ಮಾಧ್ಯಮದ ಮೇಲೆ ಗುಂಡಿಕ್ಕಿ ಒಳ ಕಲಹ ಮರೆಮಾಚುವ ನಾಯಕರು
ಕರ್ನಾಟಕದ ರಾಜಕೀಯ ರಂಗಭೂಮಿಯಲ್ಲಿ ಮುಖ್ಯಮಂತ್ರಿ ಪದವಿಗಾಗಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಪೈಪೆÇೀಟಿ ಹಲವು ಮಾಸಗಳಿಂದ ಎಲ್ಲರ ಕಣ್ಣೆದುರೇ ನಾಟಕೀಯವಾಗಿ ನಡೆಯುತ್ತಿದೆ. ಮೆರವಣಿಗೆಗಳು, ಹೇಳಿಕೆ-ಪ್ರತಿಹೇಳಿಕೆಗಳು, ಬಲ ಪ್ರದರ್ಶನದ ಶೋಗಳು, ಪರೋಕ್ಷ ಎಚ್ಚರಿಕೆಗಳು, ಅವರ ನಿಷ್ಠಾವಂತರಿಂದ ಬೆಂಬಲ ಘೋಷಣೆಗಳು - ಎಲ್ಲವೂ ಪದೇಪದೇ ನಡೆಯುತ್ತಿವೆ. ಆದರೆ ವಿಸ್ಮಯಕರವಾಗಿ, ಮುಖ್ಯಮಂತ್ರಿಯೂ, ಅವರ ಉಪ ಮುಖ್ಯಮಂತ್ರಿಯೂ ಈ ಸುದೀರ್ಘ ಪೈಪೆÇೀಟಿಯನ್ನೇ "ಮಾಧ್ಯಮದ ಕಲ್ಪನೆ" ಎಂದು ತಳ್ಳಿಹಾಕುತ್ತಿದ್ದಾರೆ. ಸತ್ಯ ಇದಕ್ಕಿಂತ ದೂರವಾಗಿರುವುದಕ್ಕೆ ಸಾಧ್ಯವಿಲ್ಲ.
ಶಿವಕುಮಾರ್ ಈ ವಾದವನ್ನು ನಿನ್ನೆ ಮತ್ತೆ ಪುನರಾವರ್ತಿಸಿದರು; ತಾನು ಮತ್ತು ಸಿಎಂ ಸಿದ್ದರಾಮಯ್ಯ ಅವರ ಅಂತಃಕಲಹದ ವರದಿಗಳು ಮಾಧ್ಯಮದ ಕೃತಕ ನಿರ್ಮಿತಿಗಳು ಎಂದು ಹೇಳಿದರು. ಇದು ರಾಜಕಾರಣಿಗಳು ತಮ್ಮದೇ ಕ್ರಮಗಳಿಂದ ಸಂಕಷ್ಟಕ್ಕೆ ಸಿಲುಕಿದಾಗ ಆರಿಸಿಕೊಳ್ಳುವ ಪರಿಚಿತ ಆಶ್ರಯ. ಕಥೆ ತಮ್ಮ ವಿರುದ್ಧಕ್ಕೆ ತಿರುಗಿದಾಗ, ಅಧಿಕಾರಾಸೆಗಳ ನಿಜ ಚಿತ್ರಣ ಉತ್ತುಂಗಕ್ಕೆ ಬಂದಾಗ, ಬೆಂಬಲಿಗರು ಅತಿಯಾದ ಸಾರ್ವಜನಿಕ ಚಟುವಟಿಕೆಯಲ್ಲಿ ತೊಡಗಿದಾಗ - ಮಾಧ್ಯಮದ ಮೇಲೆ ಗೂಬೆ ಕೂರಿಸಿ ಜನ ಹೆಚ್ಚಿನ ಪ್ರಶ್ನೆ ಮಾಡಬಾರದೆಂದು ಆಶಿಸುವುದು ರಾಜಕೀಯ ವರ್ಗದ ರೂಢಿಯಾಗಿದೆ.
ಆದರೆ ಜನಸಾಮಾನ್ಯರು ನೋಡುತ್ತಿದ್ದಾರೆ; ಸತ್ಯವು ಇಷ್ಟು ತೆರೆದಿರುವಾಗ ಇಂತಹ ನಂಬಲನರ್ಹ ಕಾರಣಗಳ ಹಿಂದೆ ಅದನ್ನು ಮುಚ್ಚಲಾಗುವುದಿಲ್ಲ. ನಿಜವಾಗಿಯೂ ಈ ಭೇದಾಭಿಪ್ರಾಯವನ್ನು ಮಾಧ್ಯಮವೇ ಸೃಷ್ಟಿಸಿದೆ ಎಂದಾದರೆ, ನಾಯಕರ ನಿಷ್ಠಾವಂತರ ಈ ನಿರಂತರ ಚಟುವಟಿಕೆಗಳಿಗೆ ಯಾವ ವಿವರಣೆ? ಶಿವಕುಮಾರ್ ಅನುಯಾಯಿಗಳು ನಡೆಸುತ್ತಿರುವ ರ್ಯಾಲಿಗಳು, ನಾಯಕನಿಗೆ ಸಿಎಂ ಸ್ಥಾನ ನೀಡಬೇಕೆಂಬ ಒತ್ತಾಯದ ಕೂಗು - ಇವುಗಳನ್ನು ಮಾಧ್ಯಮ ನಡೆಸುತ್ತಿದೆಯೇÉ? ಮತ್ತೊಂದು ಕಡೆ, ಸಿದ್ದರಾಮಯ್ಯನವರ ನಿಕಟವರ್ತಿಗಳು ಎಂದು ಹೆಸರಾದ ಎಚ್ ಸಿ ಮಹದೇವಪ್ಪ ಮತ್ತು ಕೆ ಸಿ ರಾಜಣ್ಣ ಕ್ರಮವಾಗಿ ನೀಡುತ್ತಿರುವ ಬೆಂಬಲದ ಹೇಳಿಕೆಗಳು ಏನನ್ನು ಸೂಚಿಸುತ್ತಿವೆ? ಉಪ ಮುಖ್ಯಮಂತಿಯ ಲೌಡ್ ಸ್ಪೀಕರ್ ಆಗಿ ನಿಂತಿರುವ ತಮ್ಮ ಡಿ ಕೆ ಸುರೇಶ್ - ಈ `ಕಲ್ಪಿತ' ಸಂಘರ್ಷದಲ್ಲಿ ಅವರ ಪ್ರತಿನಿತ್ಯದ ಕದನಕ್ಕೆ ಮಾಧ್ಯಮವೇ ಕಾರಣವೇ? ಇವೆಲ್ಲವೂ ವರದಿಗಾರರ ಕಲ್ಪನೆಯಲ್ಲ, ನೈಜ ರಾಜಕೀಯದ ನಿತ್ಯದ ದೃಶ್ಯ.
ಮಾಧ್ಯಮದ ಮೇಲೆ ದೋಷಾರೋಪಣೆಯ ಈ ಯತ್ನವು ಇನ್ನೂ ಆಳವಾದ ರಾಜಕೀಯ ಮನೋವೃತ್ತಿಯನ್ನು ಬಯಲು ಮಾಡುತ್ತಿದೆ - ಒಂದೆಡೆ ಒಳ ಕಲಹವನ್ನು ಮುಂದುವರಿಸಿಕೊಂಡು ಹೋಗುವ ಸೌಕರ್ಯ, ಮತ್ತೊಂದೆಡೆ ಅದನ್ನು ಸಂಪೂರ್ಣವಾಗಿ ನಿರಾಕರಿಸುವ ಇಬ್ಬಗೆ ನೀತಿ. ಇಬ್ಬರೂ ನಾಯಕರು ಹಣಾಹಣಿ ಸೆಣಸಾಡುತ್ತಿರುವಾಗ ಮಾಧ್ಯಮ ಕಣ್ಣು ಮುಚ್ಚಿಕೊಂಡಂತೆ ನಟಿಸಬೇಕು, ಏನೂ ನಡೆಯದಂತೆ ತೋರಿಸಬೇಕು ಎಂದು ಬಯಸುವುದು ಅಸಂಬದ್ಧ.
ಅಧಿಕಾರದ ಘರ್ಷಣೆ ದಿನದಿನಕ್ಕೂ ಸಾರ್ವಜನಿಕವಾಗುತ್ತಾ ಬಂದಾಗ, ಲೆಫ್ಟಿನೆಂಟರು ಪರಸ್ಪರ ಕಟು ವಾಕ್ಯಗಳ ಪ್ರವಾಹವನ್ನೇ ಹರಿಸುತ್ತಿದ್ದಾಗ, ಸರ್ಕಾರದ ಇಮೇಜಿಗೆ ಧಕ್ಕೆಯಾಗುತ್ತಿದ್ದಾಗ - ಪತ್ರಕರ್ತರು ಮೌನವಾಗಿರಬೇಕು ಎಂಬ ನಿರೀಕ್ಷೆಯೇ ಅವಾಸ್ತವಿಕ ಮತ್ತು ಅಪ್ರಾಮಾಣಿಕ.
ಇದರ ಮಧ್ಯೆ, ಕರ್ನಾಟಕದ ಪತ್ರಕರ್ತ ಸಂಘಗಳ ಮೌನ ಇನ್ನಷ್ಟು ಕಳವಳಕಾರಿ. ರಾಜಕಾರಣಿಗಳು ಪತ್ರಕರ್ತರ ಮೇಲೆ ದಾಳಿ ಮಾಡಿದಾಗ ಈ ಸಂಸ್ಥೆಗಳು ಪ್ರತಿಕ್ರಿಯಿಸಬೇಕು. ಬದಲಿಗೆ ಮೌನ ಅಥವಾ ಅದೇ ನಾಯಕರಿಂದ ಮತ್ತಷ್ಟು ಪ್ರತಿಕ್ರಿಯೆಗಳನ್ನು ಪಡೆಯಲು ಮುಂಬರುವ ಪ್ರವೃತ್ತಿ ಬೆಳೆಯುತ್ತಿದೆ. ಈ ಪ್ರವೃತ್ತಿಯೇ ಮಾಧ್ಯಮದ ಸಂಸ್ಥಾತ್ಮಕ ಧೈರ್ಯವನ್ನು ನಿಧಾನವಾಗಿ ಕ್ಷೀಣಗೊಳಿಸಿದೆ.
ಒಳಪೈಪೆÇೀಟಿ ನೈಜ, ಗೋಚರ, ಮತ್ತು ರಾಜಕೀಯವಾಗಿ ಮಹತ್ವದ್ದಾಗಿದೆ. ಇದನ್ನೇ ಮಾಧ್ಯಮದ ಕಲ್ಪನೆ ಎಂದು ಹೇಳುವುದು ಕೇವಲ ಅಸತ್ಯವಲ್ಲ - ಕರ್ನಾಟಕದ ನಾಗರಿಕರ ವಿವೇಕಕ್ಕೆ ಅವಮಾನವೂ ಹೌದು. ಸಂದೇಶವಾಹಕನನ್ನು ಗುರಿ ಮಾಡುವುದು ಸಂದೇಶವನ್ನು ಮರೆ ಮಾಡಲು ಸಾಧ್ಯವಿಲ್ಲ. ರಾಜ್ಯಕ್ಕೆ ಅಗತ್ಯವಿರುವುದು ಸ್ಪಷ್ಟತೆ, ಜವಾಬ್ದಾರಿ ಮತ್ತು ಸ್ಥಿರ ಆಡಳಿತ - ಪತ್ರಕರ್ತರ ಮೇಲೆ ದೋಷಾರೋಪಣೆ ಮಾಡಿ ಒಳಗಿನ ಬಿರುಕುಗಳನ್ನು ಮುಚ್ಚಲು ಯತ್ನಿಸುವುದಲ್ಲ.
ರಾಜಕಾರಣಿಗಳು ನಿರಾಕರಣೆಯ ಮಾರ್ಗವನ್ನು ಆರಿಸಬಹುದು. ಮಾಧ್ಯಮವು ಅದನ್ನು ಮಾಡಬಾರದು.
----------------
ಗುಂಪುಗಾರಿಕೆ ಇಲ್ಲ, ಎಲ್ಲಾ ಮೀಡಿಯಾ
ಸೃಷ್ಟಿ ಎನ್ನುತ್ತಲೇ ಗೇಮ್ ಪ್ಲ್ಯಾನ್
ಬೆಂಗಳೂರು: ಕರ್ನಾಟಕ ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆ ಕುರಿತ ಉದ್ವಿಗ್ನತೆಯನ್ನು ಇಲ್ಲಿಯವರೆಗೂ `ಮಾಧ್ಯಮದ ಕಲ್ಪನೆ' ಎಂದು ಹೇಳುತ್ತಿದ್ದರೂ, ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಬೇರೆ ಚಿತ್ರಣ ಒದಗಿಸುತ್ತಿವೆ. ನಿನ್ನೆ ಉಪಮುಖ್ಯಮಂತ್ರಿಗಳ ನಿವಾಸದಲ್ಲಿ ಸಿದ್ದರಾಮಯ್ಯ-ಡಿಕೆಶಿ ವಾರದಲ್ಲಿ ಎರಡನೇ `ಬ್ರೇಕ್ಫಾಸ್ಟ್ ಮೀಟಿಂಗ್' ಆಯೋಜನೆಯಾಗಿದ್ದು, ಇದರಿಂದ ಇಬ್ಬರು ನಾಯಕರ ನಡುವೆ ತಾತ್ಕಾಲಿಕ ಶಾಂತಿ ಮೂಡಲಿದೆಯೆಂಬ ಕುತೂಹಲವೂ ರಾಜಕೀಯ ವಲಯದಲ್ಲಿ ಕಂಡು ಬರುತ್ತಿದೆ.
ಆದರೆ ಮತ್ತೊಂದೆಡೆ, ಕಾಂಗ್ರೆಸ್ ಒಳಕಲಹದ ಕೇಂದ್ರಬಿಂದುವಾಗಿರುವ `ಕೊಟ್ಟ ಮಾತು' ಎಂಬ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಶಿವಕುಮಾರ್ ಆಪ್ತ ಶಾಸಕ ಹೆಚ್.ಸಿ. ಬಾಲಕೃಷ್ಣ ಅವರು, "ಸಮಯ ಬಂದಾಗ ನಾವು ಒಪ್ಪಿಕೊಂಡಿದ್ದನ್ನು ಬಹಿರಂಗಪಡಿಸುತ್ತೇವೆ" ಎಂದು ಹೇಳಿದ ಮಾತು ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ. ಇದು ಅಧಿಕಾರ ಹಂಚಿಕೆಯ ಗೂಢ ಒಪ್ಪಂದ ಇನ್ನೂ ಜೀವಂತವಾಗಿದೆ ಎಂಬ ಸಂದೇಶವನ್ನು ನೀಡುತ್ತಿದೆ.
ಇದೇ ವೇಳೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಗಳಲ್ಲಿ `ಕೊಟ್ಟ ಮಾತು' ಕುರಿತು ಚರ್ಚೆ ನಡೆದಿದೆ ಎಂದು ಶಿವಕುಮಾರ್ ತಮ್ಮ ಆಪ್ತರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಇದರ ಅರ್ಥ, ನಾಯಕರು ಸಾರ್ವಜನಿಕವಾಗಿ ಏನೇ ಹೇಳುತ್ತಿದ್ದರೂ, ಒಳಗಿದ್ದು ನಡೆಯುತ್ತಿರುವ ಮಾತುಕತೆಗಳು ಇನ್ನೂ ಮುಂದುವರಿದಿವೆ.
ರಾಜ್ಯದ ರಾಜಕೀಯ ಸಮೀಕರಣಗಳು ಗಂಭೀರ ಹಂತ ತಲುಪಿರುವುದರಿಂದ, ಉನ್ನತ ನಾಯಕತ್ವವೇ ಈಗ ನೇರವಾಗಿ ಮಧ್ಯಪ್ರವೇಶಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಅಂದಾಜು ಪಕ್ಷದ ವಲಯದಲ್ಲಿದೆ.
Comments
Post a Comment