ಧರ್ಮಸ್ಥಳ ಎಸ್‍ಐಟಿ ಹಲವು ಅನುಮಾನಗಳ ನೆರಳಲ್ಲಿ

 ಇಲ್ಲಿ ಕಾಡುವ ಪ್ರಶ್ನೆ ಎಂದರೆ, ತನಿಖಾಧಿಕಾರಿಗಳೇ ರಾಜಿಯಾಗುವುದಾದರೆ, ಈ ತನಿಖಾಧಿಕಾರಿಗಳನ್ನು ತನಿಖೆಗೊಳಪಡಿಸುವುದು ಯಾರು?

ಅಹುದಾದರಹುದೆನ್ನಿ * ಬಿವಿಸೀ

ಧರ್ಮಸ್ಥಳದ ಸಾಮೂಹಿಕ ಸಮಾಧಿಗಳ ಪ್ರಕರಣವು ಈಗ ಮತ್ತೆ ಸಾರ್ವಜನಿಕರ ಗಮನ ಸೆಳೆದಿದೆ. ಇದು ಸಾಕ್ಷ್ಯಾಧಾರಗಳ ಕೊರತೆಯಿಂದ ಆಗಿರುವುದಲ್ಲ, ಬದಲಾಗಿ, ಎಸ್‍ಐಟಿ ತನಿಖೆ ಪ್ರಕ್ರಿಯೆಯು ಪೂರ್ಣ ಸ್ವತಂತ್ರವಾಗಿಲ್ಲ ಎಂಬ ಮಾಹಿತಿ ಎಲ್ಲೆಡೆ ವ್ಯಾಪಿಸಿರುವ ಕಾರಣಕ್ಕಾಗಿ. ಇತ್ತೀಚಿನ ಯು ಟ್ಯೂಬ್ ವಾಹಿನಿಯೊಂದು ಬಹಿರಂಗಪಡಿಸಿರುವಂತೆ, ಎಸ್‍ಐಟಿ ನ್ಯಾಯ, ಸತ್ಯಶೋಧನೆಯ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುವುದಕ್ಕಿಂತಲೂ ಹೆಚ್ಚಾಗಿ, ಧರ್ಮಸ್ಥಳದ ಪ್ರಬಲ ಹಿತಾಸಕ್ತಿಗಳ ರಕ್ಷಣೆಗಾಗಿ ನಿರ್ವಹಿಸುತ್ತಿದ್ದು, ಆರೋಪಿಗಳ ಬದಲು ದೂರುದಾರರು ಮತ್ತು ಮಾಹಿತಿದಾರರನ್ನು ಗುರಿ ಮಾಡುತ್ತಿದೆ.

ಹೈಕೋರ್ಟ್ ವಕೀಲರಾದ ಎಸ್ ಬಾಲನ್ ಮತ್ತು ದೀಪಕ್ ಖೋಸ್ಲಾ ಈ ಆರೋಪಕ್ಕೆ ಪುಷ್ಟಿ ನೀಡುತ್ತಾರೆ. ಬಾಲನ್ ಅವರು ಹೇಳಿರುವಂತೆ ಎಸ್‍ಐಟಿ ಸತ್ಯಕ್ಕಾಗಿ ಹೋರಾಡುತ್ತಿರುವ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಟಿ ಜಯಂತ್ ಮತ್ತು ಸೌಜನ್ಯಾಳ ಸೋದರ ಮಾವ ವಿಠ್ಠಲ್‍ಗೌಡ ಅವರನ್ನು ವಿಚಾರಣೆಯ ನೆಪದಲ್ಲಿ ಬಂಧಿಸಲು ಸಿದ್ದತೆ ನಡೆಸಿತ್ತು. ಈ ನಾಲ್ವರೇ ಅಲ್ಲಿನ ದೌರ್ಜನ್ಯಗಳನ್ನು ಹಾಗೂ ರಹಸ್ಯ ಸಮಾಧಿಗಳ ವಿಷಯವನ್ನು ಸಾರ್ವಜನಿಕರ ಮುಂದೆ ತೆರೆದಿಟ್ಟಿದ್ದರು. ಹಠಾತ್ತನೆ ಈ ನಾಲ್ವರನ್ನೇ ಶಂಕಿತರನ್ನಾಗಿ ಪರಿಗಣಿಸಿರುವುದು ಎಸ್‍ಐಟಿ ತಂಡದ ನಿಜವಾದ ಉದ್ದೇಶವನ್ನು ಬಹಿರಂಗಪಡಿಸುತ್ತದೆ. ಅಹಿತಕರ ಪ್ರಶ್ನೆಗಳನ್ನು ಸುಮ್ಮನಾಗಿಸುವ ಒಂದು ತಂತ್ರವಾಗಿ ಇದನ್ನು ನೋಡಬಹುದು.

ಬಾಲನ್ ಪ್ರಕಾರ, ಇದು ಮೇಲಿನಿಂದ ಸಿದ್ಧಪಡಿಸಲಾದ ಸಂಚಿನ ಒಂದು ಭಾಗವಾಗಿದೆ. ಕಾರ್ಯಕರ್ತರ ವಿರುದ್ಧ ನೋಟಿಸ್‍ಗಳು ಮತ್ತು ಹೊಸ ಎಫ್‍ಐಆರ್‍ಗಳು ಪ್ರತಿರೋಧವನ್ನೇ ಅಪರಾಧೀಕರಣಗೊಳಿಸುವ ಮಾದರಿಯಾಗಿ ಕಾಣುತ್ತವೆ. ಹೈಕೋರ್ಟ್ ಸಕಾಲದಲ್ಲಿ ತಡೆಯಾಜ್ಞೆ ಈ ನಾಲ್ವರ ಬಂಧನಕ್ಕೆ ತಡೆ ಒಡ್ಡಿದೆ. ಇಲ್ಲವಾದರೆ ಇದು ನ್ಯಾಯದ ವ್ಯಂಗ್ಯವಾಗಿ ಪರಿಣಮಿಸುತ್ತಿತ್ತು. ಈ ಹಸ್ತಕ್ಷೇಪ ಇಲ್ಲದಿದ್ದರೆ, ದೂರುದಾರರು ಈ ವೇಳೆಗೆ ಸೆರೆಮನೆಯಲ್ಲಿ ಇರಬೇಕಾಗುತ್ತಿತ್ತು. ಅವರ ಗುರಿ, ಉದ್ದೇಶಗಳೂ ಸಹ, ಅವರು ಹೊರಗೆಡಹಲು ಉದ್ದೇಶಿಸಿರುವ ಸತ್ಯದ ಹಾಗೆಯೇ ಸಮಾಧಿಯಾಗುತ್ತಿದ್ದವು.

ಈ ಪ್ರಕರಣವು ಎಸ್‍ಐಟಿಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ. ವಾಸ್ತವ ಅಂಶಗಳನ್ನು ಬೆನ್ನಟ್ಟುವ ಬದಲು ಈ ತಂಡವು ಧರ್ಮಸ್ಥಳದ ಗಣ್ಯ ಪೆÇೀಷಕರ ರಕ್ಷಣೆಗೆ ಮುಂದಾಗಿದೆ. ತನಿಖೆ ಏಜೆನ್ಸಿಯೊಂದು ಈ ರೀತಿ ದಾರಿ ತಪ್ಪಿ ನಡೆಯುವಾಗ ಅದರ ನೈತಿಕ ಸ್ಥಾನಮಾನವೇ ಕುಸಿದುಹೋಗುತ್ತದೆ. ಅಧಿಕಾರ ದುರುಪಯೋಗದ ಆರೋಪ ಎದುರಿಸಬೇಕಾಗುತ್ತದೆ. ಎಸ್‍ಐಟಿ ರಚಿಸಿದ್ದು ಸತ್ಯವನ್ನು ಹೊರಹಾಕುವುದಕ್ಕೋ ಅಥವಾ ಅದನ್ನು ಜಸ್ಟ್ ನಿರ್ವಹಿಸಲೋ ಎಂಬ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಇಷ್ಟೇ ಗಂಭೀರ ಸಮಸ್ಯೆಯಾಗಿ ಕಾಣುವುದು ಕೆಲವು ಟಿವಿ ವಾಹಿನಿಗಳು ನಿರ್ವಹಿಸಿರುವ ಪಾತ್ರ. ಯು ಟ್ಯೂಬರ್ ಹೇಳುವಂತೆ, ಈ ವಾಹಿನಿಗಳು ದೂರುದಾರರು ಮತ್ತು ಮಾಹಿತಿದಾರರನ್ನೇ ವಂಚಕರನ್ನಾಗಿ ಬಿಂಬಿಸಲಾರಂಭಿಸಿದ್ದವು. ಖೋಸ್ಲಾ ಅವರು ಹೇಳುವಂತೆ ಈ ಸಂಯೋಜಿತ ಪ್ರಚಾರವು ಸಾರ್ವಜನಿಕ ತಿಳುವಳಿಕೆಯನ್ನು ದಿಕ್ಕುತಪ್ಪಿಸಿ, ಟೀಕೆಗಳನ್ನು ತಟಸ್ಥಗೊಳಿಸುವ ಉದ್ದೇಶ ಹೊಂದಿದೆ. ಮಾಧ್ಯಮಗಳ ನಿರೂಪಣೆ ಮತ್ತು ಎಸ್‍ಐಟಿಯ ನಡೆಯ ಹೊಂದಾಣಿಕೆಯು ಸತ್ಯಶೋಧಕರನ್ನು ಅಪಮಾನಿಸಿ, ವಿಚಾರಣೆಗೆ ಒಳಪಡಬೇಕಾದವರನ್ನು ಪವಿತ್ರ ಎಂದು ಬಿಂಬಿಸುವ ಲೆಕ್ಕಾಚಾರದ ನಡೆಯಾಗಿದೆ.

ತನಿಖೆಯ ಪ್ರಕ್ರಿಯೆ, ಆಡಳಿತ ವ್ಯವಸ್ಥೆ ಮತ್ತು ಮಾಧ್ಯಮಗಳ ನಡುವಿನ ಈ ಮೈತ್ರಿ, ಹೊಂದಾಣಿಕೆ ಅಪಾಯಕಾರಿಯಾಗುತ್ತದೆ. ತಪ್ಪುಗಳನ್ನು ಸರಿಪಡಿಸುವುದಕ್ಕಾಗಿ ಕೆಲಸ ಮಾಡಬೇಕಾದ ಸಂಸ್ಥೆಗಳು ಬೇರೂರಿರುವ ಅಧಿಕಾರ ಮತ್ತು ಪ್ರಬಲ ಶಕ್ತಿಗಳನ್ನು ರಕ್ಷಿಸಲು ರಾಜಿ ಮಾಡಿಕೊಂಡಾಗ, ನ್ಯಾಯ ಎನ್ನುವುದು ಕಪಟ ನಾಟಕ ಪ್ರಹಸನವಾಗುತ್ತದೆ. ಧರ್ಮಸ್ಥಳದ ಪ್ರಕರಣದಲ್ಲಿ ಇದು ಆರೋಪಿಸಲಾಗಿರುವ ಮುಚ್ಚಿಹಾಕಿರುವ ವಿದ್ಯಮಾನ ಮಾತ್ರವಲ್ಲದೆ, ಕರ್ನಾಟಕದಲ್ಲಿ ಸಾಂಸ್ಥಿಕ ಸ್ವಾತಂತ್ರ್ಯದ ದೌರ್ಬಲ್ಯದ ಸಂಕೇತವಾಗಿಯೂ ಕಾಣುತ್ತದೆ.

ಹೈಕೋರ್ಟ್ ತಡೆಯಾಜ್ಞೆ ಇಂದು ಉತ್ತರದಾಯಿತ್ವ ಇನ್ನೂ ಜೀವಂತವಾಗಿ ಉಸಿರಾಡುತ್ತಿದೆ ಎಂದು ನೆನಪಿಸುವ ಏಕೈಕ ವಿಚಾರವಾಗಿದೆ. ಆದರೂ ಇಲ್ಲಿ ಕಾಡುವ ಪ್ರಶ್ನೆ ಎಂದರೆ, ತನಿಖಾಧಿಕಾರಿಗಳೇ ರಾಜಿಯಾಗುವುದಾದರೆ, ಈ ತನಿಖಾಧಿಕಾರಿಗಳನ್ನು ತನಿಖೆಗೊಳಪಡಿಸುವುದು ಯಾರು? ಈ ಪ್ರಶ್ನೆಯನ್ನು ಉತ್ತರಿಸುವವರೆಗೂ, ಧರ್ಮಸ್ಥಳದ ಪ್ರಕರಣವು, ತನ್ನ ಅಧಿಕಾರದ ಅಂಗಳದಲ್ಲಿ ಅಧಿಕಾರವು ಹೇಗೆ ನ್ಯಾಯವನ್ನು ಮೆಟ್ಟಿ ನಿಲ್ಲುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿಯೇ ಉಳಿಯುತ್ತದೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again