ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಪೊಳ್ಳು ಆಶ್ವಾಸನೆ
ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಭರವಸೆಗಳು ವೇದಿಕೆಗಳ ಮೇಲೆ ಆಕರ್ಷಕವಾಗಿರುತ್ತವೆ. ಆದರೆ ವಾಸ್ತವದ ನೆಲೆಯಲ್ಲಿ ನೋಡಿದಾಗ, ತಮಾಷೆಯಾಗಿ, ನೊಂದ ಜನರನ್ನು ಅಣಕಿಸುವ ಪ್ರಹಸನವಾಗುತ್ತದೆ.
ಅಹುದಾದರಹುದೆನ್ನಿ * ಬಿವಿಸೀ
ಬೆಳಗಾವಿಯ ಸಮಾರಂಭವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಸರ್ಕಾರವು ಪ್ರತಿ ಜಿಲ್ಲೆಯಲ್ಲೂ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ನೀಡುವುದಾಗಿ ಆಶ್ವಾಸನೆ ನೀಡಿರುವುದು, ರಾಜಕೀಯ ಜುಮ್ಲಾದಂತೆಯೇ ಕಾಣುತ್ತದೆ. ಕರ್ನಾಟಕದಲ್ಲಿ ಮೂಲಭೂತ ಆರೋಗ್ಯ ಸೇವೆಗಳೂ ಸಹ ಲಭ್ಯವಾಗದೆ ಇರುವಾಗ, ಈ ರೀತಿಯ ಅದ್ಧೂರಿ ಭರವಸೆಗಳು, ವೈದ್ಯರು ಮತ್ತು ರೋಗಿಗಳು ಎದುರಿಸುತ್ತಿರುವ ವಾಸ್ತವಗಳನ್ನು ಅಣಕಿಸುವಂತೆ ಕಾಣುತ್ತದೆ.
ತಳಮಟ್ಟದ ವಾಸ್ತವಗಳ ಕಡೆಗೆ ಗಮನ ಹರಿಸಿದರೆ, ಈ ಆಶ್ವಾಸನೆ ಎಷ್ಟು ಪೆÇಳ್ಳು ಎನ್ನುವುದು ಸ್ಪಷ್ಟವಾಗುತ್ತದೆ. ಪಟ್ಟಣಗಳಲ್ಲಿ, ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆಗಳು ದುರವಸ್ಥೆಯಲ್ಲಿವೆ. ವೈದ್ಯರ, ನರ್ಸ್‍ಗಳ ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗಳ ನೂರಾರು ಹುದ್ದೆಗಳು ಭರ್ತಿಯಾಗದೆ ಉಳಿದಿವೆ. ಔಷಧಿಗಳು ಲಭ್ಯವಿಲ್ಲ ಅಥವಾ ಸರಬರಾಜು ಕೊರತೆ ಎದುರಿಸುತ್ತಿರುತ್ತವೆ. ಸರ್ಕಾರಿ ನೌಕರರು, ವೈದ್ಯಕೀಯ ಸಿಬ್ಬಂದಿಗಳೂ ಸೇರಿದಂತೆ, ಹಲವು ತಿಂಗಳುಗಳಿಂದ ವೇತನ ಪಡೆದಿಲ್ಲ. ಹಾಲಿ ಇರುವ ಮೂಲ ಸೌಕರ್ಯಗಳ ಅವಸ್ಥೆಯೇ ಹೀಗಾಗಿರುವಾಗ, ಸರ್ಕಾರವು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು, ಅಲ್ಲಿ ಸಲಕರಣೆಗಳನ್ನು ಒದಗಿಸಲು, ನಿರ್ವಹಣೆ ಮಾಡಲು ಅಗತ್ಯವಾದ ಸಾವಿರಾರು ಕೋಟಿ ರೂ ಹಣವನ್ನು ಹೇಗೆ ಕ್ರೋಢೀಕರಿಸುತ್ತದೆ?
ಈ ರೀತಿಯ ಆಸ್ಪತ್ರೆಗಳನ್ನು ನಿರ್ಮಿಸಲು ಕೇವಲ ಬೃಹತ್ ಕಟ್ಟಡಗಳನ್ನು ಕಟ್ಟಿದರೆ ಸಾಲದು. ಅದಕ್ಕೆ ವಿಶೇಷ ತಜ್ಞ ವೈದ್ಯರು, ಅತ್ಯಾಧುನಿಕ ಉಪಕರಣ-ಸಲಕರಣೆಗಳು, ನಿರಂತರ ಔಷಧ ಸರಬರಾಜು, ಸಿಬ್ಬಂದಿಯನ್ನು ಉಳಿಸಿಕೊಳ್ಳುವ ಉತ್ತಮ ವೇತನ ಇವೆಲ್ಲವೂ ಬೇಕಾಗುತ್ತವೆ. ಖಾಸಗಿ ಕಾಪೆರ್Çೀರೇಟ್ ಆಸ್ಪತ್ರೆಗಳೂ ಸಹ ಇಂತಹ ಸಂಸ್ಥೆಗಳನ್ನು ನಿರ್ವಹಣೆ ಮಾಡಲು ಬೃಹತ್ ಪ್ರಮಾಣದ ಹಣಕಾಸು ಬೆಂಬಲ ನಿರೀಕ್ಷಿಸುತ್ತವೆ. ರಾಜ್ಯ ಸರ್ಕಾರವೊಂದು ತನ್ನ ಮೂಲ ವೈದ್ಯಕೀಯ ಕೇಂದ್ರಗಳನ್ನು ಜೀವಂತವಾಗಿಡಲು ಪರದಾಡುತ್ತಿರುವಾಗ, ಈ ಭರವಸೆ ಅವಾಸ್ತವಿಕ ಅಷ್ಟೇ ಅಲ್ಲ, ಉದ್ದೇಶಪೂರ್ವಕವಾಗಿ ಜನರನ್ನು ದಾರಿ ತಪ್ಪಿಸುವ ತಂತ್ರವಾಗಿದೆ.
ಸರ್ಕಾರದ ತಕ್ಷಣದ ಜವಾಬ್ದಾರಿ ಇರುವುದು ಈಗಿರುವ ಆರೋಗ್ಯಸೇವೆಯ ಮೂಲ ಸೌಕರ್ಯಗಳನ್ನು ಬಲಪಡಿಸುವುದು. ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಸೂಕ್ತ ಸಂಖ್ಯೆಯ ವೈದ್ಯರು, ಶುಶ್ರೂಷಕರು ಇರಬೇಕು ಮತ್ತು ಔಷಧಗಳು ಲಭ್ಯವಿರಬೇಕು. ಜಿಲ್ಲಾ ಆಸ್ಪತ್ರೆಗಳನ್ನು ಉನ್ನತೀಕರಿಸಿ ಮೂಲಭೂತ ತಪಾಸಣಾ ಯಂತ್ರಗಳು ಮತ್ತು ತುರ್ತು ನಿಗಾ ಕಾಳಜಿಯ ವ್ಯವಸ್ಥೆಯನ್ನು ಬಲಪಡಿಸಬೇಕು. ಆಂಬುಲೆನ್ಸ್ ಸೇವೆ, ಗ್ರಾಮೀಣ ಸಂಪರ್ಕ, ಮುನ್ನೆಚ್ಚರಿಕೆಯ ಆರೋಗ್ಯ ಕಾಳಜಿಯು ಪ್ರಧಾನವಾಗಿರಬೇಕೇ ಹೊರತು ಬೃಹತ್ ಯೋಜನೆಗಳ ಅವಾಸ್ತವಿಕ ಘೋಷಣೆಗಳಲ್ಲ. ಈ ಸೌಕರ್ಯಗಳು ಇಲ್ಲದೆ ಹೋದರೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳೂ ಸಹ ಕೇವಲ ಘೋಷಿಸಲ್ಪಟ್ಟು ತದನಂತರ ಯಾವುದೇ ವೈದ್ಯಕೀಯ ಸೇವೆ ಲಭ್ಯವಿಲ್ಲದ ಕಾಂಕ್ರೀಟ್ ಕಟ್ಟಡಗಳಾಗಿ ಉಳಿದುಬಿಡುತ್ತವೆ.
ಈ ಸರ್ಕಾರಕ್ಕೆ ಉಳಿದಿರುವ ಎರಡು ವರ್ಷಗಳ ಆಡಳಿತಾವಧಿಯಲ್ಲಿ, ಇಂತಹ ಬೃಹತ್ ಯೋಜನೆಯನ್ನು ಸಾಕಾರಗೊಳಿಸುವುದು ಅಸಾಧ್ಯವಾಗುತ್ತದೆ. ಮುಖ್ಯಮಂತ್ರಿಗಳಿಗೆ ಇದು ಸ್ಪಷ್ಟವಾಗಿ ತಿಳಿದಿದೆ. ಆದರೂ ಸುದ್ದಿಪತ್ರಿಕೆಗಳಲ್ಲಿ ಹೆಡ್ ಲೈನ್ಸ್ ಆಕರ್ಷಣೆಗಾಗಿ ಭವ್ಯ ಘೋಷಣೆಗಳನ್ನು ಮಾಡಿ, ಪ್ರಗತಿಯ ಭ್ರಮೆ ಸೃಷ್ಟಿಸಲಾಗುತ್ತದೆ. ಇದರಿಂದಾಗುವ ರಾಜಕೀಯ ಲಾಭ ಮುಖ್ಯವಾಗುತ್ತದೆ. ಇದು ಸಾರ್ವಜನಿಕ ವಿಶ್ವಾಸಕ್ಕೆ ದ್ರೋಹ ಬಗೆದಂತಾಗುತ್ತದೆ. ನಾಗರಿಕರು ಪ್ರಾಮಾಣಿಕ ಹಾಗೂ ಉತ್ತರದಾಯಿತ್ವದ ನಡೆಯನ್ನು ಆಳುವವರಿಂದ ನಿರೀಕ್ಷಿಸುತ್ತಾರೆಯೆ ಹೊರತು, ಪೆÇಳ್ಳು ಘೋಷಣೆಗಳನ್ನಲ್ಲ.
ಆರೋಗ್ಯ ಕಾಳಜಿ ಲಕ್ಸುರಿ ಅಲ್ಲ. ಅದು ಜನರ ಮೂಲಭೂತ ಹಕ್ಕು. ಸರ್ಕಾರದ ವಿಶ್ವಾಸಾರ್ಹತೆ ಇರುವುದು ಪ್ರತಿಯೊಬ್ಬ ನಾಗರಿಕರಿಗೂ, ಮೂಲೆಯ ಹಳ್ಳಿಯಿಂದ ಜನನಿಬಿಡ ನಗರದವರೆಗೂ, ಪ್ರತಿಯೊಬ್ಬರಿಗೂ ಕೈಗೆಟುಕುವ, ನಂಬಲರ್ಹವಾದ ವೈದ್ಯಕೀಯ ಸೇವೆಯನ್ನು ಒದಗಿಸುವುದರಲ್ಲಿ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಭರವಸೆಗಳು ವೇದಿಕೆಗಳ ಮೇಲೆ ಆಕರ್ಷಕವಾಗಿರುತ್ತವೆ. ಆದರೆ ವಾಸ್ತವದ ನೆಲೆಯಲ್ಲಿ ನೋಡಿದಾಗ, ತಮಾಷೆಯಾಗಿ, ನೊಂದ ಜನರನ್ನು ಅಣಕಿಸುವ ಪ್ರಹಸನವಾಗುತ್ತದೆ.
Comments
Post a Comment