ರಾಜ್ಯ ಮಹಿಳಾ ಆಯೋಗದ ಧೈರ್ಯ ಇತರರಿಗೆ ಏಕಿಲ್ಲ?
ಧರ್ಮಸ್ಥಳ ಎಸ್‍ಐಟಿಗೆ ತನ್ನ ಮೂಲ ಕರ್ತವ್ಯದ ಬಗ್ಗೆ ಎಚ್ಚರಿಸುವುದರ ಮೂಲಕ ನಾಗಲಕ್ಷ್ಮಿ ಚೌಧರಿ ಅವರು, ಇಂದಿನ ವಾತಾವರಣದಲ್ಲಿ ಕೆಲವೇ ಸಾರ್ವಜನಿಕ ಸಂಸ್ಥೆಗಳು ತೋರಬಹುದಾದ ದಿಟ್ಟ ನಡೆಯನ್ನು ತೋರಿದ್ದಾರೆ.
ನೇರಾನೇರ * ಬಿವಿಸೀ
ಪ್ರಬುದ್ಧತೆ, ಸಮಯಪ್ರಜ್ಞೆಯನ್ನು ಬದಿಗೊತ್ತಿ ಸಾಂಸ್ಥಿಕ ಮೌನವೇ ಪ್ರಧಾನವಾಗಿ ಕಾಣುವ ರಾಜಕೀಯ ವಾತಾವರಣದಲ್ಲಿ, ಕರ್ನಾಟಕದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಇತ್ತೀಚೆಗೆ ಧರ್ಮಸ್ಥಳದ ಸಾಮೂಹಿಕ ಸಮಾಧಿಗಳ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳಕ್ಕೆ (ಎಸ್‍ಐಟಿ) ಪತ್ರ ಬರೆದಿರುವುದು ಈ ತನಿಖಾ ದಳದ ಲಂಗುಲಗಾಮಿಲ್ಲದ ಕಾರ್ಯಾಚರಣೆಗೆ ಬ್ರೇಕ್ ಹಾಕಿದಂತಿದೆ. ಅಧ್ಯಕ್ಷರು ಎಸ್‍ಐಟಿಗೆ ಧರ್ಮಸ್ಥಳದಲ್ಲಿ ಕಳೆದ ಇಪ್ಪತ್ತು ವರ್ಷಗಳಲ್ಲಿ ನಡೆದಿರುವ ಎಲ್ಲ ಅಸಹಜ ಸಾವುಗಳನ್ನೂ ತನಿಖೆ ಮಾಡುವುದು ಅದರ ಕರ್ತವ್ಯ, ಕೇವಲ ತಲೆಬುರುಡೆ ಮತ್ತು ಅಸ್ಥಿಪಂಜರಗಳನ್ನು ಶೋಧಿಸುವುದಲ್ಲ ಎಂದು ನೆನಪಿಸಿರುವುದು ತನಿಖೆಯ ಪ್ರಕ್ರಿಯೆಯನ್ನು ಆವರಿಸಿದ್ದ ಆಲಸ್ಯ ಮತ್ತು ದುರುಪಯೋಗಗಳಿಗೆ ತಳಮಟ್ಟದಲ್ಲೇ ಪೆಟ್ಟು ನೀಡಿದಂತಾಗಿದೆ.
ಆಯೋಗದ ಈ ಮಧ್ಯಪ್ರವೇಶವು ಬಹಳ ಮುಖ್ಯವಾಗಿ ಪತ್ರ ಬರೆದ ಸಮಯ ಮತ್ತು ಕಾನೂನಾತ್ಮಕ ನೆಲೆಯಲ್ಲಿ ನಿರ್ಣಾಯಕವಾಗುತ್ತದೆ. ಮೂಲತಃ ಈ ತನಿಖೆಯನ್ನು ನಡೆಸಲು ಎಸ್‍ಐಟಿ ರಚಿಸುವ ಸರ್ಕಾರದ ನಿರ್ಧಾರದಲ್ಲೂ ಆಯೋಗದ ಪ್ರಮುಖ ಪಾತ್ರ ವಹಿಸಿತ್ತು. ಚೌಧರಿ ಅವರ ಪತ್ರವು ಎಸ್‍ಐಟಿ ತಂಡಕ್ಕೆ, ಅದನ್ನು ನೇಮಿಸಿದ ಸರ್ಕಾರವೇ ನೀಡಿರುವ ಕಾರ್ಯವ್ಯಾಪ್ತಿ ಮತ್ತು ವಿಷಯ ಸೂಚಿಯನ್ನು ನೆನಪಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಈ ಕ್ರಮದ ಮೂಲಕ ಆಯೋಗವು ಶಾಸನಾತ್ಮಕ ಸಂಸ್ಥೆಯಾಗಿ ತನ್ನ ನ್ಯಾಯಯುತ ಕರ್ತವ್ಯವನ್ನು ನಿಭಾಯಿಸಿರುವುದೇ ಅಲ್ಲದೆ, ತನಿಖೆಯ ದಿಕ್ಕುತಪ್ಪದಂತೆ ಖಚಿತಪಡಿಸಿಕೊಳ್ಳುವ ಮತ್ತು ತನಿಖಾ ದಳ ರಾಜಕೀಯ, ಅಧಿಕಾರ ಶಾಹಿಯ ಒತ್ತಡಗಳಿಂದ ಹಿಂದೆ ಸರಿಯದಂತೆ ಎಚ್ಚರ ವಹಿಸುವ ಕ್ರಮವನ್ನು ಅನುಸರಿಸಿದೆ.
ಇಲ್ಲಿ ಪ್ರಭಾವಗಳ ಸಂಖ್ಯೆಗೇನೂ ಕೊರತೆ ಇಲ್ಲ. ರಾಜಕೀಯ ಒತ್ತಡದಲ್ಲಿ ಎಸ್‍ಐಟಿ ಕಾರ್ಯನಿರ್ವಹಿಸುತ್ತಿದ್ದ ವೈಖರಿಯನ್ನು ಕಂಡು ನಾಗರಿಕರು ಜಾಗೃತರಾಗಿದ್ದು, ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರು ಇಬ್ಬರೂ ಸಹ ಧರ್ಮಸ್ಥಳದ ಕುಟುಂಬವನ್ನು, ಯಾವುದೇ ಅತ್ಯಾಚಾರ, ಹತ್ಯೆಗಳಿಗೆ ಸಂಬಂಧವಿಲ್ಲದ, ನಿರಪರಾಧಿ ಎಂದು ಸಾಬೀತುಪಡಿಸುವ ಇಂಗಿತ ಹೊಂದಿರುವುದನ್ನು ಗಮನಿಸುತ್ತಿದ್ದಾರೆ. ಈಗ ಆಯೋಗವು ಮಧ್ಯಪ್ರವೇಶಿಸಿರುವುದು ಎಸ್‍ಐಟಿ ಬಗ್ಗೆ ಸಾರ್ವಜನಿಕರ ವಿಶ್ವಾಸ ಕುಂದುತ್ತಿರುವ ಸಮಯದಲ್ಲಿ. ಆಯೋಗದ ನೆನಪಿನ ಪತ್ರವು ಮುಖ್ಯವಾಗಿ ಸಾಂಸ್ಥಿಕ ಪ್ರಜ್ಞೆ ಇನ್ನೂ ಪೂರ್ತಿಯಾಗಿ ನಿಶ್ಶೇಷವಾಗಿಲ್ಲ ಎಂದು ಖಚಿತಪಡಿಸುವ ನಿಟ್ಟಿನಲ್ಲಿ ಸಂಸ್ಥೆಯನ್ನು ಪಾರು ಮಾಡಿದೆ.
ಕೆಲವು ವಲಯಗಳಿಂದ ಈ ಕ್ರಮಕ್ಕೆ ಪ್ರತಿಕ್ರಿಯೆ ನಿರೀಕ್ಷಿತವಾಗಿಯೇ ವಿರುದ್ಧ ದಿಕ್ಕಿನಲ್ಲಿದೆ. ಮುಖ್ಯವಾಹಿನಿಯ ಟಿವಿ ಮಾಧ್ಯಮಗಳು ಈಗಾಗಲೇ ಧರ್ಮಸ್ಥಳದ ಕುಟುಂಬದ ಬಗ್ಗೆ ಪಕ್ಷಪಾತದ ನಿಲುವು ಹೊಂದಿರುವ ಆರೋಪ ಎದುರಿಸುತ್ತಿದ್ದು, ಈ ಪತ್ರದ ನಂತರ ಮತ್ತೊಮ್ಮೆ ತಮ್ಮ ಸಂಯೋಜಿತ ದಾಳಿಯನ್ನು ಮುಂದುವರೆಸಿದ್ದು ಈ ಆರೋಪಗಳನ್ನು ಪಿತೂರಿ ಎಂದು ಆರೋಪಿಸುತ್ತಿವೆ. ಆಯೋಗವು ತನ್ನ ವ್ಯಾಪ್ತಿ ಮೀರಿ ವರ್ತಿಸುತ್ತಿದೆ ಎಂದು ದೂಷಿಸುತ್ತಿವೆ. ವಿಡಂಬನೆ ಎಂದರೆ, ಈ ದಾಳಿಯೇ ಮಾಧ್ಯಮಗಳ ಬೌದ್ಧಿಕ ದಿವಾಳಿತನವನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಿದೆ. ವೀಕ್ಷಕರು ಮಾಧ್ಯಮಗಳ ಪಕ್ಷಪಾತಿ ಧೋರಣೆಯನ್ನು ಗಮನಿಸುತ್ತಿದ್ದು, ಯು ಟ್ಯೂಬ್ ಮತ್ತು ಸಾಮಾಜಿಕ ತಾಣಗಳ ಮೂಲಕ ತಮ್ಮ ದನಿಯನ್ನು ದಾಖಲಿಸುತ್ತಿದ್ದಾರೆ. ಟಿವಿ ವಾಹಿನಿಗಳು ಹಣಕಾಸಿನ ಲಾಲಸೆಯಿಂದ ಈ ಪ್ರಚಾರದಲ್ಲಿ ತೊಡಗಿವೆ, ತಮ್ಮ ಸಾರ್ವಜನಿಕ ಬಾಧ್ಯತೆಯನ್ನು ಮರೆತಿವೆ ಎಂದು ದೂಷಿಸುತ್ತಿದ್ದಾರೆ.
ದುರಂತ ಎಂದರೆ ಕೆಲವು ಚಾನೆಲ್‍ಗಳ ಈ ವರ್ತನೆಯು ಇಡೀ ಮಾಧ್ಯಮವಲಯದ ಭ್ರಾತೃತ್ವವನ್ನು ದೋಷಿಯನ್ನಾಗಿ ಮಾಡಿದೆ. ಪತ್ರಕರ್ತರು ಬಲಾಢ್ಯರ ಏಜೆಂಟರಾಗಿ ವರ್ತಿಸಿದಾಗ, ಸತ್ಯವನ್ನು ಆಗ್ರಹಿಸುವುದರಿಂದ ಹಿಂದೆ ಸರಿದಾಗ, ಅವರು ಸಮರ್ಥಿಸಿಕೊಳ್ಳುವ ಸ್ವತಂತ್ರ ಮಾಧ್ಯಮದ ಕಲ್ಪನೆಯೇ ಘಾಸಿಗೊಳಗಾಗುತ್ತದೆ. ಈ ವಾಹಿನಿಗಳಲ್ಲಿ ಮಹಿಳಾ ಆಯೋಗದ ವಿರುದ್ಧ ಬಳಸುವ ಭಾಷೆ ಅನೈತಿಕವಷ್ಟೇ ಅಲ್ಲದೆ, ಬೆದರಿಕೆಯ ರೂಪದಲ್ಲೂ ಕಾಣುತ್ತದೆ. ಇದು ಉದ್ದೇಶಪೂರಿತವಾಗಿ ಒಂದು ಸಂಸ್ಥೆಯನ್ನು ಕರ್ತವ್ಯ ನಿಭಾಯಿಸುವುದರಿಂದ ತಡೆಗಟ್ಟುವ ತಂತ್ರವಾಗಿ ಕಾಣುತ್ತದೆ.
ಎಸ್‍ಐಟಿಗೆ ತನ್ನ ಮೂಲ ಕರ್ತವ್ಯದ ಬಗ್ಗೆ ಎಚ್ಚರಿಸುವುದರ ಮೂಲಕ ನಾಗಲಕ್ಷ್ಮಿ ಚೌಧರಿ ಅವರು, ಇಂದಿನ ವಾತಾವರಣದಲ್ಲಿ ಕೆಲವೇ ಸಾರ್ವಜನಿಕ ಸಂಸ್ಥೆಗಳು ತೋರಬಹುದಾದ ದಿಟ್ಟ ನಡೆಯನ್ನು ತೋರಿದ್ದಾರೆ. ಬೆದರಿಕೆಯ ವಾತಾವರಣದಲ್ಲಿ ಆಕೆಯ ಕ್ರಮವು ಧೈರ್ಯ ಮತ್ತು ದಿಟ್ಟತನದ ಸಂಕೇತವಾಗಿ ಕಾಣುತ್ತದೆ. ಆಯೋಗವು ತನ್ನ ಅಧಿಕಾರ ವ್ಯಾಪ್ತಿಯನ್ನು ಮೀರಿಲ್ಲ ಅಥವಾ ಈ ಪ್ರಕರಣವನ್ನು ರಾಜಕೀಕರಣಗೊಳಿಸಿಲ್ಲ. ಅದು ಕಾನೂನು ಪಾಲನೆಯನ್ನು ಸಮರ್ಥಿಸಿದ್ದು, ಅದನ್ನು ದುರ್ಬಳಕೆ ಮಾಡುವವರನ್ನು ಎಚ್ಚರಿಸಿದೆ. ವರ್ತಮಾನದ ಭಾರತದಲ್ಲಿ ಇದು ಸಣ್ಣ ಕ್ರಮವೇನಲ್ಲ. ತನ್ನ ಈ ಕ್ರಮಕ್ಕಾಗಿ ಆಯೋಗ ಪ್ರಶಂಸೆಗೆ ಅರ್ಹವಾಗಿದೆ, ಅಭಿನಂದನೆಗಳು.
Comments
Post a Comment