ಬಿಹಾರದ ತೀರ್ಪು: ಜನಮನದ ಬದಲಾವಣೆಯ ಸ್ಪಷ್ಟ ಸಂದೇಶ
ಕರ್ನಾಟಕಕ್ಕೆ ಏನು ಸಂದೇಶ?
..............
ಗೋಡೆ ಮೇಲಿನ ಬರಹ * ಬಿವಿಸೀ
ಬಿಹಾರ ವಿಧಾನಸಭೆಯ ತೀರ್ಪಿನಲ್ಲಿ ಯಾವುದೇ ಅಸ್ಪಷ್ಟತೆ ಇರಲಿಲ್ಲ. ರಾಷ್ಟ್ರೀಯ ಜನತಾ ದಳದ ಹಾಗೂ ಕಾಂಗ್ರೆಸಿನ ಮೈತ್ರಿ ಜನರ ಮನ ಗೆಲ್ಲುವುದಿಲ್ಲವೆಂಬುದು ಮತದಾನಕ್ಕೂ ಮುಂಚೆಯೇ ಸ್ಪಷ್ಟವಾಗಿತ್ತು. ಅವರ ಪ್ರಚಾರದಲ್ಲಿ ಜನರಿಗೆ ಭರವಸೆ ತುಂಬುವಂತೆ ಕಂಡ ಧನಾತ್ಮಕ ಕಾರ್ಯಕ್ರಮವೊಂದೂ ಇರಲಿಲ್ಲ. ಫಲಿತಾಂಶ ಹೊರಬರುತ್ತಿದ್ದ ದಿನವೇ ರಾಹುಲ್ ಗಾಂಧಿ ವಿದೇಶ ಸಂಚಾರದಲ್ಲಿದ್ದರು. ಅವರು ಮಾಡಿದ ಪ್ರಚಾರ ಭಾಷಣಗಳಲ್ಲಿ ಹಳೆಯ ಜಾತಿ-ವರ್ಗದ ಮಾತುಗಳಷ್ಟೇ ಕೇಳಿಬಂದವು; ಅಭಿವೃದ್ಧಿಯ ಭರವಸೆ ಎಲ್ಲಿಯೂ ಕಾಣಿಸಲಿಲ್ಲ. ಲಾಲು ಪ್ರಸಾದ್ ಯಾದವರ ಪುತ್ರನೂ ಕೂಡ ಜನರ ಆಶಾಭಾವನೆಗಳನ್ನು ಮುಟ್ಟುವಂತಹ ಯೋಜನೆಗಳನ್ನು ಮಂಡಿಸಲಿಲ್ಲ.
ಆದರೆ ಬಿಹಾರದ ಯುವಜನತೆ ಈಗ ವಿಭಜನೆಯ ರಾಜಕಾರಣಕ್ಕೆ ಒಳಗಾಗುವ ಮನಸ್ಥಿತಿಯಲ್ಲಿ ಇಲ್ಲ. ಜನರು ಒಂದು ಪ್ರಮುಖ ಪ್ರಶ್ನೆಯನ್ನು ಕೇಳುತ್ತಿದ್ದಾರೆ - `ನಮ್ಮ ಬದುಕಿನಲ್ಲಿ ಯಾವ ಬದಲಾವಣೆ ತರಲು ನೀವು ಸಿದ್ಧ?' ಈ ಪ್ರಶ್ನೆಗೆ ಸೂಕ್ತ ಉತ್ತರ ಕೊಡಲು ಕಾಂಗ್ರೆಸ್ಸಿನ ನಾಯಕರು ವಿಫಲರಾದರೆ, ಪ್ರಧಾನ ಮಂತ್ರಿಯವರ ಹಾಗೂ ನೀತೀಶ್ ಕುಮಾರರ ನೇತೃತ್ವದಲ್ಲಿ ಕೇಂದ್ರದಿಂದ ಬಿಹಾರಿಗೆ ಬಂದ ಭಾರಿ ಮೊತ್ತದ ಹೂಡಿಕೆಗಳು ಜನಮನದಲ್ಲಿ ನಿರೀಕ್ಷೆಯ ಬೆಳಕು ಮೂಡಿಸಿತು. ರಸ್ತೆ, ವಿದ್ಯುತ್, ನೀರು, ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಗತಿಯ ಸಂವೇದನೆ ಕಂಡುಬಂದಿತ್ತು.
ಈ ತೀರ್ಪು ಇದೀಗ ಕರ್ನಾಟಕದ ಆಡಳಿತಕ್ಕೊಂದು ಗಂಭೀರ ಎಚ್ಚರಿಕೆ. ಅಹಿಂದ ಎಂಬ ರಾಜಕೀಯ ತೆಪ್ಪದ ಮೇಲೆ ಮಾತ್ರ ಮುಂದಿನ ಚುನಾವಣೆಯನ್ನು ಎದುರಿಸುವುದು ಸಾಧ್ಯವಿಲ್ಲ. ಜನರಿಗೆ ಬೇಕಾಗಿರುವುದು ಘೋಷಣೆಗಳು ಅಲ್ಲ; ನೆಲದ ಮಟ್ಟದಲ್ಲಿ ಕಾಣುವ ಕೆಲಸ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ತಮ್ಮ ಆಡಳಿತಾವಧಿಯಲ್ಲಿ ಉಳಿದಿರುವ ಅವಧಿಯಲ್ಲಿ ರಾಜ್ಯದ ಅಭಿವೃದ್ಧಿಗೆ ನೈಜ ಹೆಜ್ಜೆಗಳನ್ನು ಇಡುವುದು ಅಗತ್ಯ. ಇಲ್ಲದಿದ್ದರೆ ಜನರ ಅಸಮಾಧಾನ ಮುಂದಿನ ಚುನಾವಣೆಯಲ್ಲಿ ತೀವ್ರವಾಗಿ ವ್ಯಕ್ತವಾಗುವುದು ಅನಿವಾರ್ಯ.
ಜನರ ಬುದ್ಧಿವಂತಿಕೆಯನ್ನು ಕಡಿಮೆ ಅಂದಾಜು ಮಾಡಬಾರದು. ಕಳೆದ ವರ್ಷಗಳಿಂದ ಸರ್ಕಾರವು ಜನಮನ ಸೆಳೆಯುವಂತಹ, ಸಾಮಾನ್ಯರ ಬದುಕಿನಲ್ಲಿ ನಿಜವಾದ ಬದಲಾವಣೆ ತರುವುದು ಸಾಧ್ಯವಾಗುವ ಕಾರ್ಯಕ್ರಮಗಳನ್ನು ಜಾರಿಗೆ ತಂದ ಉದಾಹರಣೆಗಳು ತುಂಬಾ ಕಡಿಮೆ. ಯುವಕರು, ರೈತರು, ಉದ್ಯೋಗಾಕಾಂಕ್ಷಿಗಳು, ವ್ಯಾಪಾರಿಗಳು - ಎಲ್ಲರಲ್ಲಿಯೂ ನಿರಾಶೆ ಮತ್ತು ನಿರೀಕ್ಷೆಯ ನಡುವಿನ ಕಳವಳ ಗೋಚರಿಸುತ್ತಿದೆ. ಈ ನಿರೀಕ್ಷೆಗಳನ್ನು ನೈಜ ಸಾಧನೆಗಳ ಮೂಲಕ ಪೂರೈಸುವ ಹೊಣೆಗಾರಿಕೆ ಸಿದ್ದರಾಮಯ್ಯ ಅವರದ್ದೇ.
ಬಿಹಾರದ ಫಲಿತಾಂಶ ದೇಶದ ಜನಮನದಲ್ಲಿ ನಡೆಯುತ್ತಿರುವ ಬದಲಾವಣೆಯ ಪ್ರತಿಬಿಂಬ. ಅಭಿವೃದ್ಧಿಯನ್ನು ತೋರಿಸದ ನಾಯಕರನ್ನು ಜನರು ಪ್ರಶ್ನಿಸುವರು; ಅಗತ್ಯವಿದ್ದರೆ ತಿರಸ್ಕರಿಸುವರು. ಇದೇ ಸಂದೇಶ ಕರ್ನಾಟಕಕ್ಕೂ ಅನ್ವಯಿಸುತ್ತದೆ. ಸಿದ್ದರಾಮಯ್ಯ ಅವರು ಈ ಸೂಚನೆಯನ್ನು ಸರಿಯಾಗಿ ಓದಿ, ಅದರ ಅರ್ಥವನ್ನು ಆಳವಾಗಿ ಗ್ರಹಿಸುವುದು ಈಗಿನ ರಾಜಕೀಯದ ತುರ್ತು ಅವಶ್ಯಕತೆ.
Comments
Post a Comment