ಆದ್ಯತೆಗಳನ್ನು ಮರೆತ ಆಳ್ವಿಕೆಯ ಪರಿ

 ಬಿಟ್ಟೀ ಅನುಕೂಲಗಳನ್ನು ಒದಗಿಸುವ ಮುನ್ನ ಸರ್ಕಾರಗಳು ರಸ್ತೆಗಳನ್ನು ಸರಿಪಡಿಸಬೇಕು, ನಿಗದಿತವಾಗಿ ಸಿಬ್ಬಂದಿಗೆ ವೇತನ ಪಾವತಿಸಬೇಕು ಮತ್ತು ಶಾಲೆ, ಕಾಲೇಜು ಆಸ್ಪತ್ರೆಗಳನ್ನು ಸುಸ್ಥಿತಿಯಲ್ಲಿರಿಸಬೇಕು.


....................


ಇರೋ ವಿಚಾರ * ಬಿವಿಸೀ


ಕರ್ನಾಟಕದಲ್ಲಿ ಕಾಣುತ್ತಿರುವ ಇತ್ತೀಚಿನ ಬಿಕ್ಕಟ್ಟುಗಳ ಕೇಂದ್ರ ಬಿಂದು ಇರುವುದು ಒಂದು ಜಟಿಲವಾದ, ತೀಕ್ಷ್ಣವಾದ ಪ್ರಶ್ನೆಯಲ್ಲಿ. ಯಾವುದೇ ಸರ್ಕಾರಕ್ಕೆ ಮೊದಲ ಮತ್ತು ಮೂಲಭೂತ ಆದ್ಯತೆಯಾಗಿ ಏನಿರಬೇಕು? ಸಂಚಾರ ಯೋಗ್ಯ ರಸ್ತೆಗಳೋ, ತನ್ನ ಸಿಬ್ಬಂದಿಗೆ ಸಮಯಕ್ಕೆ ಸರಿಯಾದ ವೇತನ ಪಾವತಿಯೋ, ಆಸ್ಪತ್ರೆಗಳ ಸುಸ್ಥಿತಿಯೋ, ಶಿಕ್ಷಣ ಸಂಸ್ಥೆಗಳ ಉತ್ತಮ ಪರಿಸ್ಥಿತಿಯೋ ಅಥವಾ ಜನಕಲ್ಯಾಣದ ಹೆಸರಿನಲ್ಲಿ ತೆರಿಗೆದಾರರ ತೆರಿಗೆ ಸಂಪನ್ಮೂಲಗಳನ್ನು ಬೇಕಾಬಿಟ್ಟಿಯಾಗಿ ಖರ್ಚುಮಾಡುವುದೋ? ಸರ್ಕಾರವೊಂದು ತನ್ನ ಮೂಲಭೂತ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದಾಗ, ಉಚಿತ ಯೋಜನೆಗಳನ್ನು ವ್ಯಾಪಕವಾಗಿ ಬಳಸುತ್ತಾ ಹೋಗುವುದು ಪ್ರಶ್ನಾರ್ಹವಷ್ಟೇ ಅಲ್ಲದೆ, ಅಸಮರ್ಥನೀಯವೂ ಆಗುತ್ತದೆ.

ವರ್ಷಕ್ಕೆ 75 ಸಾವಿರ ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗಾಗಿಯೇ ಖರ್ಚು ಮಾಡಲಾಗುತ್ತಿದೆ ಎಂದು ಸರ್ಕಾರವೇ ಹೇಳಿದೆ. ಈ ಅಪಾರ ವೆಚ್ಚವನ್ನು ಕುಸಿಯುತ್ತಿರುವ ಆದಾಯ ಮತ್ತು ಹೆಚ್ಚುತ್ತಿರುವ ಸಾಲದ ಹೊರೆಯ ನಡುವೆ ಮಾಡಲಾಗುತ್ತಿದೆ. ಇದು ಬೊಕ್ಕಸವನ್ನು ಸಂಪೂರ್ಣ ಬರಿದು ಮಾಡಿದ್ದು, ಸರ್ಕಾರಿ ನೌಕರರ ವೇತನಗಳನ್ನೂ ಪಾವತಿ ಮಾಡಲಾಗುತ್ತಿಲ್ಲ. ತತ್ಪರಿಣಾಮವಾಗಿ ಸರಕಾರದ ಇಲಾಖೆಗಳಲ್ಲಿ ಜನರ ಕೆಲಸಗಳು ಹರಾಜಾಗುತ್ತಿವೆ, ಭ್ರಷ್ಟಾಚಾರ ಮಿತಿಮೀರಿದೆ (ಶವಸಂಸ್ಕಾರಕ್ಕೂ ಲಂಚ ಕೇಳುವ ಪರಿಪಾಠ ಶುರುವಾಗಿದೆ), ಸರಕಾರದ ವಿವಿಧ ಇಲಾಖೆಗಳು ಹಣಕಾಸು ಒತ್ತಡದಿಂದ ಸೊರಗುತ್ತಿವೆ, ಸಾರ್ವಜನಿಕ ಮೂಲಭೂತ ಸೌಕರ್ಯಗಳಿಗಾಗಿ ಇರುವ ಹಣ ಖಾಲಿಯಾಗಿದೆ, ಅವಶ್ಯ ಸೇವೆಗಳು ಸತತವಾಗಿ ಕುಸಿಯುತ್ತಿವೆ. ರಾಜ್ಯದ ಹಣಕಾಸು ವ್ಯವಸ್ಥೆಯು, ಈಡೇರಿಸಲಾಗದ ಭರವಸೆಗಳಿಂದ ಕುಸಿದುಹೋಗಿರುವ, ವಿಫಲ ಮಾದರಿಯನ್ನು ಬಿಂಬಿಸುತ್ತಿದೆ.

ಸಿತವನ್ನು ಪ್ರತ್ಯಕ್ಷವಾಗಿ ಕಾಣುವುದಾದರೆ, ಅದು ರಾಜ್ಯಾದ್ಯಂತ, ರಾಜಧಾನಿಯಿಂದ ದೂರದ ತಾಲ್ಲೂಕಿನವರೆಗೆ ಇರುವ ರಸ್ತೆಗಳ ಪರಿಸ್ಥಿತಿಯಲ್ಲಿ ಗುರುತಿಸಬಹುದು. ಇದು ಜನರ ಪಾಲಿಗೆ ನಿತ್ಯ ಹೈರಾಣದ ವಿಷಯವಾಗಿದೆ. ರಸ್ತೆ ಹಳ್ಳಗಳು, ದುರಸ್ತಿಯಾಗದ ಕಾಮಗಾರಿಗಳು, ಅಪೂರ್ಣ ನಿರ್ಮಾಣ ಕಾಮಗಾರಿಗಳು ರಸ್ತೆ ಸಂಚಾರವನ್ನು ಅಸುರಕ್ಷಿತಗೊಳಿಸಿದ್ದು ದುಬಾರಿಯಾಗಿಸಿದೆ. ಏತನ್ಮಧ್ಯೆ ಆಸ್ಪತ್ರೆಗಳು ಔಷಧಿಗಳ ಕೊರತೆಯಿಂದ ಬಳಲುತ್ತಿದ್ದು, ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಪರದಾಡುತ್ತಿವೆ. ಸರ್ಕಾರಿ ಶಾಲಾ ಕಾಲೇಜುಗಳು ನಿರ್ಲಕ್ಷ್ಯಕ್ಕೊಳಗಾಗಿದ್ದು, ಹಲವು ತಿಂಗಳುಗಳ ಅನುದಾನವನ್ನು ಬಾಕಿ ಉಳಿಸಲಾಗಿದೆ. ಇವೆಲ್ಲವೂ ಆಡಳಿತ ಲೋಪಗಳಲ್ಲ; ಬದಲಾಗಿ, ತಪ್ಪಾದ ಆದ್ಯತೆಗಳ ಸಲುವಾಗಿ ಉಂಟಾಗಿರುವ ಆಳವಾದ ಆರ್ಥಿಕ ಅವ್ಯವಸ್ಥೆಯ ಸಂಕೇತವಾಗಿ ಕಾಣುತ್ತವೆ.

ಆಳ್ವಿಕೆ ಎಂದರೆ ಬರೀ ಖರ್ಚು ಹೆಚ್ಚು ಮಾಡುವುದಲ್ಲ. ಇದು ಸರಿಯಾದ ಹಾದಿಯಲ್ಲಿ ಖರ್ಚುಮಾಡುವುದು. ಸರ್ಕಾರದ ಪ್ರಥಮ ಜವಾಬ್ದಾರಿ. ತನ್ನ ಆಡಳಿತ ಯಂತ್ರವು ಸರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಖಚಿತಪಡಿಸಿಕೊಳ್ಳುವುದು ಸರಕಾರ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ವೇತನ ನೀಡುವುದು, ಸೇವೆಗಳನ್ನು ಸಮರ್ಪಕವಾಗಿ ವಿತರಿಸುವುದು, ಸಾರ್ವಜನಿಕ ಮೂಲ ಸೌಕರ್ಯಗಳನ್ನು ನಿರ್ವಹಿಸುವುದು , ಇದು ಮೊದಲ ಆದ್ಯತೆಯಾಗಬೇಕು. ಜನಕಲ್ಯಾಣ ಯೋಜನೆಗಳನ್ನು ಸಮರ್ಥಿಸಬೇಕಾದರೆ, ಈ ಮೂಲ ವ್ಯವಸ್ಥೆಗಳು ಸುಸ್ಥಿತಿಯಲ್ಲಿರಬೇಕು. ಇಂದು ಕರ್ನಾಟಕ ಇದಕ್ಕೆ ವಿರುದ್ದ ದಿಕ್ಕಿನಲ್ಲಿ ಸಾಗುತ್ತಿದೆ. ಜನಪ್ರಿಯತೆಯೇ ಪ್ರಬುದ್ಧತೆಯನ್ನು ಹಿಂದಕ್ಕೆ ಹಾಕಿದೆ. ಹಣಕಾಸು ನಿರ್ವಹಣೆ ಪ್ರತಿಕ್ರಿಯಾತ್ಮಕವಾಗಿದೆಯೇ ಹೊರತು ಯೋಜನಾಬದ್ಧವಾಗಿಲ್ಲ.

ರಾಜ್ಯದ ಬೊಕ್ಕಸಕ್ಕೆ ದಿನನಿತ್ಯದ ಬಾಧ್ಯತೆಗಳನ್ನೇ ನಿಭಾಯಿಸಲು ಸಾಧ್ಯವಾಗದೆ ಹೋದಾಗ, ಕೂತು ಯೋಚಿಸಿ, ಪರಿಷ್ಕರಣೆ ಮಾಡಬೇಕಾಗುತ್ತದೆ. ಸರ್ಕಾರವು ಜನತೆಗೆ ಕಲ್ಯಾಣ ಯೋಜನೆಗಳನ್ನು ತಲುಪಿಸುವ ತನ್ನ ನೈತಿಕ ಕರ್ತವ್ಯ ಮತ್ತು ಆಡಳಿತಾತ್ಮಕ ಕರ್ತವ್ಯವನ್ನು ನಿಭಾಯಿಸುವುದನ್ನು ಸಮತೋಲನಗೊಳಿಸಬೇಕು. ಇದು ರಾಜ್ಯವನ್ನು ಸುಸ್ಥಿತಿಯಲ್ಲಿರಿಸುತ್ತದೆ. ನಾಗರಿಕರು ಭವ್ಯ ಘೋಷಣೆಗಳನ್ನು ಅಪೇಕ್ಷಿಸುವುದಿಲ್ಲ, ಆದರೆ ಪ್ರಾಮಾಣಿಕವಾದ, ಕಾರ್ಯೊನ್ಮುಖ ಸರ್ಕಾರವನ್ನು ಅಪೇಕ್ಷಿಸುತ್ತಾರೆ. ಬಿಟ್ಟೀ ಅನುಕೂಲಗಳನ್ನು ನೀಡುವ ಮುನ್ನ ಸರ್ಕಾರಗಳು ರಸ್ತೆಗಳನ್ನು ಸರಿಪಡಿಸಬೇಕು, ಸಿಬ್ಬಂದಿಗೆ ವೇತನ ಪಾವತಿಸಬೇಕು ಮತ್ತು ಶಾಲೆ ಆಸ್ಪತ್ರೆಗಳನ್ನು ಸುಸ್ಥಿತಿಯಲ್ಲಿರಿಸಬೇಕು. ಇಲ್ಲವಾದರೆ ಇದು ಬೇಜವಾಬ್ದಾರಿತನವಾಗಿ ಸಾರ್ವಜನಿಕ ವಿಶ್ವಾಸಕ್ಕೆ ದ್ರೋಹ ಬಗೆದಂತಾಗುತ್ತದೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again