ಧರ್ಮಸ್ಥಳದ ಪ್ರಭುತ್ವವನ್ನು ರಕ್ಷಿಸುವಲ್ಲಿ ಕಾಂಗ್ರೆಸ್ ಹಿತಾಸಕ್ತಿ ಏನು?

 


ನ್ಯಾಯಕ್ಕಾಗಿ ರಚಿಸಲಾದ ತನಿಖಾ ದಳವನ್ನು ದುರ್ಬಲಗೊಳಿಸುವ ರಾಜಕೀಯ ಆಟ


........


ದೇವರ ಆಟ ಬಲ್ಲವರ್ಯಾರು? * ಬಿವಿಸೀ


ಧರ್ಮಸ್ಥಳದ ಅತ್ಯಾಚಾರ-ಹತ್ಯೆಗಳ ತನಿಖೆಗೆ ಸರ್ಕಾರ ರಚಿಸಿದ ವಿಶೇಷ ತನಿಖಾ ದಳವು ನಿಜವಾದ ಸತ್ಯವನ್ನು ಬಯಲಿಗೆಳೆಯಬೇಕಾದ ಹೊಣೆ ಹೊತ್ತುಕೊಂಡಿತ್ತು. ಆದರೆ ಪಕ್ಷಪಾತಿ ರಾಜಕಾರಣದ ಆಟದಲ್ಲಿ ಹೊಣೆಗಾರಿಕೆಯ ನಿಷ್ಠೆಯೇ ಕರಗಿಹೋಗುತ್ತಿರುವಂತೆ ಕಾಣುತ್ತಿದೆ. ತನಿಖೆಗೆ ಪ್ರೇರಣೆ ನೀಡಿದ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಆಯೋಗವೇ ಈಗ ತನಿಖೆಗೆ ನೈತಿಕ ದಿಕ್ಕು ತೋರಬೇಕಾದ ಸ್ಥಿತಿ ಬಂದಿದೆ. ಈ ನಡುವೆ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ತಮ್ಮ ವೈಚಾರಿಕ ಭೇದಗಳನ್ನು ಬದಿಗಿರಿಸಿ, ಧರ್ಮಸ್ಥಳದ ಪ್ರಭುತ್ವವನ್ನು ರಕ್ಷಿಸುವ ಹಾದಿಯಲ್ಲೇ ಒಂದಾಗಿ ನಡೆದುಕೊಳ್ಳುತ್ತಿವೆ ಎಂಬ ಭಾವನೆ ರಾಜ್ಯದ ನಾಗರಿಕರಲ್ಲಿ ಆಳವಾಗಿ ನೆಲೆಸಿದೆ.

ರಾಜಕೀಯ ಜೀವನದಲ್ಲಿ ಕೆಲವು ಸಂದರ್ಭಗಳಲ್ಲಿ ದ್ವಂದ್ವನೀತಿ ಅಷ್ಟು ಬಹಿರಂಗವಾಗಿಬಿಡುತ್ತದೆ, ಪಕ್ಷದ ಘೋಷಿತ ನಿಲುವೂ ಸಹ ಅದನ್ನು ಮುಚ್ಚಲಾರದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಘಟನೆ ಅದಕ್ಕೆ ಜೀವಂತ ಸಾಕ್ಷಿ. ಹಿಂದಿನ ದಿನಗಳಲ್ಲಿ ಸಂಘ ಪರಿವಾರ ಹೇಗೆ ಧರ್ಮಸ್ಥಳದ ಪ್ರಭುತ್ವದ ಮುಂದೆ ತಲೆಬಾಗಿತ್ತೋ, ಅದರ ಇಷ್ಟಾನಿಷ್ಠದ ಪ್ರಕಾರ ನಡೆದುಕೊಂಡಿತ್ತೋ, ಇಂದಿನ ಕಾಂಗ್ರೆಸ್ ನಾಯಕರು ಸಹ ಅದೇ ಹಾದಿ ಹಿಡಿದಿದ್ದಾರೆ. ಅತ್ಯಾಚಾರ ಮತ್ತು ಕೊಲೆಗಳ ಆರೋಪಗಳಿಂದ ಕಳಂಕಿತವಾದ ಈ ಕುಟುಂಬವನ್ನು ರಕ್ಷಿಸುವ ಕೆಲಸದಲ್ಲಿ ಇಬ್ಬರೂ ಪಕ್ಷಗಳು ಸ್ಪರ್ಧಿಸುತ್ತಿವೆ ಎಂಬುದು ಜನರಿಗೆ ಅಚ್ಚರಿ ಆಗದಿದ್ದರೂ, ಜನರಲ್ಲಿ ಎರಡೂ ಪಕ್ಷಗಳ ಬಗ್ಗೆ ಜಿಗುಪ್ಸೆ ಭಾವನೆ ಉಂಟುಮಾಡಿದೆ. ಜನರ ಒತ್ತಡದ ಫಲವಾಗಿ ರಚಿಸಲಾದ ವಿಶೇಷ ತನಿಖಾ ದಳ ಈಗ ತನ್ನ `ಧರ್ಮ'ದ ಹಾದಿಂiÀiನ್ನು ಕಳೆದುಕೊಂಡಂತೆ ಕಾಣುತ್ತಿದೆ.

ಈ ಅವಮಾನಕರ ಸ್ಥಿತಿಗೆ ಚಾಲನೆ ನೀಡಿದವರು ಕಾಂಗ್ರೆಸ್‍ನ ಪ್ರಮುಖ ಮುಖಂಡ ಹರೀಶ್ ಕುಮಾರ್. ಅವರು ಧರ್ಮಸ್ಥಳ ಕುಟುಂಬದ ಕಾರ್ಯಕ್ರಮದಲ್ಲಿ ಭಾಗವಹಿಸಿ, "ಖಾವಂದರ ಶುಭ್ರ ಬಿಳಿ ಬಟ್ಟೆ ಮೇಲೆ ಕಪ್ಪು ಚುಕ್ಕೆ ಮೂಡಲು ಅವಕಾಶ ಕೊಡುವುದಿಲ್ಲ'' ಎಂದು ಪ್ರಮಾಣ ಮಾಡಿದ್ದು ಜನರಲ್ಲಿ ಆಕ್ರೋಶ ಮಡುಗಟ್ಟುವಂತೆ ಮಾಡಿದೆ. ನ್ಯಾಯಕ್ಕಾಗಿ ಹೋರಾಡುತ್ತಿರುವ ಮಹಿಳೆಯರ ಆಕ್ರಂದನ ಮಧ್ಯೆ, ಆರೋಪಿಗಳನ್ನು ಪವಿತ್ರರನ್ನಾಗಿ ಘೋಷಿಸುವ ಈ ನಿಲುವು ನೈತಿಕತೆಯ ಮೇಲೆ ಗ್ರಹಣ ಹಿಡಿಸುವ ಯತ್ನ. ಇದು ದೇವಭಕ್ತಿಯ ಸಂಕೇತವಲ್ಲ, ಅಧಿಕಾರದ ಪ್ರಭಾವಕ್ಕೆ ತಲೆಬಾಗುವ ರಾಜಕೀಯ ದಾಸ್ಯ ಮಾತ್ರ.

ರಾಜ್ಯದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರ ನಡೆ ಈ ಅವಸ್ಥೆಯನ್ನು ಮತ್ತಷ್ಟು ಕಳಂಕಗೊಳಿಸಿದೆ. ಧರ್ಮಸ್ಥಳದ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಎಸ್‍ಐಟಿ ಪರಿಶೀಲಿಸುತ್ತಿರುವಾಗಲೇ, ಅವರು ಅದನ್ನು "ಸಂಚು" ಎಂದು ಕರೆಯುವುದರಿಂದಲೇ ತನಿಖೆಗೆ ಹೊಡೆತ ಬಿದ್ದಿದೆ. ಇದೇ ವಾದವನ್ನು ಗೃಹ ಸಚಿವರೂ ಪುನರಾವರ್ತಿಸಿದರು. ಇದರ ಪರಿಣಾಮವಾಗಿ ತನಿಖಾ ದಳ ನಿಜವಾದ ಅಪರಾಧಿಗಳನ್ನು ವಿಚಾರಣೆಗೂ ಕರೆಯದೆ, ಬದಲಿಗೆ ನ್ಯಾಯಕ್ಕಾಗಿ ಹೋರಾಡಿದ ಗಿರೀಶ್ ಮಟ್ಟಣ್ಣನವರ, ತಿಮರೋಡಿ, ವಿಠಲ ಗೌಡ ಹಾಗೂ ಟಿ ಜಯಂತ್ ಮುಂತಾದ ಸತ್ಯ ಮತ್ತು ನ್ಯಾಯನಿಷ್ಠ ಹೋರಾಟಗಾರರ ವಿರುದ್ಧವೇ ನೋಟಿಸ್‍ಗಳನ್ನು ಕಳುಹಿಸಿತು. ನ್ಯಾಯಕ್ಕಾಗಿ ನಿಂತವರನ್ನು ಅಪರಾಧಿಗಳಂತೆ ನಡೆಸುವುದು ರಾಜ್ಯದ ವ್ಯವಸ್ಥೆಯೇ ತಲೆಕೆಳಗಾಗಿ ಹೋಗಿದೆಯೆಂಬ ಭಾವನೆ ಜನರಲ್ಲಿ ಬೇರೂರಿಸಿದೆ.

ಈ ಕುತ್ಸಿತ ಯತ್ನವನ್ನು ಕರ್ನಾಟಕ ಉಚ್ಚ ನ್ಯಾಯಾಲಯ ತಡೆದು ನಿಲ್ಲಿಸಿತು. ನ್ಯಾಯಾಲಯದ ಮಧ್ಯಪ್ರವೇಶವಿಲ್ಲದಿದ್ದರೆ ಈ ಹೋರಾಟಗಾರರು ಬಂಧನಕ್ಕೊಳಗಾಗುವ ಸ್ಥಿತಿ ಇತ್ತು. ನ್ಯಾಯಾಲಯದ ಈ ಹಸ್ತಕ್ಷೇಪವು ಎಸ್‍ಐಟಿ ವಿರುದ್ಧ ದಿಕ್ಕಿನಲ್ಲಿ ಸಾಗುವುದನ್ನು ತತ್ಕಾಲಕ್ಕೆ ನಿಲ್ಲಿಸಿತು.

ಈ ಸನ್ನಿವೇಶದಲ್ಲಿ ಅತ್ಯಂತ ಮಹತ್ವದ ಸಂಗತಿ ಎಂದರೆ, ಈ ತನಿಖಾ ದಳವನ್ನು ರಚಿಸಲು ಮೂಲ ಕಾರಣವಾಗಿದ್ದು ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಆಯೋಗ. ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧುರಿ ಅವರು ಮುಖ್ಯಮಂತ್ರಿಗೆ ಬರೆದ ಪತ್ರದ ಮೂಲಕ ಧರ್ಮಸ್ಥಳ ಮತ್ತು ಸುತ್ತಮುತ್ತ ನಡೆದ ಅತ್ಯಾಚಾರ-ಹತ್ಯೆಗಳ ಕುರಿತು ತೀವ್ರ ಚಿಂತನೆ ವ್ಯಕ್ತಪಡಿಸಿ, ವಿಶೇಷ ತನಿಖಾ ದಳವನ್ನು ರಚಿಸಲು ಒತ್ತಾಯಿಸಿದ್ದರು. ಆಯೋಗದ ಆಲೋಚನೆಯನ್ನು ಗೌರವಿಸಿ ಸರ್ಕಾರ ತನಿಖಾ ದಳವನ್ನು ರಚಿಸಿತು. ಇತ್ತೀಚೆಗೆ ನಾಗಲಕ್ಷ್ಮಿ ಚೌಧುರಿ ಅವರು ಮತ್ತೊಮ್ಮೆ ತನಿಖಾ ದಳಕ್ಕೆ ತೀವ್ರ ಎಚ್ಚರಿಕೆ ನೀಡಿದರು. "ನಿಮ್ಮ ಕರ್ತವ್ಯ  ತಲೆಬುರುಡೆ ಹಾಗೂ ಮೂಳೆಗಳನ್ನು ಗುರುತಿಸುವುದರಲ್ಲಷ್ಟೇ ಮುಗಿಯುವುದಿಲ್ಲ; ಧರ್ಮಸ್ಥಳದ ಸುತ್ತಮುತ್ತ ನಡೆದ ಅತ್ಯಾಚಾರ ಮತ್ತು ಕೊಲೆಗಳ ನಿಜವಾದ ಅಪರಾಧಿಗಳನ್ನು ಬಯಲಿಗೆಳೆಯುವುದು ನಿಮ್ಮ ಪ್ರಧಾನ ಹೊಣೆ" ಎಂದು ಅವರು ಸ್ಪಷ್ಟವಾಗಿ ಹೇಳಿದರು. ಈ ಹೇಳಿಕೆಗೆ ರಾಜ್ಯದ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ನ್ಯಾಯದ ನಿಲುವು ತಾಳಿದ ಆಯೋಗಾಧ್ಯಕ್ಷೆಯ ಧೈರ್ಯ ಜನರಲ್ಲಿ ಹೊಸ ಭರವಸೆ ಮೂಡಿಸಿತು.

ಆದರೆ ಅಚ್ಚರಿಯ ಸಂಗತಿ ಎಂದರೆ, ಈ ಆಯೋಗದ ಸಲಹೆಯಿಂದಲೇ ತನಿಖಾ ದಳವನ್ನು ರಚಿಸಿದ್ದ ಸರ್ಕಾರದ ಪಕ್ಷದ ನಾಯಕರೇ ಈಗ ತನಿಖೆಯನ್ನು ದುರ್ಬಲಗೊಳಿಸಲು ಮುಂದಾಗಿದ್ದಾರೆ. ನ್ಯಾಯ ಮತ್ತು ಸತ್ಯದ ಹಾದಿಯಲ್ಲಿ ಸಾಗಬೇಕಾದ ಪಕ್ಷವೇ ತಾನೇ ತನಿಖೆಯನ್ನು ಶಂಕಾಸ್ಪದಗೊಳಿಸುವ ಕೆಲಸ ಮಾಡುತ್ತಿರುವುದು ವಿಪರ್ಯಾಸ.

ದಕ್ಷಿಣ ಕನ್ನಡದಲ್ಲಿ ಆಡಳಿತ ಪಕ್ಷದವರಿಂದಲೇ ಸತ್ಯ ಶೋಧನೆಗೆ ಅಡ್ಡಿ ರಾಜ್ಯದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಹೊಡೆತ ನೀಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಘೋಷಣೆಗಳಲ್ಲಿ ಪರಸ್ಪರ ವಿರೋಧಿಗಳಾದರೂ, ಅಧಿಕಾರದೆದುರು ಸಮಾನ ಮನಸ್ಕರು ಎಂಬುದು ಮತ್ತೆ ಸಾಬೀತಾಗಿದೆ. ಧರ್ಮಸ್ಥಳದ ಪ್ರಭುತ್ವವನ್ನು ರಕ್ಷಿಸುವಲ್ಲಿ ಎರಡೂ ಪಕ್ಷಗಳು ಒಂದೇ ಪಂಕ್ತಿಯಲ್ಲಿ ಕೂತಿವೆ. ನ್ಯಾಯಕ್ಕಾಗಿ ಹೋರಾಡುವವರ ವಿರುದ್ಧ ಎರಡು ಪಕ್ಷಗಳೂ ಕೈಜೋಡಿಸಿರುವ ಈ ದ್ವಿಪಕ್ಷೀಯ ವಂಚನೆ ಕರ್ನಾಟಕದ ರಾಜಕೀಯ ಜೀವನದ ಮೇಲೆ ಕಾರ್ಮೋಡವನ್ನು ಆವರಿಸಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again