ಹಿಂದಿ ಮಾಧ್ಯಮಗಳ ದೃಷ್ಟಿಯಲ್ಲಿ ಸಿದ್ದರಾಮಯ್ಯ
ರಾಷ್ಟ್ರೀಯ ಹಿಂದಿ ಭಾಷಿಕ ಮುದ್ರಣ ಮಾಧ್ಯಮಗಳು ಕರ್ನಾಟಕದ ಕಡೆಗೆ ತೀವ್ರ ಗಂಭೀರವಾಗಿ ಗಮನಹರಿಸುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇವಲ ಪ್ರಾದೇಶಿಕ ಆಡಳಿತಗಾರನಾಗಿ ಅಲ್ಲದೆ, ಜಾತಿ ಸಮೀಕರಣದ ಸಿಕ್ಕುಗಳಲ್ಲಿ ಸಿಲುಕಿರುವ, ಭ್ರಷ್ಟಾಚಾರದ ಆರೋಪಗಳ ಸುಳಿಯಲ್ಲಿರುವ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆ ಪರದಾಡುತ್ತಿರುವ ರಾಜಕೀಯ ವ್ಯಕ್ತಿಯಾಗಿ ನೋಡುತ್ತಿವೆ. ಈ ಪತ್ರಿಕೆಗಳ ಪ್ರಕಟಿತ ಸುದ್ದಿಗಳಲ್ಲಿ ನಾಯಕನ ಚಿತ್ರಣವನ್ನು, ಆಳ್ವಿಕೆ ಮತ್ತು ಉತ್ತರದಾಯಿತ್ವದ ಕಠಿಣ ವಾಸ್ತವಗಳೊಡನೆ ಹೊಡೆದಾಡುತ್ತಿರುವ ಸೈದ್ಧಾಂತಿಕ ವ್ಯಕ್ತಿ ಎಂದು ಬಿಂಬಿಸಲಾಗುತ್ತಿದೆ.
...............
ಹಿಂದಿ ಪತ್ರಿಕೆಗಳಿಗೆ ಸಿದ್ದರಾಮಯ್ಯ ವಿರೋಧಾಭಾಸದ ವ್ಯಕ್ತಿಯಾಗಿ ಕಾಣುತ್ತಾರೆ. ತೀಕ್ಷ್ಣವಾದ ಸಾಮಾಜಿಕ ನ್ಯಾಯದ ಮಾತುಗಾರಿಕೆ ಇರುವ ಸಾಮೂಹಿಕ ನಾಯಕನಾಗಿ ಕಂಡರೂ ಆಡಳಿತ ವ್ಯವಸ್ಥೆಯಲ್ಲಿ ತೀವ್ರವಾದ ಅನಿಷ್ಚಿತತೆಯನ್ನು, ಅಕ್ರಮಗಳನ್ನು ಹಾಗೂ ರಾಜಕೀಯ ಅನಿವಾರ್ಯತೆಗಳನ್ನು ಎದುರಿಸುತ್ತಿರುವ ಆಡಳಿತಗಾರನನ್ನಾಗಿ ಗುರುತಿಸಲಾಗುತ್ತಿದೆ
ಮೂಡಾ ಹಗರಣವು ನಿರೂಪಣೆಗಳ ಪೈಕಿ ಪ್ರಧಾನವಾಗಿದ್ದು, ಹಿಂದಿ ಸುದ್ದಿ ಪತ್ರಿಕೆಗಳು, ನಕಲಿ ಸಹಿ ಇರುವ ದಸ್ತಾವೇಜುಗಳಿಂದ ಹಿಡಿದು, ಅಕ್ರಮ ಭೂ ಮಂಜೂರಾತಿಯವರೆಗೆ ಈ ಆರೋಪಗಳು ಸಿದ್ದರಾಮಯ್ಯ ಅವರ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತಿರುವುದನ್ನು ಗುರುತಿಸುತ್ತಿವೆ. ತನಿಖೆಗಳು ಕೇವಲ ನಿತ್ಯ ತೊಂದರೆಗಳಾಗಿರದೆ, ಕಾನೂನು ಹಿಡಿತ ಇರುವ ಪ್ರಕ್ರಿಯೆಯಾಗಿವೆ ಎಂದು ಹೇಳುತ್ತವೆ. ಮೊಕದ್ದಮೆ ಹೂಡಲು ರಾಜ್ಯಪಾಲರ ಅನುಮತಿ, ಜಾರಿ ನಿರ್ದೇಶನಾಲಯದ ತನಿಖೆ ಮತ್ತು ಮೊಕದ್ದಮೆಗಳನ್ನು ತಡೆಯಲು ಹೈಕೋರ್ಟ್ ನಿರಾಕರಿಸುವುದನ್ನು ಪ್ರಧಾನವಾಗಿ ವರದಿ ಮಾಡಲಾಗಿದೆ. ಅನೇಕ ಸಂಪಾದಕರಿಗೆ, ಈ ಪ್ರಶ್ನೆಗಳು ಸಿದ್ದರಾಮಯ್ಯ ಅವರ ದುರಾಡಳಿತ ಅಥವಾ ದುರ್ವರ್ತನೆಗಿಂತಲೂ ಹೆಚ್ಚಾಗಿ ವ್ಯವಸ್ಥೆಯನ್ನು ಹೇಗೆ ದುರ್ಬಳಕೆ ಮಾಡಲಾಗಿದೆ ಎನ್ನುವುದರ ಸುತ್ತ ವರದಿಯಾಗಿವೆ.
ಸಿದ್ದರಾಮಯ್ಯ ಅವರನ್ನು ಮಾಪನ ಮಾಡುವ ಎರಡನೆಯ ಚೌಕಟ್ಟು ಎಂದರೆ, ಅವರ ಜಾತಿ ಆಧಾರಿತ ಸಂವಾದಗಳು. ಇದು ರಾಜಕೀಯ ವಿವಾದದ ಕೇಂದ್ರ ಬಿಂದುವಾಗಿದೆ. ಕರ್ನಾಟಕದ ಸಾಮಾಜಿಕ ವಾಸ್ತವಗಳನ್ನು ಅರ್ಥಮಾಡಿಕೊಳ್ಳಲು ಇದು ಅವಶ್ಯಕ ಎಂದು ಸಿದ್ದರಾಮಯ್ಯ ಸಮರ್ಥಿಸಿದರೂ, ಹಿಂದಿ ಮಾಧ್ಯಮಗಳು, ಸಿದ್ದು ಸರಕಾರ ಆದೇಶಿಸಿದ ಸಮೀಕ್ಷೆಗಳನ್ನು ಚುನಾವಣಾ ಲೆಕ್ಕಾಚಾರಗಳನ್ನು ರೂಪಿಸಲು, ಹಿಂದುಳಿದ ವರ್ಗಗಳ ಭಾವನೆಗಳನ್ನು ಬಳಸಿಕೊಳ್ಳಲು ಮತ್ತು ಆಡಳಿತದ ವಿವಾದಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು, ಒಂದು ಕಾರ್ಯತಂತ್ರವಾಗಿ ಬಳಸಲಾಗುತ್ತಿದೆ ಎಂಬ ಗುಮಾನಿಯನ್ನು ವ್ಯಕ್ತಪಡಿಸಿವೆ. ಹಠಾತ್ ಪ್ರಮುಖ ನಿರ್ಧಾರಗಳ ಮುಂದೂಡಿಕೆಗಳು, ಅಪಾರದರ್ಶಕವಾಗಿ ಆಡಳಿತ ನಡೆಸುವುದು ಈ ಅನುಮಾನಗಳನ್ನು ಪುಷ್ಟೀಕರಿಸಿವೆ. ಸಂಪಾದಕೀಯ ಬರಹಗಳಲ್ಲಿ ಸಿದ್ದರಾಮಯ್ಯ ಪ್ರಗತಿಪರ ಅಸ್ತ್ರವನ್ನು ರಾಜಕೀಯವಾಗಿ ಸ್ಫೋಟಕ ಚದುರಂಗದಾಟದಂತೆ ಬಳಸುತ್ತಿದ್ದಾರೆ ಎಂಬ ವಾದವನ್ನೂ ಗುರುತಿಸಬಹುದು.
ಮೂರನೆಯ ವಿಚಾರ ಎಂದರೆ ಸ್ವಜನಪಕ್ಷಪಾತದ ನೀತಿಗಳು. ಮೂಡಾದ ನಿವೇಶನ ಮಂಜೂರಾತಿಯ ಸುತ್ತ ಹರಡಿರುವ ಆರೋಪಗಳು, ಪ್ರಧಾನವಾದ ನಿವೇಶನಗಳನ್ನು ಸಿದ್ದರಾಮಯ್ಯ ಅವರ ಕುಟುಂಬ ಸದಸ್ಯರಿಗೆ ಮಂಜೂರು ಮಾಡಿರುವುದು, ವಿಶೇಷವಾಗಿ ಅವರ ಮಡದಿಗೆ ನೀಡಿರುವುದು, ಪ್ರಮುಖವಾಗಿ ವರದಿಯಾಗಿವೆ. ಜತೆಗೇ ಸಿದ್ದರಾಮಯ್ಯ ತನ್ನ ಮಗನನ್ನು ರಾಜಕೀಯದಲ್ಲಿ ಮುಂದೆ ತರಲು ಹಂಬಲಿಸಿರುವುದು, ಮೊಮ್ಮಗನನ್ನು ತನ್ನ ಉತ್ತರಾಧಿಕಾರಿ ಎಂದು ಬಿಂಬಿಸಲು ಸೂಕ್ಷ್ಮವಾಗಿ ಬಿಂಬಿಸಿರುವುದನ್ನು ಕೆಲವು ಮಾಧ್ಯಮಗಳು ಚರ್ಚಿಸಿರುವ ಹಿಂದಿ ದಿನಪತ್ರಿಕೆಗಳು, ಸಿದ್ದರಾಮಯ್ಯ ಅಂಚಿನಲ್ಲಿರುವ ಸಮುದಾಯಗಳ ಚಾಂಪಿಯನ್ ಎಂದು ಬಿಂಬಿಸಿಕೊಂಡರೂ, ಅವರ ವಿರೋಧಿಗಳು ಈ ಪ್ರಕರಣವನ್ನು, ಅಧಿಕಾರ ಮತ್ತು ಸವಲತ್ತುಗಳು ಹೇಗೆ ಉನ್ನತ ಮಟ್ಟದಲ್ಲಿರುವವರನ್ನು ಮಾತ್ರ ಸಲಹುತ್ತದೆ ಎನ್ನುವುದಕ್ಕೆ ನಿದರ್ಶನ ಎಂದು ಹೇಳುತ್ತಿವೆ. ಇದು ನ್ಯಾಯಯುತವೋ ಅಲ್ಲವೋ, ಈ ನಿರೂಪಣೆಗಳು ಗಮನಸೆಳೆದಿವೆ.
ಅಂತಿಮವಾಗಿ, ಹಲವು ಪತ್ರಿಕೆಗಳು ಕಾಂಗ್ರೆಸ್ ಸರ್ಕಾರದಲ್ಲಿರುವ ಆಂತರಿಕ ಭಿನ್ನಮತಗಳು ಹೆಚ್ಚಾಗುತ್ತಿರುವುದನ್ನು ಪ್ರಮುಖವಾಗಿ ವರದಿ ಮಾಡಿವೆ. ಜಾತಿ ಸಮೀಕ್ಷೆಯ ಫಲಿತಾಂಶ, ಸಂದೇಶಗಳಲ್ಲಿರುವ ವ್ಯತ್ಯಯಗಳು, ರಕ್ಷಣಾತ್ಮಕ ಆಡಳಿತದ ಮಾದರಿ ಅಸ್ಥಿರತೆಯ ಚಿತ್ರಣವನ್ನು ಸೃಷ್ಟಿಸಿವೆ. ಒಂದು ಹಿಂದಿ ಸಂಪಾದಕೀಯದಲ್ಲಿ ಹೇಳಿರುವಂತೆ, ಸಿದ್ದರಾಮಯ್ಯ ಹಲವು ದಿಕ್ಕುಗಳಲ್ಲಿ ಸಂಘರ್ಷದಲ್ಲಿ ತೊಡಗಿದ್ದಾರೆ, ಎಲ್ಲವೂ ಅವರ ಮನೆಯಿಂದ ಹೊರಗಿನ ಸಮಸ್ಯೆಗಳಲ್ಲ.
ಕೊನೆಯದಾಗಿ ಹೇಳುವುದಾದರೆ ಹಿಂದಿ ಮುಖ್ಯವಾಹಿನಿ ಪತ್ರಿಕೆಗಳು ಸಿದ್ದರಾಮಯ್ಯ ಅವರನ್ನು ಆಳ್ವಿಕೆಯ ತಪ್ಪು ಹೆಜ್ಜೆಗಳ ವಿರುದ್ಧ ಹೋರಾಡುತ್ತಿರುವ ನಾಯಕ ಎಂದು ಬಣ್ಣಿಸುತ್ತವೆ. ವಿಶ್ವಾಸಾರ್ಹತೆ ಮತ್ತು ಸಹಯೋಗದ ಎರಡು ಸಮಸ್ಯೆಗಳನ್ನು ನಿವಾರಿಸದೆ ಹೋದರೆ, ಅವರ ರಾಜಕೀಯ ವರ್ಚಸ್ಸು ನಿರೀಕ್ಷೆಗಿತಲೂ ವೇಗವಾಗಿ ಕುಸಿಯುತ್ತದೆ.
Comments
Post a Comment