ಮಗನ ಅಭಿಪ್ರಾಯ ಮುಖ್ಯಮಂತ್ರಿಗೆ ಮುಳುವಾಗಬಹುದು

 ಯತೀಂದ್ರ ಸಿದ್ದರಾಮಯ್ಯ ಮಾಧ್ಯಮಗಳ ಮುಂದೆ ಪದೇ ಪದೇ ತನ್ನ ತಂದೆ ಐದು ವರ್ಷಗಳ ಪೂರ್ಣಾವಧಿಯನ್ನು ಮುಖ್ಯಮಂತ್ರಿಯಾಗಿ ಪೂರೈಸಲಿದ್ದಾರೆ ಎಂದು ಹೇಳುತ್ತಲೇ ಇರುವುದು ಯಾವುದೇ ತರ್ಕ ಇಲ್ಲದೆ ಅಥವಾ ಕಾರ್ಯತಂತ್ರದ ಬೆಲೆ ಇಲ್ಲದ ವಾರದ ದೇಖಾವೆ(ಪ್ರದರ್ಶನ)ಯಾಗಿ ಕಾಣುತ್ತಿದೆ. ಸಿದ್ದರಾಮಯ್ಯ ಅವರ ಹುದ್ದೆಯನ್ನು ಬಲಪಡಿಸುವುದಕ್ಕಿಂತಲೂ ಹೆಚ್ಚಾಗಿ ಈ ಆಶ್ವಾಸನೆಗಳು, ಮುಖ್ಯಮಂತ್ರಿಗಳ ವಲಯದಲ್ಲೇ ಸೃಷ್ಟಿಯಾಗಿರುವ ಅನಿಶ್ಚಿತತೆಯ ಸಂಕೇತವಾಗಿ ಕಾಣುತ್ತಿದೆ. ರಾಜಕೀಯದಲ್ಲಿ  ಜನಾಭಿಪ್ರಾಯವೇ ಪ್ರಧಾನ. ಹಾಗಾಗಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರೊಬ್ಬರು ಅವರ ಸ್ಥಿರತೆಯನ್ನು ಪ್ರಮಾಣೀಕರಿಸುತ್ತಿರುವುದು ಸಾರ್ವಜನಿಕರಲ್ಲಿ ಭಿನ್ನ ಅಭಿಪ್ರಾಯ ಮೂಡಿಸುವುದೇ ಅಲ್ಲದೆ, ಸಿದ್ದರಾಮಯ್ಯ ಅವರು ಮುಚ್ಚಿಡಲು ಯತ್ನಿಸುತ್ತಿರುವ ಅಸ್ಥಿರತೆಯನ್ನೇ ದೃಢೀಕರಿಸುತ್ತದೆ.

ಇನ್ನೂ ಹೆಚ್ಚಿನ ಸಮಸ್ಯೆ ಎಂದರೆ, ಈ ಹೇಳಿಕೆಗಳ ಅವಶ್ಯಕತೆ ಇತ್ತೇ ಎನ್ನುವುದು. ಸಿದ್ದರಾಮಯ್ಯ ಸ್ವತಃ ಸಾರ್ವಜನಿಕವಾಗಿ, ತಾವು ಕಾಂಗ್ರೆಸ್ ಹೈಕಮಾಂಡ್ ಬಯಸುವವರೆಗೂ ಮುಖ್ಯಮಂತ್ರಿಯಾಗಿ ಮುಂದುವರಿಯುವುದಾಗಿ ಹೇಳುತ್ತಿದ್ದಾರೆ. ಇದು ಸಾಂವಿಧಾನಿಕ ಹಾಗೂ ರಾಜಕೀಯ ಸ್ಥಿತ್ಯಂತರವಾಗಿದ್ದು, ಮುಖ್ಯಮಂತ್ರಿಯಿಂದ ಅಪೇಕ್ಷಿತವೂ ಆಗಿರುತ್ತದೆ. ಆದರೆ ಯತೀಂದ್ರ ಪದೇ ಪದೇ, ನನ್ನ ತಂದೆ ಪೂರ್ಣಾವಧಿಯನ್ನು ಪೂರೈಸುತ್ತಾರೆ ಎಂದು ಹೇಳುತ್ತಿರುವುದು, ಮುಖ್ಯಮಂತ್ರಿಗಳ ಸ್ಥಾನಗೌರವವನ್ನು ಉಲ್ಲಂಘಿಸುತ್ತದೆ, ತನ್ಮೂಲಕ ಪಕ್ಷದ ಶಿಸ್ತನ್ನೂ ಸಹ ಮೀರಿ ನಡೆದಂತಾಗುತ್ತದೆ. ಯತೀಂದ್ರ ತಮ್ಮ ಮಿತಿಯನ್ನು ಮೀರಿ ವರ್ತಿಸುತ್ತಿರುವುದನ್ನು ಇದು ಸೂಚಿಸುವುದೇ ಅಲ್ಲದೆ, ಅವರಿಗೆ ಯಾವುದೇ ಅಧಿಕಾರವನ್ನು ನೀಡದೆ ಇದ್ದರೂ ಪಕ್ಷದ ಪರವಾಗಿ ಮಾತನಾಡಿದಂತಾಗುತ್ತದೆ.

ಕರ್ನಾಟಕದ ರಾಜಕೀಯ ಚರಿತ್ರೆಯಲ್ಲಿ ಗುಂಪುಗಾರಿಕೆ ರಾಜಕಾರಣ ಮತ್ತು ಕುಟುಂಬದ ಪ್ರಭಾವದ ಬಗ್ಗೆ ಸಾಕಷ್ಟು ನಿದರ್ಶನಗಳಿವೆ. ಆದರೆ ಈ ಕುಟುಂಬಗಳು ನೀಡುವ ಸಂದೇಶಗಳು ವಿಫಲವಾಗುವುದೇ ಹೆಚ್ಚು. ನಿರೂಪಣೆಗಳನ್ನು ತಿರುಚಲು, ಪಕ್ಷದ ಕಾರ್ಯ ಯಂತ್ರವನ್ನು ಮುಜುಗರಕ್ಕೀಡುಮಾಡಲು ಈ ಸಂದೇಶಗಳು ಪೂರಕವಾಗುತ್ತವೆ.  ಪ್ರತಿ ಬಾರಿ ಯತೀಂದ್ರ ತಮ್ಮ ಒಂದೇ ಹೇಳಿಕೆಯನ್ನು ಪುನರುಚ್ಛರಿಸಿದಾಗಲೂ, ಪಕ್ಷದ ಬಣಗಳಲ್ಲಿರುವ ಗುಮಾನಿಗಳನ್ನು ಪುಷ್ಟೀಕರಿಸಿದಂತಾಗುತ್ತದೆ, ಮುಖ್ಯಮಂತ್ರಿಗಳ ಅಸ್ಥಿರತೆಯನ್ನು ದೃಢೀಕರಿಸಿದಂತಾಗುತ್ತದೆ. ಅಷ್ಟೇ ಅಲ್ಲದೆ ಯತೀಂದ್ರ ತಮ್ಮ ಹೇಳಿಕೆಗಳ ಮೂಲಕ ಪಕ್ಷದ ಹೈಕಮಾಂಡ್‍ಗೆ ಮುಜುಗರವನ್ನು ಹೆಚ್ಚುಮಾಡುತ್ತಿದ್ದು, ಹೈಕಮಾಂಡ್ ಹಿರಿಯ ನಾಯಕರ ಸಂಬಂಧಿಗಳ ಈ ರಾಜಕೀಯ ವಿಶ್ಲೇಷಣೆಯನ್ನು ಸಹಿಸಿಕೊಳ್ಳುತ್ತಿಲ್ಲ.

ಕೆ ಎನ್ ರಾಜಣ್ಣ ಅವರ ಇತ್ತೀಚಿನ ನಿದರ್ಶನವು ಎಚ್ಚರಿಕೆಯಾಗಿ ಕಾಣಬೇಕಿದೆ. ರಾಜಣ್ಣ ಸಿದ್ದರಾಮಯ್ಯ ಅವರ ಅಧಿಕೃತ ಸಮರ್ಥಕರಾಗಿ ಪ್ರದರ್ಶಿಸಿಕೊಂಡಿದ್ದು, ಕೊನೆಗೆ ಅವರ ಮಂತ್ರಿ ಪದವಿಯನ್ನೇ ಕಳೆದುಕೊಳ್ಳಬೇಕಾಯಿತು. ಹಾಲಿ ಸಚಿವರೊಬ್ಬರು ಹೀಗೆ ಬೆಲೆ ತೆರಬೇಕಾದರೆ, ಯತೀಂದ್ರರ ನಡವಳಿಕೆಯು, ಉದ್ದೇಶಪೂರಿತವಾಗಿದ್ದು, ಪಕ್ಷದ ನಿಗಾದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಎಮ್‍ಎಲ್‍ಸಿ ಆಗಿ ಅವರ ಸ್ಥಾನವೇ ತಂದೆಯ ಔದಾರ್ಯದ ಫಲವಾಗಿದ್ದು, ಈ ದೃಷ್ಟಿಯಿಂದಲಾದರೂ ಯತೀಂದ್ರ ಸಂಯಮ, ಘನತೆಯನ್ನು ಕಾಪಾಡಿಕೊಂಡು ಅಧಿಕಾರಕ್ಕೆ ಸಂಬಂಧಿಸಿದ ವಿಚಾರಗಳಿಂದ ದೂರ ಉಳಿಯವುದು ಉಚಿತ.

ಯತೀಂದ್ರ ತಮ್ಮ ಹೇಳಿಕೆಗಳ ಮೂಲಕ ಅವರ ತಂದೆಗೆ, ಕ್ಷೇತ್ರಕ್ಕೆ ಮತ್ತು ಪಕ್ಷಕ್ಕೆ ಇನ್ನೂ ಉತ್ತಮ ಸೇವೆ ಸಲ್ಲಿಸಬೇಕೆಂದರೆ ತಮ್ಮ ಶಾಸಕತ್ವದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೇ ಹೊರತು, ರಾಜಕೀಯ ವಿಶ್ಲೇಷಕರಾಗಬಾರದು. ಈ ಸಂದರ್ಭದಲ್ಲಿ ಮೌನವಾಗಿರುವುದು ಇನ್ನೂ ಘನತೆಯ ಲಕ್ಷಣವಾಗುತ್ತದೆ. ಪದೇ ಪದೇ ನೀಡುವ ಘೋಷಣೆಗಳು ಈಗ ಅನವಶ್ಯಕವಾಗಿದ್ದು, ಅತಿರೇಕವೂ, ಅಸಂಬದ್ಧವೂ ಆಗಿದೆ. ಕಾಂಗ್ರೆಸ್ ಪಕ್ಷಕ್ಕೆ, ವಿರೋಧ ಪಕ್ಷಗಳಿಂದ ಅಲ್ಲದೆ, ತನ್ನ ಮುಖ್ಯಮಂತ್ರಿಯ ಮಗನಿಂದಲೇ ಉಂಟಾಗುವ ತೊಂದರೆಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again