ಕಾನೂನು ರೂಪಿಸುವವರು ಕಾನೂನು ಮೀರಕೂಡದು
ಸಂಪಾದಕೀಯ
ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ ಸರ್ಕಾರದ ನಿಷೇಧ ಜಾರಿಯಲ್ಲಿದ್ದಾಗಲೂ ವಿಟ್ಲದ ಕೇಪು ಎಂಬಲ್ಲಿ ಕೋಳಿ ಕಾಳಗವೊಂದಕ್ಕೆ ಉತ್ತೇಜನ ನೀಡಿರುವುದು ವರದಿಯಾಗಿದೆ. ಇದು ಹಾಗೇ ಸುಮ್ಮನೆ ಭಾಗವಹಿಸಿರುವುದಲ್ಲ, ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘನೆ ಮಾಡಿ, ತಮ್ಮ ಕರ್ತವ್ಯ ಮಾಡುತ್ತಿದ್ದ ಪೆÇಲೀಸ್ ಅಧಿಕಾರಿಗಳಿಗೆ ಸವಾಲೆಸೆದಂತಿದೆ.
ಕೋಳಿ ಕಾಳಗ ಅಕ್ರಮ, ಕಾನೂನು ಬಾಹಿರವಾಗಿದೆ. ಇದು ಹಿಂಸಾಜನಕವಾಗಿರುವುದರಿಂದ ಅದರ ಸಂಯೋಜನೆಗೆ ಪ್ರಾಣಿಪ್ರಿಯರು ವಿರೋಧವಾಗಿದ್ದಾರೆ. ಅದನ್ನು ಸಂಯೋಜಿಸುವುದು, ಭಾಗವಹಿಸುವುದು ಅಥವಾ ನೋಡುವುದು ಕಾನೂನುಬಾಹಿರವಾಗಿ ಜನರನ್ನು ಗುಂಪು ಸೇರಿಸಿದಂತಾಗುತ್ತದೆ. ಪೆÇಲೀಸರು ಸರಿಯಾದ ಕ್ರಮವನ್ನೇ ಜರುಗಿಸಿ, ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ವಿರುದ್ಧವೂ ಮೊಕದ್ದಮೆ ದಾಖಲಿಸಿದ್ದಾರೆ. ಶಾಸಕರ ವಿರುದ್ಧವೂ ದಾಖಲಾಗಿದೆ. ಕಾನೂನು ಜಾರಿ ಮಾಡುವಲ್ಲಿ ಪೊಲೀಸರ ವೈಫಲ್ಯ ಕರ್ತವ್ಯ ಚ್ಯುತಿಗೆ ಸಮಾನವಾಗುತ್ತಿತ್ತು. ನಾಗರಿಕರು ಮತ್ತು ಮಾಧ್ಯಮಗಳು ಕಾನೂನು ಎತ್ತಿಹಿಡಿಯುವ ಪೆÇಲೀಸ್ ಅಧಿಕಾರಿಗಳನ್ನು ಬೆಂಬಲಿಸಬೇಕು. ಅದರಲ್ಲೂ ಪ್ರಬಲ ವ್ಯಕ್ತಿಗಳು ಅವರನ್ನು ಹೆದರಿಸುವ ಸಂದರ್ಭಗಳಲ್ಲಿ ಈ ನಿಲುವು ಅವಶ್ಯಕವಾಗುತ್ತದೆ.
ಆದರೆ ಇಲ್ಲಿ ಪರಿಸ್ಥಿತಿಯನ್ನು ಹದಗೆಡಿಸಿರುವ ಅಂಶವೆಂದರೆ, ಶಾಸಕರು ತಮ್ಮನ್ನು ಕಾನೂನು ಮೀರಿದ ವ್ಯಕ್ತಿ ಎಂಬಂತೆ ವರ್ತಿಸಿರುವುದು. ಅಶೋಕ್ ರೈ ಪೆÇಲೀಸರನ್ನು ಹಿಂದೆ ಸರಿಯಲು ಆದೇಶಿಸಿದ್ದೇ ಅಲ್ಲದೆ, ಕಾನೂನುಬಾಹಿರ ಚಟುವಟಿಕೆಯೊಂದನ್ನು ಜನಪದ ಕ್ರೀಡೆ ಎಂದು ಸಮರ್ಥಿಸಿದ್ದಾರೆ. ಆರೋಪಿಗಳ ಪರವಾಗಿ ಕಾನೂನು ಪ್ರಕ್ರಿಯೆಯ ವೆಚ್ಚವನ್ನು ಖುದ್ದು ಭರಿಸುವುದಾಗಿ ಹೇಳಿದ್ದಾರೆ. ಈ ವರ್ತನೆಯೇ ಅಪಾಯಕಾರಿ ಸಂದೇಶವನ್ನು ರವಾನಿಸುತ್ತದೆ. ಪ್ರಭಾವ ಮತ್ತು ಹಣಬಲ ಕಾನೂನಾತ್ಮಕ ಜವಾಬ್ದಾರಿಯನ್ನೂ ಮೀರಲು ಸಾಧ್ಯ ಎಂಬ ಸಂದೇಶ ಸಾರುತ್ತದೆ.
ಇದು ಪ್ರತ್ಯೇಕವಾದ ಘಟನೆಯೇನಲ್ಲ. ಈ ಹಿಂದಿನ ವಿವಾದಗಳು, ಅವುಗಳಲ್ಲಿ ಪ್ರಮುಖವಾಗಿ ಪುತ್ತೂರು ದೇವಾಲಯದ ಬಳಿ ಇದ್ದ ಮನೆಯನ್ನು ಧ್ವಂಸ ಮಾಡಿರುವುದು, ಪುರಸಭೆ ಆಡಳಿತಗಾರ ಮಹಿಳೆಗೆ ಬೆದರಿಕೆ ಹಾಕಿರುವುದು, ಇವೆಲ್ಲವೂ ಕಾನೂನು ಮತ್ತು ನೈತಿಕತೆಯನ್ನು ಕಡೆಗಣಿಸುವಂತಹ ವರ್ತನೆಯಾಗಿದೆ. ಸಾರ್ವಜನಿಕ ವ್ಯಕ್ತಿಯೊಬ್ಬರು ಪದೇಪದೇ ಕಾನೂನು ಉಲ್ಲಂಘಿಸುವುದು ಆ ಸಂಸ್ಥೆಗಳಲ್ಲಿರುವ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುವುದಲ್ಲದೆ, ಶಿಕ್ಷೆಯ ಬಗ್ಗೆ ನಿರ್ಭೀತಿಯನ್ನು ಸಾಮಾನ್ಯೀಕರಣಗೊಳಿಸುತ್ತದೆ.
ಶಾಸಕರು ಕಾನೂನು ಎತ್ತಿ ಹಿಡಿಯಲು ಮುಂದಾಗಬೇಕೇ ಹೊರತು, ಅದನ್ನು ಕಡೆಗಣಿಸುವುದಕ್ಕಲ್ಲ. ಈ ವಿಚಾರದಲ್ಲಿ ಅಶೋಕ್ ರೈ ಅವರನ್ನು ಸಾರ್ವಜನಿಕವಾಗಿ ವಿರೋಧಿಸುವುದು ಅವಶ್ಯಕವಾಗಿದೆ. ಚುನಾಯಿತ ಪ್ರತಿನಿಧಿಗಳನ್ನೂ ಸೇರಿದಂತೆ, ಯಾವುದೇ ಸಾರ್ವಜನಿಕ ವ್ಯಕ್ತಿ ಕಾನೂನು ಮೀರಿದವರಾಗುವುದಿಲ್ಲ ಎಂದು ನಿರೂಪಿಸಲು ಇದು ಅಗತ್ಯವಾಗಿದೆ. ನಾಗರಿಕರು, ಮಾಧ್ಯಮಗಳು, ರಾಜಕೀಯ ನಾಯಕತ್ವ ಉತ್ತರದಾಯಿತ್ವವನ್ನು ಒತ್ತಾಯಿಸಬೇಕಿದೆ. ಇಂತಹ ವರ್ತನೆಗಳು ಕಂಡಾಗ ಮೌನವಾಗಿರುವುದು ಅಥವಾ ನಿಷ್ಕ್ರಿಯವಾಗಿರುವುದು ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತಾಗುತ್ತದೆ.
Comments
Post a Comment