ಹೈಕೋರ್ಟ್ ಜಡ್ಜ್ ವಿರುದ್ಧ ವಿನಾಕಾರಣ ದೋಷಾರೋಪಣೆಗೆ ಮುಂದಾಗುವುದು ಕಾಂಗ್ರೆಸ್‍ಗೆ ಹೆಚ್ಚು ಅನಿವಾರ್ಯವಾಗಿರಲಿಲ್ಲ
ಡಿಎಂಕೆಯ ಹಿಂದೂ ವಿರೋಧಿ ನಿಲುವಿಗೆ ಸಹಮತ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ತನ್ನ ಪ್ರಮಾದಕ್ಕೆ ಬೆಲೆ ತೆರಬೇಕಾಗುತ್ತದೆ
......
ಕೇವಿಯಟ್ * ಬಿವಿಸೀ
ತಮಿಳುನಾಡಿನ ತಿರುಪ್ಪರಕುಂಡ್ರಂ ಬೆಟ್ಟದ ಮೇಲಿರುವ ದರ್ಗಾ ಸಮೀಪದಲ್ಲೇ ಇರುವ ಸುಬ್ರಮಣ್ಯ ದೇವಾಲಯದ ಬಳಿ ಗುಡ್ಡದಲ್ಲಿ ದೀಪ ಹಚ್ಚುವ ಬಗ್ಗೆ ಮದ್ರಾಸ್ ಹೈಕೋರ್ಟ್ ನೀಡಿರುವ ಆದೇಶದ ಸುತ್ತ ಹರಡಿರುವ ವಿವಾದ, ಒಂದು ನ್ಯಾಯಾಂಗದ ನಿರ್ಧಾರದ ಸುತ್ತಲಿನ ಪ್ರಶ್ನೆಯಾಗಿ ಉಳಿಯಬೇಕಿತ್ತು, ತನ್ಮೂಲಕ ಮೇಲ್ಮನವಿ ಮತ್ತು ಸಾಂವಿಧಾನಿಕ ಪ್ರಕ್ರಿಯೆಯ ಮೂಲಕ ಬಗೆಹರಿಸುವ ನಿಟ್ಟಿನಲ್ಲಿ ಸಾಗಬೇಕಿತ್ತು. ಆದರೆ ಇದು ನ್ಯಾಯಾಂಗದೊಡನೆ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದು ಇದು ಅಂತಿಮವಾಗಿ ಡಿಎಂಕೆ ಪಕ್ಷಕ್ಕಿಂತಲೂ ಕಾಂಗ್ರೆಸ್ ಪಕ್ಷಕ್ಕೇ ಹೆಚ್ಚು ಹಾನಿ ಮಾಡುತ್ತದೆ.
ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರ ಆದೇಶವು ದೋಷಾರೋಪಣೆ ಎದುರಿಸುವ ಸಾಧ್ಯತೆಯನ್ನೂ ಒಳಗೊಂಡಿದ್ದು, ಇದಕ್ಕೆ ಡಿಎಂಕೆ ಸರ್ಕಾರದ ಆಕ್ರಮಣಕಾರಿ ಪ್ರತಿಕ್ರಿಯೆ ಸಾಂವಿಧಾನಿಕವಾಗಿ ಸಮರ್ಥನೀಯವಲ್ಲ. ಪಕ್ಷವು ಬಹಳ ಕಾಲ ಹಿಂದೂ ವಿರೋಧಿ, ಅದರಲ್ಲೂ ಮುಖ್ಯವಾಗಿ ಸನಾತನ ಧರ್ಮ ವಿರೋಧಿ ತಳಹದಿಯಲ್ಲಿ ಕಾರ್ಯನಿರ್ವಹಿಸಿದ್ದು, ಹಿಂದೂ ಧಾರ್ಮಿಕ ಪ್ರತಿಪಾದನೆಗಳನ್ನು ಅನುಮಾನದಿಂದಲೇ ನೋಡಿದೆ, ಹಿಂದೂ ವಿರೋಧಿ ಎಂಬ ಟೀಕೆಯನ್ನು ಸ್ವೀಕರಿಸಲು ಸಿದ್ಧವಾಗಿದೆ. ಡಿಎಂಕೆ ಪಕ್ಷಕ್ಕೆ ಇಂತಹ ಸಂಘರ್ಷಗಳು ಚುನಾವಣೆಯ ಸಮಸ್ಯೆ ಆಗುವುದಿಲ್ಲ; ಬದಲಾಗಿ, ರಾಜಕೀಯ ಚಟುವಟಿಕೆಯ ಭಾಗವಾಗುತ್ತದೆ.
ಆದರೆ ಹಾಲಿ ನ್ಯಾಯಾಧೀಶರ ವಿರುದ್ಧ ಅವರು ಹಿಂದೂಪರ ಎಂಬ ಕಾರಣಕ್ಕಾಗಿ ಅವರ ವಿರುದ್ಧ ಗದೆ ಕೈಗೆತ್ತಿಕೊಂಡ ಕಾಂಗ್ರೆಸ್ ಪಕ್ಷ ಭಿನ್ನ ಪರಿಸ್ಥಿತಿಯನ್ನು ಎದುರಿಸುತ್ತಿದೆ.
ಹಾಲಿ ಹೈಕೋರ್ಟ್ ನ್ಯಾಯಮೂರ್ತಿಯ ದೋಷಾರೋಪಣೆಯ ನ್ಯಾಯಾಂಗ ಆದೇಶದ ವಿಚಾರದಲ್ಲಿ ಡಿಎಂಕೆಯೊಡನೆ ಮೈತ್ರಿ ಸಾಧಿಸುವುದರಿಂದ ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದ ಸಂಘರ್ಷಮಯ ರಾಜಕಾರಣವನ್ನೇ ಅನುಸರಿಸಿದ್ದು, ತನ್ನ ಸೈದ್ಧಾಂತಿಕ ಚೌಕಟ್ಟುಗಳನ್ನೂ ಪರಿಗಣಿಸದೆ ಹೋಗಿದೆ. ಈ ನಿರ್ಧಾರವು ಕರ್ನಾಟಕದಲ್ಲೂ ಸಂಚಲನ ಉಂಟುಮಾಡಿದ್ದು, ಇಲ್ಲಿ ಕಾಂಗ್ರೆಸ್ ಆಳ್ವಿಕೆಯಲ್ಲೂ ಸಹ ಸಾಂಸ್ಕøತಿಕ ಹಾಗೂ ಧಾರ್ಮಿಕ ಸೂಕ್ಷ್ಮತೆಗಳು ಚುನಾವಣೆಗಳಲ್ಲಿ ನಿರ್ಣಾಯಕವಾಗಿರುತ್ತವೆ.
ಕರ್ನಾಟಕದ ಕಾಂಗ್ರೆಸ್ ಸಂಸದರಾದ, ದಾವಣಗೆರೆಯ ಪ್ರಭಾ ಮಲ್ಲಿಕಾರ್ಜುನ, ರಾಯಚೂರಿನ ಕುಮಾರ ನಾಯಕ್ ಮತ್ತು ಹಾಸನದ ಶ್ರೇಯಸ್ ಪಟೇಲ್ ದೋಷಾರೋಪಣೆಯ ಅರ್ಜಿಗೆ ಸಹಿ ಮಾಡಿದ್ದಾರೆ. ಇವರ ಭಾಗವಹಿಸುವಿಕೆಯು ಇಡೀ ವಿವಾದವನ್ನು ದೂರದ ತಮಿಳುನಾಡಿನ ವಿಷಯವಾಗಿ ಸೀಮಿತಗೊಳಿಸದೆ ಕರ್ನಾಟಕದ ಮತದಾರರ ನಡುವೆಯೂ ಚರ್ಚೆಗೊಳಗಾಗುವಂತೆ ಮಾಡಲಾಗಿದೆ. ಇದು ಸ್ಥಳೀಯವಾಗಿ, ರಾಜಕೀಯವಾಗಿ, ಭಾವನಾತ್ಮಕವಾಗಿ ಚರ್ಚೆಯಾಗಲಿದೆ. ಸಂಸದರು ಮತ್ತು ಅವರು ಪ್ರತಿನಿಧಿಸುವ ಪಕ್ಷ ಈಗ ಹಾನಿಕಾರಕವಾದ ಆದರೆ ಸರಳವಾದ, ಹಿಂದೂ ಧಾರ್ಮಿಕ ಆಚರಣೆಗೆ ಅವಕಾಶ ನೀಡುವ ಹೈಕೋರ್ಟ್ ನ್ಯಾಯಮೂರ್ತಿಯ ವಿರುದ್ಧ ಕ್ರಮ ಜರುಗಿಸಲು ಕಾಂಗ್ರೆಸ್ ಏಕೆ ಬೆಂಬಲಿಸಿದೆ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ.
ಸಾಂವಿಧಾನಿಕವಾಗಿ ಕೂಡ ಈ ನಡೆ ತಪ್ಪಾಗುತ್ತದೆ. ದೋಷಾರೋಪಣೆಯು ಹಾಲಿ ನ್ಯಾಯಮೂರ್ತಿಯ ನಿರೂಪಿತ ದುರ್ವರ್ತನೆ ಅಥವಾ ಅಸಮರ್ಥತೆಯ ಸಂದರ್ಭಗಳಿಗೆ ಸೂಕ್ತವಾಗುವುದೇ ಹೊರತು, ಕಾನೂನಿನ ವಿವಾದಾಸ್ಪದ ವ್ಯಾಖ್ಯಾನಗಳಿಗಲ್ಲ. ನ್ಯಾಯಾಂಗದ ತೀರ್ಮಾನಗಳ ಬಗ್ಗೆ ಅಸಮಾಧಾನವಿರುವ ಸರ್ಕಾರಗಳು ಸ್ಪಷ್ಟ ಪರಿಹಾರ ಮಾರ್ಗಗಳನ್ನು ಹೊಂದಿರುತ್ತವೆ. ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಬಹುದು, ಅಥವಾ ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ಈ ಹಾದಿಗಳನ್ನು ದಾಟಿ ನ್ಯಾಯಾಧೀಶರನ್ನೇ ವೈಯಕ್ತಿಕ ನೆಲೆಯಲ್ಲಿ ಗುರಿಯಾಗಿಸುವುದರ ಮೂಲಕ ಡಿಎಂಕೆ ಮತ್ತು ಮಿತ್ರ ಪಕ್ಷಗಳು, ನ್ಯಾಯಾಂಗಕ್ಕೆ ರಾಜಕೀಯ ಬೆದರಿಕೆ ಒಡ್ಡುವ ಮಿತಿಯನ್ನು ಮೀರಿದಂತಾಗಿದೆ. ಯಾವುದೇ ಸಿದ್ದಾಂತದ ನೆಲೆಯಲ್ಲಿ ಈ ಪೂರ್ವನಿದರ್ಶನ ಅಪಾಯಕಾರಿಯಾಗಿದೆ.
ರಾಜಕೀಯವಾಗಿ ಅಪಾಯವು ಸ್ಪಷ್ಟವಾಗಿ ಕಾಣುತ್ತದೆ. ಬಿಜೆಪಿ ಈ ವಿಷಯವನ್ನು ನೇರವಾಗಿ ಕಾಂಗ್ರೆಸ್ ಸಮೇತ ನ್ಯಾಯಾಧೀಶರನ್ನು ಟಾರ್ಗೆಟ್ ಮಾಡಿದ ಪಕ್ಷಗಳು ಹಿಂದೂ ಸಂಪ್ರದಾಯಗಳ ವಿರೋಧಿ ಎಂದು ಬಿಂಬಿಸಲು ನೆರವಾಗುತ್ತದೆ. ಈ ವಿಷಯವನ್ನು ಕುರಿತ ಚರ್ಚೆ ರಾಷ್ಟ್ರಮಟ್ಟದಲ್ಲಿ ಈಗಾಗಲೇ ಆರಂಭವಾಗಿದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಹಿಂದೂ ವಿರೋಧಿ ಎನ್ನಲು, ಅಲ್ಪಸಂಖ್ಯಾತರ ಪರವಾದ ಕ್ರಮಗಳಿಗೆ ಟೀಕೆಗೊಳಗಾಗಿರುವುದರಿಂದ, ದೀಪದ ವಿವಾದವು ವಿರೋಧ ಪಕ್ಷಗಳ ಬತ್ತಳಿಕೆಯಲ್ಲಿ ಮತ್ತೊಂದು ಪ್ರಬಲ ಅಸ್ತ್ರವಾಗಲಿದೆ.
ಇದು ಕಾನೂನಾತ್ಮಕ ತಿರುಗುಬಾಣವಾಗುವ ಸಾಧ್ಯತೆಗಳೂ ಇವೆ. ಉನ್ನತ ನ್ಯಾಯಾಲಯಗಳು ತಮಿಳುನಾಡು ಸರ್ಕಾರವನ್ನು ಕಾಯರ್ಂಗದ ವ್ಯಾಪ್ತಿ ಮೀರಿದ ಕ್ರಮವನ್ನು ಖಂಡಿಸಿದರೆ, ದೋಷಾರೋಪಣೆಗೆ ಮುಂದಾದ ಪಕ್ಷಗಳಿಗೆ ಮುಜುಗರ ತೀವ್ರವಾಗುತ್ತದೆ. ಡಿಎಂಕೆ ಅದನ್ನು ಎದುರಿಸಬಹುದು; ಆದರೆ ಕಾಂಗ್ರೆಸ್, ಸಾಂವಿಧಾನಿಕ ವಿವೇಕವನ್ನೂ ಮೀರಿ ಈ ಪ್ರಹಸನಕ್ಕೆ ಏಕೆ ಅವಕಾಶ ನೀಡಿದೆ ಎಂಬ ಪ್ರಶ್ನೆಗೆ ಉತ್ತರಿಸಬೇಕಾಗುತ್ತದೆ.
ನ್ಯಾಯಾಧೀಶರೊಡನೆ ಭಿನ್ನಾಭಿಪ್ರಾಯ ಹೊಂದುವುದು ಪ್ರಜಾಸತ್ತಾತ್ಮಕ ಹಕ್ಕು. ಆದರೆ ಅವರ ತೀರ್ಪುಗಳ ವಿರುದ್ಧ ಅವರಿಗೆ ವೈಯಕ್ತಿಕವಾಗಿ ಬೆದರಿಕೆ ಹಾಕುವುದು ಅಲ್ಲ. ಇದರ ಪರಿಣಾಮಗಳನ್ನು ಸರಿಯಾಗಿ ಗಮನಿಸದೆ, ಕಾಂಗ್ರೆಸ್ ಒಂದು ಬಲೆಯಲ್ಲಿ ಸಿಲುಕಿದೆ. ಇದು ಪಕ್ಷದ ಮೇಲೆ ರಾಜಕೀಯ ಕಳಂಕವನ್ನು ಬಿಂಬಿಸುವುದಷ್ಟೇ ಅಲ್ಲದೆ, ಕರ್ನಾಟಕದಂತಹ ರಾಜ್ಯದಲ್ಲಿ ಹೆಚ್ಚು ನಷ್ಟ ಅನುಭವಿಸುವಂತಾಗುತ್ತದೆ.
Comments
Post a Comment