ಕರಾವಳಿಯಲ್ಲಿದ್ದಾಗಲೇ ಪ್ರಧಾನಿ ಧರ್ಮಸ್ಥಳ ಮೌನದ ಇರಿಸುಮುರಿಸು

 ನೇರಾನೇರ * ಬಿವಿಸೀ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಇತ್ತೀಚಿನ ಉಡುಪಿ ಭೇಟಿ ಕರಾವಳಿ ಕರ್ನಾಟಕದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಧರ್ಮಸ್ಥಳದಲ್ಲಿ ಹಲವು ಮಹಿಳೆಯರ ಕಾಣೆಯಾದ ಘಟನೆಗಳು, ಅವರ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು, ಅನುಮಾನಾಸ್ಪದ ಸಾವುಗಳ ತನಿಖೆಯನ್ನು ಮಾಡಬೇಕಾದ ವಿಶೇಷ ತನಿಖಾ ಘಟಕದ ಮೇಲಿನ ಅವಿಶ್ವಾಸ, ಎಲ್ಲರಿಗೂ ಗೊತ್ತಿರುವ ಅಪರಾಧಿಗಳ ಜತೆ ರಾಜ್ಯ ಸರಕಾರ ನಿಂತಿರುವುದು - ಇವೆಲ್ಲವೂ ಜನಮನವನ್ನು ಕಲಕಿರುವ ಸಂದರ್ಭದಲ್ಲಿ, ಪ್ರಧಾನ ಮಂತ್ರಿ ನೂರು ಕಿ ಮೀ ದೂರದಲ್ಲಿದ್ದರೂ ಈ ವಿಷಯದ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ - ತಮ್ಮ ಕಳವಳವನ್ನು ಜನರೊಂದಿಗೆ ಹಂಚಿಕೊಳ್ಳಲಿಲ್ಲ. ಈ ಮೌನ ಜನರ ನೋವನ್ನು ಹೆಚ್ಚಿಸುವುದಲ್ಲದೆ, ಆಡಳಿತ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ.

ದಕ್ಷಿಣ ಕನ್ನಡದ ಜನರು ಕನಿಷ್ಠ ಅವರ ಆತಂಕವನ್ನು ಗುರುತಿಸುವ ಹೇಳಿಕೆಯನ್ನು ಪ್ರಧಾನಿಯಿಂದ ನಿರೀಕ್ಷಿಸಿದ್ದರು. ನಾಗರಿಕ ಸಂಘಟನೆಗಳು ವರ್ಷಗಳ ಕಾಲ ಧರ್ಮಸ್ಥಳ ರಿಪಬ್ಲಿಕ್ ಒಡೆಯರಿಂದ ನಡೆಯುತ್ತಿರುವ ಅಕ್ರಮಗಳು ಮತ್ತು ಅಪರಾಧಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬರಹ ರೂಪದಲ್ಲಿ ಮನವಿಗಳನ್ನು ಸಲ್ಲಿಸಿದ್ದವು. ಪ್ರಧಾನ ಮಂತ್ರಿಯವರಿಗೆ ಜನರ ನೋವು ತಿಳಿದಿತ್ತು. ಆದರೂ ಅವರು ಉಡುಪಿಯಲ್ಲಿ ಮಾಡಿದ ಭಾಷಣದಲ್ಲಿ ಈ ವಿಷಯವನ್ನು ಸಂಪೂರ್ಣ ನಿರ್ಲಕ್ಷಿಸಿದರು. ಜನರು ಇದನ್ನು ಮರೆವಲ್ಲ, ನಿಜವಾದ ತಪ್ಪಿಸಿಕೊಳ್ಳುವಿಕೆ ಎಂದುಕೊಳ್ಳುತ್ತಿದ್ದಾರೆ. ಸಮಾಜದ ನೋವಿನ ಕ್ಷಣದಲ್ಲಿ, ಮೌನವೇ ಮತ್ತಷ್ಟು ಘಾಸಿಗೊಳಿಸುತ್ತದೆ.

ಈ ಒಂದು ಆತಂಕ ಮತ್ತು ದುಗುಡಕ್ಕೆ ಸೇರಿಕೊಂಡ ಮತ್ತೊಂದು ಕಾರಣವೇ ಧರ್ಮಸ್ಥಳ ವಿಶೇಷ ತನಿಖಾ ಘಟಕದ ನಡೆ. ಸತ್ಯವನ್ನು ಹೊರತರುವ ನಿರೀಕ್ಷೆಯಿದ್ದ ತನಿಖಾ ಘಟಕವೇ ಈಗ ಅಪರಾಧಿ ಕಟಕಟೆಯಲ್ಲಿ ನಿಂತಿದೆ. ತನಿಖೆಗೆ ಕರೆಯಲಾದ ಸಾಕ್ಷಿದಾರ ಟಿ ಜಯಂತ್ ಮೇಲೆ ಘಟಕದ ವಶದಲ್ಲಿರುವಾಗಲೇ ನಡೆದ ಹಲ್ಲೆ, ಈ ತನಿಖೆಯ ಮೇಲಿನ ನಂಬಿಕೆಯನ್ನು ಧೂಳೀಪಟಗೊಳಿಸಿದೆ. ಈ ಹಲ್ಲೆಯ ನಂತರ ಸಾಕ್ಷಿದಾರರು ನೀಡಿದ ಪೊಲೀಸ್ ದೂರಿಗೆ ಗೃಹ ಸಚಿವ, ಉಪ ಮುಖ್ಯಮಂತ್ರಿ ಅಥವಾ ತನಿಖಾ ಘಟಕದ ಮುಖ್ಯಸ್ಥರೆಲ್ಲರೂ ಮೌನವಾಗಿರುವುದು ಸಾರ್ವಜನಿಕ ಅನುಮಾನವನ್ನು ಇನ್ನಷ್ಟು ಗಾಢಗೊಳಿಸಿದೆ. ಇಂತಹ ಸಂದರ್ಭದಲ್ಲಿ ನಾಯಕರ ಮೌನವು ಕೇವಲ ವಿಳಂಬವಲ್ಲ, ನೈತಿಕ ವಿಫಲತೆ.

ಘಟಕದ ಮುಖ್ಯಸ್ಥ ಪ್ರಣಬ್ ಮಹಾಂತಿಯವರ ಹಿಂದಿನ ವಿವಾದಗಳು - ವಿಶೇಷವಾಗಿ ಡಿವೈಎಸ್‍ಪಿ ಗಣಪತಿ ಬರೆದ ಆತ್ಮಹತ್ಯೆ ಪತ್ರದಲ್ಲಿ ಆರೋಪಿಯಾಗಿ ಅವರ ಹೆಸರಿನ ಉಲ್ಲೇಖ - ಈಗ ಮತ್ತೆ ಹೊರಬಂದಿವೆ. ಇಷ್ಟು ಸಂವೇದನಾಶೀಲ ತನಿಖೆಯ ಹೊಣೆ ಹೊತ್ತಿರುವವರು, ಕನಿಷ್ಠ ತಮ್ಮ ಸಿಬ್ಬಂದಿಯ ವಿರುದ್ಧ ನಡೆದಿರುವ ಹಲ್ಲೆಯ ಬಗ್ಗೆ ಒಳ ಇಲಾಖಾ ತನಿಖೆಯನ್ನು ಆದೇಶಿಸಬೇಕಿತ್ತು. ಅವರು ಅದನ್ನು ಮಾಡದಿರುವುದು ಘಟಕದ ನಿಷ್ಪಕ್ಷಪಾತತೆಯ ಮೇಲಿನ ಅನುಮಾನವನ್ನು ಗಟ್ಟಿಗೊಳಿಸಿದೆ.

ಜನರನ್ನು ಹೆಚ್ಚು ಕಾಡುತ್ತಿರುವ ಪ್ರಶ್ನೆ ಒಂದೇ: ಧರ್ಮಸ್ಥಳದ ಮುಖ್ಯ ಆರೋಪಿಗಳನ್ನು ತನಿಖಾ ಘಟಕ ಇದುವರೆಗೆ ಏಕೆ ವಿಚಾರಣೆ ಮಾಡಿಲ್ಲ? ಜನಪ್ರಿಯ ಹೇಳಿಕೆ "ಕಳ್ಳನಿಗೆ ತ್ರಿಜೋರಿ ಕೀಲಿಕೊಟ್ಟಂತಾಗಿದೆ" ಎಂಬುದು ಈಗ ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯ ಮಾತಾಗಿದೆ. ಇದು ಜನರ ವಿಶ್ವಾಸ ಎಷ್ಟು ಕುಸಿದಿದೆ ಎನ್ನುವುದಕ್ಕೆ ಸಾಕ್ಷಿ.

ರಾಜ್ಯದ ಆಡಳಿತ ನಾಯಕತ್ವವೂ ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸಿದೆ. ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನಿರಂತರ ದೇವಾಲಯ ಪ್ರವಾಸಗಳು ಈಗ ಭಕ್ತಿಯ ಸಂಕೇತವಾಗಿಲ್ಲ; ಜನರ ಕೋಪಕ್ಕೆ ಗುರಿಯಾಗಿವೆ. ಈ ಭಕ್ತಿಗೆ ಪವಿತ್ರ ಉದ್ದೇಶವಿಲ್ಲ, ಇದೆಲ್ಲ ನಾಟಕ ಎಂದು ಜನ ಅಂದುಕೊಳ್ಳುತ್ತಿದ್ದಾರೆ. ಡಿಕೆಶಿ ಧರ್ಮಸ್ಥಳದ ಪಟ್ಟಭದ್ರರನ್ನು ರಕ್ಷಿಸುವ ಪ್ರತಿಜ್ಞೆ ತೆಗೆದುಕೊಂಡಿದ್ದಾರೆ ಎನ್ನುವುದು ಗೊತ್ತಿರುವ ಜನ ಇದೆಲ್ಲಿಗೆ ಬಂತು ಆಡಳಿತ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಪಾಮಾಣಿಕತೆ ಮತ್ತು ನ್ಯಾಯವನ್ನು ಒಡಲಲ್ಲಿ ಹುದುಗಿಸಿಕೊಳ್ಳದ ಭಕ್ತಿ ಜನರ ದೃಷ್ಟಿಯಲ್ಲಿ ಪ್ರಮಾದ.

ಒಟ್ಟಿನಲ್ಲಿ, ಕರಾವಳಿ ಕರ್ನಾಟಕದ ಜನರು ಇಂದು ಕೇಂದ್ರ ಹಾಗೂ ರಾಜ್ಯ ಎರಡರಿಂದಲೂ ಪೂರ್ಣವಾಗಿ ನಿರ್ಲಕ್ಷಿಸಿದ ಭಾವನೆ ಹೊಂದಿದ್ದಾರೆ. ಪ್ರಧಾನ ಮಂತ್ರಿ ಮಾತನಾಡಲಿಲ್ಲ, ಸಚಿವರು ಕ್ರಮ ಕೈಗೊಳ್ಳಲಿಲ್ಲ, ತನಿಖಾ ಘಟಕ ಜನರಿಗೆ ವಿಶ್ವಾಸದ್ರೋಹಗೈದಿದೆ. ಈ ಎಲ್ಲವುಗಳನ್ನು ನೋಡಿ ಜನರು ಒಂದೇ ತೀರ್ಮಾನಕ್ಕೆ ಬಂದಿದ್ದಾರೆ: ನ್ಯಾಯವನ್ನು ರಕ್ಷಿಸುವ ಬದಲು, ಅದನ್ನು ಮರೆಮಾಡಲಾಗುತ್ತಿದೆ. `ನಮ್ಮನ್ನು ಪ್ರಭಲರ ಹುನ್ನಾರದಿಂದ ದೇವರೇ ಕಾಪಾಡಬೇಕು'.

ಉಡುಪಿಯ ವೇದಿಕೆಯಲ್ಲಿ ಪ್ರಧಾನ ಮಂತ್ರಿಯವರ ಮೌನ ಕರಾವಳಿಯನ್ನು ಶಮನಗೊಳಿಸಲಿಲ್ಲ - ಅದು ಬೆಂಕಿಗೇ ಎಣ್ಣೆ ಸುರಿಸಿದಂತಾಯಿತು. ಈ ಮೌನ ಮುರಿಯುವ ದಿನದವರೆಗೆ, ಜನರ ಗಾಯದ ನೋವು ತೀವ್ರಗೊಳ್ಳುತ್ತಿರುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again