ಆಳ್ವಿಕೆಯ ಕುಸಿತಕ್ಕೆ ಸಂಕೇತವಾಗಿ ಕಾಣುವ ನಮ್ಮ ರಸ್ತೆಗಳ ದುರವಸ್ಥೆ
ತ್ವರಿತವಾಗಿ ದೊಡ್ಡ ಮಟ್ಟದ ರಸ್ತೆ ದುರಸ್ತಿ ಕಾಮಗಾರಿ ಕಾರ್ಯಗಳನ್ನು, ಕಣ್ಣಿಗೆ ಕಾಣುವ ಹಾಗೆ ಕೈಗೊಳ್ಳದೆ ಹೋದರೆ, ಸರ್ಕಾರವನ್ನು ಹೆಳವ ಎಂದೇ ಪರಿಗಣಿಸಲಾಗುತ್ತದೆ
ಅಧಿಕಾರ ವಹಿಸಿಕೊಂಡು ಎರಡೂವರೆ ವರ್ಷಗಳು ಕಳೆದಿದ್ದರೂ, ಸಿದ್ದರಾಮಯ್ಯ ಸರ್ಕಾರ ವರ್ಚಸ್ಸಿನ ಸಮಸ್ಯೆಯನ್ನು ಎದುರಿಸುತ್ತಿದೆ. ಇದು ಕೇವಲ ಕಲ್ಪನೆಯಲ್ಲ, ಬದಲಾಗಿ ಲಕ್ಷಾಂತರ ಜನತೆಯ ನೈಜ ಜೀವನಾನುಭವ. ಕರ್ನಾಟಕದ ರಸ್ತೆಗಳ ದುರವಸ್ಥೆಯಲ್ಲಿ ಇದು ಎದ್ದು ಕಾಣುತ್ತದೆ. ಇದು ಇನ್ನೂ ನಿಚ್ಚಳವಾಗಿ ಕಣ್ಣಿಗೆ ರಾಚುವುದು ನಗರ ಮತ್ತು ಹಳ್ಳಿಗಳನ್ನು ಹಾದು ಹೋಗುವ ಹೆದ್ದಾರಿ ಮತ್ತು ಸಾಧಾರಣ ರಸ್ತೆಗಳಲ್ಲಿರುವ ಹಳ್ಳಕೊಳ್ಳಗಳನ್ನು ನೋಡಿದಾಗ. ಈ ರಸ್ತೆಗಳು ಈಗಾಗಲೇ ಭಗ್ನಗೊಂಡ ಆಳ್ವಿಕೆಯ ರೂಪಕಗಳಾಗಿ ಪರಿಣಮಿಸಿವೆ.
ಜನರು ಒಂದು ಸರ್ಕಾರವನ್ನು ಏನನ್ನೂ ಸಾಧಿಸಿಲ್ಲ ಎಂದು ಹೇಳುವಾಗ, ಅವರು ಪಂಚ ವಾರ್ಷಿಕ ಯೋಜನೆಗಳು ಅಥವಾ ಮೂಲ ನೀತಿಗಳನ್ನು ಕುರಿತು ಮಾತನಾಡುವುದಿಲ್ಲ. ಬದಲಾಗಿ ತಮ್ಮ ನಿತ್ಯ ಪ್ರಯಾಣದಲ್ಲಿ ಎದುರಿಸುವ ಜಟಿಲ ಸಮಸ್ಯೆಗಳು, ಭದ್ರತೆ ಮತ್ತು ಚಲನೆಯ ದುಸ್ಥಿತಿಗಳ ಕುರಿತು ಮಾತನಾಡುತ್ತಾರೆ. ಇಂದು ಕರ್ನಾಟಕದಲ್ಲಿ ಅತ್ಯವಶ್ಯ ಪ್ರಯಾಣವನ್ನೂ ಜನರು ಮುಂದೂಡುತ್ತಿದ್ದಾರೆ, ಕಾರಣ ನಾಗರಿಕರಿಗೆ ರಸ್ತೆಗಳ ಮೇಲೆ ವಿಶ್ವಾಸವೇ ಇಲ್ಲವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಫೆÇೀಟೋಗಳು ಮತ್ತು ವಿಡಿಯೋ ತುಣುಕುಗಳು ಈ ಆಘಾತಕಾರಿ ದುರವಸ್ಥೆಯನ್ನು ಎತ್ತಿ ತೋರಿಸುತ್ತಿವೆ. ಕೊಚ್ಚಿಹೋದ ಹೆದ್ದಾರಿಗಳು, ಮಣ್ಣಿನ ಹಾದಿಗಳಂತೆ ಕಾಣುವ ಗ್ರಾಮೀಣ ರಸ್ತೆಗಳು, ಪ್ರತಿ ಸಲ ಮಳೆಯಾದಾಗಲೂ ಛಿದ್ರವಾಗುವ ನಗರದ ರಸ್ತೆಗಳು... ಈ ಚಿತ್ರಗಳೇ ಸಾರ್ವಜನಿಕರ ಅಭಿಪ್ರಾಯವನ್ನೂ ರೂಪಿಸುತ್ತವೆ. ಇದು ಸರ್ಕಾರದ ಜಾಹೀರಾತುಗಳಿಗಿಂತಲೂ ಹೆಚ್ಚು ಪ್ರಭಾವಶಾಲಿಯಾಗಿರುತ್ತದೆ.
ಸರ್ಕಾರ ನೀಡುವ ಸಬೂಬುಗಳು - ಉದಾಹರಣೆಗೆ ಸತತವಾದ ಎಡೆಬಿಡದ ಮಳೆ, ನೈಸರ್ಗಿಕ ದುರಂತಗಳು, ಹಣಕಾಸು ಸೌಲಭ್ಯ ಇಲ್ಲದಿರುವುದು - ಇವೆಲ್ಲವೂ ಪೆÇಳ್ಳು ಎನಿಸುತ್ತದೆ. ಏಕೆಂದರೆ ನಾಗರಿಕರು ಆಳ್ವಿಕೆಯನ್ನು ಅಳೆಯುವಾಗ, ಮಳೆಯ ಮಾದರಿಯನ್ನು ಅವಲಂಬಿಸುವುದಿಲ್ಲ. ತಮ್ಮ ವಾಹನಗಳು ರಸ್ತೆಗಳಲ್ಲಿ ಹಾನಿ ಇಲ್ಲದೆ ಸಂಚರಿಸಲು ಸಾಧ್ಯವೇ ಅಥವಾ ಅಪಾಯ ಇಲ್ಲದೆ ಓಡಾಡಲು ಸಾಧ್ಯವೇ ಎಂದು ಯೋಚಿಸುತ್ತಾರೆ. ಸರಕಾರವು ತಂತ್ರಜ್ಞಾನ ಕೇಂದ್ರ ಬೆಂಗಳೂರನ್ನು ಒಳಗೊಂಡಿರುವ ಕರ್ನಾಟಕ ವಾಹನ ಸಂಚಾರ ಯೋಗ್ಯ ರಸ್ತೆಗಳನ್ನು ಒದಗಿಸದೆ ಹೋದರೆ, ಅದು ರಾಜ್ಯ ಸರ್ಕಾರದ ಆದ್ಯತೆಗಳ ಬಗ್ಗೆಯೇ ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
ಇನ್ನೂ ಹಾನಿಕಾರಕ ಸಂಗತಿ ಎಂದರೆ, ಈ ಬಿಕ್ಕಟ್ಟು ಕೇವಲ ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿಲ್ಲ. ರಾಜಧಾನಿ ಬೆಂಗಳೂರು ರಾಜ್ಯದ ಹೆಮ್ಮೆಯ ನಗರಿಯಾಗಿದ್ದು, ಜಾಗತಿಕ ಆಕಾಂಕ್ಷೆಗಳ ಸಂಕೇತವಾಗಿದೆ. ಆದರೆ ಈ ನಗರದಲ್ಲಿ ಎಲ್ಲೆಡೆ ಹೊಂಡಗಳು, ಹಳ್ಳಕೊಳ್ಳಗಳು, ಸಂಚರಿಸಲಾಗದ ರಸ್ತೆಗಳು ರಾರಾಜಿಸುತ್ತಿವೆ. ಮಂಗಳೂರು, ಮೈಸೂರು, ಶಿವಮೊಗ್ಗ ಮೊದಲಾದ ನಗರಗಳು ಇದೇ ದುರವಸ್ಥೆಯನ್ನು ಎದುರಿಸುತ್ತಿವೆ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವ ಮತ್ತು ಅದರ ಮೂಲಕ ಕರ್ನಾಟಕವನ್ನು ಅಭಿವೃದ್ಧಿ ಹೊಂದಿದ ರಾಜ್ಯ ಎಂದು ಬಿಂಬಿಸಲು ಹಂಬಲ ಹೊಂದಿರುವ ಸರ್ಕಾರಕ್ಕೆ, ಮೂಲಭೂತ ಸೌಕರ್ಯಗಳಲ್ಲೇ ಕಾಣುವ ಕುಸಿತ ಮತ್ತು ದುರವಸ್ಥೆಗಳು ಸ್ವಯಂ ಗುರಿಯಾಗಿ ಕಾಣಬೇಕಿದೆ.
ಈ ರೀತಿಯ ನಿರ್ಲಕ್ಷ್ಯ ಕರ್ನಾಟಕದಲ್ಲಿ ಎಂದೂ ಕಂಡಿರಲಿಲ್ಲ. ಹಿಂದಿನ ಸರ್ಕಾರಗಳು, ಪಕ್ಷ ಯಾವುದೇ ಇದ್ದರೂ ಸಹ, ಪ್ರಮುಖ ನಗರಗಳ ರಸ್ತೆಗಳನ್ನು ಸಂಚಾರ ಯೋಗ್ಯವಾಗಿ ಕಾಪಾಡುತ್ತಿದ್ದವು. ಈಗಿನ ಪರಿಸ್ಥಿತಿ ಹಿಂಜರಿತವಾಗಿ ಕಾಣುವುದೇ ಅಲ್ಲದೆ, ಅದಕ್ಷತೆ ಮತ್ತು ಭ್ರಷ್ಟಾಚಾರದ ಸಾಮಾನ್ಯ ಮಾದರಿಯಾಗಿ ಕಾಣುತ್ತದೆ. ರಸ್ತೆಗಳು ತಿಂಗಳುಗಟ್ಟಲೆ ದುರಸ್ತಿ ಕಾಣದೆ ಹೋದಾಗ, ಜನಸಾಮಾನ್ಯರು ಅನಿವಾರ್ಯವಾಗಿ, ವ್ಯವಸ್ಥೆ ಭಗ್ನವಾಗಿದೆ, ಟೆಂಡರ್‍ಗಳ ದುರ್ಬಳಕೆಯಾಗಿದೆ, ಹಣಕಾಸು ಲಭ್ಯವಿಲ್ಲ ಅಥವಾ ಲೂಟಿಮಾಡಲಾಗಿದೆ ಎಂದೇ ನಿರ್ಧರಿಸುತ್ತಾರೆ.
ಸರ್ಕಾರದ ಎಲ್ಲ ಕಲ್ಯಾಣ ಯೋಜನೆಗಳನ್ನೂ ಮೀರಿ ಜನರ ಕಣ್ಣಿಗೆ `ಸಾಧನೆ'ಯಾಗಿ ಕಾಣುವುದು ರಸ್ತೆಗಳ ಅವಸ್ಥೆ. ದಿನನಿತ್ಯ ರಸ್ತೆಯ ಹೊಂಡಗಳನ್ನೇ ಹಾದು ಓಡಾಡುವ, ಹದಗೆಟ್ಟ ರಸ್ತೆಗಳಲ್ಲಿ ಸಂಭವಿಸುವ ಅಪಘಾತಗಳಲ್ಲಿ ತಮ್ಮವರನ್ನು ಕಳೆದುಕೊಳ್ಳುವ ನಾಗರಿಕರ ಆಕ್ರೋಶ ಆಳ್ವಿಕೆಯ ಕುರಿತ ಅಭಿಪ್ರಾಯವನ್ನೂ ರೂಪಿಸುತ್ತದೆ. ಮಧ್ಯಮ ವರ್ಗಗಳಿಗೆ, ವ್ಯಾಪಾರಿಗಳಿಗೆ, ಗ್ರಾಮೀಣ ಕೃಷಿಕರಿಗೂ ಸಹ ರಸ್ತೆಗಳು ಸರ್ಕಾರದ ಸಾಧನೆಯನ್ನು ಅಳೆಯುವ ಮಾಪಕವಾಗಿಯೇ ಕಾಣುತ್ತದೆ.
ಇಲ್ಲಿ ಕಲಿಯಬೇಕಾದ ರಾಜಕೀಯ ಪಾಠ ಎಂದರೆ, ಮೂಲ ಸೌಕರ್ಯಗಳು ಜನತೆಯ ಲಕ್ಷುರಿಗಳಲ್ಲ. ಸರ್ಕಾರ ಇಲ್ಲಿ ವಿಫಲವಾದರೆ ಬೇರೆಲ್ಲವೂ ನಗಣ್ಯವಾಗುತ್ತವೆ. ಸಿದ್ದರಾಮಯ್ಯ ಸರ್ಕಾರವು ತನ್ನಸಾಧನೆಯನ್ನು ಸಾಮಾಜಿಕ ನೀತಿಗಳ ಮುಖೇನ ಅಳೆಯಲಾಗುತ್ತದೆ ಎಂದು ಭಾವಿಸಿದಂತಿದೆ. ಆದರೆ ಈಗಾಗಲೇ ಹದಗೆಟ್ಟ ರಸ್ತೆಗಳು ಜನರ ನಿರ್ಧಾರವನ್ನು ರೂಪಿಸುತ್ತಿವೆ. ತ್ವರಿತವಾಗಿ ದೊಡ್ಡ ಮಟ್ಟದ ರಸ್ತೆ ದುರಸ್ತಿ ಕಾಮಗಾರಿ ಕಾರ್ಯಗಳನ್ನು, ಕಣ್ಣಿಗೆ ಕಾಣುವ ಹಾಗೆ ಕೈಗೊಳ್ಳದೆ ಹೋದರೆ, ಸರ್ಕಾರವನ್ನು ಹೆಳವ ಎಂದೇ ಪರಿಗಣಿಸಲಾಗುತ್ತದೆ. ಈ ಅಭಿಪ್ರಾಯ ದಟ್ಟವಾಗುವುದೇ ಅಲ್ಲದೆ ಮುಂದಿನ ಚುನಾವಣೆಗಳಲ್ಲಿ ನಿರ್ಣಾಯಕವೂ ಆಗುತ್ತದೆ.
Comments
Post a Comment