ರಾಜಣ್ಣ ಬಂಡಾಯ - ಕಾಂಗ್ರೆಸ್ ಪಕ್ಷದ ಶಿಸ್ತಿಗೆ ಸವಾಲು

 ಪಕ್ಷವು ಇಂತಹ ಬಂಡಾಯವನ್ನು ತನ್ನ ಸದಸ್ಯರಲ್ಲಿ ಸಹಿಸಿಕೊಳ್ಳುತ್ತದೆಯೇ?

ಖುಲ್ಲಂ ಖುಲ್ಲಾ * ಬಿವಿಸೀ

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಕೆ ಎನ್ ರಾಜಣ್ಣ ಬಹಳ ಕಾಲದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟವರ್ತಿಯಾಗಿದ್ದರೂ ಈಗ ಮತ್ತೊಮ್ಮೆ ಪಕ್ಷವನ್ನು ಕಂಗೆಡಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ತುಮಕೂರು ಕ್ಷೇತ್ರದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಾ, ರಾಜಣ್ಣ ಕಾಂಗ್ರೆಸ್ ನಾಯಕತ್ವಕ್ಕೆ ಎಚ್ಚರಿಕೆ ನೀಡಿದ್ದು, ತಮ್ಮನ್ನು ಸಂಪುಟದಲ್ಲಿ ಸೇರಿಸಿಕೊಳ್ಳದೆ ಹೋದರೆ, ಪಕ್ಷಕ್ಕೆ ಹೇಗೆ ಪಾಠ ಕಲಿಸಬೇಕೆಂದು ತಮಗೆ ತಿಳಿದಿದೆ ಎಂಬರ್ಥದಲ್ಲಿ ಮಾತನಾಡಿದ್ದಾರೆ. ಪಕ್ಷದ ನಾಯಕತ್ವದ ವಿರುದ್ಧ ಆರೋಪಗಳನ್ನು ಹೊರಿಸಿದ ಹಿನ್ನೆಲೆಯಲ್ಲಿ ಅವರನ್ನು ಸಚಿವ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಇದೀಗ ರಾಜಣ್ಣ ಮಾತು ಸಾಮಾನ್ಯವಾದ ಹೇಳಿಕೆಯಲ್ಲ, ಸೂಕ್ಷ್ಮ ಎಚ್ಚರಿಕೆಯಾಗಿದ್ದು, ರಾಜಣ್ಣ ಅವರ ಬ್ಲ್ಯಾಕ್ಮೇಲ್ ರೆಬೆಲ್ ಶೈಲಿಯನ್ನು ಗುರುತಿಸಬಹುದು.

ಎರಡು ದಶಕಗಳ ಹಿಂದೆ ತಾವು ಜೆಡಿಎಸ್ ಪಕ್ಷಕ್ಕೆ ಪಕ್ಷಾಂತರವಾದಾಗ, ಕಾಂಗ್ರೆಸ್ ತುಮಕೂರು ಜಿಲ್ಲೆಯಲ್ಲಿ ಮಣ್ಣು ಮುಕ್ಕಿಸಿದ್ದರಲ್ಲಿ ತಮ್ಮ ಪಾತ್ರ ಮುಖ್ಯವಾಗಿತ್ತು ಎನ್ನುವುದನ್ನು ಬೆಂಬಲಿಗರಿಗೆ ನೆನಪಿಸಿದ ರಾಜಣ್ಣ, ಪಕ್ಷ ತಮ್ಮನ್ನು ಕಡೆಗಣಿಸಿರುವ ಇಂದಿನ ಸ್ಥಿತಿಯಲ್ಲಿ ಇತಿಹಾಸ ಮರುಕಳಿಸಬಹುದು ಎಂಬ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‍ಗೆ ಇದು ಸಾಧಾರಣವಾದ ಆಕ್ರೋಶದ ಮಾತುಗಳಾಗಿ ಕಾಣುವುದಿಲ್ಲ. ಈ ಹೇಳಿಕೆಯನ್ನು ನೀಡಿದ ವ್ಯಕ್ತಿ ಅನಿರೀಕ್ಷಿತವಾದ ಭಾವಾವೇಷದ ಹೇಳಿಕೆಗಳಿಗೆ ಹೆಸರಾಗಿದ್ದು ಅವರ  ಸ್ವತಂತ್ರ ನಿಲುವೇ ಅವರ ಆಸ್ತಿಯೂ, ಹೊರೆಯೂ ಆಗಿದೆ. ಸಿದ್ದರಾಮಯ್ಯ ಅವರ ಆಂತರಿಕ ವಲಯದಲ್ಲಿ ಇದನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ.

ಸಿದ್ದರಾಮಯ್ಯ ಅವರ ರಾಜಕೀಯ ಪ್ರಬುದ್ಧತೆ ಹೇಗೆ ರಾಜಣ್ಣ ಅವರನ್ನು ಸಿದ್ದು ಅವರ ಆಪ್ತ ವಲಯದಲ್ಲಿ ತೆಗೆದುಕೊಂಡಿತು ಎನ್ನುವುದೇ ಅಚ್ಚರಿ. ಈಗಲೂ ಸಹ ರಾಜಣ್ಣ ಅವರನ್ನು ಸಿದ್ದರಾಮಯ್ಯ ನಿಷ್ಠಾವಂತ ಎಂದೇ ಗುರುತಿಸಲಾಗುತ್ತದೆ. ಅವರ ಏಳಿಗೆಗಾಗಿ ಮುಖ್ಯಮಂತ್ರಿಗಳ ಪೆÇ್ರೀತ್ಸಾಹವೇ ಮುಖ್ಯ ಎನ್ನುವುದನ್ನು ಗುರುತಿಸಲಾಗಿದೆ. ತಮ್ಮ ಅಪ್ರಬುದ್ಧ ನಡೆಯ ಮೂಲಕ ರಾಜಣ್ಣ ಪಕ್ಷಕ್ಕೆ  ಒಳ್ಳೆಯದು ಮಾಡುವುದಕ್ಕಿಂತ ಹೆಚ್ಚಿನ ಹಾನಿಯನ್ನೇ ಮಾಡಿದ್ದಾರೆ. ಸಚಿವ ಪದವಿಯಿಂದ ಅವರನ್ನು ವಜಾ ಮಾಡಿದ್ದು ಕೇಂದ್ರ ನಾಯಕತ್ವದ ಆದೇಶದ ಮೇರೆಗೆ ಎಂದು ಹೇಳಲಾಗುತ್ತದೆ. ರಾಜಣ್ಣ ಅವರ ನಿಷ್ಠೆ ಸಿದ್ದರಾಮಯ್ಯನವರಿಗೆ ಸೀಮಿತವಾಗಿದ್ದು, ಹೈಕಮಾಂಡ್‍ವರೆಗೂ ವಿಸ್ತರಿಸಿಲ್ಲ. ಅವರ ಎಚ್ಚರಿಕೆಯೂ ಸಹ ಹೈಕಮಾಂಡ್‍ಗೇ ಆಗಿದ್ದು, ರಾಹುಲ್ ಮತ್ತು ಅವರ ಸಲಹೆಗಾರರನ್ನೇ ಗುರಿಯಾಗಿಸಿದ್ದಾರೆ.

ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ, ಪಕ್ಷವು ಇಂತಹ ಬಂಡಾಯವನ್ನು ತನ್ನ ಸದಸ್ಯರಲ್ಲಿ ಸಹಿಸಿಕೊಳ್ಳುತ್ತದೆಯೇ ಎಂದು ಸಾಧಾರಣ ಸದಸ್ಯರನ್ನು ಕಾಡುತ್ತಿದೆ. ರಾಜಣ್ಣ ಅವರ ಬೆದರಿಕೆ ವೈಯುಕ್ತಿಕ ಬಂಡಾಯ ಅಲ್ಲ, ಅದು ಪಕ್ಷದ ಶಿಸ್ತಿಗೇ ಸವಾಲೆಸೆಯುವಂಥದ್ದು.  ಸಮಾಜವಾದ ಮತ್ತು ಸಾಮೂಹಿಕ ನಾಯಕತ್ವದ ತಳಹದಿಯ ಮೇಲೆ ನಿಂತಿರುವ ಪಕ್ಷಕ್ಕೆ, ನಾಯಕರೊಬ್ಬರು ಸಾರ್ವಜನಿಕವಾಗಿ ಬ್ಲ್ಯಾಕ್ಮೇಲ್ ಮಾಡುವುದು ನೈತಿಕ ಹಾಗೂ ಸಂಘಟನಾತ್ಮಕ ತಳಪಾಯವನ್ನೇ ಅಲ್ಲಗಳೆದಂತಾಗುತ್ತದೆ.

ಕಾಂಗ್ರೆಸ್ ಪಕ್ಷಕ್ಕೆ ಮತ್ತೊಮ್ಮೆ ಆಂತರಿಕ ಅಶಿಸ್ತನ್ನು ಸಹಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ತೋರುತ್ತದೆ. ರಾಜ್ಯ ಸರ್ಕಾರವು ಶಿಥಿಲವಾದ ಜಾತಿ ನಿಷ್ಠೆ ಮತ್ತು ವೈಯುಕ್ತಿಕ ಪ್ರತಿಷ್ಠೆಗಳನ್ನೇ ಪ್ರಮುಖವಾಗಿ ಅವಲಂಬಿಸಿರುವುದರಿಂದ ಇದು ಪಕ್ಷಕ್ಕೆ ಸವಾಲಿನ ಪ್ರಶ್ನೆಯಾಗಿದೆ. ರಾಜಣ್ಣ ಅವರ ಆಕ್ರೋಶ ಒಬ್ಬ ವ್ಯಕ್ತಿಯ ಅಕಾಂಕ್ಷೆಯಲ್ಲ, ಇದು ಕಾಂಗ್ರೆಸ್ ಪಕ್ಷವು ಇಂದಿಗೂ ಅನುಕೂಲವನ್ನೂ ಮೀರಿ ಶಿಸ್ತಿಗೆ ಆದ್ಯತೆ ಕೊಡುತ್ತದೆಯೇ ಎಂದು ಪ್ರಶ್ನಿಸುವ ಒಂದು ಪ್ರಸಂಗ.

ಒಬ್ಬ ಪ್ರಬಲ ನಾಯಕನ ವೈಯುಕ್ತಿಕ ಆಕಾಂಕ್ಷೆಗಳು ಮತ್ತು ನಡವಳಿಕೆಗಳು ಪಕ್ಷಕ್ಕೆ ತೋರಬೇಕಾದ ನಿಷ್ಠೆಗಿಂತಲೂ ಮೀರಿರುವುದೇ ಎನ್ನುವುದನ್ನು ಹೈಕಮಾಂಡ್ ನಿರ್ಧರಿಸಬೇಕಿದೆ.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again