೇ ರೀತಿಯ ದುಸ್ಸಾಹಸ, ದುರಾಡಳಿತವೇ ಕಾಂಗ್ರೆಸ್ ಮರಳಿ ಅಧಿಕಾರಕ್ಕೆ ಬರಲು ಕಾರಣವಾಗಿತ್ತು. ಇಂದು ಕಾಂಗ್ರೆಸ್ ಇದೇ ರೀತಿಯ ವೈಫಲ್ಯಗಳಿಂದ ಸೋಲುವ ಸಾಧ್ಯತೆಗಳಿವೆ. ಹಠಮಾರಿ ಧೋರಣೆ, ಉದ್ಧಟತನ, ನಿಷ್ಕ್ರಿಯತೆ ಮತ್ತು ತಪ್ಪುಗಳನ್ನು ಸರಿಪಡಿಸುವಲ್ಲಿ ವೈಫಲ್ಯ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ
ಅನೇಕ ಸಮೀಕ್ಷೆಗಳು - ಸಿ ವೋಟರ್ ಸೇರಿದಂತೆ - ಸರ್ಕಾರದಲ್ಲಿ ಕುಸಿಯುತ್ತಿರುವ ವಿಶ್ವಾಸದ ಬಗ್ಗೆ ಎಚ್ಚರಿಕೆ ನೀಡಿವೆ. ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಉಪ ಚುನಾವಣೆಗಳ ಫಲಿತಾಂಶಗಳು ಜನಸಾಮಾನ್ಯರ ತಾಳ್ಮೆ ಕಡಿಮೆಯಾಗುತ್ತಿರುವುದನ್ನು ಸೂಚಿಸುತ್ತದೆ.
ಸಿದ್ದರಾಮಯ್ಯ ಸರ್ಕಾರದ ಮುಂದಿರುವ ಆಯ್ಕೆ ಸ್ಪಷ್ಟವಾಗಿದೆ. ಗುಂಪುಗಾರಿಕೆಯನ್ನು ನಿಯಂತ್ರಿಸಬೇಕು, ಹಣಕಾಸು ಬಿಕ್ಕಟ್ಟು ಸೃಷ್ಟಿಸಿರುವ ಗ್ಯಾರಂಟಿ ಉಚಿತ ಯೋಜನೆಗಳನ್ನು ಕೈಬಿಡಬೇಕು, ಸಂಪನ್ಮೂಲಗಳನ್ನು ಮೂಲಭೂತ ಆಳ್ವಿಕೆಯೆಡೆಗೆ ಬಳಸಬೇಕು. ಇಲ್ಲವಾದರೆ, ಸ್ಥಳೀಯ ಸಂಸ್ಥೆಗಳ ಫಲಿತಾಂಶಗಳೇ ಇನ್ನೂ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗುವ ಸಾಧ್ಯತೆಗಳಿವೆ. ಎಚ್ಚರಿಕೆಯನ್ನು ನೀಡಿ ಆಗಿದೆ. ತದನಂತರ ಏನಾಗುತ್ತದೆ ಎನುವುದು ಸರ್ಕಾರದ ಆಯ್ಕೆಯ ಮೇಲೆ ಅವಲಂಬಿಸಿದೆ. ಈ ಎಚ್ಚರಿಕೆಯನ್ನು ಆಲಿಸಿ ದಕ್ಷತೆಯಿಂದ ಕಾರ್ಯನಿರ್ವಹಿಸುವುದನ್ನು ಅವಲಂಬಿಸಿದೆ.
Comments
Post a Comment