ಕಾಂಗ್ರೆಸ್ ಸಹಿಷ್ಣುತೆಯನ್ನು ರೂಢಿಸಿಕೊಳ್ಳಬೇಕಿದೆ
ಒಂದು ಕಾಲದಲ್ಲಿ, ತಮ್ಮ ವಿರುದ್ಧವೇ ವಿರೋಧಿಗಳು ಹೇಳಿಕೆ ನೀಡುವ ಅವರ ಹಕ್ಕನ್ನು ಸಮರ್ಥಿಸುತ್ತಿದ್ದಂತಹ ನೆಹರೂ ಅವರಂತಹ ಮುತ್ಸದ್ದಿಯನ್ನು ರೂಪಿಸಿದ ಪಕ್ಷವು ಈಗ ಪ್ರತಿರೋಧವನ್ನು, ಭಿನ್ನಮತವನ್ನು ಶಿಕ್ಷಿಸಲು ಮುಂದಾಗಿದೆ.
............
ಮಾಜಿ ವಿಧಾನಸಭಾ ಅಧ್ಯಕ್ಷ ಹಾಗೂ ಸಂಸದ ವಿಶ್ವೇಶ್ವರ ಕಾಗೇರಿ ಹೆಗಡೆ ಅವರು ಜನಗಣಮನ ಕುರಿತಂತೆ ನೀಡಿರುವ ಹೇಳಿಕೆಯು, ಇಂದಿನ ಕಾಂಗ್ರೆಸ್ ಪಕ್ಷದ ಬಗ್ಗೆ ಇರುವ ಅಹಿತಕರ ಸತ್ಯವನ್ನು ಹೊರಗೆಳೆದಿದೆ. ಒಂದು ಕಾಲದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಅತಿ ಹೆಚ್ಚು ಗೌರವಿಸುತ್ತಿದ್ದ ಪಕ್ಷವು ಈಗ ಆ ನಂಬಿಕೆಯನ್ನು ಸ್ವತಃ ಕಳೆದುಕೊಂಡಿರುವುದನ್ನು ಈ ಪ್ರಸಂಗ ಎತ್ತಿ ತೋರಿಸಿದೆ. ಚಾರಿತ್ರಿಕವಾಗಿ ಕೆಲವರು ರಾಷ್ಟ್ರಗೀತೆಯನ್ನು ಬ್ರಿಟೀಷ್ ದೊರೆ ಕಿಂಗ್ ಜಾರ್ಜ್ 5 ಅವರನ್ನು ಸ್ವಾಗತಿಸಲು ಬರೆಯಲಾಗಿತ್ತು ಎಂದು ಭಾವಿಸಿದ್ದಾರೆ ಎಂಬ ಕಾಗೇರಿ ಅವರ ಹೇಳಿಕೆಯನ್ನು ದೇಶದ ಬಗ್ಗೆ ನಿಷ್ಠೆಯಿಲ್ಲದ, ಅಸಡ್ಡೆ ಇರುವ ಮಾತುಗಳು ಎಂದು ಭಾವಿಸಲಾಗುವುದಿಲ್ಲ. ಇದು ದೀರ್ಘಕಾಲದಿಂದ ನಡೆಯುತ್ತಿರುವ ಚಾರಿತ್ರಿಕ ಚರ್ಚೆಯ ಒಂದು ಅಂಶವಾಗಿದ್ದು ಇದನ್ನು ಠಾಗೋರ್ ತಮ್ಮ ಜೀವಿತಾವಧಿಯಲ್ಲೇ ಎದುರಿಸಿದ್ದರು.
ಈ ಅಭಿಪ್ರಾಯವನ್ನು ದೇಶದ್ರೋಹ ಎಂದು ಪರಿಗಣಿಸುವುದು ಅಸಂಬದ್ಧವಾಗುತ್ತದೆ. ಕಾಗೇರಿ ರಾಷ್ಟ್ರಗೀತೆಯನ್ನು ಅವಮಾನಿಸಿಲ್ಲ ಅಥವಾ ಭಾರತದ ಅಸ್ಮಿತೆಯಲ್ಲಿ ಅದರ ಸ್ಥಾನವನ್ನೂ ಪ್ರಶ್ನಿಸಿಲ್ಲ. ಹಳೆಯ ವಾದವೊಂದನ್ನು ಪುನರುಚ್ಛಿಸಿದ್ದಾರೆ. ಈ ಅಭಿಪ್ರಾಯವು ಹಲವು ಶೈಕ್ಷಣಿಕ, ಬೌದ್ಧಿಕ ಬರಹಗಳಲ್ಲಿ, ಚಾರಿತ್ರಿಕ ಚರ್ಚೆಗಳಲ್ಲಿ ಹಲವು ದಶಕಗಳ ಕಾಲ ವ್ಯಕ್ತವಾಗಿತ್ತು. ಕಾಂಗ್ರೆಸ್ ನಾಯಕತ್ವವು, ಪ್ರಿಯಾಂಕ ಖರ್ಗೆ ಮತ್ತು ರಮಾನಾಥ್ ರೈ ಅವರನ್ನೂ ಸೇರಿದಂತೆ, ಬೌದ್ಧಿಕ ಪ್ರಾಮಾಣಿಕತೆಯನ್ನು ಗೌರವಿಸಿದ್ದಲ್ಲಿ ಅವರು ಕಾಗೇರಿ ಅವರ ವಾದವನ್ನು ವಾಸ್ತವಾಂಶಗಳೊಂದಿಗೆ ಎದುರಿಸುತ್ತಿದ್ದರು, ದಂಡ ವಿಧಿಸುವ ಮಾತಿನ ಮೂಲಕ ಅಲ್ಲ.
ಭಿನ್ನ ಅಭಿಪ್ರಾಯಗಳ ಬಗ್ಗೆ ಅಸಹಿಷ್ಣುತೆಯನ್ನು ತೋರುವುದು ಕಾಂಗ್ರೆಸ್ ಪಕ್ಷವು ತಲುಪಿರುವ ದುರವಸ್ತೆಯನ್ನು ಸೂಚಿಸುತ್ತದೆ. ಒಂದು ಕಾಲದಲ್ಲಿ, ತಮ್ಮ ವಿರುದ್ಧವೇ ವಿರೋಧಿಗಳು ಹೇಳಿಕೆ ನೀಡುವ ಅವರ ಹಕ್ಕನ್ನು ಸಮರ್ಥಿಸುತ್ತಿದ್ದಂತಹ ನೆಹರೂ ಅವರಂತಹ ಮುತ್ಸದ್ದಿಯನ್ನು ರೂಪಿಸಿದ ಪಕ್ಷವು ಈಗ ಪ್ರತಿರೋಧವನ್ನು, ಭಿನ್ನಮತವನ್ನು ಶಿಕ್ಷಿಸಲು ಮುಂದಾಗಿದೆ. ಮಹಾತ್ಮಾ ಗಾಂಧಿ ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸುವಂತೆ ಸಲಹೆ ನೀಡಿದಾಗ, ಇಲ್ಲವಾದಲ್ಲಿ ಅದು ಸ್ವಾರ್ಥತೆಯ ಸಂಸ್ಥೆಯಾಗಿ, ನೈತಿಕ ಆಳ ವ್ಯಾಪ್ತಿ ಇಲ್ಲದೆಯೇ ಅಧಿಕಾರಕ್ಕೆ ಅಂಟಿಕೊಂಡುಬಿಡುತ್ತದೆ ಎಂದು ಹೇಳಿದ್ದನ್ನು ಸ್ಮರಿಸಿದಾಗ ಈ ವಿಡಂಬನೆ ಇನ್ನೂ ಆಳಕ್ಕಿಳಿಯುತ್ತದೆ.
ಪ್ರಜಾಪ್ರಭುತ್ವದಲ್ಲಿ, ರಾಷ್ಟ್ರಗೀತೆಯನ್ನೂ ಒಳಗೊಂಡಂತೆ ಯಾವುದೇ ವಿಷಯವೂ ಸಹ ಚರ್ಚೆ ಅಥವಾ ಪರಿಶೀಲನೆಯಿಂದ ಮುಕ್ತವಾಗಿರಕೂಡದು. ಕುರುಡು ಅನುಕರಣೆ ಅಥವಾ ಸ್ವೀಕೃತಿಯು ದೇಶಭಕ್ತಿಗೆ ಸಾಕ್ಷಿಯಾಗಕೂಡದು, ಬದಲಾಗಿ, ವಿಭಿನ್ನ ದೃಷ್ಟಿಕೋನಗಳನ್ನು ಧೈರ್ಯದಿಂದ ಎದುರಿಸುವುದು ಸಾಕ್ಷಿಯಾಗಬೇಕು. ಪ್ರತಿಯೊಂದು ಭಿನ್ನಾಭಿಪ್ರಾಯವನ್ನೂ ದೇಶಕ್ಕೆ ಅಪಮಾನ ಮಾಡಿದಂತೆ ಎಂದು ಭಾವಿಸುವುದು, ಪ್ರಜಾಸತ್ತಾತ್ಮಕ ಅವಕಾಶಗಳನ್ನು, ಪ್ರಕ್ಷುಬ್ಧ ವಾತಾವರಣವಾಗಿ ಮಾಡಿಬಿಡುತ್ತದೆ.
ಒಂದು ಕಾಲದಲ್ಲಿ ವಸಾಹತು ಆಳ್ವಿಕೆಯಿಂದ ದೇಶಕ್ಕೆ ಸ್ವಾತಂತ್ರ್ಯ ಪಡೆಯಲು ಹೋರಾಡಿದ ಕಾಂಗ್ರೆಸ್ ಪಕ್ಷವೇ ಈಗ ವಾಕ್ ಸ್ವಾತಂತ್ರ್ಯವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಮುಂದಾಗಿದೆ. ಗಾಂಧೀಜಿಯ ಮೌಲ್ಯಗಳನ್ನು ಎತ್ತಿಹಿಡಿಯುವ ಪಕ್ಷದ ನೀತಿಯು ಭಿನ್ನಾಭಿಪ್ರಾಯ ಎನ್ನುವುದು ನಿಷ್ಠೆ ಇಲ್ಲದಿರುವುದು ಅಲ್ಲ ಎಂಬ ಮೂಲಭೂತ ಪಾಠವನ್ನು ಮರೆತಂತಿದೆ.
ಭಾರತಕ್ಕೆ ಸ್ವಘೋಷಿತ ದೇಶಭಕ್ತರು, ಪ್ರತಿ ಬಾರಿಯೂ ದೇಶದ್ರೋಹ ಎಂದು ಕೂಗುವ ದೇಶಭಕ್ತರು ಬೇಕಿಲ್ಲ. ವಾದ ಮಾಡಲು ಸಿದ್ಧವಾಗಿರುವ, ಪ್ರಶ್ನಿಸುವಂತಹ, ನಿರ್ಭಿಡೆಯಿಂದ ಆಲೋಚನೆ ಮಾಡುವಂತಹ ವ್ಯಕ್ತಿಗಳು, ರಾಜಕಾರಣಿಗಳು ಬೇಕಾಗಿದ್ದಾರೆ. ಕಾಗೇರಿ ದೇಶದ್ರೋಹ ಬಗೆದಿಲ್ಲ. ಪ್ರಜಾಪ್ರಭುತ್ವವು ಖಚಿತಪಡಿಸುವ ಹಕ್ಕನ್ನು ಚಲಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷವು ಅವರನ್ನು ಮಾತನಾಡಲೂ ಅವಕಾಶ ನೀಡದೆ, ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆಯುತ್ತಿದೆ.
Comments
Post a Comment