ಏನನ್ನೂ ಸಾಧಿಸದ ಧರ್ಮಸ್ಥಳ ಎಸ್‍ಐಟಿ ಬರಖಾಸ್ತು ಮಾಡಿ ಇಲ್ಲವೇ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಮುಂದುವರಿಸಿ

 ಇದ್ಯಾವುದನ್ನೂ ಮಾಡದಿದ್ದರೆ ಅದು ತೆರಿಗೆದಾರರ ಮೇಲಿನ ಹೊರೆ

ಆಹುದಾದರಹುದೆನ್ನಿ * ಬಿವಿಸೀ

ಕರ್ನಾಟಕ ಸರ್ಕಾರ ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಅತ್ಯಾಚಾರಗಳು, ಲೈಂಗಿಕ ದೌರ್ಜನ್ಯಗಳು ಮತ್ತು ಹತ್ಯೆಗಳನ್ನು ತನಿಖೆಗೊಳಪಡಿಸಲು ರಚಿಸಿದ್ದ ಎಸ್‍ಐಟಿ ಈಗ ನ್ಯಾಯವನ್ನು ಶೋಧಿಸಲು ಹೇಗೆ ಮುಂದುವರೆಯಕೂಡದು ಎನ್ನುವುದಕ್ಕೆ ಸಂಕೇತವಾಗಿದೆ. ಸಾರ್ವಜನಿಕರ ಆಕ್ರೋಶ ಮತ್ತು ನೈಜ ಭರವಸೆಯೊಂದಿಗೆ ಆರಂಭವಾದ ಈ ಪ್ರಕ್ರಿಯೆ ಈಗ ದಿಕ್ಕು ತಪ್ಪಿದಂತಾಗುತ್ತಿದ್ದು, ಅಪನಂಬಿಕೆಗೊಳಗಾಗಿ, ಉದ್ದೇಶಪೂರ್ವಕ ಅಸ್ಪಷ್ಟತೆಯನ್ನು ಸೃಷ್ಟಿಸುತ್ತಿದೆ. ಎಸ್‍ಐಟಿ ಈಗ ಅಪರಾಧಿಗಳಲ್ಲಿ ಭಯವನ್ನೂ ಹುಟ್ಟಿಸುವುದಿಲ್ಲ ಅಥವಾ ಸಂತ್ರಸ್ತರಲ್ಲಿ ಭರವಸೆಯನ್ನೂ ಮೂಡಿಸುವುದಿಲ್ಲ. ಕೇವಲ ಆಕ್ರೋಶ ಸೃಷ್ಟಿಸುತ್ತ್ತಿದೆ ಮಾತ್ರ.

ಎಸ್‍ಐಟಿ ರಚನೆಯನ್ನು ಘೋಷಿಸಿದಾಗ, ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಾಗಿದ್ದವು. ಸಾಮೂಹಿಕ ಲೈಂಗಿಕ ದೌರ್ಜನ್ಯ, ಅನುಮಾನಾಸ್ಪದ ಸಾವುಗಳು ಮತ್ತು ಪ್ರಬಲ ಧಾರ್ಮಿಕ ಸಂಸ್ಥೆಗಳ ಸುತ್ತ ದಶಕಗಳ ಕಾಲ ಆವರಿಸಿದ್ದ ಮೌನ ಇವೆಲ್ಲವೂ ನಿರ್ಭೀತಿಯ, ಸ್ವತಂತ್ರವಾದ ಹಾಗೂ ಸತ್ಯಶೋಧನೆಗೆ ಬದ್ಧವಾದ ತನಿಖೆಯನ್ನು ಅನಿವಾರ್ಯವಾಗಿಸಿತ್ತು. ಆದರೆ ತದನಂತರದಲ್ಲಿ ಅನಾವರಣಗೊಂಡಿದ್ದು ಎಲ್ಲವೂ ತಿರುಗುಮುರುಗಾದ ಫಲಿತಾಂಶಗಳು. ಒಂದು ತನಿಖಾ ಸಂಸ್ಥೆಯು ಮಾಹಿತಿದಾರರನ್ನು ವಿಚಾರಣೆಗೊಳಪಡಿಸುವಲ್ಲಿ ಉತ್ಸಾಹ ತೋರಿತ್ತೇ ಹೊರತು, ಅಧಿಕಾರ ಮತ್ತು ಪ್ರಭಾವ ಬೀರುವ ಆರೋಪಿತ ವ್ಯಕ್ತಿಗಳನ್ನು ತನಿಖೆ ಮಾಡಲೇ ಇಲ್ಲ.

ಎಸ್‍ಐಟಿ ತಂಡವನ್ನು ಕಾಡುತ್ತಿರುವ ವಿಶ್ವಾಸಾರ್ಹತೆಯ ಬಿಕ್ಕಟ್ಟು ಆಕಸ್ಮಿಕವಲ್ಲ. ಇದು ನೇರ ರಾಜಕೀಯ ಹಸ್ತಕ್ಷೇಪದ ಪ್ರತಿಫಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯ ಹೇಳಿಕೆಗಳು, ಸೂಚನೆಗಳು ಹಾಗೂ ಗೃಹ ಸಚಿವರು ಪದೇಪದೇ ನೀಡುತ್ತಿದ್ದ ಸ್ಪಷ್ಟ ಸಂದೇಶ ಎಂದರೆ, ಸರ್ಕಾರವು ನಿಜವಾದ ಅಪರಾಧಿಗಳನ್ನು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಬದಲಾಗಿ ಈ ಪ್ರಕರಣಗಳ ನಿರೂಪಣೆಯನ್ನು ನಿಯಂತ್ರಿಸಲು ಬಯಸುತ್ತದೆ. ಇಂತಹ ವಾತಾವರಣದಲ್ಲಿ, ಸ್ವಾಯತ್ತತೆ ಕಾಲ್ಪನಿಕವಾಗುತ್ತದೆ. ತನಿಖಾಧಿಕಾರಿಗಳಿಗೆ ರಾಜಕೀಯ ನಾಯಕರು ನಿತ್ಯವೂ ತನಿಖೆಯ ಕುರಿತಾಗಿ ರನ್ನಿಂಗ್ ಕಾಮೆಂಟರಿ ನೀಡುತ್ತಿರುವಾಗ, ಯಾವುದೇ ಆದೇಶದ ಅಗತ್ಯ ಇರುವುದಿಲ್ಲ. ಪರಿಣಾಮ ನಿರೀಕ್ಷಿತವಾಗಿದ್ದು, ಎಸ್‍ಐಟಿ ಬೆನ್ನೆಲುಬಿಲ್ಲದ ಸಂಸ್ಥೆಯಾಗಿ, ಅಗೋಚರವಾದ ಕಠಿಣ ಚೌಕಟ್ಟುಗಳಲ್ಲಿ ಕಾರ್ಯನಿರ್ವಹಿಸುವಂತಾಗಿದೆ. 

ಬೆಳ್ತಂಗಡಿಯಲ್ಲಿ ಮೊನ್ನೆ ನಡೆದ ಬೃಹತ್ ಮಹಿಳಾ ಸಮಾವೇಶ `ಕೊಂದವರು ಯಾರು?' ಎಂಬ ಹೆಸರಿನಲ್ಲಿ ನಡೆದ ಪ್ರತಿಭಟನೆಯು ಈ ಎಸ್‍ಐಟಿಯ ವೈಫಲ್ಯವನ್ನು ಸ್ಪಷ್ಟವಾಗಿ ಎತ್ತಿತೋರಿಸುತ್ತದೆ. ಬೀದಿಗಳಲ್ಲಿ ಮೊಳಗಿದ ಈ ಘೋಷಣೆ ಸರಕಾರ ಮತ್ತು ಎಸ್‍ಐಟಿ ವಿರುದ್ಧದ ದೋಷಾರೋಪಣೆಯೂ ಆಗಿದೆ. ಹಲವು ತಿಂಗಳುಗಳ ಕಾಲ ಕಾರ್ಯನಿರ್ವಹಿಸಿದ ಎಸ್‍ಐಟಿ ಒಂದೇ ಒಂದು ಅಪರಾಧದ ಬಗ್ಗೆಯೂ ಅಪರಾಧಿಗಳನ್ನು ಗುರುತಿಸುವ ಜವಾಬ್ದಾರಿ ಹೊತ್ತುಕೊಂಡಿಲ್ಲ. ನಿರ್ಣಾಯಕವಾದ ಯಾವುದೇ ಅಪರಾಧಿಗಳ ಬಂಧನ ಮಾಡಿಲ್ಲ. ವಿಶ್ವಾಸಾರ್ಹ ಫಲಿತಾಂಶಗಳನ್ನು ಒದಗಿಸಿಲ್ಲ. ಸಾರ್ವಜನಿಕರಲ್ಲಿ ಸತ್ಯಶೋಧನೆ ನಡೆಯುತ್ತಿದೆ ಎಂಬ ನಂಬಿಕೆ ಬರುವಂತಹ ವಿಶ್ವಾಸಾರ್ಹ ತನಿಖಾ ವರದಿಗಳನ್ನೂ ಪ್ರಕಟಿಸಿಲ,್ಲ ಬದಲಾಗಿ ಎಲ್ಲವನ್ನೂ ಮುಚ್ಚಿಡುವ ಕೆಲಸವನ್ನು ಅದು ವ್ಯವಸ್ಥಿತವಾಗಿ ಮಾಡುತ್ತಿದೆ.

ಎಸ್‍ಐಟಿ ನ್ಯಾಯ ಕೋರುತ್ತಿರುವವರಿಗೆ ಬಹುಮಟ್ಟಿಗೆ ವಿರೋಧವನ್ನೇ ವ್ಯಕ್ತಪಡಿಸುವಂತಿದೆ. ಮಾಹಿತಿದಾರರು ತಮ್ಮ ಜೀವವನ್ನು ಪಣಕ್ಕಿಟ್ಟು, ಬೆದರಿಕೆಗಳಿಗೆ ಜಗ್ಗದೆ, ಚಿತ್ರಹಿಂಸೆಯನ್ನೂ ಅನುಭವಿಸಿ ಮಾಹಿತಿ ಒದಗಿಸಿದ್ದಾರೆ. ಎಸ್‍ಐಟಿ ಕಾರ್ಯಾಚರಣೆ ಮೇಲ್ನೋಟಕ್ಕೆ ಎಲ್ಲವೂ ಮಿಥ್ಯೆ ಎನಿಸಿದೆ. ತನಿಖೆಯು ದೂರುದಾರರನ್ನು ವಿರೋಧಿಗಳಾಗಿ ಪರಿಗಣಿಸಿ, ಆರೋಪಿಗಳಿಗೆ ಗೌರವ ತೋರುವುದು ಸಂಸ್ಥೆಯ ನೈತಿಕತೆಯನ್ನೇ ಕಸಿದುಕೊಂಡಿದೆ.

ಏತನ್ಮಧ್ಯೆ ಎಸ್‍ಐಟಿಯ ಹಣಕಾಸು ವೆಚ್ಚವೂ ಹೆಚ್ಚಾಗುತ್ತಿದೆ. ಕೋಟ್ಯಂತರ ರೂ ಸಾರ್ವಜನಿಕ ಹಣವನ್ನು ತನಿಖೆಯ ನಿರ್ವಹಣೆಗಾಗಿಯೇ ಖರ್ಚು ಮಾಡಲಾಗಿದ್ದರೂ ಉತ್ತರವನ್ನಾಗಲೀ, ಉತ್ತರದಾಯಿತ್ವವನ್ನಾಗಲೀ ಪಡೆಯಲಾಗಿಲ್ಲ. ಈ ಹಂತದಲ್ಲಿ ಎಸ್‍ಐಟಿ ಬಿಳಿ ಆನೆಯಂತೆ ಕಾಣುತ್ತಿದ್ದು, ದುಬಾರಿಯಾದ, ಆಲಂಕಾರಿಕವಾದ ಮತ್ತು ಉದ್ದೇಶರಹಿತ ಸಂಸ್ಥೆಯಾಗಿ ಕಾಣುತ್ತಿದೆ. ಸಾರ್ವಜನಿಕ ಹಣವನ್ನು ಸಾಂಸ್ಥಿಕ ದುಃಸ್ಥಿತಿಗಾಗಿ ಬಳಸುವುದು ತರವಲ್ಲ.

ರಾಜ್ಯ ಸರ್ಕಾರವು ಈಗ ಗಂಭೀರ ಆಯ್ಕೆಯನ್ನು ಎದುರಿಸುತ್ತಿದೆ. ಈ ನಾಟಕವನ್ನು ಬಂದ್ ಮಾಡಿ ಎಸ್‍ಐಟಿಯನ್ನು ಸ್ಥಗಿತಗೊಳಿಸುವುದೇ ಲೇಸು. ಅಥವಾ ಉಳಿದಿರುವ ಅಲ್ಪ ಸ್ವಲ್ಪ ವಿಶ್ವಾಸವನ್ನು ಉಳಿಸಿಕೊಳ್ಳಲು ತನಿಖೆಯನ್ನು ಹಾಲಿ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಮುಂದುವರೆಸಬಹುದು. ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ತನಿಖೆ ಕುಂಠಿತವಾಗುವುದಿಲ್ಲ. ಬದಲಾಗಿ ರಾಜಕೀಯ ಒತ್ತಡಗಳಿಂದ, ಸಾರ್ವಜನಿಕರ ಅನುಮಾನಗಳಿಂದ ತನ್ನದೇ ಆದ ನಿಷ್ಕ್ರಿಯತೆಯಿಂದ ರಕ್ಷಿಸುತ್ತದೆ.

ಇನ್ನು ಬೇರೆ ಮೂರನೆಯ ಆಯ್ಕೆಗಳಿಲ್ಲ. ಎಸ್‍ಐಟಿ ಆಮೆ ಗತಿಯಲ್ಲಿ ಸಾಗುತ್ತಿದ್ದು, ದಿಕ್ಕು ದೆಸೆ ಇಲ್ಲದೆ, ಅಪನಂಬಿಕೆಗಳ ನಡುವೆ ಮುಂದುವರೆಯುತ್ತಿರುವಾಗ, ಸಾರ್ವಜನಿಕರಲ್ಲೂ ಸಿನಿಕತೆ ಹೆಚ್ಚಾಗಿ, ಅಧಿಕಾರಸ್ಥರೇ ಆರೋಪಿಗಳೆನಿಸುತ್ತಿರುವಾಗ ನ್ಯಾಯ ಪ್ರಾಪ್ತಿ ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ದಟ್ಟವಾಗುತ್ತದೆ.

ಸರ್ಕಾರವು ಇದೇ ಸ್ಥಗಿತ ಸ್ಥಿತಿಯನ್ನು ನಿರ್ವಹಿಸಲು ಬಯಸಿದರೆ, ಅಹಿತಕರ ಸತ್ಯವನ್ನು ಮರೆಮಾಚಲು ನಿರ್ಧರಿಸಿದರೆ, ಇತಿಹಾಸವು ಧರ್ಮಸ್ಥಳದ ಅಪರಾಧಗಳನ್ನು ದಾಖಲಿಸುವುದಿಲ್ಲ ಬದಲಾಗಿ ಅವುಗಳನ್ನು ಎದುರಿಸುವಲ್ಲಿ ಉದ್ದೇಪೂರ್ವಕ ವೈಫಲ್ಯವನ್ನು ದಾಖಲಿಸುತ್ತದೆ. ಈ ವೈಫಲ್ಯವನ್ನು ಸರ್ಕಾರವೇ ಹೊತ್ತುಕೊಳ್ಳುವುದು ಅನಿವಾರ್ಯವಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again