ಸರ್ಕಾರ ಆರೋಪಿಗಳೊಡನೆ ನಿಲ್ಲುವುದು ಅಪಾಯಕಾರಿ
ಸಂಪಾದಕೀಯ
ಬೆಳಗಾವಿಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಒಂದು ಘಟನೆಯನ್ನು ನೋಡಿದವರಿಗೆ ಖಂಡಿತವಾಗಿಯೂ ಕರ್ನಾಟಕದ ಕಾನೂನು ನಿಯಮಪಾಲನೆಯ ಬಗ್ಗೆ ಆತಂಕ ಉಂಟಾಗುತ್ತದೆ. ನ್ಯಾಯಪರತೆ ಮತ್ತು ಕಾನೂನು ಪ್ರಕ್ರಿಯೆಯ ಅತ್ಯುನ್ನತ ಹಂತದ ಸಾಂವಿಧಾನಿಕ ರಕ್ಷಕರಾದ ಮುಖ್ಯಮಂತ್ರಿಗಳು ವೀರೇಂದ್ರ ಹೆಗ್ಗಡೆ ಜತೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವುದು ಆಘಾತಕಾರಿಯಾಗಿದೆ. ಹತ್ತಾರು ಗಂಭೀರ ಆರೋಪಗಳನ್ನು ಎದುರಿಸುತ್ತಿರುವ, ಭೂ ಕಬಳಿಕೆಯ ಪ್ರಕರಣದಲ್ಲಿ ಸರ್ಕಾರದ ಎಸಿ ನ್ಯಾಯಾಲಯದಿಂದಲೇ ಆರೋಪ ಸಾಬೀತಾಗಿರುವ, ನಾಗರಿಕ ಸಮಾಜದ ಗುಂಪುಗಳು ಆರೋಪಿಸುತ್ತಿರುವ ಹಣಕಾಸು ದುರ್ಬಳಕೆಯ ಪ್ರಕರಣಗಳನ್ನು ಹೊತ್ತಿರುವ, ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸುತ್ತಿರುವ ಆರೋಪ ಎದುರಿಸುತ್ತಿರುವ ಹೆಗ್ಗಡೆಯೊಡನೆ ಮುಖ್ಯಮಂತ್ರಿ ಗುರುತಿಸಿಕೊಂಡಿರುವುದು ಅಪಾಯಕಾರಿಯಾಗಿ ಕಾಣುತ್ತದೆ. ಇದು ಕಾಕತಾಳೀಯ ಉಪಸ್ಥಿತಿ ಅಲ್ಲ ಉದ್ದೇಶಪೂರಿತ ರಾಜಕೀಯ ನಡೆಯಾಗಿದೆ. ಇದು ಸ್ಪಷ್ಟ ಸಂದೇಶವನ್ನೂ ನೀಡುತ್ತದೆ.
ಅತ್ಯುನ್ನತ ಹಂತದ ಚುನಾಯಿತ ಪ್ರತಿನಿಧಿಯು ಸಕ್ರಿಯ ತನಿಖೆಗೆ ಒಳಗಾಗಿರುವ ಆರೋಪಿಯ ಜೊತೆ ನಿಲ್ಲುವಾಗ, ಇದು ನೋಡಲು ಕೆಟ್ಟದಾಗಿ ಕಾಣುವುದಷ್ಟೇ ಅಲ್ಲದೆ, ಸಾಂವಿಧಾನಿಕ ನೈತಿಕತೆಯ ಉಲ್ಲಂಘನೆಯೂ ಆಗುತ್ತದೆ. ಇದು ಅಧಿಕಾರಿಗಳಿಗೆ, ತನಿಖಾಧಿಕಾರಿಗಳಿಗೆ ಮತ್ತು ಸಾರ್ವಜನಿಕರಿಗೆ, ಸರ್ಕಾರ ಈಗಾಗಲೇ ತನ್ನ ನಿರ್ಧಾರವನ್ನು ಕೈಗೊಂಡಿದೆ ಎಂಬ ಸಂದೇಶ ನೀಡುತ್ತದೆ. ಸಂವಿಧಾನದ ಅನುಚ್ಛೇದ 14ರಲ್ಲಿ ಹೇಳುವ ಸರಕಾರದ ತಟಸ್ಥ ನೀತಿಯನ್ನು ಭ್ರಷ್ಟಗೊಳಿಸುತ್ತದೆ. ನ್ಯಾಯವನ್ನು ಮೇಲ್ನೋಟಕ್ಕೆ ಅಧಿಕಾರದ ಆಡುಂಬೊಲವಾಗಿ ಪರಿವರ್ತಿಸುತ್ತ
ಮುಖ್ಯಮಂತಿ ವರ್ತನೆ ಸಮಸ್ಯಾತ್ಮಕವಾದರೆ, ಉಪಮುಖ್ಯಮಂತ್ರಿಯ ಮಾತುಗಳು ಇನ್ನೂ ಆಘಾತಕಾರಿಯಾಗಿವೆ. ಡಿ ಕೆ ಶಿವಕುಮಾರ್ ಮತ್ತೊಮ್ಮೆ ಆತ್ಮ ವಿಶ್ವಾಸದಿಂದ, ಹೆಗ್ಗಡೆ ವಿರುದ್ಧ ಮಾಡಿರುವ ಆರೋಪಗಳು `ಷಡ್ಯಂತ್ರದ ಒಂದು ಭಾಗ' ಎಂದು ಮತ್ತೆ ಘೋಷಿಸಿದ್ದಾರೆ. ಇದೇ ಸರ್ಕಾರ ರಚಿಸಿರುವ ಎಸ್‍ಐಟಿ ತನಿಖೆಯು ಚಾಲನೆಯಲ್ಲಿರುವಾಗಲೇ ಈ ಘೋಷಣೆಯೂ ಕೇಳಿಬಂದಿದೆ. ಇವರ ಹೇಳಿಕೆ ಸ್ವಂತ ಅಭಿಪ್ರಾಯ ಮಾತ್ರವಲ್ಲ, ಇದು ರಾಜಕೀಯ ನಿರ್ದೇಶನವಾಗಿದ್ದು, ಸಾರ್ವಜನಿಕ ಭಾಷಣದ ಮೂಲಕ ರವಾನಿಸಲಾಗಿದೆ. ಇದು ತನಿಖೆಯನ್ನು ಪೂರ್ತಿಯಾಗುವ ಮುನ್ನವೇ ನಗಣ್ಯಗೊಳಿಸಿದಂತಾಗುತ್ತದೆ. ಎಸ್‍ಐಟಿ ತನಿಖೆಯ ಅಂತಿಮ ಫಲಿತಾಂಶವನ್ನು ನಿರೀಕ್ಷಿತ ಎಂಬ ಭಾವನೆ ಮೂಡಿಸುತ್ತದೆ. ಇದು ಸಂತ್ರಸ್ತರ ನಿಷ್ಪಕ್ಷಪಾತ ತನಿಖೆಯ ಸಾಂವಿಧಾನಿಕ ಹಕ್ಕುಗಳನ್ನು ದಮನಿಸಿದಂತಾಗುತ್ತದೆ.
ಕಾರ್ಯಶೀಲ ಪ್ರಜಾಪ್ರಭುತ್ವದಲ್ಲಿ ಸಚಿವರು ಚಾಲನೆಯಲ್ಲಿರುವ ತನಿಖೆಯನ್ನು ಕುರಿತು ಅಂತಿಮ ಫಲಿತಾಂಶದ ಹೇಳಿಕೆಗಳನ್ನು ನೀಡುವಂತಿಲ್ಲ. ಸುಪ್ರೀಂಕೋರ್ಟ್ ಪದೇಪದೇ ಇದನ್ನು ಹೇಳುತ್ತಿದ್ದು, ತನಿಖೆಯು ಬದುಕಿನ ಮೂಲಭೂತ ಹಕ್ಕಿನ ಒಂದು ಭಾಗವಾಗಿದ್ದು, ಅನುಚ್ಛೇದ 21ರ ಅನ್ವಯ ಸ್ವಾತಂತ್ರ್ಯದ ಭಾಗವಾಗಿರುತ್ತದೆ ಎಂದು ಹೇಳುತ್ತದೆ. ಪಕ್ಷಪಾತವು ಮೇಲ್ನೋಟಕ್ಕೆ ಕಂಡುಬಂದರೂ ಅದು ಇಡೀ ತನಿಖಾ ಪ್ರಕ್ರಿಯೆಯನ್ನು ಅಸಿಂಧುಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳುತ್ತಿದೆ. ಇಲ್ಲಿ ಮೇಲ್ನೋಟವನ್ನೂ ಮೀರಿದ ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಮುಕ್ತವಾಗಿ ಅಪರಾಧಗಳನ್ನು ಅನುಮೋದಿಸುವ ವರ್ತನೆಯನ್ನು ಕಾಣುತ್ತಿದ್ದೇವೆ
ಸಚಿವರಿಗೆ ಆರೋಪಿಗಳನ್ನು ಸಮರ್ಥಿಸಲು ಮತ್ತು ದೂರುದಾರರನ್ನು, ಮಾಹಿತಿದಾರರನ್ನು, ನೊಂದ ಕುಟುಂಬಗಳನ್ನು ಬೇಟೆಯಾಡಲು ಯಾವ ನೈತಿಕತೆ ಇದೆ? ಇವರನ್ನು ಅಪಾಯಕಾರಿ ಎಂದು ಬಿಂಬಿಸುತ್ತಾ, ಬುರುಡೆ ಗ್ಯಾಂಗ್ ಎಂದು ಮೂದಲಿಸಲು ಯಾವ ನೈತಿಕ ಹಕ್ಕಿದೆ? ಒಬ್ಬ ಪ್ರಬಲ ವ್ಯಕ್ತಿಯನ್ನು ರಕ್ಷಿಸುವ ಸಲುವಾಗಿ, ತನ್ನ ಮಗಳಿಗೆ ನ್ಯಾಯ ಕೋರುವ ತಾಯಿಯ ಆಕ್ರೋಶದ ದನಿಯನ್ನು ನಿರ್ಲಕ್ಷಿಸುವುದರಿಂದ, ಯಾವ ರಾಜಕೀಯ ವ್ಯವಸ್ಥೆ ಸಮುದಾಯದ ಕೃತಜ್ಞತೆಯನ್ನು ನಿರೀಕ್ಷಿಸಲು ಸಾಧ್ಯ? ಇದು ಆಳ್ವಿಕೆ ಎನಿಸಿಕೊಳ್ಳುವುದಿಲ್ಲ. ಊಳಿಗಮಾನ್ಯ ಪೆÇೀಷಣೆಯನ್ನು ಸೆಕ್ಯುಲರ್ ಹೊದಿಕೆಯಿಂದ ಮರೆಮಾಡಲಾಗಿದೆ.
ಇದನ್ನು ಪಿತೂರಿ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಎಸ್‍ಐಟಿಗೆ ಸ್ಪಷ್ಟವಾಗಿ, ಆರೋಪಿ ಅಮಾಯಕ ಎಂದು ನಿರೂಪಿಸಿ ಎಂದು ಹೇಳಿದಂತಿದೆ. ಹೆಗ್ಗಡೆಯೊಡನೆ ವೇದಿಕೆ ಹಂಚಿಕೊಳ್ಳುವ ಮೂಲಕ ಮುಖ್ಯಮಂತ್ರಿ, ಆರೋಪಿಯು ನಮ್ಮ ರಕ್ಷಣೆ ಪಡೆದಿದ್ದಾರೆ ಎನ್ನುವ ಸಂದೇಶ ರವಾನಿಸಿದ್ದಾರೆ. ಇದರ ಪರಿಣಾಮವಾಗಿ ರಾಜ್ಯದ ಆಡಳಿತ ಯಂತ್ರವು ಅಧಿಕಾರದ ಕಡೆ ವಾಲಿದ್ದು ದಿಟ್ಟ ಪ್ರತಿರೋಧ ವ್ಯಕ್ತಪಡಿಸಿ ಮಾತನಾಡುವವರನ್ನು ಶಿಕ್ಷಿಸುತ್ತದೆ ಮತ್ತು ರಾಜಕೀಯ ಕೃಪೆ ಇರುವ ವ್ಯಕ್ತಿಗಳನ್ನು ರಕ್ಷಿಸುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ
Comments
Post a Comment