ಪೊಲೀಸನಾಗಿದ್ದೆ ಎನ್ನುವುದನ್ನೇ ಮರೆತ ಭಾಸ್ಕರ್ ರಾವ್ ನೈತಿಕ ಅಧಃಪತನ

 


ಸಿಜೆಐ ಮೇಲೆ ಪಾದರಕ್ಷೆ ಎಸೆತ ಯತ್ನವನ್ನು ತೀವ್ರವಾಗಿ ಖಂಡಿಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರವು ರಾವ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ


ಅಹುದಾದರಹುದೆನ್ನಿ * ಬಿವಿಸೀ


ಒಂದು ಸಮಯದಲ್ಲಿ ಬೆಂಗಳೂರಿನ ಪೆÇಲೀಸ್ ಇಲಾಖೆಯ ಅತ್ಯುನ್ನತ ಸ್ಥಾನದಲ್ಲಿ ಸೇವೆ ಸಲ್ಲಿಸಿದ್ದ ವ್ಯಕ್ತಿ, ವಕೀಲರೊಬ್ಬರು ದೇಶದ ಮುಖ್ಯ ನ್ಯಾಯಾಧೀಶರತ್ತ ಶೂ ಎಸೆದಿರುವುದನ್ನು ಪ್ರಶಂಸಿಸುವುದು ವಿಡಂಬನೆಯಷ್ಟೇ ಅಲ್ಲ, ವಿಪರ್ಯಾಸವೂ ಹೌದು. ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಈ ಘಟನೆಯನ್ನು ಕುರಿತು ನೀಡಿರುವ "ಕಾನೂನಾತ್ಮಕವಾಗಿ ಇದು ದೊಡ್ಡ ಪ್ರಮಾದವೇ ಆಗಿದ್ದರೂ, ನಿಮ್ಮ ಧೈರ್ಯವನ್ನು ಮೆಚ್ಚುತ್ತೇನೆ'' ಎಂಬ ಹೇಳಿಕೆಯು ಬೇಜವಾಬ್ದಾರಿಯುತ ಮಾತ್ರ ಅಲ್ಲ, ಇದು ಪೆÇಲೀಸ್ ಸೇವೆಯು ಸಾರ್ವಜನಿಕರ ನಡುವೆ ಹೊಂದಿರುವ ಸಾಂಸ್ಥಿಕ ಗೌರವವನ್ನೂ ನಾಶಪಡಿಸುವ ಒಂದು ಮಾತು.

ಸುಪ್ರೀಂಕೋರ್ಟ್‍ನಲ್ಲಿ ಕಲಾಪದ ವೇಳೆ ವಕೀಲನೊಬ್ಬನ ದುರ್ವರ್ತನೆಯನ್ನು ಬೆಂಬಲಿಸುವ ಮೂಲಕ ಭಾಸ್ಕರ್ ರಾವ್ ಪ್ರತಿರೋಧ ಮತ್ತು ಅರಾಜಕತೆಯ ನಡುವಿನ ಗಡಿಯನ್ನು ಮೀರಿ ನಡೆದಿದ್ದಾರೆ. ಬಹುಶಃ ತಾವು ನೈತಿಕ ಸ್ಥೈರ್ಯವನ್ನು ಮೆಚ್ಚಿಕೊಳ್ಳುತ್ತಿದ್ದೇನೆ ಎಂಬ ಭಾವನೆ ರಾವ್ ಅವರಲ್ಲಿ ಇರಬಹುದು. ಆದರೆ ಅವರು ವಾಸ್ತವದಲ್ಲಿ ಸಂಭ್ರಮಿಸಿದ್ದು ನ್ಯಾಯಾಂಗ ನಿಂದನೆಯನ್ನು ಮತ್ತು ನ್ಯಾಯಾಂಗದ ಶಿಸ್ತಿನ ನಿಯಮಗಳಿಗೆ ತೋರಿದ ಅಸಡ್ಡೆಯನ್ನು. ನ್ಯಾಯಾಲಯದ ತೀರ್ಪಿನ ವಿಚಾರದಲ್ಲಿ ಯಾವುದೇ ಪ್ರತಿರೋಧವನ್ನು ವ್ಯಕ್ತಪಡಿಸಿದರೂ ಅದು ಕಾನೂನಿನ ಚೌಕಟ್ಟಿನ ಒಳಗೆ ಇರಬೇಕು ಎನ್ನುವುದು ಸಾಮಾನ್ಯ ತಿಳುವಳಿಕೆ. ಒಂದು ಸಮಯದಲ್ಲಿ ಕಾನೂನು ಜಾರಿ ಮಾಡುವ ಪ್ರಬಲ ಸಂಸ್ಥೆಯ ಮುಖ್ಯಸ್ಥರಾಗಿದ್ದ ಭಾಸ್ಕರ್ ರಾವ್ ಈಗ ದೇಶದ ಅತ್ಯುನ್ನತ ಕಾನೂನು ಸಂಸ್ಥೆಯನ್ನು ಧಿಕ್ಕರಿಸುವ ನಡೆಯನ್ನು ವೈಭವೀಕರಿಸಿದ್ದಾರೆ.

ರಾವ್ ಅವರನ್ನು ಸಮರ್ಥಿಸುವವರು ಅವರ ಅತಿ ಉತ್ಸಾಹದ ಗುಣವನ್ನು ಉಲ್ಲೇಖಿಸಬಹುದು, ಅವರ ನೇರ ನುಡಿ, ಉತ್ಸಾಹಭರಿತ ನಡೆಯನ್ನು ತೋರಿಸಿ ಇದರಲ್ಲಿ ಆಕ್ಷೇಪಾರ್ಹವಾದುದು ಏನಿದೆ ಎಂದು ಕೇಳಬಹುದು. ಆದರೆ ಈ ಗುಣವು ನಿಯಂತ್ರಣ ತಪ್ಪಿದಾಗ ವಿವೇಕ ಮತ್ತು ಜವಾಬ್ದಾರಿಯನ್ನು ಮರೆಯುವಂತೆ ಮಾಡುತ್ತದೆ. ಆಗ ದಿಕ್ಕುದೆಸೆ ಇಲ್ಲದ ಮಾತುಗಳು ಬರುತ್ತವೆ. ಅವರ ಈ ಗುಣ ಸಾಂಸ್ಥಿಕ ಶಿಸ್ತನ್ನು ಕಾಪಾಡುವಲ್ಲಿ ಅವರ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ.

ತಮ್ಮ ನಿರ್ಧಾರದಲ್ಲಿ ಭಾಸ್ಕರ್ ರಾವ್ ಎಡವಿರುವುದು ಇದೇ ಮೊದಲೇನಲ್ಲ. ಬೆಂಗಳೂರು ನಗರ ಪೆÇಲೀಸ್ ಆಯುಕ್ತರಾಗಿದ್ದಾಗಲೂ ಪ್ರತಿಭಟನೆಗಳ ಬಗ್ಗೆ, ರಾಜಕೀಯ ನಾಯಕರ ಬಗ್ಗೆ, ಪೆÇಲೀಸ್ ಇಲಾಖೆಯ ಆಂತರಿಕ ವಿಷಯಗಳ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದುಂಟು. ಅದು ಇಲಾಖೆಗೆ ಮುಜುಗರ ಉಂಟುಮಾಡಿದ ಪ್ರಸಂಗಗಳೂ ಇವೆ. ಸೇವೆಯಿಂದ ಮುಂಚಿತವಾಗಿಯೇ ನಿರ್ಗಮಿಸುವ ಅವರ ತೀರ್ಮಾನ ಹಠಾತ್ತನೆ ಕೈಗೊಂಡಿದ್ದಲ್ಲ. ಬದಲಾಗಿ ನಡೆ ಮತ್ತು ನುಡಿಯಲ್ಲಿ ಕಾನೂನಿಗೆ ಗೌರವ ಸೂಚಿಸದ ಅವರ ಮನೋಭಾವ ಇದಕ್ಕೆ ಕಾರಣವಾಗಿತ್ತು. ಜನಸಂಪರ್ಕದಲ್ಲಿಯೂ ಅವರು ಪೊಲೀಸ್ ಇಲಾಖೆಗೆ ಗೌರವಾದರವನ್ನೇನೂ ತರಲಿಲ್ಲ.

ರಾಜಕೀಯ ಪ್ರವೇಶಿಸಿದ ನಂತರ ರಾವ್ ಅವರ ಸಾರ್ವಜನಿಕ ವ್ಯಕ್ತಿತ್ವವು ಅವರ ವಿಶ್ವಾಸಾರ್ಹತೆಗೆ ಮತ್ತಷ್ಟು ಧಕ್ಕೆ ಉಂಟು ಮಾಡಿದೆ. ಚುನಾವಣೆಯ ಲಾಭಕ್ಕಾಗಿ ರೌಡಿಶೀಟರ್ ಒಬ್ಬರ ಬೆಂಬಲ ಕೋರಿದ್ದು, ಮುಖ್ಯಮಂತ್ರಿಯ ವಿರುದ್ಧ ಅನಪೇಕ್ಷಣೀಯ ಹೇಳಿಕೆ ನೀಡಿರುವುದು, ಗೃಹ ಸಚಿವರ ವಿರುದ್ಧ ಬೆಂಗಳೂರಿನ ಆರ್‍ಸಿಬಿ ದುರಂತದ ವೇಳೆ ಅನಗತ್ಯ ಹೇಳಿಕೆ ನೀಡಿರುವುದು ಅವರ ಅಸ್ಥಿರ ಮತ್ತು ವಿವಾದಾತ್ಮಕ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಒಮ್ಮೆ ಕಾನೂನು ಜಾರಿ ಮಾಡುವ ಅಧಿಕಾರಿಯಾಗಿದ್ದ ಭಾಸ್ಕರ್ ರಾವ್ ವ್ಯಕ್ತಿತ್ವದಲ್ಲಿ ಕಾನೂನನ್ನೇ ಧಿಕ್ಕರಿಸುವ ಅಂಶಗಳು ಕಾಣುತ್ತವೆ. ಇದು ಸಾರ್ವಜನಿಕ ಚರ್ಚೆಯ ನೈತಿಕತೆಯನ್ನು ಹಾಳು ಮಾಡುತ್ತದೆ.

ಶೂ ಎಸೆದ ವಕೀಲನನ್ನು ಬೆಂಬಲಿಸುವ ಮೂಲಕ ರಾವ್, ಅವರ ಪ್ರಶಂಸೆ ಇರುವುದು ಕಾನೂನು ನಿಯಮದ ಚೌಕಟ್ಟಿನಲ್ಲಿ ಅಲ್ಲ, ಬಂಡಾಯದ ಸಾರ್ವಜನಿಕ ಪ್ರದರ್ಶನದಲ್ಲಿ ಎನ್ನುವುದನ್ನು ನಿರೂಪಿಸಿದ್ದಾರೆ. ಈ ರೀತಿಯ ಹೇಳಿಕೆಗಳು ನಿವೃತ್ತ ಪೆÇಲೀಸ್ ಆಯುಕ್ತರಿಂದ ಬರುವುದು ದುರ್ಬಲ ವೈಯಕ್ತಿಕ ನಿಲುವಿನ ಸಂಕೇತವಷ್ಟೇ ಅಲ್ಲದೆ, ಸಾರ್ವಜನಿಕರಲ್ಲಿ ಸಂಸ್ಥೆಗಳ ಮೇಲಿನ ವಿಶ್ವಾಸವನ್ನೂ ಕುಂದಿಸುತ್ತದೆ. ಪೆÇಲೀಸರು, ನ್ಯಾಯಾಲಯಗಳು, ಶಾಸಕಾಂಗವು ಸೂಕ್ಷ್ಮ ಸಮತೋಲನದಲ್ಲಿ ಕಾರ್ಯ ನಿರ್ವಹಿಸುತ್ತವೆ. ಒಂದು ಕಾಲದಲ್ಲಿ ಈ ಸಮತೋಲನವನ್ನು ಕಾಪಾಡಿಕೊಂಡು ಬಂದವರು ಅದನ್ನೇ ಅಣಕಿಸುವುದರಿಂದ ಗೌರವದ ಬದಲು ಸಿನಿಕತೆ ಹೆಚ್ಚಾಗುತ್ತದೆ. 

ಅಂತಿಮವಾಗಿ ರಾವ್ ಅವರ ಹೇಳಿಕೆ ಸಮಾಜದ ಆಳವಾದ ವ್ಯಾಧಿಯನ್ನು ಸೂಚಿಸುತ್ತದೆ. ಉತ್ತರದಾಯಿತ್ವವನ್ನೂ ಅಲ್ಲಗಳೆದು ಉದ್ಧಟತನಕ್ಕೆ ರಾಜಕೀಯ ಮನ್ನಣೆ ನೀಡುವ ಈ ವ್ಯಾಧಿಯನ್ನು ಗಮನಿಸಬೇಕಿದೆ. ದೇಶವು ಇಂತಹ ಸಡಿಲ ನಾಲಿಗೆಯ ರಾಜಕಾರಣಿಗಳನ್ನು ಸಹಿಸಿಕೊಳ್ಳಲಾಗುವುದಿಲ್ಲ. ಇಂತಹವರ ಬದಲು ಪ್ರತಿಭಟಿಸಲು ನಿರ್ಧರಿಸಿದಾಗ ಶಿಸ್ತನ್ನು ಮರೆಯುವ ಸಾಮಾನ್ಯ ಜನರನ್ನು ಸಹಿಸಿಕೊಳ್ಳಬಲ್ಲದು. ಭಾಸ್ಕರ್ ರಾವ್ ಪಯಣ ಖಾಕಿಯಿಂದ ಖಾದಿಗೆ ವಿಸ್ತರಿಸಿದ್ದು ಇಲ್ಲಿ, ಕಾನೂನು ಸೇವೆಯ ಘನತೆಯನ್ನೇ ಕಳೆದುಕೊಳ್ಳಲಾಗಿದೆ. ಸಿಜೆಐ ಮೇಲೆ ಪಾದರಕ್ಷೆ ಎಸೆತ ಯತ್ನವನ್ನು ತೀವ್ರವಾಗಿ ಖಂಡಿಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರವು ರಾವ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ತನ್ಮೂಲಕ ಕಾನೂನುಬಾಹಿರ ಚಟುವಟಿಕೆಗಳನ್ನು ಬೆಂಬಲಿಸುವ ಅರಾಜಕತೆಯನ್ನು ತಡೆಗಟ್ಟಬೇಕಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again