ಸೆಂಚುರಿ ಹೊಸ್ತಿಲಲ್ಲಿರುವ ದೇವೇಗೌಡರ ರಾಜ್ಯ ಪ್ರವಾಸ ಯಾವ ಪುರುಷಾರ್ಥಕ್ಕೆ?
ಒಂದು ಕಾಲದಲ್ಲಿ ರಾಜಕೀಯ ಆಕಾಂಕ್ಷೆ ಮತ್ತು ಪ್ರಭಾವಕ್ಕೆ ಹೆಸರಾಗಿದ್ದ ದೇವೇಗೌಡರ ವಂಶ ಇಂದು ಕೇವಲ ದಗಲಬಾಜಿ ಕಾರ್ಯತಾಂತ್ರಿಕ ನಿಷ್ಠೆಗೆ ಹೆಸರಾಗಿದೆ.
ಹತ್ತಿರ ಹತ್ತಿರ ನೂರು ವರ್ಷ ತಲುಪುತ್ತಿರುವ ಎಚ್ ಡಿ ದೇವೇಗೌಡ ರಾಜ್ಯಾದ್ಯಂತ ಪ್ರವಾಸ ಮಾಡ್ತಾರಂತೆ! ಪರಮ ಉದ್ದೇಶ: ನೆಲಸಮವಾಗಿರುವ ತೆನೆಹೊತ್ತ ಮಹಿಳೆಯನ್ನು ಎತ್ಕಟ್ಟಿ ನಿಲ್ಲಿಸುವುದು ಮತ್ತು ನೆರೆಪೀಡಿತರ ಭೇಟಿ. ಒಂದು ಕಾಲದಲ್ಲಿ ಕರ್ನಾಟಕದ ರಾಜಕಾರಣವನ್ನು ಮರುರೂಪಿಸಿದ, ರಾಷ್ಟ್ರ ರಾಜಕಾರಣದಲ್ಲಿ ಮಿಂಚಿ ಮರೆಯಾದ ವ್ಯಕ್ತಿ ಇಂದು ಹೆಜ್ಜೆ ಊರಲು ಸಹಾಯಕರು ಬೇಕು. ದೈಹಿಕವಾಗಿ ದಣಿದಿರುವ, ಮೂಲತಃ ಚಲಿಸುವುದಕ್ಕೇ ಕಷ್ಟಪಡುತ್ತಿರುವ ದೇವೇಗೌಡರು ಈಗ ರಾಜ್ಯ ಪ್ರವಾಸ ಕೈಗೊಂಡಿರುವುದು ಯಾವ ಪುರುಷಾರ್ಥಕ್ಕೆ ಎಂದು ಕೇಳಬೇಕಾಗಿದೆ. ಪ್ರವಾಸದ ಘೋಷಣೆ ಮಾಡಲಾಗಿದ್ದು, ಇದು ಜನರಿಗಾಗಿ ಅಥವಾ ಪ್ರವಾಹ ಪೀಡಿತರಿಗಾಗಿ ಅಥವಾ ಪಕ್ಷಕ್ಕಾಗಿ ಅಲ್ಲದೆ ಕೇವಲ ತೋರಿಕೆಯ ಆಡಂಬೋಲ.
ಇಲ್ಲಿ ವೈರುಧ್ಯ ಎದ್ದು ಕಾಣುತ್ತದೆ. ದೊಡ್ಡಗೌಡರ `ಸುಪತ್ರ' 60ರ ವಯೋಮಾನದ ಎಚ್ ಡಿ ಕುಮಾರಸ್ವಾಮಿ ರಾಜಕೀಯವಾಗಿ ಸಕ್ರಿಯವಾಗಿದ್ದು, ಕೇಂದ್ರ ಸಚಿವರೂ ಆಗಿರುವುದರಿಂದ ಮತ್ತು ರಾಜ್ಯ ಜೆಡಿಎಸ್ ಘಟಕದ ಅಧ್ಯಕ್ಷರೂ ಆಗಿರುವುದರಿಂದ ಅಪ್ಪ ಹೆಗಲಿಗೇರಿಸಿಕೊಂಡಿರುವ ಕೆಲಸಕ್ಕೆ ಅವರೇ ಲಾಯಕ್ಕು. ಮಗನಿಗೆ ದೈಹಿಕ ಬಲ ಇದೆ. ರಾಜಕೀಯ ವರ್ಚಸ್ಸು ಇದೆಯೋ ಇಲ್ಲವೋ ಗೊತ್ತಿಲ್ಲ. ತನ್ನ ಮೀಟಿಂಗುಗಳಿಗೆ ಜನ ಬರುತ್ತಾರೋ ಇಲ್ಲವೋ ಗೊತ್ತಿಲ್ಲದೇ ಅಪ್ಪನನ್ನು ಪ್ರವಾಸ ಮಾಡಿ ಮೀಟಿಂಗ್ ಮಾಡಲು ಕುಮ್ಮಕ್ಕು ಕೊಟ್ಟಿದ್ದಾರೋ ಗೊತ್ತಿಲ್ಲ.
ಆದರೂ ಜನಸಂಪರ್ಕ ವಿಚಾರದಲ್ಲಿ ಇಬ್ಬರಲ್ಲಿ ಮುಂಚೂಣಿಯಲ್ಲಿ ಕಾಣುವುದು ನೂರು ಸಮೀಪಿಸುತ್ತಿರುವ ತಂದೆ. ಇಲ್ಲಿ ಸ್ಪಷ್ಟವಾಗಿ ಕಾಣುವ ಸಂದೇಶ ಎಂದರೆ ಈ ಪ್ರವಾಸ ಸಾರ್ವಜನಿಕರನ್ನು ಒಳಗೊಳ್ಳುವುದಕ್ಕಾಗಿ ಅಲ್ಲದೆ, ಪ್ರಾಯೋಜಿತ ನಡೆ. ಪಕ್ಷದಲ್ಲಿ ಇಲ್ಲದ ಚೈತನ್ಯವನ್ನು, ಚಲನಶೀಲತೆಯನ್ನು ಪ್ರದರ್ಶಿಸುವ ಕ್ರಮ.
ಜೆಡಿಎಸ್ ತನ್ನ ಹಿಂದಿನ ವರ್ಚಸ್ಸನ್ನು ಕಳೆದುಕೊಂಡಿದೆ. ಒಂದು ಕಾಲದಲ್ಲಿ ರಾಜ್ಯದ ರಾಜಕೀಯ ಸಮೀಕರಣಗಳನ್ನು ಪ್ರಭಾವಿಸುತ್ತಿದ್ದ ಪಕ್ಷವು ಇದೀಗ ತನ್ನ ವಿಶ್ವಾಸಾರ್ಹತೆ ಕಳೆದುಕೊಂಡು ಅದರ ಇಮೇಜು ಧರಾಶಾಹಿಯಾಗಿದ್ದು ಇದಕ್ಕೆ ಅಸ್ಥಿರ ಮೈತ್ರಿಗಳು ಮತ್ತು ದಿಕ್ಕು ದೆಸೆ ಇಲ್ಲದ ರಾಜಕೀಯ ನಡವಳಿಕೆಗಳೂ ಕಾರಣವಾಗಿವೆ. ಪಕ್ಷದ ಪುನರುಜ್ಜೀವನದ ಪ್ರಯತ್ನಗಳು ವಿಫಲವಾಗಿವೆ. ದೇವೇಗೌಡರ ಕುಟುಂಬದ ಹೆಸರೇ ಮಣ್ಣಾಗಿದೆ. ದೇವೇಗೌಡರ ಎರಡನೇ ಮಗ, ಎಚ್ ಡಿ ರೇವಣ್ಣ ಮತ್ತು ಮೊಮ್ಮಗ ಪ್ರಜ್ವಲ್ ರೇವಣ್ಣ, ಮತ್ತೊಬ್ಬ ಮಗ ಸೂರಜ್ ರೇವಣ್ಣ ಲೈಂಗಿಕ ಹಗರಣಗಳಲ್ಲಿ ಸಿಲುಕಿದ್ದಾರೆ, ಪ್ರಜ್ವಲ್‍ಗೆ ಈಗಾಗಲೇ ಶಿಕ್ಷೆಯಾಗಿದೆ. ಮುಂದಿನ ಪೀಳಿಗೆಯ ಜನರನ್ನು ಸಂಪರ್ಕಿಸುವ ಪ್ರಯತ್ನಗಳೂ ಸಹ ವಿಫಲವಾಗಿದ್ದು, ಪಕ್ಷದ ಚೇತರಿಕೆ ಅಸಾಧ್ಯವಾದಂತೆ ಕಾಣುತ್ತದೆ. ಅದರ ರಾಜಕೀಯ ಶಕ್ತಿ ಉಡುಗಿಹೋಗಿದೆ. ಕುಟುಂಬ ಹಲವಾರು ಭೂಕಬಳಿಕೆ ಪ್ರಕರಣಗಳಲ್ಲಿ ಸಿಲಕಿಕೊಂಡಿದೆ.
ಈ ನಿರ್ವಾತದಲ್ಲಿ ದೇವೇಗೌಡರ ಪ್ರವಾಸ ತಮ್ಮ ಕುಟುಂಬವನ್ನು ರಕ್ಷಿಸುವ ಪ್ರಯತ್ನವಾಗಿದ್ದು, ಇದಕ್ಕೆ ಪಕ್ಷದ ಬಲವರ್ಧನೆಯ ನೆವದ ಮುಖವಾಡ ತೊಡಿಸಲಾಗಿದೆ. ದೇವೇಗೌಡರ ದೈಹಿಕ ದೌರ್ಬಲ್ಯವೇ ಒಂದು ಅಸ್ತ್ರವಾಗುತ್ತದೆ, ಬದ್ಧತೆ, ಕಾಳಜಿ ಮತ್ತು ತಮ್ಮ ಇರುವಿಕೆಯನ್ನು ಪ್ರದರ್ಶಿಸುವ ಪ್ರಯತ್ನದಲ್ಲಿ ಕುಟುಂಬದ ಯುವ ಸದಸ್ಯರ ನಾಯಕತ್ವದ ನಿರೀಕ್ಷೆಗಳು ಹುಸಿಯಾಗುತ್ತಿವೆ. ಈ ಪ್ರವಾಸವು ಪಕ್ಷದ ಗೌರವ, ಪ್ರಸ್ತುತತೆಯ ಸಂಕೇತ ಮಾತ್ರವಾಗಿದ್ದು, ಗೌಡರ ಕುಟುಂಬ ರಾಜಕೀಯವಾಗಿ ಜೀವಂತವಾಗಿದೆ ಎಂದು ಪ್ರದರ್ಶಿಸುವ ಪ್ರಯತ್ನ.
ಕೇಂದ್ರದಲ್ಲಿ ಬಿಜೆಪಿಯೊಡನೆ ಮೈತ್ರಿ ಸಾಧಿಸಿ ಒಂದು ಮಂತ್ರಿಗಿರಿ ಗಿಟ್ಟಿಸಿಕೊಂಡಿರುವುದು ಇದನ್ನೇ ಸೂಚಿಸುತ್ತದೆ. ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಹಾಡಿಹೊಗಳುತ್ತಿದ್ದಾರೆ. ಇದು ಬೇರಾವ ಘನಂದಾರಿ ಉದ್ದೇಶಕ್ಕಾಗಿ ಅಲ್ಲ, ಬದಲಾಗಿ ಅಸ್ತಿತ್ವ ಉಳಿಸಿಕೊಳ್ಳುವ ಪ್ರಯತ್ನ. ಅನೇಕ ಕಾನೂನು ಮತ್ತು ರಾಜಕೀಯ ಒತ್ತಡಗಳನ್ನು ಎದುರಿಸುತ್ತಿರುವ ತಮ್ಮ ಮಕ್ಕಳನ್ನು ಉಳಿಸಲು - ಸಿಬಿಐ, ಇ ಡಿ ಮುಂತಾದ ಕೇಂದ್ರ ಏಜೆನ್ಸಿಗಳಿಂದ ರಕ್ಷಿಸುವ ಉದ್ದೇಶಕ್ಕಾಗಿ - ಎಂದು ಯಾರಿಗಾದರೂ ಅನಿಸುತ್ತದೆ. ಆಯ್ಕೆಯಿಂದ ಅಲ್ಲದಿದ್ದರೂ, ಅನಿವಾರ್ಯತೆಯಿಂದ ದೇವು & ಸನ್ಸ್ ಜೆಡಿಎಸ್ ಪಕ್ಷ ಬಿಜೆಪಿಯ ಬಾಲಂಗೋಚಿ ಪಕ್ಷವಾಗಿದೆ.
ಈ ಪ್ರವಾಸವು ಪ್ರವಾಹ ಪರಿಹಾರ, ಪಕ್ಷದ ಪುನರುಜ್ಜೀವನ ಅಥವಾ ಸಾರ್ವಜನಿಕ ಸೇವೆಯ ಉದ್ದೇಶ ಹೊಂದಿಲ್ಲ. ದೇವೇಗೌಡರ ರಾಜಕೀಯ ಇತಿಮಿತಿಗಳು ಮತ್ತು ಕುಮಾರಸ್ವಾಮಿಯ ಗೈರು ಹಾಜರಿಯ ವೈರುಧ್ಯವೇ ಇಡೀ ಪ್ರಯತ್ನದ ಪೆÇಳ್ಳುತನವನ್ನು ಬಹಿರಂಗಪಡಿಸುತ್ತದೆ. ಕರ್ನಾಟಕದ ಮತದಾರರು, ಇದನ್ನು ಗಮನಿಸುತ್ತಾರೆ, ಜೆಡಿಎಸ್ ನಂಬಲರ್ಹವಾದ ರಾಜಕೀಯ ಪಕ್ಷ ಅಲ್ಲ ಎನ್ನುವುದನ್ನು ಅರಿತಿದ್ದಾರೆ. ಇಲ್ಲಿ ಎದ್ದು ಕಾಣುವುದು ಕುಟುಂಬ, ಅದರ ಅಸ್ತಿತ್ವ ಉಳಿಸುವ ವಿಧಾನಗಳು ಮತ್ತು ಹತಾಶೆಯನ್ನೇ ನಾಯಕತ್ವವೆಂದು ಬಿಂಬಿಸುವ ಪ್ರಯತ್ನ ಮಾತ್ರ.
ಇಲ್ಲಿ ವಿವಿಧ ದೃಶ್ಯಗಳನ್ನು ಕಲ್ಪಿಸಬಹುದು. ಆದರೆ ಮೂಲ ವಸ್ತು ಮಾತ್ರ ಇಲ್ಲವಾಗಿದೆ. ಒಂದು ಕಾಲದಲ್ಲಿ ರಾಜಕೀಯ ಆಕಾಂಕ್ಷೆ ಮತ್ತು ಪ್ರಭಾವಕ್ಕೆ ಹೆಸರಾಗಿದ್ದ ದೇವೇಗೌಡರ ವಂಶ ಇಂದು ಕೇವಲ ತೋರಿಕೆ, ಅವಲಂಬನೆ, ದಗಲಬಾಜಿ ಮತ್ತು ಕಾರ್ಯತಾಂತ್ರಿಕ ನಿಷ್ಠೆಗೆ ಹೆಸರಾಗಿದೆ. ಇದು ಕಚ್ಚಾ ಮಾದರಿಯ ರಾಜಕೀಯ ಪ್ರಹಸನವಲ್ಲದೇ ಮತ್ತೇನು?
Comments
Post a Comment