ಮಾತಿನಲ್ಲಿ ಸೆಕ್ಯುಲರ್, ನಡೆಯಲ್ಲಿ ತದ್ವಿರುದ್ಧ

 


ಕರ್ನಾಟಕದ ರಾಜಕೀಯ ನಾಯಕತ್ವವು ಜಾತಿರಹಿತ ಸಮಾಜವನ್ನು ಬೋಧಿಸುತ್ತದೆ; ಆದರೆ ಆಚರಣೆಯಲ್ಲಿ, ಹಾರ ತುರಾಯಿ ಆಶೀರ್ವಾದಗಳೊಂದಿಗೆ, ಜಾತಿ ರಾಜಕಾರಣಕ್ಕೇ ಅಂಟಿಕೊಳ್ಳುತ್ತದೆ.

..........

ಅಹುದಾದರಹುದೆನ್ನಿ * ಬಿವಿಸೀ


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುತ್ತಲೂ ಲಿಂಗಾಯತ ಸ್ವಾಮಿಗಳು ನೆರೆದಿರುವ, ಮುಖ್ಯಮಂತ್ರಿಗಳಿಗೆ ಹಾರ ತುರಾಯಿ ತೊಡಿಸಿ, ಆಶೀರ್ವದಿಸತ್ತಿರುವ ದೃಶ್ಯ, ಕರ್ನಾಟಕದಲ್ಲಿ ರಾಜಕೀಯ ಮತ್ತು ಧರ್ಮದ ನಡುವಿನ ಸಂಬಂಧಗಳ ಬಗ್ಗೆ ಹಲವು ಅಹಿತಕರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಸ್ವಾಮಿಗಳಿಂದ ಈ ರೀತಿಯ ಸನ್ಮಾನ ಸ್ವೀಕರಿಸುವುದು ಮಾಮೂಲಿ ವಿಷಯವಾದರೂ ಇಂತಹ ಸಾರ್ವಜನಿಕ ನಡೆಗಳು ಪದೇಪದೇ ನಡೆಯುವ ಆಚರಣೆಗಳಾದಾಗ, ಈ ವಿದ್ಯಮಾನಗಳನ್ನು ನಿರ್ಲಕ್ಷಿಸಲಾಗುವುದಿಲ್ಲ.

ಜಾತಿ ಆಧಾರಿತ ಮಠಗಳ ಮುಖ್ಯಸ್ಥರಾಗಿ ಸ್ವಾಮಿಗಳು ಪಾರಮಾರ್ಥಿಕ ಮತ್ತು ಪ್ರಾಮಾಣಿಕ ಉದ್ದೇಶದಿಂದ ರಾಜಕಾರಣಿಗಳನ್ನು ಸನ್ಮಾನಿಸುವುದಿಲ್ಲ. ಹೆಚ್ಚಿನ ಸಮಯಗಳಲ್ಲಿ ಈ ರೀತಿಯ ಪ್ರಹಸನಗಳನ್ನು ಎಚ್ಚರಿಕೆಯಿಂದ ರೂಪಿಸಿದ ಅವಕಾಶಗಳಾಗಿ ಬಳಸಿ ಜಾತಿ-ನಿರ್ದಿಷ್ಟ ಬೇಡಿಕೆಗಳನ್ನು ಈಡೇರಿಸಿಕೊಳ್ಳಲಾಗುತ್ತದೆ. ಇದು ವಿದ್ಯಾ ಸಂಸ್ಥೆಗಳಿಗೆ ಬರಬೇಕಾದ ಅನುದಾನದಿಂದ ಹಿಡಿದು ರಾಜಕೀಯ ಮಾನ್ಯತೆಯವರೆಗೂ ವಿಸ್ತರಿಸುತ್ತದೆ. ಸಚಿವರುಗಳಿಗೆ ಇಂತಹ ದೃಶ್ಯಗಳು ಜಾತಿ ಬೆಂಬಲದ ಸೂಚಕವಾಗಿ ಕಾಣುತ್ತದೆ. ಇದು ಚುನಾವಣಾ ಲೆಕ್ಕಾಚಾರಗಳಲ್ಲಿ ಮುಖ್ಯವಾಗುತ್ತದೆ. ಸಾರ್ವಜನಿಕರಿಗೆ ಇದು ಬೇರೆಯೇ ಸಂದೇಶ ನೀಡುತ್ತದೆ. ಆಡಳಿತವು ಜಾತಿ ಸಮೀಕರಣಗಳಿಗೆ ಶರಣಾಗುತ್ತದೆಯೇ ಹೊರತು, ಅದನ್ನು ಮೀರಿ ನಿಲ್ಲುವುದಿಲ್ಲ ಎಂಬ ಸಂದೇಶ ರವಾನಿಸುತ್ತದೆ.

ಸಿದ್ದರಾಮಯ್ಯ ಸದಾ ಕಾಲವೂ ಜಾತಿರಹಿತ, ಸಮಾನತೆಯ ಸಮಾಜವನ್ನು ಕಟ್ಟುವ ಬಗ್ಗೆ ಮಾತನಾಡುತ್ತಾರೆ. ಆದಾಗ್ಯೂ ಸ್ವಾಮಿಗಳಿಂದ ಈ ರೀತಿಯ ಸನ್ಮಾನಗಳನ್ನು ಯಾವುದೇ ಮುಜುಗರ ಇಲ್ಲದೆಯೇ ಸ್ವೀಕರಿಸುತ್ತಾರೆ. ಇದು ವ್ಯತಿರಿಕ್ತ ಸಂದೇಶ ರವಾನಿಸುತ್ತದೆ. ಒಂದೆಡೆ ಅವರ ರಾಜಕೀಯ ತತ್ವ ಸಿದ್ದಾಂತ ಸಾಮಾಜಿಕ ನ್ಯಾಯ ಮತ್ತು ಸೆಕ್ಯುಲರಿಸಂನಲ್ಲಿ ಬೇರೂರಿದ್ದರೆ, ಮತ್ತೊಂದೆಡೆ ಅವರ ಸಾರ್ವಜನಿಕ ನಡೆ ಜಾತಿಯೇ ಆಳ್ವಿಕೆಯ ಆಧಾರ ಎಂಬುದನ್ನು ದೃಢೀಕರಿಸುವಂತಿರುತ್ತದೆ. ಮಾತು ಮತ್ತು ಕೃತಿಯ ನಡುವೆ ಇರುವ ಈ ಅಂತರ, ವೈರುಧ್ಯ ಸೆಕ್ಯುಲರ್ ರಾಜಕಾರಣದ ವಿಶ್ವಾಸಾರ್ಹತೆಯನ್ನೇ ಕುಂದಿಸುತ್ತದೆ.

ಇದು ಕೇವಲ ಕೆಲವು ಚಿತ್ರಗಳ ಪ್ರಶ್ನೆ ಮುಖ್ಯವಾಗಿ ಕಾಣುವುದಿಲ್ಲ. ರಾಜ್ಯ ನಾಯಕರು ಧಾರ್ಮಿಕ ಮಠಾಧೀಶರಿಂದ ಸಮ್ಮಾನ ನಿರೀಕ್ಷಿಸಿದರೆ, ಅದು ಆಡಳಿತ ಮತ್ತು ಪ್ರತ್ಯೇಕತಾ ಬೇಡಿಕೆಯ ನಡುವಿನ ಅಂತರವನ್ನು  ಮಸುಕಾಗಿಸುತ್ತದೆ. ಇದು ಸ್ವಾಮಿಗಳನ್ನು ಅಧಿಕಾರದ ದಲ್ಲಾಳಿಗಳಂತೆ ಬಿಂಬಿಸುತ್ತದೆ. ಆಳ್ವಿಕೆಯನ್ನು ಜಾತಿ ಲಾಬಿಕೋರರೊಡನೆ ನಡೆಯುವ ಸಮಾಲೋಚನೆಗೆ ಸೀಮಿತಗೊಳಿಸುತ್ತದೆ. ತತ್ಪರಿಣಾಮವಾಗಿ, ಪ್ರಜಾಪ್ರಭುತ್ವ ದಿಕ್ಕು ದೆಸೆ ಕಳೆದುಕೊಳ್ಳುತ್ತದೆ. ಸೆಕ್ಯುಲರ್ ಸಂಸ್ಥೆಗಳು ದುರ್ಬಲಗೊಂಡು, ನಾಗರಿಕರು ರಾಜಕೀಯ ಎಂದರೆ ಜಾತಿ ಅಸ್ಮಿತೆಯ ಮೂಲಕವೇ ನೋಡುವಂತೆ ಮಾಡುತ್ತದೆ.

ಜಾತಿಯನ್ನು ಮೀರಿ ಹೋಗಬೇಕಾದ ಸಮಾಜವೊಂದರಲ್ಲಿ, ಇಂತಹ ದೃಶ್ಯಗಳು ಪ್ರತಿಗಾಮಿಯಾಗಿ ಕಾಣುತ್ತವೆ. ನಿಜವಾದ ನಾಯಕತ್ವ ಸ್ವಾಮಿಗಳನ್ನು ಖಾಸಗಿ ಪ್ರಜೆಗಳಾಗಿ ಪರಿಗಣಿಸಬೇಕು. ಈ ರೀತಿ ಸಾರ್ವಜನಿಕವಾಗಿ ಜಾತಿ ಕೇಂದ್ರಿತ ಸನ್ಮಾನ ಸಮಾರಂಭಗಳಿಂದ ದೂರ ಇರಬೇಕು. ಆದರೆ ಇದರ ವೈರುಧ್ಯ ಈಗ ಕಣ್ಣಿಗೆ ರಾಚುವಂತಿದೆ. ಕರ್ನಾಟಕದ ರಾಜಕೀಯ ನಾಯಕತ್ವವು ಜಾತಿರಹಿತ ಸಮಾಜವನ್ನು ಬೋಧಿಸುತ್ತದೆ; ಆದರೆ ಆಚರಣೆಯಲ್ಲಿ, ಹಾರ ತುರಾಯಿ ಆಶೀರ್ವಾದಗಳೊಂದಿಗೆ, ಜಾತಿ ರಾಜಕಾರಣಕ್ಕೇ ಅಂಟಿಕೊಳ್ಳುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again