ಮತ್ತೆ ರಾಜಣ್ಣ ಸುದ್ದಿ: ಕಾಂಗ್ರೆಸ್ ಪ್ರಾಮಾಣಿಕತೆಯ ಪ್ರಶ್ನೆ
ರಾಜಕೀಯ ಪುನರ್ವಸತಿ ಒದಗಿಸುವಾಗ ಅದಕ್ಕೂ ಚಾರಿತ್ರಿಕ ಕಾರಣವಿರಬೇಕಲ್ಲ?
............
ನೇರಾನೇರ * ಬಿವಿಸೀ
ಕನ್ನಡದಲ್ಲಿ ಒಂದು ಗಾದೆ ಮಾತಿದೆ. ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂತ. ಇದು ಕರ್ನಾಟಕದ ರಾಜಕಾರಣದಲ್ಲಿ ಸ್ಪಷ್ಟವಾಗಿ ಕಾಣತೊಡಗಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕವಾಗಿ, ತುಮಕೂರಿನ ಎಸ್‍ಸಿ ನಾಯಕ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎನಿಸಿಕೊಂಡಿರುವ ಕೆ ಎನ್ ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡುವ ಪ್ರಯತ್ನಗಳು ನಡೆಯುತ್ತಿರುವುದಾಗಿ ಹೇಳಲಾಗುತ್ತಿದೆ.
ಕಾಂಗ್ರೆಸ್ ಪಕ್ಷವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದ ಕೆಲವು ಸಾರ್ವಜನಿಕ ಹೇಳಿಕೆಗಳ ಪರಿಣಾಮ ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಇದಕ್ಕೂ ಮುನ್ನ ಲೈಂಗಿಕ ಹಗರಣವೊಂದರಲ್ಲಿ ಇವರ ವಿರುದ್ಧ ಆರೋಪ ಸದನದಲ್ಲಿ ಕೋಲಾಹಲವೆಬ್ಬಿಸಿತ್ತು. ಅವರ ಸುಪರ್ದಿಯಲ್ಲಿದ್ದ ಸಹಕಾರ ಇಲಾಖೆಯಲ್ಲಿ ಅತಿಯಾದ ಭ್ರಷ್ಟಾಚಾರದ ಆರೋಪಗಳೂ ಕೇಳಿಬಂದಿದ್ದವು. ಪಕ್ಷದ ಹೈಕಮಾಂಡ್ ಮಧ್ಯಪ್ರವೇಶಿಸಿದ ನಂತರವಷ್ಟೇ ಮುಖ್ಯಮಂತ್ರಿಗೆ ಇಷ್ಟವಿಲ್ಲದಿದ್ದರೂ ರಾಜಣ್ಣ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು
ಕೆಲವು ತಿಂಗಳುಗಳ ನಂತರ ಅವರನ್ನು ಮತ್ತೆ ಸಂಪುಟಕ್ಕೆ ತರಲು ಪ್ರಯತ್ನ ನಡೆಯುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹಸಚಿವ ಪರಮೇಶ್ವರ್ ರಾಜಣ್ಣ ಆಯೋಜಿಸಿರುವ ಭೋಜನ ಕೂಟದಲ್ಲಿ ಭಾಗವಹಿಸುತ್ತಿರುವುದು, ಅವರನ್ನು ಗೊಂದಲದಿಂದ ಹೊರತರುವ ರಾಜಕೀಯ ಪ್ರಯತ್ನ ಎಂದೇ ಹೇಳಲಾಗುತ್ತಿದೆ. ಸಹಜವಾಗಿಯೇ ಕಾಂಗ್ರೆಸ್ ಪಾಳೆಯಗಳಲ್ಲಿ ಇದು ಅಸಮಾಧಾನದ ಹೊಗೆ ಎಬ್ಬಿಸಿದೆ. ಪಕ್ಷದಲ್ಲಿ ಅನೇಕರು, ಅಷ್ಟು ಜನ ಯುವ ನಾಯಕರು, ದಕ್ಷ ನಾಯಕರು ಇರುವಾಗ, ಪಕ್ಷವು ಏಕೆ 75 ವರ್ಷದ, ಕಳಂಕ ಹೊತ್ತ ನಾಯಕನಿಗೆ ಮಣೆ ಹಾಕುತ್ತಿದೆ ಎಂದು ಕೇಳಲಾರಂಭಿಸಿದ್ದಾರೆ.
ಇಲ್ಲಿರುವ ದೊಡ್ಡ ಪ್ರಶ್ನೆ ರಾಜಕೀಯ ಸ್ಥಿರತೆಯನ್ನು ಕುರಿತಾದದ್ದು. ಕಳಂಕ ಹೊತ್ತ ನಾಯಕರಿಗೆ ಅವಕಾಶಗಳನ್ನು ನೀಡುವ ಬಿಜೆಪಿ ನೀತಿಯನ್ನು ಟೀಕಿಸಲು ಒಂದು ಅವಕಾಶವನ್ನೂ ಬಿಡದ ಕಾಂಗ್ರೆಸ್ ಪಕ್ಷವು ತನ್ನದೇ ನಾಯಕರ ಇದೇ ರೀತಿಯ ವರ್ತನೆಯನ್ನು ಹೇಗೆ ಸಮರ್ಥಿಸಲು ಸಾಧ್ಯ? ನೈತಿಕ ಮಾನದಂಡಗಳು ಬಿಜೆಪಿಗೆ ಬೇರೆ, ಕಾಂಗ್ರೆಸ್‍ಗೆ ಬೇರೆ ಇರುವುದಿಲ್ಲ. ರಾಜಕೀಯ ನೈತಿಕತೆಯನ್ನು ಜಾತಿ ಆಧಾರಿತವಾಗಿ ಅಥವಾ ಅನುಕೂಲಕ್ಕೆ ತಕ್ಕಂತೆ ನಿರ್ಧರಿಸಲಾಗುವುದಿಲ್ಲ.
ಕನ್ನಡದ ಗಾದೆ ಮಾತಿನ ಹಾಗೆ ಉಪ್ಪು ತಿಂದವರು ನೀರು ಕುಡಿಯಲೇಬೇಕು, ಇದು ಸಾರ್ವಕಾಲಿಕ ವಿವೇಕ. ತಪ್ಪು ಮಾಡಿದವರು ಅದರ ಪರಿಣಾಮಗಳನ್ನು ಎದುರಿಸಲೇಬೇಕು. ರಾಜಕೀಯ ಪುನರ್ವಸತಿ ಒದಗಿಸುವಾಗ ಅದಕ್ಕೂ ಚಾರಿತ್ರಿಕ ಕಾರಣವಿರಬೇಕಲ್ಲ? ಅಂಥದ್ಯಾವುದೂ ರಾಜಣ್ಣ ಕೇಸಿನಲ್ಲಿ ಕಾಣುವುದಿಲ್ಲ. ಪ್ರಮಾದವೆಸಗಿದ ವ್ಯಕ್ತಿಯಲ್ಲಿ ಯಾವುದೇ ಪಶ್ಚಾತ್ತಾಪ ಅಥವಾ ಸುಧಾರಣೆ ಕಾಣದಿದ್ದರೆ ಅದು ಔದಾರ್ಯದ ಕ್ರಮ ಆಗುವುದಿಲ್ಲ, ತಪ್ಪು ಮಾಡಿರುವುದಕ್ಕೆ ನೀಡಿದ ಬಹುಮಾನವಾಗುತ್ತದೆ.
ಕಾಂಗ್ರೆಸ್ ಪಕ್ಷವು ಕೆಲವು ಕೆಟ್ಟ ಸಲಹೆಗಳನ್ನು ಆಧರಿಸಿ ರಾಜಣ್ಣ ಅವರಿಗೆ ಸ್ಥಾನ ಕಲ್ಪಿಸಿದರೆ, ಅದು ಸಾರ್ವಜನಿಕ ವಿಶ್ವಾಸವನ್ನು ಕಳೆದುಕೊಳ್ಳುವುದಲ್ಲದೆ, ವಿರೋಧ ಪಕ್ಷಗಳಿಗೆ ನೈತಿಕ ಗೆಲುವಿನ ಅಸ್ತ್ರವನ್ನು ನೀಡಿದಂತಾಗುತ್ತದೆ. ಇಲ್ಲಿ ರಾಜಣ್ಣ ಮತ್ತೊಂದು ಅವಕಾಶಕ್ಕೆ ಅರ್ಹರೋ ಅಲ್ಲವೋ ಎನ್ನುವುದು ಪ್ರಶ್ನೆಯಲ್ಲ, ಕಾಂಗ್ರೆಸ್ ಪಕ್ಷವು ತನ್ನ ಪ್ರಾಮಾಣಿಕತೆಯನ್ನು ಕೇವಲ ನಿಷ್ಠೆ ಮತ್ತು ಜಾತಿ ಸಮೀಕರಣಗಳ ಕಾರಣಕ್ಕಾಗಿ ರಾಜಿ ಮಾಡಿಕೊಳ್ಳುವುದು ಸರಿಯೇ ಎನ್ನುವುದು ಮುಖ್ಯ ಪ್ರಶ್ನೆ. 2017ರಲ್ಲಿ ಎಚ್ ವೈ ಮೇಟಿ ಅವರನ್ನು ಸಂಪುಟದಿಂದ ಹೊರಹಾಕಿದ ನಂತರ ಸಿದ್ದರಾಮಯ್ಯ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಲಿಲ್ಲ. ಎಲ್ಲರಿಗೂ ಒಂದೇ ನ್ಯಾಯ ಇರಬೇಕಾದ್ದು ಅತ್ಯವಶ್ಯ.
ಕೊನೆಯದಾಗಿ, ಇದು ಒಬ್ಬ ವ್ಯಕ್ತಿಯ ಮರಳುವಿಕೆ ಅಲ್ಲ, ಕಾಂಗ್ರೆಸ್ ಪಕ್ಷದ ನೈತಿಕ ನಿಲುವಿನ ಪ್ರಶ್ನೆ. ಈ ದಿಕ್ಸೂಚಿಯು ತಿರುಗುತ್ತಲೇ ಇದ್ದರೆ, ಸಾರ್ವಜನಿಕ ವಿಶ್ವಾಸವು ಬೇಗನೇ ಕಳೆದುಹೋಗುತ್ತದೆ.
Comments
Post a Comment