ಕಾಂಗ್ರೆಸ್ ಸದನಕ್ಕೆ ಕಳಂಕವನ್ನು ಏಕೆ ಸಹಿಸಿಕೊಳ್ಳುತ್ತಿದೆ?
ಸರ್ಕಾರವೇ ಕಾನೂನು-ಕಟ್ಟಳೆ, ಆಡಳಿತದಲ್ಲಿ ಸತ್ಸಂಪ್ರದಾಯಗಳನ್ನು ಗಾಳಿಗೆ ತೂರಿದೆ ಎನ್ನುವ ಸಂದೇಶವನ್ನು ಸೈಲ್ ಪ್ರಕರಣ ಬಿಂಬಿಸುವುದಿಲ್ಲವೇ?
* ಸಂಪಾದಕೀಯ
ತಮ್ಮ ಶಾಸಕರೊಬ್ಬರ ವಿರುದ್ಧ ರಾಜ್ಯದ ಬೊಕ್ಕಸಕ್ಕೆ 44 ಕೋಟಿ ರೂ ನಷ್ಟ ಉಂಟುಮಾಡಿದ ಶಾಸಕ ಸತೀಶ್ ಸೈಲ್ ಅವರ ವಿರುದ್ಧ ಇ ಡಿ ಚಾರ್ಜ್ ಷೀಟ್ ಸಲ್ಲಿಸಿದ್ದರೂ, ಕರ್ನಾಟಕ ಸರ್ಕಾರ ಆತನಿಗೆ ಗೌರವ ಕೊಡುತ್ತಲೇ ಇದೆ. ಇದು ಕಾಂಗ್ರೆಸ್ ಪಕ್ಷಕ್ಕೆ ವಿವರಿಸಲಾಗದ ನೈತಿಕ ಅಧಃಪತನವಾಗಿ ಕಾಣುತ್ತಿದೆ.
ಕಾರವಾರದ ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಹಗರಣವು ಕೇವಲ ರಾಜಕಾರಣಿಯೊಬ್ಬ ತನ್ನ ವಿರುದ್ಧ ಕಳಂಕ ಇದ್ದರೂ ಕೇವಲ ಅಧಿಕಾರದ ಬಲದಿಂದ ಉಳಿದುಕೊಂಡಿರುವ ಮತ್ತೊಂದು ಪ್ರಕರಣ ಅಲ್ಲ. ಇದು ಸರ್ಕಾರವು ಗೊತ್ತಿದ್ದೂ ಸಹ ನ್ಯಾಯಾಲಯದಲ್ಲಿ ದೋಷಾರೋಪಣೆ ಎದುರಿಸುತ್ತಿರುವ ಶಾಸಕನನ್ನು ರಕ್ಷಿಸುವ ಚಿತ್ರಣವನ್ನು ಪ್ರದರ್ಶಿಸುತ್ತದೆ. ಸರ್ಕಾರ ಚಾರ್ಜ್‍ಷೀಟ್ ಸಲಿಸಿದ್ದು, ಆರೋಪಿ ಶಾಸಕರು ರಾಜ್ಯದ ಬೊಕ್ಕಸಕ್ಕೆ ಕೋಟ್ಯಂತರ ರೂ ನಷ್ಟ ಉಂಟುಮಾಡಿದ್ದರೂ ಸಹ, ಸರ್ಕಾರ ಸುಮ್ಮನಿರುವುದು ತರವಲ್ಲ. ಈ ಹಗರಣದ ಪರಿಣಾಮವಾಗಿ ಕರ್ನಾಟಕದ ಕಾಂಗ್ರೆಸ್ ಸರ್ಕಾರವು, ದಾಖಲೆಗಳ ಮೂಲಕ ನಿರೂಪಿಸಲ್ಪಟ್ಟಿರುವ ವ್ಯಕ್ತಿಯೊಬ್ಬ, ಆಡಳಿತ ವ್ಯವಸ್ಥೆಗೆ ಹಾನಿ ಉಂಟುಮಾಡಿದ್ದರೂ, ಈಗ ಆತನನ್ನು ರಕ್ಷಿಸಲು ಹರಸಾಹಸ ಮಾಡುತ್ತಿದೆ.
ಜನಪ್ರಾತಿನಿಧ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಚಾರ್ಜ್‍ಷೀಟ್ ಸ್ಪಷ್ಟವಾಗಿದೆ. ಕಾರವಾರದ ಕಾಂಗ್ರೆಸ್ ಶಾಸಕ ಸೈಲ್ ಅವರ ಚಟುವಟಿಕೆಗಳು ರಾಜ್ಯ ಸರ್ಕಾರಕ್ಕೆ 44 ಕೋಟಿ ರೂ ನಷ್ಟ ಉಂಟುಮಾಡಿದೆ. ಇದು ಕೇವಲ ರಾಜಕೀಯ ಆರೋಪವಲ್ಲ, ಅಥವಾ ವಿರೋಧಿಗಳ ಆರೋಪವೂ ಅಲ್ಲ, ಬದಲಾಗಿ ಸರ್ಕಾರದ ಅಧಿಕೃತ ನಿಲುವು. ಇದರಿಂದಲೇ ಕೂಡಲೇ ಶಿಸ್ತು ಕ್ರಮ ಜರುಗಿಸುವುದು ಅವಶ್ಯವಾಗಿದೆ. ಸೈಲ್ ಅವರನ್ನು ಅಮಾನತುಗೊಳಿಸಬೇಕಿದೆ ಇಲ್ಲವೇ ಪಕ್ಷದಿಂದ ಉಚ್ಛಾಟಿಸಬೇಕಿದೆ. ಬದಲಾಗಿ ಕರ್ನಾಟಕವು ರಾಜಕೀಯ ಭೋಗದ ವಿಶಿಷ್ಟ ಸನ್ನಿವೇಶವನ್ನು ಕಾಣುತ್ತಿದ್ದು, ಸರ್ಕಾರ ಶಾಮೀಲಾಗುವುದಕ್ಕೆ ಸಮನಾಗಿ ಕಾಣುತ್ತದೆ. ಇದಕ್ಕೂ ಮೊದಲು ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಮತ್ತು ಲೋಕಾಯುಕ್ತ ಸಂತೋಷ್ ಹೆಗ್ಡೆಯವರು ಸೈಲನನ್ನು ಅಪರಾಧಿ ಎಂದು ಗುರುತಿಸಿದ್ದರು.
ಇಂಥ ವ್ಯಕ್ತಿಯನ್ನು ಪಕ್ಷದಿಂದ ದೂರ ಇಡುವ ಬದಲು, ಈಗ ಸೈಲ್ ಅವರನ್ನು ಹಲವು ಸವಲತ್ತುಗಳಿಂದ ಸಮ್ಮಾನಿಸಿದೆ. ಮೊದಲು ಆತನನ್ನು ಎಮ್‍ಸಿಎ ಜಾಹೀರಾತು ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷನನ್ನಾಗಿ ನೇಮಿಸಲಾಯಿತು. ಈ ಹುದ್ದೆಯಲ್ಲಿ ಪೂರ್ಣ ಪ್ರಮಾಣದ ವೇತನ, ವಸತಿ ಸೌಕರ್ಯ, ಪ್ರವಾಸ ಭತ್ಯೆ, ದಿನಭತ್ಯೆ ಎಲ್ಲವೂ ಸೇರಿರುತ್ತವೆ. ಕೇಂದ್ರ ಜಾರಿ ಏಜೆನ್ಸಿಗಳು ಸೈಲ್ ಅವರನ್ನು ತೆರಿಗೆ ವಂಚನೆ ಮತ್ತು ಹಣಕಾಸು ದುರುಪಯೋಗದ ಆರೋಪಗಳ ಮೇಲೆ ಬಂಧಿಸಿದ ನಂತರವೂ ಈ ಸವಲತ್ತುಗಳು ಮುಂದುವರೆದಿದ್ದು ಕಳೆದ ಹಲವು ವರ್ಷಗಳಿಂದ ಜೈಲಿನಿಂದ ಒಳಗೆ ಹೊರಗೆ ಓಡಾಡಿಕೊಂಡಿದ್ದಾರೆ. ಆದರೆ ಇದು ಆಡಳಿತಾರೂಢ ಸರ್ಕಾರದಲ್ಲಿ ಆತನ ಸ್ಥಾನವನ್ನು ಕಿಂಚಿತ್ತೂ ಭಾದಿಸಿಲ್ಲ, ಬದಲಾಗಿ ಇನ್ನೂ ಬಲಪಡಿಸಿದೆ.
ವಿಡಂಬನೆ ಎಂದರೆ, ಕೆಡಿಸಿಸಿ ಬ್ಯಾಂಕ್‍ನ ನಿರ್ದೇಶಕರಾಗಿ ಆತನನ್ನು ನೇಮಕ ಮಾಡಿರುವುದನ್ನು ಗಮನಿಸಿದರೆ, ಅದನ್ನು ಅವರು ಚುನಾವಣೆಯಲ್ಲೂ ಗೆಲ್ಲಲಾಗಲಿಲ್ಲ. ಒಂದೇ ಒಂದು ಮತವನ್ನೂ ಗಳಿಸಲಿಲ್ಲ, ತಮ್ಮದೇ ಮತದಿಂದಲೂ ವಂಚಿತರಾಗಿದ್ದರು. ಆದರೂ ಸರ್ಕಾರ ಆತನನ್ನು ಸಾರ್ವಜನಿಕ ಸಂಸ್ಥೆಗಳಿಗೆ ಬೇರೂರಲು ಅವಕಾಶ ನೀಡುವುದರಲ್ಲಿ ಅಪೂರ್ವ ಆಸಕ್ತಿ ತೋರಿದೆ. ಇದು ಸಂಸ್ಥೆಯ ವಿಶ್ವಾಸಾರ್ಹತೆ ಮತ್ತು ಸಾರ್ವಜನಿಕ ಭಾವನೆಗಳಿಗೆ ತದ್ವಿರುದ್ಧವಾಗಿದೆ.
ಸೈಲ್ ಅವರ ಹಣಕಾಸು ದುರುಪಯೋಗಗಳ ವಿರುದ್ಧ ಸರ್ಕಾರ ಚಾರ್ಜ್‍ಷೀಟ್ ಸಲ್ಲಿಸಿದಾಗಲೇ ಅದು ಅದೇ ಸಮಯಕ್ಕೆ ಪ್ರಭಾವಿ ಹುದ್ದೆಗಳಿಗೆ ನೇಮಕ ಮಾಡಿದೆ. ಇದು ಠಕ್ಕುತನದ ಪರಮಾವಧಿ. ಇದು ಕರ್ನಾಟಕದಲ್ಲಿ ಆಳ್ವಿಕೆಯ ಸೂತ್ರ ಯಾರ ಕೈಯ್ಯಲ್ಲಿದೆ ಮತ್ತು ಯಾರ ಹಿತಾಸಕ್ತಿ ಮುಖ್ಯವಾಗಿದೆ ಎಂಬ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಕಾಂಗ್ರೆಸ್ ನಾಯಕತ್ವದ ನೈತಿಕ ವರ್ಚಸ್ಸು ಎದ್ದು ಕಾಣುವ ಹಾಗೆ ಕುಸಿದಿದೆ. ವಿಶ್ಲೇಷಕರು ಹೇಳುವಂತೆ, ವ್ಯಾಪಕ ಗ್ಯಾರಂಟಿ ಯೋಜನೆಗಳು ಮತ್ತು ಹೆಚ್ಚುತ್ತಿರುವ ಸಾಲದ ಹೊರೆಯ ಕಾರಣ, ಹಣಕಾಸು ಬೇಜವಾಬ್ದಾರಿಗೆ ಈಗಾಗಲೇ ಜನರ ಪರಿಶೀಲನೆಗೊಳಗಾಗಿರುವ ಸರ್ಕಾರವು, ಸಾರ್ವಜನಿಕ ಹಣವನ್ನು ಗುಳುಂ ಮಾಡಿದ ಶಾಸಕನೊಬ್ಬನನ್ನು ರಕ್ಷಿಸುವುದು ಸರಿಯಾಗಲಾರದು. ಆದರೂ ನಾಯಕತ್ವವು ದಿಕ್ಕು ತಪ್ಪಿದಂತಾಗಿದ್ದು, ಈ ಸನ್ನಿವೇಶ ಸೃಷ್ಟಿಸಿರುವ ವಿರೋಧಾಭಾಸವನ್ನು ನಿವಾರಿಸಲು ವಿಫಲವಾಗಿದೆ ಅಥವಾ ಇಚ್ಚಾಶಕ್ತಿಯನ್ನು ಕಳೆದುಕೊಂಡಿದೆ.
ಸೈಲ್ ಪ್ರಕರಣವು ಒಂದು ಸ್ಪಷ್ಟ ಸಂದೇಶವನ್ನು ನೀಡುತ್ತದೆ. ನೈತಿಕತೆ ಎನ್ನುವುದು ಆಯ್ಕೆಯ ಪ್ರಶ್ನೆಯಾಗಿಬಿಟ್ಟಿದೆ; ನಿಷ್ಠೆಯೇ ಮುಖ್ಯವಾಗುತ್ತದೆ. ಉತ್ತರದಾಯಿತ್ವ ಕೇವಲ ಹಾಳೆಗಳ ಮೇಲೆ ಉಳಿಯುತ್ತದೆ. ತಾನೇ 44 ಕೋಟಿ ರೂಗಳಷ್ಟು ಸರ್ಕಾರಕ್ಕೆ ನಷ್ಟ ಮಾಡಿರುವ ವ್ಯಕ್ತಿಯನ್ನು ಸರ್ಕಾರ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಎಂದರೆ, ಅದು ಪಾರದರ್ಶಕತೆ, ಸುಧಾರಣೆ ಅಥವಾ ಪ್ರಾಮಾಣಿಕತೆಯ ಬಗ್ಗೆ ಮಾತನಾಡುವ ನೈತಿಕತೆಯನ್ನೇ ಕಳೆದುಕೊಳ್ಳುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ವಿಶ್ವಾಸಾರ್ಹತೆಯ ಬಿಕ್ಕಟ್ಟು ಎದುರಿಸುತ್ತಿದ್ದು, ಇದು ಸ್ವಯಂಕೃತ ಅಪರಾಧವಾಗಿದೆ. ಯಾವುದೇ ರೀತಿಯ ರಾಜಕೀಯ ಸರ್ಕಸ್ ಮಾಡಿದರೂ, ಅದು ತತ್ವಗಳಿಗೆ ವಿರುದ್ಧವಾಗಿ ಪೆÇೀಷಕತ್ವವನ್ನೇ ಆಯ್ಕೆ ಮಾಡಿದೆ ಎಂಬ ಸತ್ಯವನ್ನು ಮರೆಮಾಚಲಾಗುವುದಿಲ್ಲ. ಸರ್ಕಾರವೇ ಕಾನೂನು-ಕಟ್ಟಳೆ, ಆಡಳಿತದಲ್ಲಿ ಸತ್ಸಂಪ್ರಾಯಗಳನ್ನು ಗಾಳಿಗೆ ಬಿಸಾಡಿದೆ ಎನ್ನುವ ಸಂದೇಶವನ್ನು ಸೈಲ್ ಪ್ರಕರಣ ಬಿಂಬಿಸುವುದಿಲ್ಲವೇ?
Comments
Post a Comment