ದಕ್ಷಿಣ ಕನ್ನಡಕ್ಕೆ ಕೊನೆಗೂ ಮರಳಿದ ಶಾಂತಿ
ಶಾಂತಿ ಎಂದರೇನು ಎನ್ನುವುದನ್ನೇ ಮರೆತು ಹೋಗಿದ್ದ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿರುವುದು ಸ್ತುತ್ಯಾರ್ಹ, ಸ್ವಾಗತಾರ್ಹ.
.........
ನೇರಾನೇರ * ಬಿವಿಸೀ
ಹಲವು ವರ್ಷಗಳಲ್ಲಿ ಮೊಟ್ಟಮೊದಲ ಬಾರಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಶಾಂತಿಯುತ ವಾತಾವರಣ ಕಂಡುಬರುತ್ತಿದೆ. ರಾಜ್ಯ ಸರ್ಕಾರವು ಕಠಿಣವಾದ ಕಾನೂನು ಸುವ್ಯವಸ್ಥೆಯ ಕ್ರಮಗಳನ್ನು ಜಾರಿಗೊಳಿಸಿ, ಕೋಮು ಗಲಭೆಗಳನ್ನು ನಿಯಂತ್ರಿಸಿರುವುದರಿಂದ ಒಂದು ಕಾಲದಲ್ಲಿ ನಿತ್ಯ ಸುದ್ದಿಯಾಗುತ್ತಿದ್ದ ಕೋಮು ಸಂಘರ್ಷಗಳು ಇಲ್ಲವಾಗಿವೆ. ಈ ವ್ಯತ್ಯಾಸವನ್ನು ಸ್ಪಷ್ಟವಾಗಿ ಗುರುತಿಸಬಹುದು. ಆಡಳಿತದ ಸಂದೇಶ ಸ್ಪಷ್ಟವಾಗಿದ್ದು, ಶಾಂತಿ ಮತ್ತು ಸುವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳಲಾಗುವುದಿಲ್ಲ, ಶಾಂತಿಗೆ ಭಂಗ ತರುವವರು ಯಾರೇ ಆಗಿರಲಿ, ಯಾವುದೇ ಸಂಘಟನೆಯಾಗಿರಲಿ, ಕಾನೂನು ಪ್ರಕಾರ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಸಂದೇಶವದು.
ಹಲವು ದಶಕಗಳ ಕಾಲ ಈ ಕರಾವಳಿ ಪ್ರದೇಶವನ್ನು ಕೋಮುವಾದಿ ಶಕ್ತಿಗಳು ತಮ್ಮ ವಶದಲ್ಲಿಟ್ಟುಕೊಂಡಿದ್ದವು. ಕೋಮು ಧೃವೀಕರಣದ ಮೂಲಕ ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡಿದ್ದವು. ಸಂಘಪರಿವಾರವು ತನ್ನ ಸಂಯೋಜಿತ ಸಂಘಟನೆಗಳ ಜಾಲದ ಮೂಲಕ ಸತತವಾಗಿ ಪ್ರಚೋದನಕಾರಿ ಗಲಭೆಗಳನ್ನು ಸೃಷ್ಟಿಸುತ್ತಿತ್ತು. ಸಮುದಾಯಗಳ ನಡುವೆ ದಾಳಿ ಮತ್ತು ಪ್ರತಿದಾಳಿಗಳು ನಿತ್ಯ ದುರಂತವಾಗಿತ್ತು. ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ವಾಣಿಜ್ಯ ಕೇಂದ್ರಗಳು ದಕ್ಷಿಣ ಕನ್ನಡಕ್ಕೆ ಪುರೋಗಾಮಿ ಚಿತ್ರಣವನ್ನು ಕಲ್ಪಿಸಿದ್ದರೂ ಸಹ ಇವುಗಳ ಗೌರವವೂ ಹಾಳಾಗಿದ್ದು, ಎಲ್ಲೆಡೆ ಭೀತಿ ಆವರಿಸಿತ್ತು. ಹೊರಗಿನ ವ್ಯಕ್ತಿಗಳು ಈ ಪ್ರದೇಶವನ್ನು ಅಸುರಕ್ಷಿತ ಎಂದೇ ಭಾವಿಸತೊಡಗಿದ್ದರು.
ಬಿಜಿಪಿ ಮತ್ತು ಸಂಯೋಜಿತ ಸಂಘಟನೆಗಳಾದ ಆರೆಸ್ಸೆಸ್, ವಿಹಿಂಪ, ಅಧಿಕಾರ ಇದ್ದಾಗಲೂ ಇಲ್ಲದಿರುವಾಗಲೂ ಸಹ ಇಲ್ಲಿನ ಕಾನೂನುಭಂಜಕ ವಾತಾವರಣಕ್ಕೆ ಪ್ರಮುಖವಾಗಿ ಜವಾಬ್ದಾರರಾಗಿದ್ದವು. ಮೌನವಾಗಿ ಅಥವಾ ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಪಕ್ಷವು ಮತ್ತು ಅದರ ಸಹ ಸಂಘಟನೆಗಳು ಈ ಗಲಭೆಗಳ ಹಿಂದಿನ ವ್ಯಕ್ತಿಗಳಿಗೆ ಬೆಂಬಲ ನೀಡುವುದು ಸಾಮಾನ್ಯವಾಗಿತ್ತು. ಹತ್ಯೆ, ದೊಂಬಿ, ಸಾಮೂಹಿಕ ಕಲಹಗಳು ಅಪರೂಪವಾಗುವ ಬದಲು ನಿತ್ಯ ಸುದ್ದಿಯಾಗಿದ್ದವು. ಗಲಭೆಗಳ ಸಂದರ್ಭದಲ್ಲಿ ಪಕ್ಷದ ತಾರತಮ್ಯದ ವರ್ತನೆ ಈ ವಿಭಜನೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎರಡೂ ಕೋಮುಗಳ ಕಡೆ ಹತ್ಯೆಗಳು ನಡೆದಾಗ ಮಂಗಳೂರಿಗೆ ಭೇಟಿ ನೀಡಿದ್ದು, ಕೇವಲ ಹಿಂದೂ ಕುಟುಂಬಗಳಿಗೆ ವಿಸಿಟ್ ನೀಡಿ ಮುಸ್ಲಿಂ ಸಂತ್ರಸ್ತರನ್ನು ನಿರ್ಲಕ್ಷಿಸಿದ್ದರು. ಈ ಒಂದು ನಡವಳಿಕೆಯೇ ಆಡಳಿತಾರೂಢ ಪಕ್ಷವು ಕೇವಲ ಒಂದು ಸಮುದಾಯದ ನೋವಿಗೆ ಮಾತ್ರ ಸ್ಪಂದಿಸುತ್ತದೆ ಎಂಬ ಅಪಾಯಕಾರಿ ಸಂದೇಶವನ್ನು ನೀಡಿತ್ತು. ಇದು ಸಂಘ ಪರಿವಾರದ ವಿಶಾಲ ರಾಜಕೀಯ ನಿರೂಪಣೆಯ ಸಂಕೇತವೂ ಆಗಿತ್ತು. ಬಿಜೆಪಿ ಹಿಂದೂಗಳಿಗಾಗಿ ಇರುವ ಪಕ್ಷವೇ ಹೊರತು ಎಲ್ಲ ನಾಗರಿಕರಿಗೆ ಅಲ್ಲ ಎಂಬ ಸಂದೇಶ ನೀಡಿತ್ತು. ಪಕ್ಷದ ಹಿರಿಯ ಮುತ್ಸದ್ದಿ ಮಾಜಿ ಪ್ರಧಾನಿ ವಾಜಪೇಯಿ ಹೇಳಿದ ರಾಜಧರ್ಮವನ್ನು ಬಿಜೆಪಿ ಎಂದೂ ಸಹ ಪಾಲಿಸಿಲ್ಲ.
ಈ ತಾರತಮ್ಯದ ಧೋರಣೆಗೆ ಆರೆಸ್ಸೆಸ್ ಮತ್ತು ವಿಹಿಂಪ ಸಂಘಟನೆಗಳ ಪ್ರೇರಣೆಯಾಗಿದ್ದು, ಸಮುದಾಯಗಳ ನಡುವೆ ಬೇರೂರಿದ್ದ ಅವಿಶ್ವಾಸವೇ ದಕ್ಷಿಣಕನ್ನಡವನ್ನು ಕೋಮು ಸಂಘರ್ಷಕ್ಕೆ ಸಜ್ಜಾದ ಪ್ರದೇಶವನ್ನಾಗಿ ಮಾಡಿತ್ತು. ಈ ಅವಧಿಯ ಆಡಳಿತ ವ್ಯವಸ್ಥೆಯೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸದೆ, ಗಲಭೆಕೋರರನ್ನು ಒಂದು ಶ್ರದ್ಧೆಯ ರಕ್ಷಕರಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿತ್ತು. ಈಗ ಕಾಂಗ್ರೆಸ್ ಆಡಳಿತದಲ್ಲಿ ಪರಿಸ್ಥಿತಿ ಬದಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ ಅವರ ದೃಢ ನಿಲುವು ಪ್ರಶಂಸಾರ್ಹ. ಪೆÇಲೀಸರಿಗೆ ಮುಕ್ತ ಅವಕಾಶ ನೀಡುವ ಮೂಲಕ, ರಾಜಕೀಯ ಒತ್ತಡಕ್ಕೆ ಮಣಿಯದಂತೆ ನೋಡಿಕೊಂಡಿದ್ದಾರೆ. ಹಲವು ದಶಕಗಳಲ್ಲಿ ಮೊದಲ ಬಾರಿಗೆ ಮಂಗಳೂರು ಮತ್ತು ದಕ್ಷಿಣ ಕನ್ನಡದ ಪೆÇಲೀಸರು ರಾಜಕಾರಣಿಗಳ ಹಸ್ತಕ್ಷೇಪವಿಲ್ಲದೇ ಶಾಂತಿಯ ಪರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಎಫ್‍ಐಆರ್‍ಗಳನ್ನು ದಾಖಲಿಸಲಾಗುತ್ತಿದೆ, ಬಂಧನಗಳನ್ನು ಜಾರಿಗೊಳಿಸಲಾಗುತ್ತಿದೆ, ಹಿಂದೂ ಆಗಲಿ ಮುಸ್ಲಿಂ ಆಗಲಿ ಗಲಭೆಗೆ ಕಾರಣರಾದ ಯಾರನ್ನೂ ಬಿಡುತ್ತಿಲ್ಲ.
ನಿರೀಕ್ಷಿತವಾಗಿಯೇ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಸರ್ಕಾರವನ್ನು ಹಿಂದೂ ವಿರೋಧಿ ಎಂದು ಆರೋಪಿಸುತ್ತಿದ್ದು, ಇದು ಸೂಕ್ಷ್ಮವಾಗಿ ನೋಡಿದಾಗ ಪೆÇಳ್ಳು ಆರೋಪ. ಕಾಂಗ್ರೆಸ್ ಸರ್ಕಾರದ ನೀತಿ ಹಿಂದೂ ವಿರೋಧಿ ಅಲ್ಲ, ಹಿಂಸಾ ವಿರೋಧಿ ಎನ್ನುವುದು ಸಾಬೀತಾಗುತ್ತಿದೆ. ದೊಂಬಿಗೆ ಕಾರಣರಾದವರನ್ನು, ಶಾಂತಿಯ ವಾತಾವರಣ ಕದಡುವುವರನ್ನು ಗುರಿಯಾಗಿಸಿದೆಯೇ ಹೊರತು, ಶಾಂತಿ ಬಯಸುವವರನ್ನಲ್ಲ. ಸಂಘಪರಿವಾರದ ಅಬ್ಬರದ ಪ್ರತಿಭಟನೆಗಳು ಅದರ ಹತಾಶೆ ಮತ್ತು ಮುಜುಗರದ ಸಂಕೇತವಾಗಿದ್ದು ಕೋಮುವಾದಿ ವ್ಯಾಖ್ಯಾನಗಳ ಮೇಲೆ ಇದ್ದ ನಿಯಂತ್ರಣವನ್ನು ಕಳೆದುಕೊಳ್ಳುತ್ತಿರುವುದನ್ನು ಸೂಚಿಸುತ್ತದೆ.
ಸಾರ್ವಜನಿಕರೂ ಸಹ ಹೊಸ ಸುವ್ಯವಸ್ಥೆಯನ್ನು ಸ್ವಾಗತಿಸುತ್ತಿದ್ದಾರೆ. ನಿಷೇಧಾಜ್ಞೆ, ಕಫ್ರ್ಯೂ ಮತ್ತು ದಂಗೆಗಳ ಬಗ್ಗೆ ಭಯಭೀತರಾಗಿದ್ದ ಜನತೆ ಈಗ ಸಾಮಾನ್ಯ ಜೀವನ ನಡೆಸುವಂತಾಗಿದೆ. ಪ್ರದೇಶದ ಸಾಮಥ್ರ್ಯಗಳ ಬಗ್ಗೆ, ಶಿಕ್ಷಣ, ಆರೋಗ್ಯ ಮತ್ತು ಔದ್ಯಮಿಕ ಶಕ್ತಿಯ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ಮೂಡುತ್ತಿದ್ದು ನಿರ್ಭೀತಿಯಿಂದ ಸಾಧಿಸುವ ಆಶಾಭಾವನೆ ಮೂಡಿದೆ.
ಆದರೆ ಶಾಂತಿ ಯಾವಾಗಲೂ ಸಹ ದುರ್ಬಲವಾಗಿರುತ್ತದೆ. ಸರ್ಕಾರದ ಮುಂದಿರುವ ಸವಾಲು, ಈ ಎಚ್ಚರಿಕೆಯನ್ನು ಕಾಪಾಡಿಕೊಂಡು ಬರುವುದು, ತನ್ಮೂಲಕ ಕಾನೂನು ಜಾರಿ ಮಾಡುವ ವ್ಯವಸ್ಥೆಯನ್ನು ನಿಷ್ಪಕ್ಷಪಾತವಾಗಿ, ವೃತ್ತಿಪರತೆಯಿಂದ ನಿರ್ವಹಿಸಬೇಕಿದೆ. ಪೆÇಲೀಸರು ನಿರ್ಭೀತಿಯಿಂದ, ನಿಷ್ಪಕ್ಷಪಾತತೆಯಿಂದ ಕಾರ್ಯನಿರ್ವಹಿಸುತ್ತಿದ್ದರೆ, ರಾಜಕೀಯ ನಾಯಕತ್ವವು ಆ ಸ್ವಾಯತ್ತತೆ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಬಂದರೆ, ದಕ್ಷಿಣ ಕನ್ನಡ ತನ್ನ ಮೂಲ ಸ್ಥಿತಿಯನ್ನು ತಲುಪಿ, ಧರ್ಮ ಎನ್ನುವುದು ಶ್ರದ್ಧಾ ನಂಬಿಕೆಗಳಾಗಿ ಉಳಿಯುತ್ತದೆ, ವಿಭಜಕ ಶಕ್ತಿಯಾಗುವುದಿಲ್ಲ.
ಪೆÇಲೀಸ್ ಇಲಾಖೆಯಲ್ಲಿ ಈ ಪರಿಸ್ಥಿತಿಯ ನಿರ್ಮಾಣಕ್ಕೆ ಕಾರಣವಾದವರಿಗೆ, ಶಾಂತಿ ಕಾಪಾಡುವವರಿಗೆ ಶ್ರೇಯ ಸಲ್ಲಬೇಕಿದೆ. ಶಾಂತಿ ಎಂದರೇನು ಎನ್ನುವುದನ್ನೇ ಮರೆತು ಹೋಗಿದ್ದ ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಿರುವುದು ಸ್ತುತ್ಯಾರ್ಹ, ಸ್ವಾಗತಾರ್ಹ.
Comments
Post a Comment