ಮತಗಳ್ಳತನ ಆಪಾದನೆ - ಇಂದಿರಾ ಸರ್ವಾಧಿಕಾರದ ಪ್ರತಿಧ್ವನಿ
ರಾಹುಲ್ ಗಾಂಧಿ ನ್ಯಾಯಕ್ಕಾಗಿ ಹೋರಾಡುವ ಸುಧಾರಕರ ಹಾಗೆ ಭ್ರಮಿಸಿರಬಹುದು, ಆದರೆ ವಾಸ್ತವದಲ್ಲಿ, ಬೆಂಕಿಯೊಡನೆ ಸರಸ ಆಡುತ್ತಿದ್ದಾರೆ
..............
* ಬಿವಿಸೀ
ಪ್ರಜಾಪ್ರಭುತ್ವದಲ್ಲಿ ಚುನಾವಣೆಯ ನ್ಯಾಯೋಚಿತತೆಯನ್ನು ಪ್ರಶ್ನಿಸುವುದು ನ್ಯಾಯಯುತವಾದುದು. ಆದರೆ ಅದಕ್ಕೆ ಸೂಕ್ತ ಪುರಾವೆ, ದತ್ತಾಂಶಗಳು ಇರಬೇಕಾಗುತ್ತದೆ. ರಾಹುಲ್ ಗಾಂಧಿಯ ಮತಗಳ್ಳತನದ ಪ್ರಚಾರ ಸತ್ಯವನ್ನು ಶೋಧಿಸುವ ಉದ್ದೇಶಕ್ಕಿಂತಲೂ ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನೇ ಅನುಮಾನಿಸುವ ನಿಟ್ಟಿನಲ್ಲಿ ಸಾಗುತ್ತಿದೆ. ಚುನಾವಣಾ ಆಯೋಗವು ಈ ಆರೋಪಗಳಿಗೆ ಸಾಕ್ಷಿ ಒದಗಿಸುವಂತೆ ಬಹಿರಂಗ ಸವಾಲು ಹಾಕಿದ್ದರೂ, ರಾಹುಲ್ ತಮ್ಮ ಪರಿಶೀಲನೆಗೊಳಪಡದ ಆರೋಪಗಳನ್ನು ನಾಟಕೀಯವಾಗಿ ಮಾಡುತ್ತಲೇ ಇದ್ದಾರೆ. ಅವರ ಹಿಟ್ ಅಂಡ್ ರನ್ ರೀತಿಯ ರಾಜಕೀಯ ಶೈಲಿ ಸಾಮಾನ್ಯವಾಗಿದ್ದು, ಆರೋಪಗಳನ್ನು ಹೊರಿಸಿ ನಂತರ ಸಾಕ್ಷ್ಯಾಧಾರಗಳಿಲ್ಲದೆ ಮುಂದೋಡುವ ಮಾದರಿ ಧೈರ್ಯವನ್ನು ಬಿಂಬಿಸುವುದಿಲ್ಲ, ಬದಲಾಗಿ ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತದೆ.
ವಿಡಂಬನೆ ಎಂದರೆ, ಕರ್ನಾಟಕದ ಕಾಂಗ್ರೆಸ್ ಪಕ್ಷವು ಇದೇ ಚುನಾವಣಾ ವ್ಯವಸ್ಥೆಯ ಮೂಲಕವೇ ಅಧಿಕಾರಕ್ಕೆ ಬಂದಿದ್ದು, ಈ ಪ್ರಚಾರದಲ್ಲಿ ಭಾಗಿಯಾಗುವ ಮೂಲಕ ಅದನ್ನೇ ಈಗ ಹೀಗಳೆಯುತ್ತಿದೆ. ಪಕ್ಷಕ್ಕೆ ಜನರು ನೀಡಿರುವ ಮತಾದೇಶವನ್ನು ಸ್ವತಃ ಅಪಮಾನಿಸುತ್ತಿದ್ದು, ಪಕ್ಷದ ಯಶಸ್ಸಿಗೆ ಕಾರಣವಾದ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನೇ ಅಣಕಿಸುತ್ತಿದೆ. ಇದು ನೀತಿಯುತ ವಿರೋಧ ಆಗುವುದಿಲ್ಲ, ಕ್ರಿಯಾಶೀಲತೆಯ ಮುಸುಕು ಹೊದ್ದ ರಾಜಕೀಯ ನಿರಾಕರಣವಾಗಿ ಕಾಣುತ್ತದೆ.
ರಾಹುಲ್ ಅವರ ಹೇಳಿಕೆಗಳು ಕೆಲವು ಅಹಿತಕರ ಚಾರಿತ್ರಿಕ ಹೋಲಿಕೆಗಳಿಗೆ ಕಾರಣವಾಗುತ್ತದೆ. ಭಾರತದ ಪ್ರಜಾಪ್ರಭುತ್ವದ ಚರಿತ್ರೆಯಲ್ಲಿ ಸಾಂವಿಧಾನಿಕ ವಿಶ್ವಾಸವನ್ನು ಅಲ್ಲಗಳೆದ ಏಕೈಕ ಉದಾಹರಣೆ ಇರುವುದು ಮಾಜಿ ಪ್ರಧಾನಿ, ರಾಹುಲ್ ಅವರ ಅಜ್ಜಿ ಇಂದಿರಾಗಾಂಧಿ ಅವರಲ್ಲಿ. ತಮ್ಮ ಅಧಿಕಾರವನ್ನು ಉಳಿಸಿಕೊಳ್ಳುವ ಸಲುವಾಗಿ ತುರ್ತುಪರಿಸ್ಥಿತಿಯನ್ನು ಹೇರಿದ ಇಂದಿರಾ, ಈ ಅವಧಿಯಲ್ಲಿ ಪ್ರತಿರೋಧವನ್ನು ಹತ್ತಿಕ್ಕಲು, ಪ್ರಜಾತಂತ್ರದ ಉಸಿರುಗಟ್ಟಿಸಲು ಕಾರಣರಾಗಿದ್ದರು. ದಶಕಕ್ಕಿಂತಲೂ ಹೆಚ್ಚಿನ ವರ್ಷಗಳ ಪ್ರಧಾನ ಮಂತ್ರಿ ಹುದ್ದೆಯಲ್ಲಿ, ಇಂದಿರಾ ಗಾಂಧಿ 59 ಬಾರಿ ರಾಜ್ಯ ಸರ್ಕಾರಗಳನ್ನು ಉರುಳಿಸಿದ್ದರು. ಇದು ಒಕ್ಕೂಟ ವ್ಯವಸ್ಥೆಯನ್ನೇ ಅಪಹಾಸ್ಯ ಮಾಡಿದಂತಿತ್ತು. ಇಂದಿರಾ ಅವರ ರಾಜಕೀಯ ಶೈಲಿ ಸಂವಿಧಾನದಲ್ಲಿ ನಂಬಿಕೆಯನ್ನು ಕಡಿಮೆ ಮಾಡಿದ್ದೇ ಅಲ್ಲದೆ, ಭಾರತದ ಪ್ರಜಾಸತ್ತಾತ್ಮಕ ಮನಸ್ಥಿತಿಯನ್ನೂ ಸಹ ಬಹಳ ವರ್ಷಗಳ ಕಾಲ ಘಾಸಿಗೊಳಿಸಿತ್ತು.
ಈಗ ರಾಹುಲ್ ಇದೇ ವಿನಾಶಕಾರಿ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಧಿಕಾರಯುತ ಆದೇಶಗಳ ಮೂಲಕ ಅಲ್ಲದಿದ್ದರೂ, ದಿಕ್ಕು ದೆಸೆ ಇಲ್ಲದ ಜನಪ್ರಿಯತೆಯ ಮೂಲಕ ಈ ಮಾರ್ಗ ಅನುಸರಿಸುತ್ತಿದ್ದಾರೆ. ಅವರ ನಿರಂತರ ಪ್ರಚಾರವು ಸಂಸ್ಥೆಗಳನ್ನು ಒಳಗಿನಿಂದಲೇ ದುರ್ಬಲಗೊಳಿಸುತ್ತವೆ. ಸುಪ್ರೀಂಕೋರ್ಟ್ ಸಹ ಅವರ ಬಗ್ಗೆ ಉದಾರ ನಿಲುವು ತಳೆದಿದ್ದು, ರಾಹುಲ್ ಅವರ ಸಂಯಮವಿಲ್ಲದ ಹೇಳಿಕೆಗಳು ಸಾರ್ವಜನಿಕರ ನಡುವೆ ಗೊಂದಲ ಸೃಷ್ಟಿಸುತ್ತದೆ.
ಭಾರತದ ಪ್ರಜಾಪ್ರಭುತ್ವಕ್ಕೆ ಧಾರಣಾ ಶಕ್ತಿ ಇದೆ. ಆದರೆ ಅದು ಅವಿನಾಶಿಯಲ್ಲ. ಮಹತ್ವಾಕಾಂಕ್ಷೆಗಳು ಜವಾಬ್ದಾರಿಯನ್ನು ಹಿಂದಿಕ್ಕಿದಾಗ, ವೈಯುಕ್ತಿಕ ಆರೋಪಗಳು ಸಾರ್ವಜನಿಕ ತರ್ಕದ ಸ್ಥಾನವನ್ನು ಆಕ್ರಮಿಸುತ್ತದೆ. ಗಣತಂತ್ರವು ಕಂಪಿಸುತ್ತದೆ. ರಾಹುಲ್ ಗಾಂಧಿ ನ್ಯಾಯಕ್ಕಾಗಿ ಹೋರಾಡುವ ಸುಧಾರಕರ ಹಾಗೆ ಭ್ರಮಿಸಿರಬಹುದು, ಆದರೆ ವಾಸ್ತವದಲ್ಲಿ, ಬೆಂಕಿಯೊಡನೆ ಸರಸ ಆಡುತ್ತಿದ್ದಾರೆ. ಇದೇ ಹಾದಿಯಲ್ಲಿ ಮುಂದುವರೆದು ವಿನಾಶಕಾರಿ ಜನಪ್ರಿಯತೆಯನ್ನೇ ನಂಬಿ ನಡೆದರೆ, ಅವರು ಹೊತ್ತಿಸುವ ಪಂಜು ಮುಂದೊಮ್ಮೆ ಅವರಿಗೆ ದನಿ ನೀಡಿದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಆಹುತಿ ಪಡೆಯುತ್ತದೆ.
Comments
Post a Comment