ಕಾಂಗ್ರೆಸ್ ನಾಯಕತ್ವ ಬದಲಾವಣೆ ಬಿಜೆಪಿಗೇಕೆ ಉಸಾಬರಿ?
ಬಿಜೆಪಿಯ ಸದ್ದಿನ ರಾಜಕಾರಣ ಅದಕ್ಕೇ ತಿರುಗುಬಾಣವಾಗುತ್ತದೆ
ಆಡಳಿತ * ಬಿವಿಸೀ
ಕರ್ನಾಟಕದ ಭಾರತೀಯ ಜನತಾ ಪಕ್ಷ ಜವಾಬ್ದಾರಿಯುತ ವಿರೋಧ ಪಕ್ಷ ಎಂದರೆ ಏನು ಎನ್ನುವುದನ್ನೂ ಮರೆತಂತೆ ಕಾಣುತ್ತಿದೆ. ಆಳ್ವಿಕೆ, ಭ್ರಷ್ಟಾಚಾರ ಅಥವಾ ಆಡಳಿತ ವೈಖರಿಯನ್ನು ಸಾರ್ವಜನಿಕರ ನಡುವೆ ಗಂಭೀರ ಪ್ರಶ್ನೆಗಳಾಗಿ ಚರ್ಚೆ ಮಾಡುವುದರ ಬದಲು, ಕೇಸರಿ ಪಕ್ಷವು ಒಂದೇ ವಿಷಯವನ್ನು ಮುಂದಿಟ್ಟು, ಕಾಂಗ್ರೆಸ್ ನಾಯಕತ್ವದ ಬದಲಾವಣೆಯನ್ನೇ ಪ್ರಮುಖವಾಗಿ ಚರ್ಚಿಸುತ್ತಿದೆ. ಪ್ರತಿ ನಿತ್ಯವೂ ಬಿಜೆಪಿ ನಾಯಕರು - ಪಕ್ಷದ ಅಧ್ಯಕ್ಷ ವಿಜಯೇಂದ್ರ ಆಗಲಿ ಅಥವಾ ಅರ್ ಅಶೋಕ್ ಆಗಲಿ - ಸರ್ಕಾರದಲ್ಲಿ ಯಾರ ಸ್ಥಾನವನ್ನು ಯಾರು ಆಕ್ರಮಿಸುತ್ತಾರೆ ಎನ್ನವುದನ್ನೇ ಪ್ರಧಾನವಾಗಿ ಚರ್ಚೆ ಮಾಡುತ್ತಿದ್ದು, ಇವರ ನಿರೂಪಣೆಗಳನ್ನೇ ರಾಜ್ಯದ ಭವಿಷ್ಯವೂ ಆಧರಿಸಿದೆ ಎನ್ನುವಂತೆ ವರ್ತಿಸುತ್ತಿದ್ದಾರೆ.
ಸರಳ ಸತ್ಯ ಎಂದರೆ, ಕಾಂಗ್ರೆಸ್ ಸರ್ಕಾರದ ಮುಂದಾಳತ್ವ ಯಾರು ವಹಿಸುತ್ತಾರೆ ಎನ್ನುವುದು ಆ ಪಕ್ಷದ ಆಂತರಿಕ ವಿಚಾರ. ಕರ್ನಾಟಕದ ಜನತೆಗೆ ಬಿಜೆಪಿಯವರ ಆಧಾರರಹಿತ ಉಚಿತ ಸಲಹೆಗಳು ಅಥವಾ ಊಹಾಪೆÇೀಹದ ವಿಚಾರಗಳು ಇಷ್ಟವಾಗುವುದಿಲ್ಲ, ಅವರು ನಿರೀಕ್ಷಿಸುವುದೂ ಇಲ್ಲ. ಬಿಜೆಪಿಗೆ ಯಾವುದೇ ಗಟ್ಟಿಯಾದ ಪರ್ಯಾಯಗಳನ್ನು ಮುಂದಿಡಲಾಗುತ್ತಿಲ್ಲ, ಅಥವಾ ರಚನಾತ್ಮಕ ಕಾರ್ಯಸೂಚಿಯನ್ನು ತೋರಿಸಲಾಗುತ್ತಿಲ್ಲ, ಜನರ ನಡುವೆ ಚರ್ಚೆ ಮಾಡಬೇಕಾದ ಗಂಭೀರ ವಿಚಾರಗಳೇ ಇಲ್ಲ ಎಂಬ ಅಭಿಪ್ರಾಯ ಜನರಲ್ಲಿ ಮೂಡುತ್ತದೆ. ಬಿಜೆಪಿಗೆ ಮುಖ್ಯಮಂತ್ರಿ ಹುದ್ದೆಯ ಸುತ್ತಲಿನ ಗಾಳಿ ಸುದ್ದಿಗಳೇ ಒಂದು ಗೀಳಿನಂತೆ ಕಾಡುತ್ತಿದ್ದು ಕೇಸರಿ ಪಕ್ಷವನ್ನು ದುರ್ಬಲ, ನಿಷ್ಕ್ರಿಯ ಅಥವಾ ಅಭದ್ರತೆಯಿಂದ ಕಾಡುತ್ತಿರುವ ಪಕ್ಷ ಎಂದೇ ಜನರು ಭಾವಿಸುತ್ತಾರೆ. ತನ್ನದೇ ರಾಜಕೀಯ ವಾತಾವರಣದಲ್ಲಿ ಆವರಿಸಿರುವ ಖಾಲಿತನವನ್ನು ತುಂಬಲು ಈ ರೀತಿ ಸದ್ದು ಮಾಡುತ್ತಿರುವುದು ಸ್ಪಷ್ಟವಾಗಿದೆ.
ಸಂಸದೀಯ ಪ್ರಜಾತಂತ್ರದಲ್ಲಿ ವಿರೋಧ ಪಕ್ಷಗಳು ಇರುವುದು ಸರ್ಕಾರಗಳ ನೀತಿಗಳನ್ನು ಪರಿಶೀಲಿಸುವುದಕ್ಕಾಗಿ, ವೈಫಲ್ಯಗಳನ್ನು ಎತ್ತಿ ತೋರಿಸುವುದಕ್ಕಾಗಿ, ಪರ್ಯಾಯಗಳನ್ನು ಜನರ ಮುಂದಿಡುವುದಕ್ಕಾಗಿ. ಆದರೆ ಬಿಜೆಪಿ, ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳ ವೀಕ್ಷಕರ ಹಾಗೆ ವರ್ತಿಸುತ್ತಿದೆ. ಇದು ಸಾರ್ವಜನಿಕ ಚರ್ಚೆಯನ್ನು ಸಾಧಾರಣ ಮಟ್ಟಕ್ಕೆ ಇಳಿಸುವುದೇ ಅಲ್ಲದೆ, ಮತದಾರರ ಬುದ್ಧಿವಂತಿಕೆಯನ್ನೂ ಅಪಮಾನಿಸಿದಂತಾಗುತ್ತದೆ. ಜನರಿಗೆ ಪರಿಹಾರಗಳು ಬೇಕಿವೆ, ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಬಿಕ್ಕಟ್ಟು ಇವುಗಳ ಪರಿಹಾರ ಬೇಕಿದೆಯೇ ಹೊರತು, ಸಿದ್ದರಾಮಯ್ಯ ಅಥವಾ ಡಿ ಕೆ ಶಿವಕುಮಾರ್ ಮಿತ್ರರೋ ಶತ್ರುಗಳೋ ಎನ್ನುವುದಲ್ಲ.
ವಿಡಂಬನೆ ಎಂದರೆ, ನಿರಂತರ ಮಾತನಾಡುವ ಚಾಳಿ ಬಿಜೆಪಿಯಲ್ಲಿ ಮನೆಮಾಡಿರುವ ಅಶಿಸ್ತನ್ನು ತೋರುತ್ತಿದ್ದು, ಪಕ್ಷದಲ್ಲಿ ಕಾರ್ಯತಂತ್ರ ಇಲ್ಲದಿರುವುದು ಸ್ಪಷ್ಟವಾಗಿ ಕಾಣುತ್ತದೆ. ಅಮೆರಿಕ ಮತ್ತು ಬ್ರಿಟನ್‍ನಂತಹ ಪ್ರಬುದ್ಧ ಪ್ರಜಾಪ್ರಭುತ್ವಗಳು ಚುನಾವಣೆಗಳ ನಂತರ ವಿರೋಧ ಪಕ್ಷಗಳು ಇರಬೇಕಾದ ಶಿಸ್ತಿನ ರೀತಿಯನ್ನು ತೋರುತ್ತವೆ. ಚುನಾಯಿತ ಸರ್ಕಾರಗಳು ಕಾರ್ಯನಿರ್ವಹಿಸಲು ಅವಕಾಶ ನೀಡುತ್ತಲೇ ತಳಮಟ್ಟದಲ್ಲಿ ವಿಶ್ವಾಸಾರ್ಹ ನೀತಿಗಳನ್ನು ರೂಪಿಸುತ್ತಾ ಮುಂದಿನ ಚುನಾವಣೆಗಳಿಗೆ ಸಿದ್ಧವಾಗುತ್ತವೆ. ಆದರೆ ಇಲ್ಲಿ ಬಿಜೆಪಿ ನಾಯಕರು ತೋರಿಕೆಯನ್ನೇ ಪ್ರಸ್ತುತವಾಗಿರುವುದೆಂದು ಭಾವಿಸುತ್ತಾರೆ. ತಮ್ಮ ಮಾತಿನಲ್ಲಿ ಏನೋ ಅರ್ಥವಿದೆ ಎಂದು ಮಾತನಾಡುವುದಿಲ್ಲ; ಬದಲಾಗಿ, ಸದ್ದುಮಾಡದಿದ್ದರೆ ಜನರು ಮರೆತುಬಿಡುತ್ತಾರೆ ಎಂಬ ಭಯದಿಂದ ಮಾತನಾಡುತ್ತಾರೆ.
ಅಂತಿಮವಾಗಿ ಸದ್ದಿನ ರಾಜಕಾರಣ ತಿರುಗುಬಾಣವಾಗುತ್ತದೆ. ಕರ್ನಾಟಕದ ಜನತೆ ಆಲೋಚನೆಗಳೇ ಇಲ್ಲದ ವಿರೋಧ ಪಕ್ಷವನ್ನು ಗುರುತಿಸುತ್ತಾರೆ. ಬಿಜೆಪಿ ತನ್ನ ಟೊಳ್ಳು ಮಾತುಗಳ ಬದಲು ನೈಜ ಸಮಸ್ಯೆಗಳ ಬಗ್ಗೆ ಮಾತನಾಡಲು ಆರಂಭಿಸದೆ ಹೋದರೆ ಅದು ಶೇಕ್ಸ್‍ಪಿಯರ್ ತಮ್ಮ ಕೃತಿಗಳಲ್ಲಿ ಉಲ್ಲೇಖಿಸುವ ಕೇವಲ ಸಿಟ್ಟು ಮತ್ತು ಆಕ್ರೋಶವೇ ಹೊರತು ಮಹತ್ತರವಾದದ್ದು ಏನೂ ಇಲ್ಲದಿರುವ ಮೂರ್ಖರಾಗುತ್ತಾರೆ.
Comments
Post a Comment